ಭಾರತೀಯರಿಗೆ ಕಾರ್ತಿಕ ಪವಿತ್ರ ಮಾಸ: ಮಾತೆ ಬಸವೇಶ್ವರಿ
ಲೋಕದರ್ಶನ ವರದಿ
ಮುಂಡಗೋಡ:ಭಾರತೀಯರಿಗೆ ಕಾರ್ತಿಕ ಪವಿತ್ರ ಮಾಸ ಕಾರ್ತಿಕದಲ್ಲಿ ಇರುಳು ಜಾಸ್ತಿ ಹಗಲು ವೇಳೆ ಕಡಿಮೆ ಬಾಹ್ಯ ಮತ್ತು ಆಂತರಿಕ ಅಂಧಕಾರ ಹೊಡೆದೋಡಿಸಲು ಹಿರಿಯರು ಈ ತಿಂಗಳಲ್ಲಿ ವಿಶೇಷವಾಗಿ ದೀಪವನ್ನು ಬೆಳಗಿಸುವ ರೂಢಿಯನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಹೇಳಿದರು.
ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಜರುಗಿದ ಶ್ರೀವೀರಯೋಗೇಂದ್ರಸ್ವಾಮಿ ದೇವಸ್ಥಾನದ ತೆಪ್ಪದ ರಥೋತ್ಸವ ಹಾಗೂ 25,001 ದೀಪೋತ್ಸವದ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಚಿಗಳ್ಳಿ ಶಾಂತಿಯುತ ಗ್ರಾಮ. ತಾಲೂಕಿನಲ್ಲಿಯೇ ವಿಶೇಷವಾಗಿ ಪ್ರತಿ ವರ್ಷ ದೀಪೋತ್ಸವ ಆಚರಿಸುತ್ತಾ ಬಂದಿದ್ದಾರೆ. ಮನೆ-ಮನಗಳಲ್ಲಿ ಬೆಳಕು ತುಂಬಲಿ ಅಜ್ಞಾನದ ಕತ್ತಲೆ ಹೋಗಿ ಸುಜ್ಞಾನದ ಬೆಳಕು ಚೆಲ್ಲಲಿ ಎಂದರು. ಕೂಡಲದ ಶ್ರೀಗುರು ನಂಜೇಶ್ವರ ಮಠದ ಷ.ಬ್ರ.ಶ್ರೀಗುರು ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ನಮ್ಮ ನಾಡಿನಲ್ಲಿ ಸಮಾಜಕ್ಕೋಸ್ಕರ ಬದುಕಿದ ಅನೇಕ ಸಂತರು ಮಹಾತ್ಮರು ಬಂದು ಹೋಗಿದ್ದಾರೆ. ಅವರನ್ನು ನೆನೆಯುತ್ತೇವೆ. ನಮ್ಮ ದೇಶದ ಬಗ್ಗೆ ಹೆಮ್ಮೆ ಇದೆ. ಇಡಿ ಜಗತ್ತಿನಲ್ಲಿಯೆ ಗೌರವ ಸ್ಥಾನವಿದೆ. ನಾವು ಎಲ್ಲೆಲ್ಲೂ ದೇವರನ್ನು ಕಾಣುವ ಭಾವನಾತ್ಮಕ ಜೀವಿಗಳು. ದೀಪದ ಹಾಗೆ ಅಂಧಕಾರ ಹೊಡೆದೋಡಿಸಿ ಬೆಳಕು ಚೆಲ್ಲಬೇಕು. ದೀಪ ಹಚ್ಚುವ ಮಾನವರಾಗಬೇಕು. ಮಕ್ಕಳಲ್ಲಿ ದೇವರ ಬಗ್ಗೆ ನಂಬಿಕೆ ಮೂಡಿಸಿದರೆ ಸಂಸ್ಕಾರ ಕಾಣಬಹುದು. ದೇವರ ಬಗ್ಗೆ ಇರುವ ನಂಬಿಕೆ ನಮ್ಮನ್ನು ಕಾಪಾಡುತ್ತದೆ. ತಾಯಂದಿರು ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ಪುಸ್ತಕ ನೀಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ ಎಲ್.ಟಿ.ಪಾಟೀಲ ಚಿಗಳ್ಳಿ ಆಧ್ಯಾತ್ಮಿಕ ಹಿನ್ನೆಲೆಯ ಕ್ಷೇತ್ರ. ವೀರಯೋಗೇಂದ್ರ ಸ್ವಾಮಿಗಳು ಮಹಾ ತಪಸ್ವಿಗಳು. ಶಿಶುನಾಳ ಶರೀಫರು ಕೂಡ ಇಲ್ಲಿಗೆ ಭೇಟಿ ನೀಡಿದ್ದರು. ಯುಗಾದಿ ಮತ್ತು ಕಾರ್ತಿಕ ಮಾಸದಲ್ಲಿ ಎರಡು ಬಾರಿ ವೀರಯೋಗೇಂದ್ರ ಸ್ವಾಮಿಗಳ ರಥೋತ್ಸವ ಜರುಗುತ್ತವೆ. ಕಳೆದ 25 ವರ್ಷಗಳಿಂದ ನಿರಂತರವಾಗಿ ಕಾರ್ತಿಕ ದೀಪೋತ್ಸವವನ್ನು ಲಕ್ಷ ದೀಪೋತ್ಸವದಂತೆ ಆಚರಿಸಲಾಗುತ್ತದೆ. ಇಲ್ಲಿ ಇರುವ ಎಲ್ಲ ಆಶ್ರಮಗಳನ್ನು ಆ ಕಾಲದ ಹಿರಿಯರು ಒಳ್ಳೆಯ ರೀತಿಯಿಂದ ನಡೆಸಿಕೊಂಡು ಹೋಗುತ್ತಿದ್ದರು. ಎಷ್ಟೋ ತಪಸ್ವಿಗಳ ತಪಸ್ಸಿನ ಫಲದ ಪ್ರತೀಕವಾಗಿ ಮೂರು ದೀಪಗಳು ಎಣ್ಣೆ ಇಲ್ಲದೆ ಹಲವಾರು ವರ್ಷಗಳಿಂದ ಉರಿಯುತ್ತಿವೆ. ನಾವೆಲ್ಲ ಮುಂದೆಯೂ ಕಾಪಾಡಿಕೊಂಡು ಹೋಗೋಣ ಎಂದರು. ಇದೇ ಸಂದರ್ಭದಲ್ಲಿ ಮಾತೆ ಹಾಗೂ ಶ್ರೀಗಳಿಗೆ ಗುರು ಕಾಣಿಕೆ ಸಮರ್ಿಸಲಾಯಿತು. ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ಅಕ್ಕಮ್ಮ ನಿಂಬಾಯಿ, ರಾಜಶೇಖರ ಹಿರೇಮಠ, ಅಜ್ಜಯ್ಯ ಶಿವಜೋಗಿಮಠ, ಎಸ್.ಜಿ.ಹಿರೇಮಠ, ಶೇಖಯ್ಯ ಶಿವಜೋಗಿಮಠ, ಮಲ್ಲೇಶಿ ರಾಣೆಬೆನ್ನೂರ, ಚನ್ನಯ್ಯ ಅಸುಂಡಿಮಠ, ಅರವಿಂದ ರಾಣೋಜಿ, ಪ್ರಭುಲಿಂಗ ಕೆಂಗಣ್ಣವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.