ಕನ್ನಡ ಭಾಷೆಗೆ 100 ಅಂಕ ಗಳಿಸಿದವರಿಗೆ ಕಸಾಪದಿಂದ ಅಭಿನಂದನೆ
ಮುಂಡಗೋಡ:ಶಿಕ್ಷಣ ಇಲಾಖೆ ಮಾಡಬೇಕಿದ್ದ ಕಾರ್ಯವನ್ನು ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಘಟಕಗಳು ಮಾಡಿವೆ ಎಂದು ದೈಹಿಕ ಪರೀವೀಕ್ಷಕ ಶಿವಮೂರ್ತಿ ಎಚ್.ಆರ್. ಹೇಳಿದರು.
ತಾಲೂಕಿನ ಇಂದೂರ ಗ್ರಾಮದ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಮತ್ತು ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡ ಭಾಷೆ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಕೋಶಾಧ್ಯಕ್ಷ ಮುರ್ತೂಜಾ ಆನೆಹೊಸೂರ ಮಾತನಾಡಿ ರಾಜ್ಯದಲ್ಲಿ ಹಿಂದೆ ಯಾರೂ ಕೈಗೆತ್ತಿಕೊಳ್ಳದ ಕಾರ್ಯಕ್ರಮಗಳಿಗೆ ನಮ್ಮ ಜಿಲ್ಲಾ ಘಟಕ ಚಾಲನೆ ನೀಡಿದ್ದು ಸುಮಾರು 1200 ವಿದ್ಯಾರ್ಥಿಗಳಿಗೆ ಅಭಿನಂದಿಸಿ ಗೌರವಿಸುತ್ತಿದ್ದೇವೆ ಎಂದರು. ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ ತಂದೆ-ತಾಯಿಗಳನ್ನು ಗೌರವಿಸಬೇಕು ಮತ್ತು ನಿಮಗೆ ಶಿಕ್ಷಣ ನೀಡಿದ ಗುರುಗಳನ್ನು ಯಾವತ್ತೂ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಸಹದೇವಪ್ಪ ನಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎಸ್.ಸಂಗೂರಮಠ, ದಯಾನಂದ ನಾಯ್ಕ, ಎಸ್.ಡಿ.ಮುಡೆಣ್ಣವರ, ರಮೇಶ ಅಂಬಿಗೇರ, ಎಸ್.ಎನ್.ಸವದತ್ತಿ, ಬಿ.ಕೆ.ಪಾಟೀಲ, ಪಿ.ಜಿ.ತಂಗಚ್ಚನ್, ಜಂಪಾ ಲಾಮಾ, ಶಾರದಾ ರಾಠೋಡ, ಬಸವರಾಜ ಓಶಿಮಠ, ಮಧುಮತಿ ಹಿರೇಮಠ, ಶೈಲೇಶ ನಾಯ್ಕ, ಎ.ವೈ.ಇಚ್ಚಂಗಿ, ಚೇತನ ಬಳ್ಳಾರಿ, ನಾಗರಾಜ ಅರ್ಕಸಾಲಿ ಮುಂತಾದವರು ಉಪಸ್ಥಿತರಿದ್ದರು. ಪ್ರೌಢಶಾಲೆ ವಿದ್ಯಾರ್ಥಿಗಳು ನಾಡಗೀತೆ ಮತ್ತು ಸ್ವಾಗತ ಗೀತೆ ಹಾಡಿದರು. ಚಿದಾನಂದ ಪಾಟೀಲ ಸ್ವಾಗತಿಸಿದರು. ಕೃಷ್ಣಾ ಗುಜಮಾಗಡಿ ಕಾರ್ಯಕ್ರಮ ನಿರೂಪಿಸಿದರು.