ಕಾರ್ಗಿಲ್ ವಿಜಯ ದಿವಸ್
“ಯೇ ದಿಲ್ ಮಾಂಗೇ ಮೋರ್” ಎಂಬ ಪರಮವೀರ ಚಕ್ರ ಕ್ಯಾಪ್ಟನ್ ವಿಕ್ರಮ ಭಾತ್ರಾ ಅವರ ಮಾತನ್ನು ಕೇಳಿದಾಗ ಎಂತಹವರಿಗೂ ಸಹ ಮೈ ರೋಮಾಂಚನವಾಗುತ್ತದೆ. ಹಾಗೂ ಭಾರತೀಯ ಸೈನ್ಯದ ಮೇಲೆ ಅಪಾರ ಗೌರವ ಇನ್ನೂ ಹೆಚ್ಚಾಗುತ್ತದೆ. ಕಾರ್ಗಿಲ್ ಎಂದೊಡನೆ ಭಾರತದ ಸೈನ್ಯವು ಬಿಸಿನೆತ್ತರನ್ನು ಹರಿಸಿ ಕಾರ್ಗಿಲ್ನಲ್ಲಿ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದ ದಿನವೆಂದು ನೆನಪಾಗುತ್ತದೆ. ಭಾರತದ ತ್ರಿವರ್ಣ ಧ್ವಜಕ್ಕಾಗಿ ಕಾರ್ಗಿಲ್ನಲ್ಲಿ ಸೈನಿಕರು ತಮ್ಮ ಬಲಿದಾನವನ್ನು ನೀಡಿ ವಿಜಯ ಪತಾಕೆಯನ್ನು ಹಾರಿಸಿದ ದಿನ ಇದಾಗಿದೆ.
26 ಜುಲೈ 1999 ಭಾರತೀಯರೆಲ್ಲರೂ ಹೆಮ್ಮೆಪಡುವ ಕಾರ್ಗಿಲ್ ವಿಜಯದ ಮಹಾನ್ ದಿನವಾಗಿದೆ. ಪಾಪಿ, ರಣಹೇಡಿ ಪಾಕಿಸ್ತಾನದ ವಿರುದ್ದ ಗೆದ್ದ ದಿನ ಇದಾಗಿದೆ. ಪಾಕಿಸ್ತಾನವು ಸೋತು ಶರಣಾಗತಿಯಾದ ದಿನವಿಂದು. ಇದು ಭಾರತ ಮತ್ತು ಪಾಕಿಸ್ತಾನದ ಮಧ್ಯ ನಡೆದ ಸಶಸ್ತ್ರ ಸಂಘರ್ಷವಾಗಿದ್ದು, ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಡೆದಿದ್ದರಿಂದ ‘ಕಾರ್ಗಿಲ್’ ಎಂದು ಹೆಸರು ಬಂದಿತು. ಮೇ 1999ರಲ್ಲಿ ಜಮ್ಮುಕಾಶ್ಮೀರದ ಶ್ರೀನಗರ ಲೇಗ್ದ 400 ಕಿ.ಮೀ. ಹೈವೇಯ ಬೆಟ್ಟಗಳ ಮಧ್ಯ ಭಾರತದ ನಿಯಂತ್ರಣ ರೇಖೆಯನ್ನು ಮೀರಿ ಭಾರತದ ಗಡಿಯನ್ನು ದಾಟಿದ ನೀಚ ಪಾಕಿಸ್ತಾನದ ಸೇನೆ ದ್ರೋಹ ಬಗೆದು ಅಕ್ರಮವಾಗಿ ಒಳನುಸುಳುತ್ತದೆ. ಇದನ್ನು ಗಮನಿಸಿದ ಭಾರತೀಯ ಸೇನೆ ಲೆಪ್ಟಿನೆಂಟ್ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ಒಳಗೊಂಡ ಕೇವಲ ಐದು ಜನ ಸೈನಿಕರ ಮೊದಲ ಬೆಟಾಲಿಯನ್ ಪಾಕಿಸ್ತಾನ ವಶಪಡಿಸಿಕೊಂಡ ಬೆಟ್ಟಗಳಿಗೆ ತೆರಳಿ ಸುಮಾರು 110 ಪಾಕಿಸ್ತಾನಿ ಸೈನಿಕರೊಂದಿಗೆ ಮದ್ದುಗುಂಡುಗಳು ಇರುವವರೆಗೂ ಹೋರಾಡಿ ಪರಾಕ್ರಮ ಮೆರೆದರು. ಭಾರತೀಯ ಸೈನಿಕರ ಬಳಿ ಶಸ್ತ್ರಾಸ್ತ್ರ ಇಲ್ಲದೇ ಇರುವ ಕಾರಣದಿಂದಾಗಿ ಪಾಕಿಸ್ತಾನದ ಸೈನಿಕರು ಆ ಐದು ಜನ ಭಾರತೀಯ ಸೈನಿಕರನ್ನು ಯುಧ್ದಬಂಧಿಗಳನ್ನಾಗಿಟ್ಟು 21 ದಿನಗಳ ನಿರಂತರ ಚಿತ್ರಹಿಂಸೆ ನೀಡಿದರು. ಭಾರತೀಯ ಸೈನಿಕರ ಕಣ್ಣುಕಿತ್ತು, ಕಿವಿಗಳಿಗೆ ಬಿಸಿ ಕಬ್ಬಿಣದ ಸರಪಳಿಯನ್ನು ಹಾಕಿ, ಹಲ್ಲುಕಿತ್ತು, ನಾಲಿಗೆಯನ್ನು ಕತ್ತರಿಸಿ ಅನೇಕ ರೀತಿಯಲ್ಲಿ ಚಿತ್ರಹಿಂಸೆ ನೀಡಿ ಗುಂಡಿಟ್ಟು ಕೊಂದಿದ್ದರು. ಇದನ್ನು ಕಂಡ ಭಾರತೀಯ ಸೇನೆಯ ರಕ್ತ ಕುಡಿಯುತ್ತಿತ್ತು, ಹಾಗೂ ಯುಧ್ದಕ್ಕೆ ತಯಾರಾಗಿತ್ತು,
ಮೊದಲನೇಯ ಶಿಖರ ಪಾಯಿಂಟ್ 5140 ತೋಲೋಲಿಂಗ್ ಟೈಗರ್ ಹಿಲ್ಸ್ನತ್ತ 19 ಜೂನ್ 1999ರಲ್ಲಿ ಕ್ಯಾಪ್ಟನ್ ವಿಕ್ರಮ್ ಭಾತ್ರಾ, ಕ್ಯಾಪ್ಟನ್ ಸಂಜೀವಸಿಂಗ್ ಜಾಂಬವಾಲ್, ಕರ್ನಾಟಕದ ವೀರಯೋಧ ನವೀನ ನಾಗಪ್ಪನವರ ನೇತೃತ್ವದಲ್ಲಿ ಪಾಯಿಂಟ್ 5140 ವನ್ನು ವಶಪಡಿಸಿಕೊಂಡು ಅದರ ಮೇಲೆ ತಿರಂಗಾವನ್ನು ಹಾರಿಸಿತ್ತು. ಇದು ಕೇವಲ 48 ಗಂಟೆಗಳ ಕಾರ್ಯಾಚರಣೆಯಾಗಿತ್ತು. ನಂತರದಲ್ಲಿ ಸೈನ್ಯಾಧಿಕಾರಿಯ ಸಂದೇಶ “ಮೊದಲನೇಯ ಗುಂಡನ್ನು ಅವರು ಹಾರಿಸಿರಬಹುದು ಆದರೆ ಕೊನೆಯ ಗುಂಡನ್ನು ನಾವೇ ಹಾರಿಸುತ್ತೇವೆ ವಿಜಯದ ಪತಾಕೆ ನಮ್ಮದೇ” ಎಂಬ ಮಾತಿನಂತೆ ಹಾಗೂ ಸೈನಿಕ ನವೀನ ನಾಗಪ್ಪನವರ “ತಿರಂಗಾ ಸಾಥ್ ಮೇ ಲೇಕೇ ಜಾನಾ, ಪಾಯಿಂಟ್ 4875 ಜರೂರ ಲೇಹರಾಯೇಂಗೆ, ದುರ್ಗಾಮಾತಾ ಕೀ ಜೈ” ಎಂಬ ಘೋಷಣೆಯೊಂದಿಗೆ ಪಾಯಿಂಟ್ 4875 ನತ್ತ ಈ ಐವರ ಜೊತೆಗೆ ಸೇನಾ ತುಕುಡಿಯು ಸಿಧ್ದವಾಗಿದ್ದು, ಸೈನಿಕರು ತಮ್ಮೆಲ್ಲ ವೈಯಕ್ತಿಕ ವಸ್ತುಗಳನ್ನು ಬಿಟ್ಟು, ತಮ್ಮ ಕುಟುಂಬದ ನೆನಪನ್ನು ಮರೆತು, ದುರ್ಗಾಮಾತಾ ಕೀ ಜೈ ಎಂಬ ಘೋಷಣೆಯೊಂದಿಗೆ ಪಾಯಿಂಟ್ 4875 ಮೇಲೆ 120 ಜನ ಭಾರತೀಯ ಸೈನಿಕರು ಪಾಕಿಸ್ತಾನದ ಮೊದಲ ಮೂರು ಬಂಕರ್ಗಳನ್ನು ವಶಪಡಿಸಿಕೊಂಡರು. ಈ ಯುಧ್ದವು ಮುಂದುವರೆದಿತ್ತು, ಈ ಯುಧ್ದದಲ್ಲಿ ಶ್ಯಾಮ್ಸಿಂಗ್ ವೀರಮರಣವನ್ನಪ್ಪಿದ್ದರು. ಅವರ ಜೇಬಿನ ಚೀಟಿಯಲ್ಲಿ “ಯೇ ಜಿಂದಗಿ ಕ್ಯಾ ಹೈ, ದುಶ್ಮನ್ ಕೋ ಮಾರೇ ಬಿನಾ ಯೇ ಜಿಂದಿಗಿ ಕ್ಯಾ ಹೈ? ಜಿಂದಗಿ ಮೌತಕೀ ಬಿನಾ” ಎಂದು ಬರೆದಿದ್ದರು. “ಒಳ್ಳೆಯ ಸಮಯದಲ್ಲಿ ನಿಮ್ಮ ಜೊತೆ ಇದ್ದೆ, ಕಷ್ಟದ ಸಮಯದಲ್ಲಿಯೂ ಇರುತ್ತೇನೆ” ಎಂದು ಹೇಳಿದ ವೀರಯೋಧನನ್ನು ಕಳೆದುಕೊಳ್ಳಬೇಕಾಯಿತು. ಇಂತಹ ಸಾವಿರಾರು ಘಟನೆಗಳನ್ನು ಕಾಣಬಹುದಾಗಿದೆ. ಈ ಯುಧ್ದದಲ್ಲಿ ಸೈನ್ಯಾಧಿಕಾರಿಯು ವೀರಮರಣ ಹೊಂದಿದಾಗ ವೀರಯೋಧನ ತಾಯಿ “ಒಬ್ಬ ಮಗ ತನ್ನ ತಾಯಿಗೆ, ತಾಯ್ನಾಡಿಗೆ ಕೊಡುವ ಶ್ರೇಷ್ಠ ಉಡುಗೊರೆ ಅವನ ದೇಹ ಭಾರತದ ಬಾವುಟದಲ್ಲಿ ಸುತ್ತಿಕೊಂಡು ಮರಳಿ ಬಂದರೆ ಅದಕ್ಕಿಂತ ಶ್ರೇಷ್ಠ ಉಡುಗೊರೆಯನ್ನು ಒಬ್ಬ ವೀರಯೋಧ ಮಗ ಕೊಡುವುದಕ್ಕೆ ಸಾಧ್ಯವಿಲ್ಲ. ಅದೇ ಒಂದು ಶ್ರೇಷ್ಠ ಉಡುಗೊರೆ” ಎಂದು ಹೇಳಿದ ತಾಯಿಯ ಮಾತು ಅಪ್ರತಿಮ ದೇಶಭಕ್ತಿಯನ್ನು ಸಾರುತ್ತದೆ. ‘ಒಬ್ಬ ಸೈನ್ಯಾಧಿಕಾರಿಯ ಮೊದಲನೇಯ ಆಧ್ಯತೆ ದೇಶದ ಗಡಿಂಯನ್ನು ರಕ್ಷಿಸುವುದು ದೇಶದ ಗೌರವ ಮತ್ತು ಪ್ರತಿಷ್ಠೆಯನ್ನು ಪ್ರತಿದಿನ ಮತ್ತು ಪ್ರತಿಕ್ಷಣ ಎತ್ತಿ ಹಿಡಿಯುವುದು, ಎರಡನೇಯ ಆದ್ಯತೆ ತನ್ನೊಂದಿಗೆ ಬರುವ ಸೈನಿಕರ ರಕ್ಷಣೆ ಮತ್ತು ಆತನ ಗೌರವ ಕಾಪಾಡುವುದು ಕೊನೆಯ ಆದ್ಯತೆ ತನ್ನ ಸುರಕ್ಷೆ’ ಎಂದು ಹೇಳಿದ್ದು, ಸಾರ್ಥಕದ ವಿಚಾರವಾಗಿದೆ. ಅನೇಕ ಸೈನಿಕರು ಹೋರಾಡುತ್ತ ತಮ್ಮ ಕೈ ಕಾಲುಗಳನ್ನು ಕಳೆದುಕೊಂಡರಲ್ಲದೇ ಅನೇಕ ನೋವುಗಳನ್ನು ಅನುಭವಿಸಿದರು. ಇದ್ಯಾವುದಕ್ಕೂ ಜಗ್ಗದೇ ಮುನ್ನೆಡೆಯುತ್ತಿದ್ದರು. “ನಾನು ಹೋರಾಡೋಕೆ ಆಗುತ್ತಿಲ್ಲವಲ್ಲಾ? ಪ್ರಾಣ ಇರುವವರೆಗೂ ಹೋರಾಡುವೆನು” ಎಂಬ ಮಾತು ವೀರ ಸೈನಿಕರ ದೇಶಪ್ರೇಮವನ್ನು ನಿರೂಪಿಸುತ್ತದೆ. ಕರ್ನಾಟಕದ ನವೀನ ನಾಗಪ್ಪನವರು ಗ್ರೇನೆಡ್ ದಾಳಿಯಿಂದ ಅನೇಕ ನೋವುಂಡು ಭಾರತ ಮಾತೆಯ ಸೇವೆ ಸಲ್ಲಿಸಿದರು. ಅನೇಕ ಸೈನಿಕರು ಯುಧ್ದಭೂಮಿಯಲ್ಲಿ ರಕ್ತ ಹರಿಸಿದ್ದರು. ಯಾವ ಅಡತಡೆಗಳಿಗೂ ಬಗ್ಗದೇ ಹೋರಾಡಿ ಪಾಯಿಂಟ್ 4875 ಶಿಖರವನ್ನು ಮರಳಿ ಪಡೆದುಕೊಂಡರು. ಭಾರತದ ತ್ರಿವರ್ಣ ಧ್ವಜ ಪಾಯಿಂಟ್ 4875 ಶಿಖರದ ಮೇಲೆ ರಾರಾಜಿಸುತ್ತಿತ್ತು, ಇದಕ್ಕಾಗಿ ಪರಮವೀರ ಚಕ್ರ ಕ್ಯಾಪ್ಟನ್ ವಿಕ್ರಮ್ ಭಾತ್ರಾರವರನ್ನು ಕಳೆದುಕೊಳ್ಳಬೇಕಾಯಿತು. ವಿಕ್ರಮ್, ತಾಯಿಗೆ ಹೀಗೆ ಹೇಳಿದ್ದರು. “ಅಮ್ಮ ಒಂದೊಮ್ಮೆ ಯುಧ್ದ ಘೋಷಣೆಯಾದರೆ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುತ್ತೇನೆ ಅಥವಾ ಅದೇ ತ್ರಿವರ್ಣ ಧ್ವಜವನ್ನು ಮೈಮೇಲೆ ಹೊದ್ದಿಕೊಂಡಿರುತ್ತೇನೆ” ಹೋರಾಟದಲ್ಲಿ “ಯೇ ದಿಲ್ ಮಾಂಗೇ ಮೋರ್” ಎಂಬ ವಾಕ್ಯವನ್ನು ಉಚ್ಚರಿಸಿದ್ದರು. ಇದು ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಇವರಿಗೆ ಭಾರತವು ಪರಮವೀರ ಚಕ್ರ ನೀಡಿ ಗೌರವಿಸಿದೆ. ಅದೇ ರೀತಿ ಮನೋಜ್ಕುಮಾರ ಪಾಂಡೆಯವರು ಬಿ.ಇ. ಇಂಜೀನೀಯರಿಂಗ್ ಪದವಿ ಪಡೆದರೂ ಸಹ ಪರಮವೀರ ಚಕ್ರವನ್ನು ಪಡೆಯಬೇಕೆಂಬ ಬಯಕೆಯನ್ನು ಹೊಂದಿದ್ದರು, ಸೈನಿಕರಾಗಿ ಸೇವೆ ಸಲ್ಲಿಸಬೇಕೆಂಬ ದೇಶಪ್ರೇಮದಿಂದ ಸೈನ್ಯಕ್ಕೆ ಸೇರಿ ಯುಧ್ದದಲ್ಲಿ ಕೊನೆಯುಸಿರು ಇರುವವರೆಗೂ ಹೋರಾಡಿ ವೀರಮರಣ ಹೊಂದಿದ ಇವರು “ಅವರನ್ನು ಬಿಡಬೇಡಿ, ನಾವು ಅದನ್ನು ಪಡೆಯಬೇಕು” ಎಂಬ ಮಾತನ್ನು ಕೊನೆಕ್ಷಣದಲ್ಲಿ ನುಡಿದಿದ್ದರು. ಅವರಿಗೆ ಪರಮವೀರ ಚಕ್ರ ನೀಡಿ ಗೌರವಿಸಿದೆ. ಅಮೌಲ್ ಕಾಲಿಯಾರವರು ಮನೆಯಲ್ಲಿನ ಮದುವೆಯ ಪ್ರಸ್ತಾವನೆಯನ್ನು ತಿರಸ್ಕರಿಸಿ ಅನಂತರ ಮದುವೆ ಮೊದಲು ದೇಶ ಎಂದು ಹೋರಾಟಕ್ಕಿಳಿದು ವೀರಮರಣ ಹೊಂದಿದರು. ಸುಬೇದಾರ ಯೋಗೇಂದರ್ ಸಿಂಗ್ ಯಾದವ್ ಅವರು ತಮ್ಮ ದೇಹಕ್ಕೆ 17 ಗುಂಡುಗಳು ಬಿದ್ದರೂ ಅದನ್ನು ಲೆಕ್ಕಿಸದೇ ವೈರಿಗಳನ್ನು ಸಂಹಾರ ಮಾಡಿದ ವೀರಯೋಧರು ಇವರಿಗೆ ಪರಮವೀರ ಚಕ್ರವನ್ನು ನೀಡಿ ಗೌರವಿಸಿದೆ.
ಈ ಕಾರ್ಗಿಲ್ ಯುಧ್ದದಲ್ಲಿ 527 ಭಾರತೀಯ ಸೈನಿಕರು ವೀರಮರಣ ಹೊಂದಿದರು. ಅನೇಕರು ಗಾಯಗೊಂಡು ಭಾರತವನ್ನು ಸಂರಕ್ಷಿಸಿದರು. ಅವರೆಲ್ಲರನ್ನೂ ಸ್ಮರಿಸೋಣ ಪಾಪಿ ರಣಹೇಡಿ ಪಾಕಿಸ್ತಾನದ ವಶದಲ್ಲಿದ್ದ ಕಾರ್ಗಿಲ್ನ್ನು ಮರಳಿಪಡೆದುಕೊಂಡರು. ಪಾಕಿಸ್ತಾನವು ಸೋತು ಶರಣಾಯಿತು. “ನಮ್ಮ ಸೈನಿಕರ ಎದೆಗೆ ಗುಂಡು ಬಿದ್ದಿರುತ್ತದೆ, ಬೆನ್ನಿಗೆ ಅಲ್ಲ” ಎಂದು ತೋರಿಸಿಕೊಟ್ಟಿದ್ದಾರೆ. ಪಾಯಿಂಟ್ 4875 ಶಿಖರದ ಮೇಲೆ ಭಾರತದ ತ್ರಿವರ್ಣ ಧ್ವಜವು ಹೆಮ್ಮೆಯಿಂದ ರಾರಾಜಿಸುತ್ತಿದೆ. ಈ ಯುಧ್ದವು ಮೂರು ತಿಂಗಳುಗಳ ಕಾಲ ನಡೆಯಿತು. ಯುಧ್ದದ ವಿಜಯದ ನೆನಪಿಗಾಗಿ “ಕಾರ್ಗಿಲ್ ವಿಜಯ ದಿವಸ್” ಎಂದು ಆಚರಿಸುತ್ತೇವೆ. ಈ ದಿನದಂದು ಭಾರತದ ಪ್ರಧಾನಿಮಂತ್ರಿಗಳವರು ನವದೆಹಲಿಯ ‘ಅಮರ್ ಜವಾನ್’ ಜ್ಯೋತಿಗೆ ಭೇಟಿ ನೀಡಿ ಅಲ್ಲಿನ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸುತ್ತಾರೆ. ಈ ದಿನ ಕೆಲವು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಆಯೋಜಿಸಿ ವೀರಯೋಧರಿಗೆ ಗೌರವಿಸಲಾಗುತ್ತದೆ. ಭಾರತವು 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಸಂದರ್ಭದಲ್ಲಿ “ಹರ್ ಘರ್ ತಿರಂಗಾ”ದ ಮೂಲಕವಾಗಿ ನಮ್ಮ ಸೈನಿಕರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಶೌರ್ಯ ಮತ್ತು ತ್ಯಾಗಕ್ಕೆ ಇಡೀ ಭಾರತ ಗೌರವ ಸಲ್ಲಿಸಿದೆ.
ಭಾರತದ ಗಡಿಯನ್ನು ಹಗಳಿರುಳು ಕಾಯುತ್ತಾ ಭಾರತಮಾತೆಯ ಸೇವೆಯನ್ನು ಮಾಡುತ್ತಾ ಹುತಾತ್ಮರಾದ ವೀರಯೋಧರಿಗೆ ನಮನಗಳನ್ನು ಸಲ್ಲಿಸೋಣ. ವೀರಯೋಧರ ಬಲಿದಾನವನ್ನು ಸ್ಮರಿಸೋಣ. ಈ ನಮ್ಮ ವೀರಯೋಧರ ತ್ಯಾಗ ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಬಿಸಿಲು, ಗಾಳಿ, ಚಳಿ, ಮಳೆಯನ್ನು ಲೆಕ್ಕಿಸದೇ ಗಡಿ ಕಾಯೋ ಭಾರತಾಂಬೆಯ ಮಕ್ಕಳು ನೀವು ನಿಮಗೊಂದು ಸಲಾಂ, ನಿಮ್ಮ ನೆನಪು ನಮ್ಮ ಹೃದಯದಲ್ಲಿ ಅಜರಾಮರ ನಾವು ಇಂತಹ ನಮ್ಮ ವೀರಯೋಧರ ಅಪ್ರತಿಮ ದೇಶಭಕ್ತಿಯನ್ನು ಅನುಸರಿಸಿ ಭಾರತ ದೇಶದ ಅಭಿವೃದ್ದಿಗಾಗಿ, ಏಳ್ಗೆಗಾಗಿ ಶ್ರಮಿಸೋಣ. “ವೀರ ಜವಾನ್ ಅಮರ್ ರಹೇ” ಜೈ ಹಿಂದ್, ಭಾರತ್ ಮಾತಾ ಕೀ ಜೈ.
- ಮೃತ್ಯುಂಜಯ ಪ ಕುಲಕರ್ಣಿ (ಹಾಲಗಿಮಠ)
ಗದಗ
ಮೊ: 9019057992