ಕೇಂದ್ರೀಯ ವಿದ್ಯಾಲಯ: ಸಂಸದ ಜೊಲ್ಲೆ ಹೇಳಿಕೆ ಸುಳ್ಳು
ಚಿಕ್ಕೋಡಿ 12: ತಾಲೂಕಿನ ಸದಲಗಾ ಪಟ್ಟಣದಲ್ಲಿ ಕೇಂದ್ರೀಯ ವಿದ್ಯಾಲಯ ಮಂಜೂರಾತಿಯಲ್ಲಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಸತತ ಪ್ರಯತ್ನ ಮಾಡಿದ್ದು, ಆದರೆ ಸಂಸದ ಜೊಲ್ಲೆ ಅವರು ನಾನು ಪ್ರಯತ್ನ ಮಾಡಿದ್ದೇನೆಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಸದಲಗಾ ಪುರಸಭೆ ಮಾಜಿ ಅಧ್ಯಕ್ಷ ರಾಜು ಗುಂಡಕಲ್ಲೆ ಆರೋಪಿಸಿದರು. ಗುರುವಾರ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ 2016ರಲ್ಲಿ ಸದಲಗಾ ಪಟ್ಟಣದಲ್ಲಿ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಬೇಕೆಂದು ಹಿರಿಯ ದುರೀಣ ದಿ.ಅಣ್ಣಾಸಾಹೇಬ ಗುಂಡಕಲ್ಲೆ ನೇತೃತ್ವದಲ್ಲಿ ಪುರಸಭೆಯಿಂದ ಠರಾವು ಪಾಸ್ ಮಾಡಿ ಅಂದು ಸಂಸದರಾಗಿದ್ದ ಪ್ರಕಾಶ ಹುಕ್ಕೇರಿ ಕಡೆ ಕೊಡಲಾಗಿತ್ತು. ಪ್ರಕಾಶ ಹುಕ್ಕೇರಿ ಅವರು ಕೇಂದ್ರ ಸರ್ಕಾರದಲ್ಲಿ ಸತತ ಪ್ರಯತ್ನ ಮಾಡಿ ಗಡಿ ಭಾಗದಲ್ಲಿ ಕೇಂದ್ರೀಯ ವಿದ್ಯಾಲಯ ಮಂಜೂರಾತಿ ಮಾಡಿದ್ದಾರೆ ಎಂದರು.
ಸದಲಗಾ ಪಟ್ಟಣದಲ್ಲಿ ಕೇಂದ್ರೀಯ ವಿದ್ಯಾಲಯ ಮಂಜೂರಾತಿ ಆದ ಮೇಲೆ ಶಾಸಕ ಗಣೇಶ ಹುಕ್ಕೇರಿ ಅವರು ಶಾಸಕರ ಅನುದಾನದಲ್ಲಿ ಸುಮಾರು 47 ಲಕ್ಷ ರೂ ಅನುದಾನ ನೀಡಿ ಕೇಂದ್ರೀಯ ವಿದ್ಯಾಯಲಯದ ಮೂಲಸೌಲಭ್ಯಕ್ಕೆ ಅನುದಾನ ಒದಗಿಸಿ ಅನುಕೂಲ ಕಲ್ಪಿಸಿದ್ದಾರೆ. ಬರುವ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಆರಂಭವಾಗಲಿದೆ. ಇಂತಹ ಸಂದರ್ಭದಲ್ಲಿ ಸಂಸದ ಜೊಲ್ಲೆ ಅವರು ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿದ್ದು ನಾನು ಎಂದು ಹಳಿ ಜನರಿಗೆ ಸುಳ್ಳು ಹೇಳುತ್ತಿರುವುದು ಕ್ಷೇತ್ರದ ಜನರಿಗೆ ಗೊತ್ತಾಗಿದೆ ಎಂದರು.ಅಣ್ಣಾಸಾಹೇಬ ಜೊಲ್ಲೆ ಅವರು ಚಿಕ್ಕೋಡಿ ಸಂಸದರಾಗಿ ಎರಡು ವರ್ಷ ಸಮೀಪಿಸುತ್ತಿದೆ. ಚಿಕ್ಕೋಡಿ ಭಾಗದಲ್ಲಿ ಯಾವುದಾದರೋಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ತೋರಿಸಲಿ, ಈಗಾಗಲೇ ಕೇಂದ್ರೀಯ ವಿದ್ಯಾಲಯಕ್ಕೆ ಜಾಗ ಗುರ್ತಿಸಲಾಗಿದೆ. ಆ ಜಾಗ ಎಲ್ಲಿದೆ ಎಂಬುದನ್ನು ಸಂಸದರು ತೋರಿಸಲಿ ಎಂದು ಕಾಂಗ್ರೆಸ್ ಮುಖಂಡ ಪೀರಗೌಡ ಪಾಟೀಲ ಸವಾಲು ಹಾಕಿದರು.ಅಹಿಂದ ಮುಖಂಡ ಸಂತೋಷ ನವಲೆ, ದುರೀಣ ಅರುಣ ದೇಸಾಯಿ, ಉದಯ ಬದನಿಕಾಯಿ, ಭೀಮರಾವ ಮಾಳಗೆ, ರವಿ ಗೋಸಾವಿ ಮುಂತಾದವರು ಇದ್ದರು.