ಲೇಖನಗಳು

ಕಾಯಕ ಶರಣಂಗೆ, ಅವರ ದುಡಿತದ ಸಿರಿಗೆ ನಾ ಶರಣೆಂಬೆ

ಕಾಯಕ ಶರಣಂಗೆ, ಅವರ ದುಡಿತದ ಸಿರಿಗೆ ನಾ ಶರಣೆಂಬೆ

ಶ್ರೀ ಗವಿಸಿದ್ದೇಶ್ವರ ಮಠದ ಹಾದಿ ಮೊದಲಾಗಿ ಕೋಪಣ ನಗರಿಯ ಬೀದಿ ಬೀದಿಗಳಲ್ಲಿ ನಿತ್ಯ ಕಾಣಸಿಗುವ ಆ ಚಿತ್ರಣವೇ ಸಾಕು ‘ಹೀಗೂ ಸಾಗಿಸಬಹುದು ಬದುಕು' ಎಂಬುದಕ್ಕೆ; ಕಾಯಕದ ಬಗ್ಗೆ ಅರಿತು, ಮಾತನಾಡುವುದಕ್ಕೆ.! 

ಹೌದು..! ಹಂಪಿಯ ಪಂಪಾ ಸರೋವರ ನಾಡ ದಿಕ್ಕಿನ ಮೂಡಣದಲ್ಲಿ ಸೂರ್ಯ ಉದಯಿಸುತ್ತಲೇ ಆ ಜೀವಗಳು ಕಾಯಕದಲ್ಲಿ ಮುಳುಗುತ್ತವೆ ನಿತ್ಯ. ಮೂರುಗಾಲಿಯ ಚಿಕ್ಕ ವಾಹನ, ಅದರಲ್ಲೊಂದು ಒಲೆ, ಎರಡ್ಮೂರು ನೀರಿನ ಕ್ಯಾನಗಳು, ಆಹಾರ ತುಂಬಿದ ನಾಲ್ಕಾರು ಬುಟ್ಟೆಗಳು, ಒಂದಷ್ಟು ತಟ್ಟೆಗಳು, ಅವರಿವರನ್ನೇದೆ ಅಲ್ಲಿಗೆ ಬರುವವರೆಲ್ಲರೂ ಉಣ್ಣುತ್ತಲೇ, ನೀರು ಗುಟುಕರಿಸುತ್ತಲೇ ಚಕ್ಕುಚೌಕಾದ ಗಲ್ಲೆ ತುಂಬ ರೊಕ್ಕ ನಾಕಾರು ತಾಸಿಗೆ.  

ಇವತ್ತು ಇಲ್ಲಿ.. ನಾಳೆ ಅಲ್ಲಿ.. ನಾಡಿದ್ದು ಇನ್ನೊಂದು ಗಲ್ಲಿಯಲ್ಲಿ.. ಹಸಿವಿಗೆಲ್ಲಿದೆ ತರತಮ.. ಧರ್ಮ..! ಹೋದ ಎಲ್ಲ ಕಡೆಗಳಲ್ಲೂ ಜನರು. ದುಡಿದಷ್ಟೂ ಫಲವೂ.. ದುಡಿತದಲ್ಲೇ ಅವರಿಗೆ ಜೀವನದ ಒಲವೂ.. ! 

ಫೆ.18ರಂದು ಸರ್ಕಾರವು ಆಚರಿಸಲ್ಪಡುವ ಕಾಯಕ ಶರಣರ ದಿನಾಚರಣೆಯ ಈ ಹೊತ್ತಲ್ಲಿ, ಅಂತಹ ದುಡಿವ ಜನಸಮೂಹದ ಬದುಕಿನ ರೀತಿ, ದುಡಿತದ ಗಾಥೆಯನ್ನು ತಿಳಿಯುವುದು; ಅವರಂತೆ ಪ್ರಾಮಾಣಿಕ ದುಡಿಮೆಗೆ ನಾವೂ ಮುಂದಡಿ ಇಡಬೇಕು ಎಂಬುದನ್ನು ಅರಿಯುವುದೇ ಇಂದಿನ ಅಗತ್ಯತೆಯಾಗಿದೆ ಎಂಬುದು ನನ್ನ ಭಾವನೆಯಾಗಿದೆ. 

 ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ, ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ ಎನ್ನುತ್ತಾಳೆ ವಚನಕಾರ್ತಿ ಕಾಳವ್ವೆ. ಆವ ಕಾಯಕವಾದಡೂ ಸ್ವ ಕಾಯಕವ ಮಾಡು ಎನ್ನುತ್ತಾನೆ ಕಾಯಕದ ಸೋಮಯ್ಯ. ಹೀಗೆ ಕಾಯಕ ಶರಣರು ಸೇರಿದಂತೆ ಬಸವಾದಿ ಶರಣರೆಲ್ಲರೂ ಕಾಯಕದ ಬಗ್ಗೆ ಹೇಳುತ್ತ ಬರೆಯುತ್ತ ಕಾಯಕ ಸ್ಥಾನಕ್ಕೆ ಮಹೋನ್ನತ ಸ್ಥಾನ ನೀಡಿದ್ದಾರೆ.  

ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಎನ್ನುವ ನುಲಿಯ ಚೆಂದಯ್ಯನ ವಚನ ಅರಿಯಬೇಕು. ಮನಶುದ್ಧವಿಲ್ಲದವನಿಗೆ ಮಾತ್ರ ಬಡತನ, ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಲಕ್ಷ್ಮಿ ತಾನಾಗಿಪ್ಪಳು ಎನ್ನುತ್ತಾನೆ ಆಯ್ದಕ್ಕಿ ಮಾರಯ್ಯ. ಅದು ಇದು ಎನ್ನದೇ ಒಂದಿಲ್ಲೊಂದು ಕಾಯಕದಲ್ಲಿದ್ದ ಅನೇಕ ಶರಣಂಗಳು ಕಾಯಕದ ಬಗ್ಗೆ ಹೊಂದಿದ್ದ ಶ್ರದ್ದೆ, ಭಕ್ತಿ ಅವರು ಬರೆದ ಇಂತಹ ಅನೇಕ ವಚನಗಳಲ್ಲಿ ಕಾಣ ಸಿಗುತ್ತದೆ. ಹೀಗಾಗಿ ಅನೇಕ ಶರಣರ ವಚನಗಳು ನಮಗೆಲ್ಲ ದಾರೀದೀಪದಂತಿವೆ. 

ದೇವ ಸಹಿತ ಮನೆಗೆ ಬಂದಡೆ, ಕಾಯಕವಾವುದೆಂದು ಬೆಸಗೊಂಡಡೆ ನಿಮ್ಮಾಣೆ, ನಿಮ್ಮ ಪುರಾತ ರಾಣೆ ತಲೆ ದಂಡ.! ಎಂದು ಬಸವಣ್ಣನವರು ಹೇಳಿದಂತೆ, ನಾವುಗಳು ಇದು ಕೀಳು ಇದು ಮೇಲು ಎನ್ನದೇ ಕಾಯಕ ಮಾಡೋಣ, ಕಾಯಕದಲ್ಲಿ ದೈವ ಕಾಣೋನ. 

ಹೀಗೆ ಕಾಯಕದ ಬಗ್ಗೆ ಮತ್ತೆ ಮತ್ತೆ ಮಾತನಾಡುವಾಗ, ಬರೆಯುವಾಗ ಕಾಯಕ ಜೀವಿಗಳ ತನವು, ಅವರ ಮನವು, ಅವರ ತತ್ವವು ಇಂತಪ್ಪುದು ಅಂಬುವುದೇ ನನ್ನನ್ನು ಚಕಿತಗೊಳಿಸುತ್ತದೆ. ಅಂದೇನಾಯಿತು ಕೇಳಿ. ಕೊಪ್ಪಳದಲ್ಲಿ ಆ ದಿನವೂ ಬಿಸಿಲು ಜಲಜಲ ಮಳೆ ಸುರಿದಂತಿತ್ತು. ಹಾದಿಯನ್ನೇ ಮನೆಯಾಗಿಸಿ, ಚಿಕ್ಕ ವಾಹನವನ್ನೇ ಅಡುಗೆ ಕೋಲೆಯಾಗಿಸಿ ಉಪಹಾರ ತಯಾರಿಯಲ್ಲಿದ್ದ ಅವರಲ್ಲಿಗೆ ಹೋಗಿದ್ದೆ. ಅಂತಹ ಜನಜಂಗುಳಿಯಲ್ಲೂ ತನ್ನ ಕಾಯಕದಲ್ಲಿಯೇ ಮಗ್ನನಾಗಿದ್ದ ಆತನಿಗೆ ಒಂದು ದೋಸೆ ಹಾಕಲು ಕೇಳಿದೆ. ಹದಿನೈದು ರೂಪಾಯಿಗೆ ಎರಡು ಬರುತ್ತವೆ ಎಂದು ಮರುತ್ತರಿಸಿದಾತ. ಒಂದೇ ಸಾಕು ನನಗೆ ಎಂದು ನಾನು ಆ ನೋಟು ತೋರಿಸಿದೆ ಮತ್ತೆ. ಹತ್ತು ರೂಪಾಯಿಗೇನೆ ಎರಡು ದೋಸೆ ಕೊಡುತ್ತೇನೆ; ಆದರೆ ಒಂದನ್ನು ಕೊಡಲು ನನ್ನ ಮನಸು ಒಪ್ಪದು ಎಂದು ನುಡಿದ ಆತನು ಆ ಹೊತ್ತು ನನಗೆ ಥೇಟ್ ಕಾಯಕ ಶರಣರಂತೆಯೇ ಕಂಡನು.  

ಬೆಲೆ ಒಂದಿದ್ದರೆ ಅದಕ್ಕೆ ಎರಡು ಪಟ್ಟು ರೇಟು ಹೇಳಿ ವಸೂಲಿ ಮಾಡುವ ಅಂತವರನ್ನು ನೋಡಿ ನೋಡಿ ಗಾಯಗೊಂಡ ಮನಸುಗಳು ತುಸು ತಣಿಯುವುದು, ದುಡಿದಷ್ಟೇ ಫಲ ಸಿಕ್ಕರೆ ಸಾಕು ಎನ್ನುವ ಇಂತವರನ್ನು ಕಂಡಾಗಲೇ ಅನ್ನುವುದು ಬಹುತೇಕ ಜೀವಗಳು ಕಂಡು ಕೇಳಿದ ಅನುಭವ ಕಥನವೇ ಆಗಿರುತ್ತದೆ. 

ಓದಿ ಬಲ್ಲವರಾಗಿದ್ದರೂ ಹೇಳಿದರೆ ಮಾತ್ರ ಕೆಲಸ ಮಾಡುವ, ಕೆಲಸದಿಂದ ತಪ್ಪಿಸಿಕೊಳ್ಳುವ ಕೃತ್ರಿಮ ಗುಣದವರ ಸಂಖ್ಯೆಯೇ ದುಪ್ಪಟ್ಟಾಗುತ್ತಿರುವ ಈ ಕಾಲಘಟ್ಟದಲ್ಲಿ, ನಾವು ದುಡಿಯುತ್ತೇವೆ; ನಮಗೆ ದುಡಿದಷ್ಟೆ ಸಿಕ್ಕರೆ ಸಾಕು ಎನ್ನುವ, ಒಂದಕ್ಷರ ಓದದ ಕೊಪ್ಪಳದ ನೆಲದೂರಿನ ಅವರ ದೊಡ್ಡಗುಣಕ್ಕೆ ಮನದಲ್ಲೇ ಕೈಮುಗಿದು ಹಿಂತಿರುಗಿದೆ. 

"ದುಡಿಮೆ ಮನುಷ್ಯನಿಗೆ ಸ್ವಾಭಿಮಾನ, ಆತ್ಮವಿಶ್ವಾಸ, ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಕಾಯಕನಿಷ್ಠೆಯು ಬದುಕನ್ನು ಸಮತೋಲನದಲ್ಲಿ ಇರಿಸುತ್ತದೆ. ಕಾಯಕದಲ್ಲಿ ತೊಡಗಿದವರು ತಪ್ಪು ಕಾರ್ಯಗಳನ್ನು ಮಾಡುವ ಪ್ರಮೆಯವೇ ಬರುವುದಿಲ್ಲ. ಹಾಗೆಂದೇ ಶರಣ ಪರಂಪರೆ ಕಾಯಕಕ್ಕೆ ಇನ್ನಿಲ್ಲದ ಮಹತ್ವ ನೀಡಿದೆ" ಎನ್ನುವ ಹಲವರ ವಿಚಾರಧಾರೆಗಳನ್ನು ಅವರಿವರಿಗೆ ತಲುಪಿಸುತ್ತ ನಾವೆಲ್ಲರೂ ಕಾಯಕ ಜೀವಿಗಳಾಗೋಣ. ಎಲ್ಲರಿಗೂ ಕಾಯಕ ಶರಣರ ಜಯಂತಿಯ ಶುಭಾಶಯಗಳು. 

- ಗವಿಸಿದ್ಧಪ್ಪ ಹೊಸಮನಿ 

 ಕೊಪ್ಪಳ 

- * * * - 


ಸುದ್ದಿ ಓದಿ