ಲೇಖನಗಳು

ಕನ್ನಡದ ಕುಲಗುರು ಡಾ. ತೋಂಟದ ಲಿಂ. ಸಿದ್ಧಲಿಂಗ ಶ್ರೀಗಳು

ಕನ್ನಡದ ಕುಲಗುರು ಡಾ. ತೋಂಟದ ಲಿಂ. ಸಿದ್ಧಲಿಂಗ ಶ್ರೀಗಳು

ನಾಡಿನ ಹೆಸರಾಂತ ಕವಿಗಳಾದ ಚೆನ್ನವೀರ ಕಣವಿ ಅವರು ಹೇಳುವ ಈ ಮಾತು ಅಕ್ಷರಶಃ ಗದಗ ಜಗದ್ಗುರು ಡಾ. ತೋಂಟದ ಲಿಂ. ಸಿದ್ದಲಿಂಗ ಪೂಜ್ಯರಿಗೆ ಅನ್ವಯಿಸುವದರಲ್ಲಿ ಸಂದೇಹವೇ ಇಲ್ಲ. ನಾಡಿನಲ್ಲಿ ಮಠಗಳ ಸಂಖ್ಯೆಯಂತೆ ಸ್ವಾಮಿಗಳ ಸಂಖ್ಯೆಯು ಬಹಳ, ಡ್ರೆಸ್ ಕೋಡ್‌ದಂತೆ ಸ್ವಾಮಿಗಳಲ್ಲೂ, ಕಾವಿ, ಕಪನಿ ಯುನಿಫಾರ್ಮ ಇದೆ. ಆದರೆ ವೇಷಕ್ಕೆ ತಕ್ಕ ವಿದ್ಯೆ, ತ್ಯಾಗ, ತಪಸ್ಸು, ಸೇವೆಗಳ ಸಾಕಾರರು ಮಾತ್ರ ವಿರಳ, ಅಂತಾ ವಿರಳರಲ್ಲಿ ಒಬ್ಬರಾದ ಜ. ತೋಂಟದ ಸಿದ್ದಲಿಂಗ ಶ್ರೀಗಳು ಸರಳರಲ್ಲಿ ಸರಳರು, ನಡೆ, ನುಡಿ ಒಂದಾದವರು ಅಂತಾ ನಿಷ್ಠೆಯನ್ನು ತಾವು ಆಚರಿಸಿ ನಾಡಿನ ಹೆಸರಾಂತ ಮಠಗಳ ಪೂಜ್ಯರಿಗೂ ಲಿಂಗಾಯತ ಧರ್ಮಿಯರಿಗೂ ದಾರೀದೀಪವಾಗಿ ಈಗ ಕನ್ನಡದ ಕನ್ನಡಮ್ಮನ ನೆಲದಲ್ಲಿ ಐಕ್ಯರಾಗಿದ್ದಾರೆ. ಈ ನಾಡಿನ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಪ್ರಕಾಶಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಕನ್ನಡದ ಹೋರಾಟಗಳ ಸ್ವಾಮಿಜಿ ಎಂದೇ ಹೆಸರಾಗಿದ್ದರು. ಸಮಾಜದ ಕೊಳೆಯನ್ನು ತೊಳೆದ ಸ್ಮರಣೀಯರು ಅಂತಾ ಮಹಾನ್ ಸಂತರು ಜಗದ್ಗುರು ಡಾಽಽ ತೋಂಟದ ಲಿಂ. ಸಿದ್ದಲಿಂಗ ಮಹಾಸ್ವಾಮಿಗಳು.  

ಪೂಜ್ಯರು ಹುಟ್ಟಿ ಬೆಳೆದದ್ದು ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ, ಹಿರೇಮಠದ ಅಮರಯ್ಯ ಶಂಕರವ್ವರ ಮಗನಾಗಿ ಫೆಬ್ರುವರಿ 21 ರಂದು ಜನಿಸಿದರು. ಸಿಂಧಗಿಯ ಪಟ್ಟಾಧ್ಯಕ್ಷರಾದ ಶಾಂತವೀರ ಸ್ವಾಮಿಗಳ ಉತ್ತರಾಧಿಕಾರಿಗಳೆಂದೆ ಹೆಸರಾಗಿದ್ದರು ಅವರ ಕಣ್ಣಿರಿಕೆಯಲ್ಲೇ ಬೆಳೆದು ಬಂದವರು. ಶಾಂತವೀರ ಪಟ್ಟಾಧ್ಯಕ್ಷರು ಸಮಾಜದ ಕುರಿತು, ಹಾಗೂ ಪ್ರವಚನದಲ್ಲಿ ಹೇಗೆ ನಾವು ವಿಷಯ ಪ್ರಸ್ತಾವನೆ ಮಾಡಬೇಕು ಹೀಗೆ ಎಲ್ಲ ತರಬೇತಿಯನ್ನು ಶ್ರೀಗಳಿಗೆ ಮೊದಲೇ ಮನವರಿಕೆ ಮಾಡಿದ್ದರು. ಒಬ್ಬ ಹೆಸರಾಂತ ಗುರು ದೊರೆತ್ತಿದ್ದರಿಂದಲೇ ಪೂಜ್ಯರು ಲೋಕದ ಕಣ್ಮಣಿಗಳಾದರು. ಜಗದ ಕನ್ನಡ ಜಗದ್ಗುರುಗಳೆಂದು ಲೋಕವನ್ನೇ ಬೆಳಗಿ ಕನ್ನಡದ ಕಣ್ಮಣಿಗಳಾದರು ಪೂಜ್ಯರು 1966 ರಲ್ಲಿ ಎಸ್‌.ಎಸ್‌.ಎಲ್‌.ಸಿ. 1972ರಲ್ಲಿ, ಬಿ.ಎ. 1974ರಲ್ಲಿ ಎಂ.ಎ. ಪದವಿಯನ್ನು ಪಡೆದರು. ಮೇಧಾವಿ ಪ್ರತಿಭಾವಂತ ಉದಾತ್ತವಾದ ವ್ಯಾಗ್ನಿಗಳೆಂದು ಹೆಸರು ಗಳಿಸಿದ್ದರು. ಅವರ ವ್ಯಕ್ತಿತ್ವಕ್ಕೆ ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಒಲಿದು ಬಂದಿತು. ಪೂಜ್ಯ ಜಗದ್ಗುರು ಶಿವಕುಮಾರ ಮಹಾಸ್ವಾಮಿಗಳು ವಯಸ್ಸಾದ ಕಾರಣ ಅವರೆ ಉತ್ತರಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಿ ಅಂತಾ ಅಪ್ಪಣೆಯನ್ನು ಭಕ್ತರಿಗೆ ಸ್ವತಃ ತಿಳಿಸಿದಾಗ ಭಕ್ತರು ಶ್ರೀಮಠದ ಶಿವಾನುಭವ ವೇದಿಕೆಯಲ್ಲಿ ಉತ್ತರಾಧಿಕಾರದ ಕಾರಣಕ್ಕಾಗಿಯೇ ಐದುವಾರಗಳ ಪ್ರವಚನದ ಮೂಲಕ ಮುಂದಾದರು ಮೊದಲ ಐದುವಾರ ಲಿಂ. ಪುಟ್ಟರಾಜ ಗವಾಯಿಗಳು ಶಿವಾನುಭವದಲ್ಲಿ ಪ್ರವಚನ ನೀಡಿದ್ದು ನಂತರದ ಸರದಿ ಶ್ರೀ ಸಿದ್ದರಾಮ ದೇವರಿಗೆ ಶಿವಾನುಭವದ ವೇದಿಕೆ ಪ್ರಾಪ್ತವಾಗಿ ನುಡಿಗಲಿಸಿದ ಬಸವಣ್ಣ ಕುರಿತು ಪ್ರವಚನ ಮಾಡಿದರು. ಅವರ ವಾಗ್ಜರಿಗೆ ಮನಸೋತ ಭಕ್ತರಿಗೆ ಹಾಗೂ ಜಗದ್ಗುರು ಶಿವಕುಮಾರ ಪೂಜ್ಯರಿಗೆ ಇವರೇ ಸೂಕ್ತವಾದ ಉತ್ತರಾಧಿಕಾರಿ ಅಂತಾ ನಿರ್ಧಾರ ಮಾಡಿದರು. ಸಿದ್ದರಾಮ ದೇವರು ಮೊದಲು ಒಪ್ಪಿಗೆ ನೀಡಲಿಲ್ಲ ಕಾರಣ ಅದಾಗಲೇ ಸಿಂಧಗಿ ಪಟ್ಟಾಧ್ಯಕ್ಷರೆಂದು ಬಿಂಬಿತರಾಗಿದ್ದರು. ಆಗ ಭಕ್ತರು ಛಲ ಬಿಡದೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಪೂಜ್ಯ ಜಗದ್ಗುರು ಗಂಗಾಧರ ಜಗದ್ಗುರುಗಳಲ್ಲಿ ಪಟ್ಟು ಬಿಡದೆ ಅರಿಕೆ ಮಾಡಿಕೊಂಡರು. ನಾವಾಗಲೆ ಶ್ರೀಮಠದ ಎಲ್ಲ ಚರ-ಸ್ಥಿರಾಸ್ತಿ ಅವರ ಹೆಸರಿಗೆ ಮಾಡಿದ್ದು ಪೂಜ್ಯರಲ್ಲಿ ನಿವೇದಿಸಿಕೊಂಡರು. ಭಕ್ತರ ಅಭಿಮಾನ ಹಾಗೂ ಪ್ರೀತಿಗೆ ಪೂಜ್ಯ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ನೇತೃತ್ವ ವಹಿಸಿ ಸಿದ್ಧರಾಮದೇವರಿಗೆ ಸೂಕ್ತ ತಿಳುವಳಿಕೆ ಸಲಹೆ ನೀಡಿ ತಿಳಿಹೇಳಿ ಒಪ್ಪಿಗೆ ಸೂಚಿಸಲು ಅಪ್ಪಣೆ ಕೊಟ್ಟರು. ಆಗ ಸಿದ್ಧರಾಮದೇವರು ಪೂಜ್ಯರ ಅಪ್ಪಣೆಯ ಪ್ರಕಾರ ಒಪ್ಪಿಗೆ ನೀಡಿದರು. ಆಗ ಗದುಗಿನ ಭಕ್ತವೃಂದದ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದರಂತೆ ಜ. ತೋಂಟದಾರ್ಯ ಮಠದ ಪೀಠವನ್ನು 29-07-1974ರಲ್ಲಿ ಅಲಂಕರಿಸಿದರು. ಡಾಽಽ ತೋಂಟದ ಸಿದ್ದಲಿಂಗರೆಂದು ಖ್ಯಾತನಾಮರಾದರು. ಡಾಽಽ ತೋಂಟದ ಸಿದ್ದಲಿಂಗ ಸ್ವಾಮಿಗಳು ಮಠಕ್ಕೆ ಬಂದಾಗ ಮಠದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ, ಜಮೀನುಗಳು ಪಾಳು ಬಿದ್ದಿದ್ದವು, ಕೆಲವು ಬೇರೆಯವರ ಪಾಲಾಗಿದ್ದವು ಧೃತಿಗೆಡೆದೆ ಎಲ್ಲವನ್ನು ಪರೀಶೀಲಿಸಿ ಬೇರೆಯವರ ಪಾಲಾಗಿದ್ದ ಆಸ್ತಿಯನ್ನು ಮರಳಿ ಪಡೆದರು. ಸ್ವತಃ ಮಡಿ ಹೊಲ, ಮಾನೆ ಹೊಲಗಳಲ್ಲಿ ಕೃಷಿಯಲ್ಲಿ ತೊಡಗಿದರು. ಬರಗಾಲದ ಬವಣೆಯಲ್ಲಿ ಕೃಷಿ ಮಾಡಲು ಆಗುವುದಿಲ್ಲ ಅಂತಾ ಭಕ್ತರು ಹೇಳಿದರೂ ಕೇಳದೇ ನಿಷ್ಠೆಯಿಂದ ಜಮೀನನ್ನು ದುರಸ್ತಿಗೊಳಿಸಿದರು. ದ್ರಾಕ್ಷಿ, ದಾಳಿಂಬೆ ಬೆಳೆದು ಕೃಷಿಯಲ್ಲಿ ಯಶಸ್ಸು ಕಂಡು ಮಠದ ಜಿರ್ಣೋದ್ದಾರ ಮಾಡಿ ಕಾಯಕಯೋಗಿ ಕೃಷಿ ಸ್ವಾಮಿಜಿ ಎಂದು ಹೆಸರು ಗಳಿಸಿದರು. ಇದನ್ನು ಕಂಡ ಭಕ್ತರು ಮೂಖವಿಸ್ಮಿತರಾದರು. ಅದು ಅಲ್ಲದೇ ಸುಂದರ ಫಲವತ್ತಾದ ತೋಟದ ಭಾವಿಯನ್ನು ಹಸಿವು ನೀರಡಿಕೆಯನ್ನು ಲೆಕ್ಕಿಸಿದೇ ದಣಿವರಿತು ನಿರ್ಮಿಸಿದರು. ಈ ಎಲ್ಲ ಕೆಲಸ ಕಾರ್ಯಗಳಲ್ಲಿ ಮಠದ ವಿದ್ಯಾರ್ಥಿಗಳು ಸಹ ಕೈ ಜೋಡಿಸಿದ್ದು ಅಲ್ಲದೇ ಮಕ್ಕಳಿಗೆ ಮುಳ್ಳು ಕಲ್ಲು ತಾಗಿ ಗಾಯವಾಗಿ ನೋವಾಗಿದ್ದರೆ ಮಠದ ಮಕ್ಕಳು ತಮ್ಮ ಮಕ್ಕಳೇ ಅನ್ನುವಂತೆ ಪರಿಭಾವನೆಯನ್ನು ಹೊಂದಿ ಪೂಜ್ಯರು ಆ ಮಕ್ಕಳನ್ನು ಒಬ್ಬ ತಾಯಿಯಾಗಿ ತಂದೆಯಾಗಿ ವೈದ್ಯರಾಗಿ ಗುರುವಾಗಿ ಬಂಧು ಭಾಂಧವರಂತೆ ಪಾಲನೆ ಪೋಷಣೆಯೊಂದಿಗೆ ಆರೈಕೆ ಮಾಡಿದ್ದು ಪೂಜ್ಯರಿಗೆ ಇರುವ ಕಳಕಳಿ ಅನುಕಂಪ ತೋರಿಸುತ್ತೆ. ಇಂಥ ಭಕ್ತರ ಬಗ್ಗೆ ಕಳಿಕಳಿಯಿದ್ದ ಪೂಜ್ಯರು ಯಾರಾದರೂ ಇದ್ದರೆ ಅದು ತೋಂಟದ ಸಿದ್ಧಲಿಂಗ ಪೂಜ್ಯರಲ್ಲಿ ಮಾತ್ರ ನಾವು ಕಾಣಬಹುದು ಇಂಥ ಕಳಿಕಳಿಯುಳ್ಳ ಪೂಜ್ಯರು ಸಿಗುವುದೇ ವಿರಾಳಾತಿ ವಿರಳ ಅಂತಾ ನಾವು ಭಾವಿಸಬಹುದು ಅಂತಾ ಮಮಕಾರದ ಅಂತಃಕರಣದ ಪ್ರೀತಿಯನ್ನು ತೋರಿಸುತ್ತಿದ್ದರು. ಯಾರಾದರೂ ಭಕ್ತರು ಸ್ವಾಮಿಗಳು ಹೀಗೆ ಮಾಡುವುದೇ ? ಎಂದು ಬೆರಗಿನಿಂದ ನೋಡುವವರಿಗೆ ಸ್ವಾಮಿಗಳು ಹೀಗೆಯೇ ಇರಬೇಕೆಂದು ನುಡಿದಂತೆ ನಡೆಯುವ ಪರಿಯನ್ನು ಸಮಾಜಕ್ಕೆ ತೋರಿಸಿಕೊಟ್ಟವರು ಪೂಜ್ಯರು ಮಠದ ಕೀರ್ತಿಯನ್ನು ನಾಲ್ದೆಸೆಗೆ ಹರಡುವಂತೆ ಮಾಡಿದರು.  

ಪೂಜ್ಯರು 29-07-1974 ರಲ್ಲಿ ಜಗದ್ಗುರು ತೋಂಟದ ಪೀಠವನ್ನು ಅಲಂಕರಿಸಿದಾಗ ಒಂದು ವರ್ಷ ಆಚರಣೆಗಳು ಮಠದ ಪರಂಪರೆಯಂತೆಯೇ ಜಾತ್ರೆ, ಉತ್ಸವ ಎಲ್ಲಾ ಆಚರಣೆಗಳು ಪೂಜ್ಯರು ಪೀಠವನ್ನು ಅಲಂಕರಿಸಿದ ಒಂದು ವರ್ಷ ಮಠದ ನಿಯಮದಂತಯೇ ಸಾಗಿದವು. ನಂತರ ತಾವು ಅದರಂತೆ ಪಾಲನೆ ಗೈದರು. ಆನಂತರ ಮುಂದಿನ ವರ್ಷದ ಜಾತ್ರಾ ಮಹೋತ್ಸವದ ಸಭೆಯಲ್ಲಿ ಭಕ್ತರಿಗೆ ತಾವು ಕಂಡಕೊಂಡಂತೆ ನಿಲುವುಗಳನ್ನು ಭಕ್ತರಿಗೆ ಸ್ಪಷ್ಟವಾಗಿ ಮೌಢ್ಯತೆ ಕುರಿತು ಸಭೆಯಲ್ಲಿ ಭಕ್ತರಿಗೆ ಮನಮುಟ್ಟುವಂತೆ ಸಾದರಪಡಿಸಿದರು. ನಾನು ಇನ್ನು ಮುಂದೆ ಜಾತ್ರೆಯಲ್ಲಿ ಅಡ್ಡಪಲ್ಲಕ್ಕಿಯಲ್ಲಿ ಕುಳಿತು ಮೆರವಣೆಗೆ ಮಾಡಿಸಿಕೊಳ್ಳುವುದಿಲ್ಲ ಇದಕ್ಕೆ ನನ್ನ ಅಂತರಂಗ ಒಪ್ಪುವುದಿಲ್ಲ 19-20ನೇ ಶತಮಾನದಲ್ಲೂ ಒಬ್ಬ ಮನುಷ್ಯ ಮನುಷ್ಯರ ಮೇಲೆ ಕುಳಿತು ಸವಾರಿ ಮಾಡುವುದು ನನಗೆ ಎಳ್ಳಷ್ಟು ಮನಸ್ಸಿಲ್ಲ ಅದೇ ರೀತಿ ಜಾತ್ರೆಯಲ್ಲಿ ತೇರಿನ ಗಾಲಿಗಳಿಗೆ ಅನ್ನ ಕುಂಬಳಕಾಯಿ ಇರಿಸುವುದು ಪಲ್ಲಕ್ಕಿಯಲ್ಲಿ ತೋಂಟದ ಸಿದ್ದಲಿಂಗ ಹಾಗೂ ಬಸವಣ್ಣನ ಪೋಟೋ ವಚನ ಕಟ್ಟುಗಳನ್ನು ಇಟ್ಟು ಮೆರೆವಣೆಗೆ ಮಾಡಿರಿ ನಾವು ಭಕ್ತರ ಜೊತೆಗೂಡಿ ಪಾದಚಾರಿಗಳಾಗಿ ನಡೆದು ಮುಂದೆ ಸಾಗಿ ಜಾತ್ರೆಯನ್ನು ಸರಳ ರೀತಿಯಲ್ಲಿ ನಡೆಯುವ ಪರಂಪರೆ ಮುಂದುವರಿಸೋಣ ತೇರಿಗೆ ಉತ್ತತ್ತಿ ಬಾಳೆಹಣ್ಣು ಪೇರಲ ಮುಂತಾದವುಗಳನ್ನು ಎಸೆಯುವುದು ನನ್ನ ಮನಸ್ಸಿಗೆ ಒಪ್ಪುವುದಿಲ್ಲ. ಸಮಾಜಕ್ಕೆ ಒಳ್ಳೆ ಸಂದೇಶ ಸಾರಬೇಕು ಅದು ಅಲ್ಲದೇ ಸಮಾಜದಲ್ಲಿ ಅಂಟಿಕೊಂಡಿರುವ ಮೌಢ್ಯಗಳನ್ನು ದೂರ ಮಾಡುವುದು ನಮ್ಮ ಗುರಿ. ಮದುವೆಯಲ್ಲಿ ಅಕ್ಕಿಕಾಳನ್ನು ಹಾಕುವುದು ಅದನ್ನು ನಾವೇ ತುಳಿಯಬೇಕಾಗುತ್ತದೆ. ಅದು ಸಲ್ಲ ನಾಗರ ಪಂಚಮಿಯಲ್ಲಿ ಕಲ್ಲಿನ ನಾಗರಕ್ಕೆ ಹಾಲ ನೆರೆಯುವುದು ತಪ್ಪು ಅದನ್ನೆ ಬಡ ರೋಗಿಗಳಿಗೆ ಹಣ್ಣು, ಹಂಪಲ, ಹಾಲು ನೀಡಿದರೆ ಒಬ್ಬ ರೋಗಿಯನ್ನು ಕಾಪಾಡಿದ ಪುಣ್ಯವಾದರೂ ಲಭಿಸುತ್ತದೆ. ಬಸವ ಜಯಂತಿಯನ್ನು ಎಲ್ಲರೂ ಸೇರಿ ಆಚರಿಸಿರಿ ಆಗ ಭಕ್ತರು ಇದು ಮಠದ ಸಂಪ್ರದಾಯ ಅಂತಾ ತಿಳಿಸಿದಾಗ ನೀವು ಮತ್ತೇ ಹಳೇ ಆಲದ ಮರಕ್ಕೆ ಜೋತು ಬಿದ್ದರೆ ಹೇಗೆ ಎಂದ ಪೂಜ್ಯರು ಅಸಮಾಧಾನ ವ್ಯಕ್ತಪಡಿಸಿ ಒಂದು ವರ್ಷ ನಾನು ನಿಮ್ಮಂತೆಯೇ ನಡೆದಿದ್ದೇನೆ ಇನ್ನು ಮುಂದೆ ನಾನು ಹೇಳಿದಂತೆ ಕೇಳಿ ಎಂದರಲ್ಲದೆ ಇಂತಹ ಮೌಢ್ಯ ಆಚರಣೆಗಳನ್ನು ನಾನು ಒಪ್ಪುವುದಿಲ್ಲ ಅಂತಾ ನೆರೆದ ಭಕ್ತರಿಗೆ ಸ್ಪಷ್ಟ ನೀತಿ ಪಾಠವನ್ನು ತಿಳಿಸಿದರು. ನನಗೆ ಭಕ್ತರೆ ಆಸ್ತಿ ನಾನು ಮಠದ ಆಸ್ತಿ ನೋಡಿ ಬಂದಿಲ್ಲ ಭಕ್ತರ ಪ್ರೀತಿಗೆ ಒಲಿದು ಬಂದಿದೇನೆ. ಆದ್ದರಿಂದ ಈ ಮಠದ ಬಾಗಿಲು ಎಲ್ಲ ಧರ್ಮಿಯರಿಗೂ ಸದಾ ತೆರೆದ ಬಾಗಿಲು ಸದಾ ಮುಕ್ತವಾಗಿ ಎಲ್ಲ ಜನರಿಗೂ ಅವಕಾಶ ಕಲ್ಪಿಸಿ ಜಾತಿ, ವರ್ಗ, ವರ್ಣಗಳನ್ನು ಬದಿಗಿರಿಸಿ ಮೌಢ್ಯತೆಯನ್ನು ಬೇರು ಸಮೇತ ಕಿತ್ತೊಗೆಯಬೇಕೆಂದು ಭಕ್ತರಿಗೆ ಅರಿವು ಮೂಡಿಸಿದರು. ಅದರ ಉದ್ದೇಶ ಶ್ರೀ ಮಠದಲ್ಲಿ ಶಿವಾನುಭವ ವೇದಿಕೆಯ ಮೂಲಕ ಮೌಢ್ಯತೆಯ ಬದಲಾಗಿ ಜ್ಞಾನ ಜ್ಯೋತಿಯನ್ನು ಬೆಳಗಿಸಿದರು. ಹಿಂದೂ, ಲಿಂಗಾಯತ, ಮುಸ್ಲಿಂ, ಕ್ರೈಸ್ತ, ಲಂಬಾಣಿ, ಜೈನ, ದಲಿತ ಎಂದು ಭೇದವೆಣಿಸಿದೆ ಸರ್ವರಿಗೂ ಅವಕಾಶ ಕಲ್ಪಿಸಿ ನಾಡಿನ ಸಮಾಜಕ್ಕೆ ಹೆಸರುವಾಸಿಯಾದ ಗಣ್ಯರನ್ನು, ಚಿಂತಕರನ್ನು, ಉಪನ್ಯಾಸಕರನ್ನು, ಸೂಫಿ ಸಂತರನ್ನು ವಿವಿಧ ಕಲಾ ತಂಡಗಳನ್ನು ಎಲ್ಲಾ ಬೇರೆ ಮಠದ ಪೂಜ್ಯರನ್ನು ಸಹ ಶಿವಾನುಭವ ವೇದಿಕೆಯ ಮೂಲಕ ಆಧ್ಯಾತ್ಮಿಕ ಶೈದ್ದಾಂತಿಕ ನೆಲೆಯಲ್ಲಿ ಭಕ್ತರಿಗೆ ಅನುಭಾವದ ನುಡಿಗಳನ್ನು ಆಲಿಸುವುದಕ್ಕೆ ಅನುವು ಮಾಡಿ ಮಠವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ.  

ಪೂಜ್ಯರಿಗೆ ಇರುವ ವಿಶೇಷಣಗಳು ಅವರ ವ್ಯಕ್ತಿತ್ವದ ಒಂದೊಂದು ಮುಖಗಳಾಗಿದ್ದವು ಅವರನ್ನು ಕನ್ನಡದ ಸ್ವಾಮಿಜಿ, ಸಾಮಾನ್ಯರ ಸ್ವಾಮಿಜಿ, ಪುಸ್ತಕದ ಸ್ವಾಮಿಜಿ, ಬಂಡಾಯದ ಸ್ವಾಮಿಜಿ, ಲಿಂಗಾಯತ ಪ್ರಗತಿಪರ ಸ್ವಾಮಿಜಿ ಎಂದು ಭಕ್ತರು ಪ್ರೀತಿಯಿಂದ ಕರೆಯುತ್ತಿದ್ದರು. ಅನ್ಯರ ಜೊತೆ ಬೆರೆಯುವುದು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಜ್ಞಾನವಂತರಿದ್ದರೆ ಅವರಿಗೆ ಬರವಣೆಗೆ ಕುರಿತು ಪ್ರೋತ್ಸಾಹಿಸುವುದು ಸಾಹಿತ್ಯದಲ್ಲಿ ಅಭಿರುಚಿ ಮೂಡಿಸುವುದು ಅಲ್ಲದೇ ವಿಶೇಷ ಪ್ರೋತ್ಸಾಹ ನೀಡುತ್ತಿದ್ದರು. ವಿಶೇಷವಾಗಿ ಲಂಬಾಣಿ ತಾಂಡಾದ ಮಕ್ಕಳು ವಿದ್ಯಾವಂತರಾಗಲು ಅವರಿಗೆ ಶಾಲಾ ಫೀ ಪುಸ್ತಕ ಕೊಟ್ಟು ಅವರ ಕುಟುಂಬಗಳ ಬಾಳು ಬೆಳಗುವಂತೆ ಪ್ರೋತ್ಸಾಹ ನೀಡಿದ್ದು ಅಲ್ಲದೆ ಅವರ ತಾಂಡಾಗಳನ್ನು ದತ್ತು ಪಡೆದು ಕಪ್ಪತ್ತಗುಡ್ಡದ ಸಂರಕ್ಷಣೆಗೆ ತಿಳಿವಳಿಕೆ ಮೂಡಿಸಿ ಉತ್ತಮ ಬೆಳವಣೆಗೆಗೆ ದಾರಿ ತೋರಿದರು.  

ಪೂಜ್ಯರು ತೊಟ್ಟ ಕಾವಿಬಟ್ಟೆ ಕನ್ನಡದ ಬಾಳಬುತ್ತಿಯಾಗಿತ್ತು, ಅವರು ಹಿಡಿದ ದಂಡದಲ್ಲಿ ಕನ್ನಡದ ಕೆಚ್ಚಿತ್ತು, ಅವರ ನಾಲಿಗೆಯಲ್ಲಿ ಕನ್ನಡ ಸಂಸ್ಕೃತಿಯ ರಸಗಟ್ಟಿ ಇತ್ತು, ಕನ್ನಡ ಹೊಳೆಪಿತ್ತು, ಕನ್ನಡದ ನೆಲ, ಜಲಗಳಿಗೆ ಹಿರಿಮೆ ಗರಿಮೆಗಳಿದ್ದವು, ಭೂತ ವರ್ತಮಾನ ಭವಿಷ್ಯತ್ತಿನ ತರಂಗಗಳಿದ್ದವು, ಆದ್ದರಿಂದಲೇ ಕನ್ನಡದ ಜಗದ್ಗುರು ಎಂದು ಅಭಿದಾನಕ್ಕೆ ಪಾತ್ರರಾದರು.   

ಪೂಜ್ಯರ ಹೋರಾಟದ ಹೆಜ್ಜೆಗಳು :- 1982 ಏಪ್ರೀಲ್ 4 ರಂದು ಗೋಕಾಕ ವರದಿ ಜಾರಿಗಾಗಿ ಹೋರಾಟ ಮಾಡಿ ಯಶಸ್ಸನ್ನು ಕಂಡರು, ಕನ್ನಡಕ್ಕೆ ಅಗ್ರಮಾನ್ಯ ಸ್ಥಾನಮಾನಕ್ಕೆ ಜಾತಿ ಮತ ಪಂಥವನ್ನು ನೋಡದೆ ಹೋರಾಟ ಮಾಡಿದ್ದು 1982 ಜೂನ್ 28ರ ಶಿವಾನುಭವದಲ್ಲಿ ವಿಜಯೋತ್ಸವಕ್ಕೆ ಕಾರಣರಾದರು, ಹಾಗೇ ಉತ್ತರ ಕರ್ನಾಟಕ ಭಾಗದ ಅಭಿವೃದ್ದಿಗಳಿಗೆ ನಂಜುಂಡಪ್ಪ ವರದಿಯನ್ನು ಬೆಂಬಲಿಸಿದರು. ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಪಾಲು ಸಿಗುವಂತಾಗಲು ಪೂಜ್ಯರು ಹೋರಾಟಕ್ಕೆ ಬೆಂಬಲ ನೀಡಿದರು. ಪೂಜ್ಯರು ಶಾಂತಿಯನ್ನು ಗುರಿಯಾಗಿಸಿ ಕೋಮು ಸೌಹಾರ್ದತೆಗಾಗಿ ಅಹೋರಾತ್ರಿ ಶ್ರಮಿಸಿದ್ದಾರೆ. ಪೂಜ್ಯರ ಸಮಾಜದ ಕಳಕಳಿ ಗುರುತಿಸಿ ರಾಜ್ಯ, ಕೇಂದ್ರ ಸರಕಾರಗಳು ಗುರುತಿಸಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು 2001 ರಲ್ಲಿ ಕೋಮು ಸೌಹಾರ್ದತಾ ಪ್ರಶಸ್ತಿ ನೀಡಿ ಗೌರವಿಸಿದೆ. ಗದಗ ಹಾಗೂ ಸುತ್ತುಮುತ್ತಲಿನ ಪ್ರದೇಶದಲ್ಲಿ ಇದುವರೆಗೂ ಒಂದೇ ಒಂದು ಕೋಮು ಗಲೆಭೆ ನಡೆದಿಲ್ಲ, ಒಂದು ವೇಳೆ ಚಿಕ್ಕ-ಪುಟ್ಟ ವಿಷಯಕ್ಕೆ ಎರಡು ಗುಂಪುಗಳ ನಡುವೆ ಗಲಭೆ ನಡೆದದ್ದು ತಿಳಿದರೆ ಪೂಜ್ಯರು ತಿಳಿ ಹೇಳಿ ಸಂಧಾನ ನಡೆಸುತ್ತಿದ್ದದು ವಿಶೇಷವಾಗಿತ್ತು.  

ಕಪ್ಪತ್ತಗುಡ್ಡ ಅರಣ್ಯ ಸಂಪತ್ತಿನ ರಕ್ಷಣೆ :- ಸರಕಾರವು ಪೋಸ್ಕೋ ಕಂಪನಿಗೆ ನೆಲ-ಹೊಲ-ಸ್ಥಾವರ ಕಾರ್ಖಾನೆ ಸ್ಥಾಪಿಸಲು ನಿರ್ಣಯಿಸಿದಾಗ ಫಲವತ್ತ ಭೂಮಿ ತುಂಗಭದ್ರಾ ಜಲಾಶಯದ ಬಳಕೆಯಾಗುವುದನ್ನು ತಡೆಯುವಲ್ಲಿ ಯಶಸ್ವಿಯಾದರು. ಸರಕಾರ ಸಂರಕ್ಷಿತ ಅರಣ್ಯ ಪ್ರದೇಶವೆಂದು ಸಾರುವವರೆಗೂ ಪಟ್ಟು ಬಿಡದೆ ಹೋರಾಟ ಮಾಡಿ ರೈತರ ಹಿತ ಕಾಪಾಡಿದ್ದು ಅಲ್ಲದೇ ಗಣಿ ಇಲಾಖೆಗೆ ಅವಕಾಶ ವಂಚಿತರನ್ನಾಗಿ ಮಾಡಿ ಯಶ ಕಂಡರು.  

ಪುಸ್ತಕದ ಸ್ವಾಮಿಜಿ :- ಪ್ರಜಾಪ್ರಭುತ್ವದಲ್ಲಿ ಪ್ರಕಟಣೆಗಳು ಪ್ರಮುಖ ಅಂಗವಾಗಿದೆ ಪೀಠದ ವತಿಯಿಂದ ಪ್ರಕಟವಾಗುವ ಪುಸ್ತಕಗಳು ಹಲವಾರು ಅಪ್ರಕಟಿತ ವಚನ ಸಂಕಲನ ಪುಣ್ಯ ಪುರುಷರ ಮಾಲೆಯ ಪ್ರಬಂಧಗಳ ಮುದ್ರಣ, ಪ್ರಾಚೀನ ಸಾಹಿತ್ಯ ಅಪ್ರಕಟನೆಗಳು ಅಭಿನಂದನಾ ಗ್ರಂಥಗಳು ಇತ್ತೀಚಿನ ಕಾಲದ ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಸಮಾಜಕ್ಕೆ ಪ್ರಕಟಣೆ ಮೂಲಕ ಮಠದ ವತಿಯಿಂದ ಪ್ರಕಟಿಸುವುದು ಮರು ಮುದ್ರಣಗೊಳಿಸಿ ಸಮಾಜಕ್ಕೆ ತಲುಪುವಂತೆ ನೋಡಿಕೊಳ್ಳುವುದು ಪೂಜ್ಯರ ಸಾಧನೆ 600 ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದ ಕಾರಣ ಪುಸ್ತಕ ಪ್ರಾಧಿಕಾರ ಪ್ರಶಸ್ತಿ ನೀಡಿ ಗೌರವಿಸಿದೆ, ಇದು ಪೂಜ್ಯರ ಕಳಕಳಿಗೆ ಸಂದಗೌರವ.   

ವಿದ್ಯಾ ಸಂಸ್ಥೆಗಳು :- ಪೂರ್ವ ಪ್ರಾಥಮಿಕದಿಂದ ಎಲ್ಲ ಕ್ಷೇತ್ರಗಳ ಪದವಿ, ಡಿಪ್ಲೋಮಾ, ಇಂಜೀನೀಯರಿಂಗ್ ವಿದ್ಯಾ ಸಂಸ್ಥೆಗಳನ್ನು ತೆರೆದು ಎಲ್ಲ ಮಕ್ಕಳು ವಿದ್ಯಾವಂತರಾಗಲೆಂದೇ ಅವರ ಮಹಾದಾಶೆಯಾಗಿತ್ತು.  

ಬಸವ ಪುತ್ಥಳಿ ಸ್ಥಾಪನೆ :- ಲಿಂಗಾಯತ ಧರ್ಮದ ಬಸವ ಧರ್ಮದ ಕುರುಹಾಗಿ ಬಸವಣ್ಣನವರ ಪರಿಕಲ್ಪನೆ ಎಲ್ಲರಲ್ಲಿ ಮೂಡಿಸುವ ಉದ್ದೇಶದಿಂದ ಮೂರ್ತಿ ಸ್ಥಾಪನೆಗೆ ಮುಂದಾದ ಪೂಜ್ಯರು ಪೀಠಕ್ಕೆ ಸಲ್ಲುವ ಕಾಣಿಕೆ ಹಾಗೂ ಸರಕಾರದ ನೆರವಿನಿಂದ ಗದಗ ಪ್ರಾಚೀನ ಕೆರೆ (ಬೀಜಗೆರೆ) ಯಲ್ಲಿ 116 ಅಡಿ ಬೃಹತ್ ಬಸವ ಮೂರ್ತಿ ಸ್ಥಾಪನೆ ಮಾಡಿದ್ದಾರೆ, ಬಸವ ಮೂರ್ತಿ ನಿಂತ ನಿಲುವು ಪ್ರಗತಿಯ ಸಂಕೇತವಾಗಿದೆ, ಹಾಗೂ ಬಸವ ಸಂದೇಶಗಳ ಸಾಕಾರ ಮೂರ್ತಿಯಾಗಿ ಕಂಗೊಳಿಸುತ್ತದೆ.  

ಜಗದ್ಗುರುಗಳು ಅಕಾಲಿಕವಾಗಿ ಲಿಂಗೈಕ್ಯರಾದ ನಂತರ ಅವರ ಉತ್ತರಾಧಿಕಾರಿಯಾಗಿ 20ನೇ ಪೀಠಾಧ್ಯಕ್ಷರಾಗಿ ಪೀಠ ಅಲಂಕರಿಸಿದ ಸಧ್ಯದ ಪೂಜ್ಯ ಜಗದ್ಗುರುಗಳು ಗುರುಗಳ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯುತ್ತಿದ್ದು, ಲಿಂಗಾಯತ ಧರ್ಮದ ಉಳುವಿಗಾಗಿ ಉತ್ತಮವಾಗಿ ಭಕ್ತರಿಗೆ ಮಾರ್ಗದರ್ಶನ ಗೈಯುತ್ತಿದ್ದಾರೆ. ಕನ್ನಡ, ಇಂಗ್ಲಿಷ, ಸಂಸ್ಕೃತ, ಹಿಂದಿ ಹೀಗೆ ಚತುರ್ವಿದ ಭಾಷೆಗಳಲ್ಲಿ ಪಾಂಡಿತ್ಯವನ್ನು ಮೆರೆದಿದ್ದಾರೆ. ಬೆಳಗಾವಿಯಲ್ಲಿ ಗಡಿನಾಡ ರಕ್ಷಣೆಗಾಗಿ ಅವಿರತವಾಗಿ ಕನ್ನಡಕ್ಕಾಗಿ ಹೋರಾಟ ಮಾಡಿ ಇಲ್ಲಿಯೂ ನಿರಂತರ ಧರ್ಮದ ಉಳವಿಗಾಗಿ ಶ್ರಮಿಸುತ್ತಿದ್ದಾರೆ ಪೂಜ್ಯರ ಕೃಪೆಯಿಂದ ಬಸವ ಬೆಳಗು ಬೆಳಗಲಿ ಬೆಳಗುವಂತಾಗಲಿ ಎಂದೇ ನಾವೆಲ್ಲ ಆಶಿಸಿ ನುಡಿ ನಮನ ಪೂಜ್ಯರ ಪಾದಕ್ಕೆ ಅರ​‍್ಿಸೋಣ.    

- ಚಿದಾನಂದಯ್ಯ ಶ್ರೀಶಾಂತಯ್ಯನಮಠ 

ಗದಗ 


ಸುದ್ದಿ ಓದಿ