ಕಸದ ತಿಪ್ಪಿಗಳನ್ನು ತೆರವುಗೊಳಿಸಲು ಖಡಕ್ ಎಚ್ಚರಿಕೆ
ಹೂವಿನಹಡಗಲಿ 21: ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ ರಸ್ತೆಬದಿಯ ಪಕ್ಕದಲ್ಲಿ ಹಾಕಿರುವ ಕಸದ ತಿಪ್ಪಿಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಕೆಆರ್ ಡಿಸಿಎಲ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳ ಜೊತೆ ಆಗಮಿಸಿ ತಾಲೂಕಿನ ಹನಕನಹಳ್ಳಿ, ದೇವಗೊಂಡನಹಳ್ಳಿ, ವಿನೋಭಾನಗರ, ನಾಗತಿಬಸಾಪುರ, ಹಾಗೂ ಕೊಮಾರನಹಳ್ಳಿ ತಾಂಡ ಗಳಲ್ಲಿನ ತಿಪ್ಪಿ ಹಾಕಿದವರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿ ಎರಡು ದಿನಗಳೊಳಗೆ ತೆರವುಗೊಳಿಸಬೇಕೆಂದು ಹೇಳಿದರು.
ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ಗ್ರಾಮಗಳು ಈ ರಸ್ತೆಯ ಎರಡೂ ಬದಿಗೆ ಕಸದ ತಿಪ್ಪಿಗಳ ರಾಶಿಯನ್ನೇ ಹಾಕಲಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿತ್ತು. ಈ ಕುರಿತು ಕಸದ ತಿಪ್ಪಿಯ ವಾರಸುದಾರರಿಗೆ ಸಾಕಷ್ಟು ಬಾರಿ ಹೇಳಿದರೂ ಯಾರೊಬ್ಬರೂ ಕಸದ ತಿಪ್ಪಿಗಳನ್ನು ತೆರವುಗೊಳಿಶಿರಲಿಲ್ಲ. ಈ ಕುರಿತು ಎಚ್ಚರಿಕೆ ನೀಡಿದ್ದರೂ ತಿಪ್ಪೆಗಳನ್ನು ತೆರವುಗೊಳಿಸದ ಪರಿಣಾಮವಾಗಿ ಅಧಿಕಾರಿಗಳು ಪೊಲೀಸರ ಜೊತೆ ಬಂದು ಕೂಡಲೇ ತಿಪ್ಪೆಗಳನ್ನು ತೆರವುಗೊಳಿಸಬೇಕು ಇಲ್ಲದಿದ್ದರೆ ಜೆಸಿಬಿಯಿಂದ ತಿಪ್ಪೆಗಳನ್ನು ಸಂಪೂರ್ಣವಾಗಿ ರಸ್ತೆಯ ಹಿಂಬದಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಸದ ತಿಪ್ಪಿಯ ವಾರಸುದಾರರು ನಾಳೆ ತಮ್ಮ ತಮ್ಮ ತಿಪ್ಪೆಗಳನ್ನು ತೆರವುಗೊಳಿಸುತ್ತೇವೆ ಎಂದು ಅಧಿಕಾರಿಗಳಿಗೆ ಹೇಳಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಊಳಿಗದ ನಾಗರಾಜ, ರವಿಚಂದ್ರ ಜೋಗಿನ್, ಗ್ರಾಮಪಂಚಾಯತಿ ಸದಸ್ಯರಾದ ಶರಣಗೌಡ, ಸಿಬ್ಬಂದಿಗಳಾದ ಗೌಡ್ರು ಪ್ರಶಾಂತ ಗೌಡ, ಮಂಜುನಾಥ, ಹಾಗೂ ಗ್ರಾಮಸ್ಥರಾದ ಎಸ್. ಸೋಮರೆಡ್ಡಿ ಇದ್ದರು.