ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ‘ಕ್ಷಣದಲ್ಲಿ ಹಣ’ ಹೊಸ ಸೇವೆ ಆರಂಭ
ಬಳ್ಳಾರಿ 01: ದಕ್ಷಿಣ ಭಾರತದ ಅತೀದೊಡ್ಡ ಗ್ರಾಮೀಣ ಬ್ಯಾಂಕ್ ಆದ ಕರ್ನಾಟಕ ಗ್ರಾಮೀಣ ಬ್ಯಾಂಕ್ ತನ್ನ ಸೇವಾ ವ್ಯಾಪ್ತಿಯಲ್ಲಿ ಬರುವ 22 ಜಿಲ್ಲೆಗಳ ಗ್ರಾಹಕರಿಗೆ ಹಣಜಮಾ ಮಾಡಲು ಮತ್ತು ಹಣ ಪಡೆಯಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕ್ಷಣದಲ್ಲಿ ಹಣ ಎಂಬ ಹೊಸ ಸೇವೆಯನ್ನು ಆರಂಭಿಸಿದೆ.
ಈ ಸೇವೆ ಅಡಿ ಗ್ರಾಹಕರು ಕ್ಷಣಾರ್ಧದಲ್ಲೇ ರೂ.25000 ವರೆಗಿನ ತಮ್ಮ ಹಣವನ್ನು ಶಾಖೆಯಲ್ಲೇ ಜಮಾ ಮಾಡಬಹುದು ಮತ್ತು ಪಡೆಯಬಹುದಾಗಿದೆ. ಈ ಹೊಸ ಸೇವೆಯು ಗ್ರಾಹಕ ಸ್ನೇಹಿ ಮತ್ತು ಪರಿಸರ ಸ್ನೇಹಿಯಾಗಿದ್ದು, ಈ ಸೇವೆಯನ್ನು ಮುಖ್ಯವಾಗಿ ಹಳ್ಳಿಗಳ ಮತ್ತು ಅನಕ್ಷರಸ್ಥ ಗ್ರಾಹಕರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ.
ಬಳ್ಳಾರಿಯ ಗಾಂಧಿನಗರ ಮುಖ್ಯ ಶಾಖೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀನಾಥ್ ಜೋಶಿ ಅವರು ಹೊಸ ವರ್ಷದ ಪ್ರಯುಕ್ತ ಸೇವೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಧಾರ್ ಆಧಾರಿತ ಸೇವೆಯಾಗಿದ್ದರಿಂದ ಅನಕ್ಷರಸ್ಥ ಗ್ರಾಹಕರು ಹಣ ಜಮಾ ಮಾಡಲು ಅಥವಾ ಹಣ ಪಡೆಯಲು ಚೆಕ್ ಅಥವಾ ಜಮಾ ಹಾಳೆಯನ್ನು ಬರೆಯುವ ಅವಶ್ಯಕತೆಯಿರುವುದಿಲ್ಲ, ಅಲ್ಲದೇ ಕಾಗದ ರಹಿತ ವ್ಯವಹಾರವಾಗಿರುವುದರಿಂದ ಪರಿಸರಸ್ನೇಹಿ ಸೇವೆಯೆಂದು ಪರಿಗಣಿಸಲಾಗಿದೆ ಎಂದರು.
ಗ್ರಾಹಕರು ಈ ಸೇವೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಸದ್ಯದಲ್ಲಿ ಈ ಸೇವೆಯ ಮೂಲಕ ಗ್ರಾಹಕರು ತಮ್ಮ ಎಟಿಎಮ್ ಕಾರ್ಡ್ ಮೂಲಕ ಹಣ ಪಡೆಯುವುದು, ಹಣ ವರ್ಗಾವಣೆ ಮತ್ತು ಕೊನೆಯ 10 ವ್ಯವಹಾರಗಳ (ಮಿನಿ ಸ್ಟೆಟ್‌ಮೆಂಟ್)ಮಾಹಿತಿಕೊಡುವುದನ್ನು ಶೀಘ್ರದಲ್ಲೇ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ್ಲಕರ್ನಾಟಕ ಗ್ರಾಮೀಣ ಬ್ಯಾಂಕಿನ ಮಹಾಪ್ರಬಂಧಕರಾದ ಪ್ರದೀಪ್ ವರ್ಮಾ, ಎ.ಎನ್.ಪ್ರಸಾದ, ಆನಂದ ಪಿ ಹೇಮಾದ್ರಿ ಮತ್ತು ನಿಂಗೇಗೌಡ ಹಾಗೂ ವಲಯ ವ್ಯವಸ್ಥಾಪಕರಾದ ರಮಾನಾಥ ಆಚಾರ್ಯ, ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಮಾಬು ಸುಬಾನಿ ಪಾಲ್ತೂರ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕ ಬಂಧುಗಳು ಉಪಸ್ಥಿತರಿದ್ದರು.