ಲೇಖನಗಳು

ಕನ್ನಡ ಚುಟುಕು ಸಾಹಿತ್ಯಕ್ಕೆ ಎಲ್‌. ಎಸ್‌. ಶಾಸ್ತ್ರೀಯವರ ಕೊಡುಗೆ

ಕನ್ನಡ ಚುಟುಕು ಸಾಹಿತ್ಯಕ್ಕೆ ಎಲ್‌. ಎಸ್‌. ಶಾಸ್ತ್ರೀಯವರ ಕೊಡುಗೆ

ಶ್ರೀ ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿಯವರು ಜನಿಸಿದ್ದು 1/3/1944 ರಂದು ಹೊನ್ನಾವರದಲ್ಲಿ. 1962ರಲ್ಲಿ ಪತ್ರಿಕೊದ್ಯಮಕ್ಕೆ ಬಂದ ಅವರು 1979 ರಿಂದ ಬೆಳಗಾವಿಯವರೇ ಆಗಿದ್ದಾರೆ. ಯಕ್ಷಗಾನ ಸಾಹಿತ್ಯ, ನಾಟಕ, ಸಂಗೀತ, ಗಮಕ, ಸಾಂಸ್ಕೃತಿಕ ಸಂಘಟನೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸದಾ ತೊಡಗಿಕೊಂಡವರು. 50ರಷ್ಟು ಸಂಪಾದಿತ, 50 ರಷ್ಟು ಸ್ವತಂತ್ರ, 40 ಸಾವಿರ ಪುಟದಷ್ಟು ಪತ್ರಿಕಾಲೇಖನ (2018ರ ಮಾಹಿತಿ. ಆ ಮೇಲಿನ ಓದು ವರ್ಷಗಳಲ್ಲಿ ಅವರು ಬರೆದ ಸಾವಿರಾರು ಪುಟಗಳ ಲೆಕ್ಕ ಇಲ್ಲಿ ಇಲ್ಲ) ಬರೆದ ಅಗಾಧ ಪರ್ವತ ಸದೃಶ ಲೇಖಕ ಅವರು.  

ಅವರು ಬರೆಯದ ಕ್ಷೇತ್ರವೇ ಇಲ್ಲ. ಕಾವ್ಯ, ಚುಟುಕು, ಕಾವ್ಯ ಕತೆ, ಹರಟೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಯಕ್ಷಗಾನ, ಒತಿಹಾಸ, ಆರೊಗ್ಯ, ಮಕ್ಕಳ ಸಾಹಿತ್ಯ, ಶರಣ ಸಾಹಿತ್ಯ ವೈಚಾರಿಕ, ಕೃತಿ ವಿಮರ್ಶೆ, ಕಲಾ ವಿಮರ್ಶೆ, ಪ್ರವಾಸ ಸಾಹಿತ್ಯ ಇತ್ಯಾದಿಗಳೇ ಅಲ್ಲದೆ ಮುನ್ನುಡಿ ಬೆನ್ನುಡಿಗಳು (ಸಾವಿರಕ್ಕೂ ಹೆಚ್ಚು), ಸಂಪಾದನೆ, ಸಂಸ್ಮರಣ ಗ್ರಂಥ ಹೀಗೆ ಕನ್ನಡದ ಎಲ್ಲ ಬಗೆಯ ಸಾಹಿತ್ಯಕ್ಷೇತ್ರದಲ್ಲಿ ಸೇವೆ ಅವರದು 15 ಕ್ಕೂ ಸಂಘಟಣೆಗಳನ್ನು ಕಟ್ಟಿದವರು ಅವರು. ಬೆಳಗಾವಿ ಜಿಲ್ಲಾ ಸಂಸ್ಥಾಪಕ ಅಧ್ಯಕ್ಷರು ಅವರು. ಕುಟುಂಬ ನಿರ್ವಹಣೆಯಲ್ಲಿ ಎಲ್ಲರಿಗೆ ಮಾದರಿಯಾದ ಸುಂದರ ಬದುಕು ಸಾಗಿಸಿದ ಶಾಸ್ತ್ರೀಜಿ ಪತ್ರಿಕಾ ಮಾಧ್ಯಮದಲ್ಲಿ ಇದ್ದು 50 ವರ್ಷವೇ ಆಗಿದ್ದರೂ ಒಂದಿನಿತು ನಿಯಮ ತಪ್ಪದ ನಿಷ್ಠುರ ಬದುಕು ಬದುಕಿ ದವರು. ಬಡತನ ಎಂದೂ ಅವರ ಗಣನೆಗೆ ಬಂದಿಲ್ಲ. ಕಿರಿಯರನ್ನು ಬೆಳೆಸುವ ಪ್ರೋತ್ಸಾಹಿಸುವ ಗುಣದಲ್ಲಂತೂ ಅವರನ್ನು ಮೀರಿಸುವವರು ಸಿಗಲಾರರು. ಅವರ ಕುರಿತು ಬರೆಯಲು ನನ್ನಂತವನಿಗೆ ಅಕ್ಷರ ಸಾಲವು. ಕಳೆದ ನಾಲ್ಕು ದಶಕಗಳಿಂದ ಲೋಕದರ್ಶನದ ಅವಿಭಾಜ್ಯ ಅಂಗವೇ ಆಗಿರುವ ಅವರು ನಿವೃತ್ತಿಯ ನಂತರವೂ ಪತ್ರಿಕೆಯ ಸಾಹಿತ್ಯ ಪುರವಣಿಯನ್ನು ನೋಡಿಕೊಳ್ಳುತ್ತಿರುವವರು "ಉಡುಗಣ" ಅವರ ಚುಟುಕು ಸಂಕಲನ. ನಾಡಿನ ಆದ್ಯ ಚುಟುಕು ಬರಹಗಾರರನೇಕರೊಂದಿಗೆ ಅವರು ಚುಟುಕು ಸಂಘಟಣೆಯನ್ನು ಕಟ್ಟಿದುದೇ ಅಲ್ಲದೇ ಸ್ವತಃ ಚುಟುಕು ಬರೆದರು.  

1858 ರಿಂದಲೇ ಕವಿತೆ ಬರೆಯಲು ಆರಂಭಿಸಿದ ಶಾಸ್ತ್ರಿಯ ಅಆವರು ಸೃತಿ, (1967)ಎರಡನೆಯ ಸಂಕಲನ "ಈ ದಂಧೆ ದರ್ವೇಶಿ"((1973), ಮೂರನೆಯ ಕವನ ಸಂಕಲನ "ನನ್ನ ದೆನ್ನುವ ಕವಿತೆ" (2014) ಹೀಗೆ ಮೂರು ಸಂಕಲನಗಳನ್ನು ಅವರು ನೀಡಿದರು. ಅಲ್ಲದೆ ಮೂರು ಚುಟುಕು ಸಂಕಲನಗಳನ್ನು ಅವರು ನೀಡಿದರು. ಮೊದಲ ಚುಟುಕು ಸಂಕಲನ ಇಬ್ಬನಿ (1980), ಬಿಂದು (1997) ಮತ್ತು ಉಡುಗಣ (2014)  

ಅವರ ಸ್ವಂತ ಬದುಕನ್ನೆ ಒಂದು ಚುಟುಕಿನಲ್ಲಿ ಅವರು ಕಟ್ಟಿ ಕೊಟ್ಟ ರೀತಿ ಇದು  

ಜೀವನದುದ್ದಕ್ಕೂ   

‘ಪ್ರೂಪು’ ತಿದ್ದುತ್ತಲೇ ಬಂದಿದ್ದೇನೆ.  

ಆದರೂ ಅಲ್ಲಲ್ಲಿ   

ತಪ್ಪುಗಳು ಉಳಿದುಕೊಂಡಿವೆ  

ತಿದ್ದಿಕೊಳ್ಳಲು  

ಎರಡನೆ ಆವೃತ್ತಿ  

ಹೊರಬರುವದೋ ಇಲ್ಲವೋ   

ಯಾರಿಗೆ ಗೊತ್ತು   

ಬಹುಶಃ ಶಾಸ್ತ್ರಿಯವರ ಬದುಕಿನೊಂದಿಗೆ ಹೆಣೆದುಕೊಂಡ ಚುಟುಕು ಇದು. ಅವರು ಸುಮಾರು ಐದು ದಶಕ ತಿದ್ದಿದ್ದು ತಮ್ಮ ಬಳಿಗೆ ಬಂದ ಲೇಖಕರ ಲೇಖನಗಳನ್ನು. ಇದು ಹೊರನೋಟದ ಅರ್ಥ. ಆದರೆ ಬದುಕಿನ ಒಳ ಅರ್ಥಕ್ಕೆ ಇಳಿದರೆ ಇರುವ ಜನ್ಮದಲ್ಲಿಯೇ ನಮ್ಮ ತಪ್ಪು ನಾವು ತಿದ್ದಿಕೊಳ್ಳಬೇಕು, ಇರದಿದ್ದರೆ ಎರಡನೆಯ ಆವೃತ್ತಿ ಸಿಗುವದೊ ಇಲ್ಲವೋ ಗೊತ್ತಿಲ್ಲ ಎಬ್ನುವ ಅರ್ಥ ಒಳಕೊಂಡ ಚುಟುಕು ಇದು.  

ಬದುಕಿನ ಕಠಿಣ ಸಂದರ್ಭಗಳನ್ನು ಎದುರಿಸಿ ಕಹಿಸತ್ಯಗಳನ್ನು ಉಂಡು ಅರಗಿಸಿಕೊಂಡವರು ಶಾಸ್ತ್ರೀಜಿ. ಬದುಕಿನ ಸಂಕಟ ಅವರನ್ನು ಗಟ್ಟಿಗೊಳಿಸಿವೆ. ಈ ದೇಶದಲ್ಲಿ ನಮಗೆ ಸಾವು ಒಮ್ಮೆಲೆ ಬರುವದೇ ಇಲ್ಲ. ನಮ್ಮನ್ನು ಆಳುವ ವರ್ಗ ಅಷ್ಟಿಷ್ಟು ಕೊಲ್ಲುತ್ತಲೆ ಬಂದಿರುತ್ತಾರೆ. ಈ ವಾಸ್ತವವನ್ನು ಅಪ್ಪನ ಮೇಲೆ ಬರೆದ ಚುಟುಕು   

ನನ್ನಪ್ಪ ಸತ್ತು  

ತಲೆ ಬೋಳಿಸಿಕೊಳ್ಳುವಾಗ   

ನನಗೇನೂ ಅನಿಸಲೇ ಇಲ್ಲ  

ದಿನನಿತ್ಯವೂ ಈ ಪುರೋಹಿತರು  

ಅಂಗಡಿಯವರು ಹೊಟೆಲಿನವರು  

ಅಧಿಕಾರಿ ನೌಕರರು  

ರಾಜಕಾರಣಿಗಳು  

ಅವರಿವರೆಲ್ಲ ಸೇರಿ  

ಮೊದಲೇ ಖಾಲಿ ಮಾಡಿದ್ದರಲ್ಲ  

ಎಂತಹ ವ್ಯಂಗ್ಯ ಇದು! ಬಹುಶಃ ಶಾಸ್ತ್ರಿಯವರು ಎದುರಿಸಿದ ಅನುಭವಿಸಿದ ಆಳ ಅನುಭವ ಅವರಿಂದ ಇಂತಹ ವಾಸ್ತವ ಚುಟುಕು ಇದು.  

ಕವಿ ಕಂಡ ಬಂಧಗಳ ಕುರಿತು ಬರೆದ ಚುಟುಕುಗಳು ಬಹಳ ಸುಂದರವಾಗಿವೆ. ತಾಯಿಯನ್ನು ಯಾರಿಗೆ ಹೋಲಿಸಲು ಸಾಧ್ಯ? ಕವಿ ಶಾಸ್ತ್ರಿಯವರು ಬಹಳ ಆಪ್ಯಾಮಾನವೆನ್ನಿಸುವ ಒಂದು ಚುಟುಕಿನಲ್ಲಿ ತಾಯಿಯ ಕುರಿತು  

ಅಮ್ನಾ,  

ನಿನ್ನ  ವಾತ್ಸಲ್ಯಕ್ಕೆ   

ಹೋಲಿಕೆಯ  

ಹುಡುಕುತ್ತಲೇ ಇದ್ದೇನೆ  

ಸಿಕ್ಕಾಗ ಬರೆಯುತ್ತೇನೆ...  

ಹೋಲಿಕೆ ಸಿಗಲಾರದೇನೋ.. ಕವಿಗೂ ಗೊತ್ತಿದೆ., ಓದುಗರಿಗೂ ಗೊತ್ತಿದೆ. ಅವ್ವನನ್ನು ಕುರಿತು ಬಂದ ಸಾವಿರಾರು ಕವಿತೆಗಳ ಸಾರವೇ ಚುಟುಕಾಗಿ ರೂಪಗೊಂಡಿದೆ.  

ಪ್ರೀತಿ ಕುರಿತ ಚುಟುಕುಗಳು ಬಹಳ ರೋಚಕವಾಗಿವೆ. ಕವಿ ತನ್ನವಳ ಪ್ರೀತಿಯನ್ನೇ ರೂಪಕವಾಗಿಸಿರುವದನ್ನು ಕಾಣುತ್ತೇವೆ.  

ಬಳುಕುವ ನಿನ್ನ ನಡು ನೋಡಿ  

ನಾಚಿದ ಬಳ್ಳಿ   

ರೋಮಾಂಚನದಿ   

ತಟ್ಟನೇ ತಬ್ಬಿಕೊಂಡಿತು  

ಮರವ  

ಹೀಗೆ ತಮ್ಮ ಯೌವನದ ದಿನದ ಪ್ರೀತಿಯ ಚಿತ್ರವನ್ನೇ ಕವಿ ಬಿಡಿಸುತ್ತ ಹೋಗುತ್ತಾರೆ.  

ಕವಿ ಶಾಸ್ತ್ರಿಯವರು ಸದ್ಯಕ್ಕೆ ಬೆಳಗಾವಿಯನ್ನೇ ಅವರು ತಮ್ನ ನೆಲೆಯನ್ನು ಮಾಡಿಕೊಂಡಿದ್ದರೂ ತಮ್ಮ ಮೂಲ ಜಿಲ್ಲೆಯಾದ  ಉತ್ತರ ಕನ್ನಡ ನೆಲದ ಪ್ರೀತಿಯನ್ನು ಮರೆತಿಲ್ಲ. ಒಂದು ಚುಟುಕು ಹೀಗಿದೆ.  

ಜಿನುಗಲಿ ಮೈಯೊಳು  

ಹನಿ ಹನಿ ಬೆವರು  

ಮೈಗಂಟಲಿ ಮಳೆ  

ಗಾಲದ ಕೆಸರು  

ಒಣಮೀನಿನ ದು  

ರ್ವಾಸನೆ ಬಂದರು  

ಉತ್ತರ ಕನ್ನಡ  

ವೇ ಪ್ರಿಯ ತವರು!  

ಹೀಗೆ ಏನೆಲ್ಲ ಅಪಸವ್ಯಗಳಿದ್ದರೂ ನಮ್ಮ ನಾಡು ನಮಗೆ ಪ್ರಿಯೆನ್ನುವದನ್ನು ಕವಿ ಸಾರಿದ್ದಾರೆ. ಅವರ ಚುಟುಕುಗಳನ್ನು ಕುರಿತು ಹಿರುಯರಾದ ಜಿನದತ್ತ ದೇಸಾಯರು "ಇವು ಒಮ್ನೆ ಓದಿ ಬಿಸಾಡುವಂಥ ಅಲ್ಪಾಯುಷ್ಯದ ಕವಿತೆಗಳಲ್ಲ. ಹೊರನೋಟಕ್ಕೆ ನಾಲ್ಕಾರು ಸಾಲುಗಳ ಒಂದು ಆರೋಗ್ಯಕರ ಚಿಂತನೆಯನ್ನು ಗರ್ಭೀಕರಿಸಿಕೊಂಡಿರುವದು ಈ ಚುಟುಕುಗಳು ವೈಶಿಷ್ಟ್ಯ. ಇಂತಹ ಚುಟುಕುಗಳನ್ಜು ನಾನು ಅನುಭವ ಸಮುದ್ರ ಮಂಥನದಲ್ಲಿ ಉದ್ಭವಿಸಿದ ಕಾವ್ಯಾಮೃದ ಹನಿಗಳೆಂದು ಕರೆಯಬಯಸುತ್ತೇನೆ" ಎಂದಿರುವದು ಅತ್ಯಂತ ಸಮುಚಿಯವಾದ ಮಾತಾಗಿದೆ. ಅವರ ಇನ್ನಿತರ ಚುಟುಕುಗಳ ಕುರಿತು ನಾವು ಅಧ್ಯಯನ ಮಾಡಬೇಕಾಗಿದೆ.  

- ಡಾ. ಯ. ಮಾ. ಯಾಕೊಳ್ಳಿ  

ವಿಮರ್ಶಕರು, ಕವಿ, ಸವದತ್ತಿ  


ಸುದ್ದಿ ಓದಿ