‘ಕನ್ನಡಿಗ’ ಹೆಮ್ಮೆ ಪಡುವ ಚಿತ್ರ
ಅಂಕಣ: ಸಿನೆಮಾನೋಟ
ಲಿಪಿಕಾರರ ವಂಶದ ಸಮಂತಭದ್ರನ ಎಂಟನೆಯ ಕುಡಿ ಗುಣಭದ್ರ. ಸಾಲ್ವ ಮನೆತನದ,ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ ವಿಶ್ವವಿದ್ಯಾಲಯ ಕಟ್ಟಿ, ಕನ್ನಡ ಲಿಪಿ ಕಾಪಿಡಲು ಸಮಂತಭದ್ರನಿಗೆ ಉಂಬಳಿಯಾಗಿ ನೀಡಿದ ದ್ವೀಪ ಪೂರ್ಚುಗೀಸರ ವಶವಾಗುತ್ತದೆ.ಅದನ್ನು ಮರಳಿ ಪಡೆಯಲು ಮಂಜೇಶ್ವರದ ಬೊಮ್ಮ ನರಸಯ್ಯನ ಹತ್ತಿರ ಪಡೆದುಕೊಂಡ ಹತ್ತು ಸಾವಿರ ವರಹಗಳನ್ನು ಪಾವತಿಸುವ ಹೊಣೆಗಾರಿಗೆ ಗುಣಭದ್ರನ ತನಕವೂ ಮುಂದುವರಿದಿದೆ.ಅಂತೆಯೇ ಕನ್ನಡದ ಕೈಂಕರ್ಯವೂ ಅವನ ಹೆಗಲೇರಿದೆ.
ಫರ್ಡಿನಾಂಡ್ ಕಿಟೆಲ್ ಬೊಮ್ಮನರಸಯ್ಯನ ಮನೆತನದ ಹರಿಗೋಪಾಲನಿಂದ ದ್ವೀಪವನ್ನು ಕೊಳ್ಳುತ್ತಾರೆ.ಹೆಂಡತಿ ಮತ್ತು ಸಹಾಯಕಿ ಹೆನ್ನಾಳೊಂದಿಗೆ ದ್ವೀಪದಲ್ಲಿ ನೆಲಸುವ ಕಿಟೆಲ್ ಗೆ ಕನ್ನಡ ಕಲಿಯುವ ಮಹದಾಸೆ.ಗುಣಭದ್ರ ಅವರ ಆಸೆಗೆ ಇಂಬು ಕೊಡುತ್ತಾನೆ.ಕನ್ನಡ ನುಡಿಗಳನ್ನು ಸಂಗ್ರಹಿಸಿ,ಅರ್ಥೈಸುವ ಪುಸ್ತಕಕ್ಕೆ ನಿಘಂಟು ಎನ್ನುವ ಪರಿಭಾಷೆ ಅವನದು.
ಮತಪ್ರಸಾರಕ್ಕಿಂತ ಹೆಚ್ಚಾಗಿ ಕನ್ನಡಕ್ಕೆ ಸಂಬಂಧಪಟ್ಟ ಕೆಲಸದಲ್ಲಿ ತೊಡಗಿದ್ದಾರೆ ಎನ್ನುವ ಕಾರಣಕ್ಕೆ ಕಿಟೆಲ್ ರವರಿಗೆ ದ್ವೀಪ ಬಿಟ್ಟು ಬರಲು ಸೂಚಿಸಲಾಗುತ್ತದೆ.ಅವರ ಸಹಾಯಕಿ ಹೆನ್ನಾ ಕನ್ನಡದ ಕೆಲಸ ಮುಂದುವರಿಸಲು ಅಲ್ಲಿಯೇ ತಂಗುತ್ತಾಳೆ.ಕ್ರೈಸ್ತ ಮತದ ವಿಶಿಷ್ಟ ಪಂಥವೊಂದರ ಅನುಯಾಯಿ ಹೆನ್ನಾ ಸದಾ ಮೌನದಿಂದಿರುವ ದೀಕ್ಷೆ ತೊಟ್ಟವಳು.ಕಿಟೆಲ್ ಅವಳನ್ನು ಗುಣಭದ್ರನ ಸುಪರ್ದಿಗೆ ಒಪ್ಪಿಸಿ ತೆರಳುತ್ತಾರೆ.
ಸ್ವಂತ ದುಡಿಮೆಗೆಂದು ಗೋವಾಕ್ಕೆ ತೆರಳಿದ್ದ ಗುಣಭದ್ರನ ತಮ್ಮ ಮಲ್ಲಿನಾಥ ಪೋರ್ಚುಗೀಸರ ಕ್ರೌರ್ಯದಿಂದ ನೊಂದು ಮರಳಿ ಬರುತ್ತಾನೆ.ಪೋರ್ಚುಗೀಸರ ದಬ್ಬಾಳಿಕೆ,ಹಿಂಸೆ ಅನುಭವಿಸಿದವನಾಗಿ ಅವರ ಮತದ ಮೇಲೆ ಅವನಿಗೆ ದ್ವೇಷ.ದ್ವೀಪದಲ್ಲಿ ತಲೆಯೆತ್ತುತ್ತಿರುವ ಚರ್ಚ್,ಅಲ್ಲಿ ವಾಸವಾಗಿರುವ ಹೆನ್ನಾ ಮೇಲೆ ಅವನಿಗೆ ಆಕ್ರೋಶ ಮೂಡುತ್ತದೆ.ಹೆನ್ನಾ ಗರ್ಭಿಣಿಯೆಂದು ತಿಳಿದಾಗ ಇದು ವಿಷಮಿಸುತ್ತದೆ.ಗುಣಭದ್ರನ ಮಗಳ ಮದುವೆಯಲ್ಲಿ ಅವಾಂತರ ಸೃಷ್ಟಿಸಿ ಅದು ದುರಂತದಲ್ಲಿ ಕೊನೆಗೊಳ್ಳಲು ಕಾರಣನಾಗುತ್ತಾನೆ.
ಈ ಸಂದಿಗ್ಧದಿಂದ ಗುಣಭದ್ರ ಹೇಗೆ ಪಾರಾಗುತ್ತಾನೆ?ಹೆನ್ನಾ ತನ್ನ ಮೌನ ದೀಕ್ಷೆಯನ್ನು ಮುರಿಯುತ್ತಾಳೆಯೇ? ಲಿಪಿಕಾರರ ಅಮೂಲ್ಯ ಭಂಡಾರ ಉಳಿಯುವುದೇ? ಈ ಕುತೂಹಲವನ್ನು ತಣಿಸಲು ಜೀ 5 ಪ್ರಸಾರ ಮಾಡುತ್ತಿರುವ ‘ಕನ್ನಡಿಗ’ ಸಿನಿಮಾವನ್ನು ನೋಡಬೇಕು.
ಹಲವು ಪ್ರಶಸ್ತಿಗಳನ್ನು ಪಡೆದಿರುವ ಕನ್ನಡದ ಹೆಮ್ಮೆಯ ನಿರ್ದೇಶಕ ಗಿರಿರಾಜ್ ಶತಶತಮಾನಗಳಿಂದ ಕನ್ನಡವನ್ನು ಉಳಿಸಿ,ಬೆಳೆಸಿದ ಮಹಾನುಭಾವರ ಕತೆಯನ್ನು ಕಟ್ಟಿಕೊಟ್ಟಿದ್ದಾರೆ.ರಾಣಿ ಚೆನ್ನಭೈರಾದೇವಿ, ಗುಣಭದ್ರ, ಫರ್ಡಿನಾಂಡ್ ಕಿಟೆಲ್, ಮೋಗ್ಲಿಂಗ್ ಇಲ್ಲಿ ಬರುವ ಕೆಲವು ಹೆಸರುಗಳು ಮಾತ್ರ.ಕನ್ನಡದ ಕೆಲಸ ಮಾಡಿದವರು,ಕನ್ನಡಕ್ಕಾಗಿ ತ್ಯಾಗ ಮಾಡಿದವರು,ಬದುಕನ್ನು ಮುಡಿಪಾಗಿಟ್ಟವರು,ಕನ್ನಡದಲ್ಲಿ ಬರೆದವರು,ಕನ್ನಡವನ್ನು ಉಳಿಸಿದವರು,ಬೆಳೆಸಿದವರು ಸಾಸಿರ ಮಂದಿ.ಕೆಲವರನ್ನು ನೆನಪಿಟ್ಟುಕೊಂಡಿದ್ದರೆ ಹಲವರನ್ನು ನಾವು ಮರೆತಿದ್ದೇವೆ.ಅಜ್ಞಾತರು ಹಲವರು. ಅಂತವರಿಗೊಂದು ಸೊಲ್ಮೆಯನ್ನು ಸಲ್ಲಿಸುವ ಕೆಲಸವನ್ನು ಗಿರಿರಾಜ್ ಅಚ್ಚುಕಟ್ಟಾಗಿ ಮಾಡಿದ್ದಾರೆ.
ಪಂಪನ ಆದಿಪುರಾಣ,ಕವಿಗಳ ಸೊಲ್ಲು, ಕನ್ನಡದ ಸಿರಿನುಡಿ ಇಲ್ಲಿ ಮನದುಂಬುವಂತೆ ಕೇಳಿ ಬರುತ್ತದೆ.ಕಿಟೆಲ್ಲರ ಶ್ರದ್ಧೆಯ ಕುರುಹು,ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ದ ಓದು ಇಲ್ಲಿದೆ.ದೈವದ ಪಾತ್ರವೊಂದನ್ನು ಸೃಷ್ಟಿಸಿ ಕನ್ನಡ ಉಳಿಸುವ ಕಾಣದ ಶಕ್ತಿಯ ಕೈವಾಡವನ್ನು ತೋರುವಲ್ಲಿ ನಿರ್ದೇಶಕರ ಜಾಣ್ಮೆಯಿದೆ.
ಕಾಳುಮೆಣಸಿನ ರಾಣಿಯೆಂದು ಪ್ರಸಿದ್ಧಳಾದ ಚೆನ್ನಬೈರಾದೇವಿಯ ನಾಡಿನ ‘ಕುಂದಕನ್ನಡ’ ವನ್ನು ಚಿತ್ರದಲ್ಲಿ ಕೇಳುವುದೊಂದು ಸೊಗಸು.ಗುಣಭದ್ರನ ಮಡದಿ ಸಂಕಮ್ಮಬ್ಬೆ,ಮಗಳು ಲಕ್ಷ್ಮಿ,ಅಳು ಬೊಳ್ಳ ಇವರ ನುಡಿ ಚಂದ. ಜೈನರ ಆಚರಣೆಗಳೂ ಹದವರಿತು ಬಳಕೆಯಾಗಿವೆ. ಸುಂದರವಾದ ಹೊರಾಂಗಣ ಚಿತ್ರದ ಅಂದವನ್ನು ಹೆಚ್ಚಿಸಿದೆ.
ಗುಣಭದ್ರನ ಪಾತ್ರದಲ್ಲಿ ರವಿಚಂದ್ರನ್ ಘನತೆಯಿಂದ ಅಭಿನಯಿಸಿದ್ದಾರೆ.ಅವರ ಎಂದಿನ ಮ್ಯಾನರಿಸಂಗಳು ಹತೋಟಿಯಲ್ಲಿವೆ.ಆದರೆ ಸಂಭಾಷಣೆ ಹೇಳುವಲ್ಲಿ, ಮುಖ್ಯವಾಗಿ ಸಂಕಮ್ಮನ ಪಾತ್ರದೆದುರು,ಎಡವುತ್ತಾರೆ. ಅದಕ್ಕೆ ಕಾರಣ ಸಂಕಮ್ಮಬ್ಬೆಯಾಗಿ ನಟಿಸಿದ ಪಾವನ ಗೌಡ.ಆಕೆ ಮತ್ತು ಗುಣಭದ್ರನ ಮಗಳಾಗಿ ಜಯಶ್ರಿ ಅದ್ಭುತವಾಗಿ ನಟಿಸಿದ್ದಾರೆ.ಇವರ ಪ್ರತಿಭೆಯನ್ನು ಕನ್ನಡ ಚಿತ್ರರಂಗ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ.
ಮುರಳಿ ಮನೋಹರ್ ಎಂತಹ ಪಾತ್ರಕ್ಕೂ ಜೀವ ತುಂಬಬಲ್ಲ ನಟ.ಚಿ ಗುರುದತ್ ನಟನೆಯೂ ಪಾತ್ರೋಚಿತ.ಜಮ್ಮಿ ಆಲ್ಟರ್ ಮತ್ತು ಜೀವಿಕಾ, ಫರ್ಡಿನಾಂಡ್ ಕಿಟೆಲ್ ಮತ್ತು ಹೆನ್ನಾ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದರೆ ರಾಕ್ ಲೈನ್ ವೆಂಕಟೇಶ್ ಚಿಕ್ಕ ಪಾತ್ರದಲ್ಲಿ ಚೊಕ್ಕವಾಗಿ ನಟಿಸಿದ್ದಾರೆ.
ಕೆಜಿಎಫ್ ಚಾಪ್ಟರ್ 1 ಮತ್ತುಚಾಪ್ಟರ್ 2 ಸಿನಿಮಾಗಳಿಗೆ ಅಬ್ಬರದ ಸಂಗೀತ ಸಂಯೋಜನೆ ನೀಡಿ ಹೆಸರು ಗಳಿಸಿದ ರವಿ ಬಸ್ರೂರ್ ಈ ಚಿತ್ರಕ್ಕೆ ಮಂದ್ರ ಗತಿಯ ಸಂಗೀತ ನೀಡಿದ್ದಾರೆಂದರೆ ನಂಬಲೇಬೇಕು.ತಂಗಾಳಿಯಂತ ಹಿನ್ನೆಲೆ ಸಂಗೀತ ಜೊತೆಗೆ ಶಿವರಾಜಕುಮಾರ್ ಹಾಡಿದ ‘ಸಿರಿಗನ್ನಡಂ ಗೆಲ್ಗೆ’ ಹಾಡು ನೆನಪಲ್ಲಿ ಉಳಿಯುತ್ತದೆ. ಜಿ ಎಸ್ ವಿ ಸೀತಾರಾಮನ್ ಕ್ಯಾಮರಾ ವರ್ಕ್ ಕಣ್ಣಿಗೆ ತಂಪನ್ನೀಯುವಂತಿದೆ.
ಚಿತ್ರದಲ್ಲಿ ಋಣಾತ್ಮಕ ಅಂಶಗಳೂ ಇಲ್ಲದಿಲ್ಲ.ಚಿತ್ರದ ಮೊದಲಲ್ಲಿ ಬರುವ ರಾಣಿ ಚೆನ್ನಭೈರಾದೇವಿಯ ದೃಶ್ಯ ನಾಟಕೀಯವಾಗಿದೆ.ಸಮಂತಭದ್ರ ಕೆಸರಿನಿಂದೆದ್ದು ಬರುವುದೂ ಸಮಂಜಸವೆನಿಸುವುದಿಲ್ಲ. ಸಂಕಲನವನ್ನು ಇನ್ನಷ್ಟು ಹರಿತಗೊಳಿಸಿ ಚಿತ್ರದ ಅವಧಿ ಕಡಿಮೆ ಮಾಡಬಹುದಿತ್ತು.
‘ಕನ್ನಡಿಗ’ ಸಿನಿಮಾ ನೋಡಿದ ಬಳಿಕ ಕೆಲವು ಪ್ರಶ್ನೆಗಳು ಮೂಡುವ ಸಂಭವವಿದೆ.ರಾಣಿ ಭೈರಾದೇವಿ ದ್ವೀಪವೊಂದನ್ನು ಲಿಪಿಕಾರ ವಂಶಕ್ಕೆ ಉಂಬಳಿ ನೀಡಿದ್ದಳೇ?ಗುಣಭದ್ರನಿಗೂ ಕಿಟೆಲ್ಲರಿಗೂ ಸ್ನೇಹವಿತ್ತೇ?ಹೆನ್ನಾ ಎನ್ನುವ ಸೊಲ್ಲೆತ್ತದ ಮಹಿಳೆಯೊಬ್ಬಳಿದ್ದಳೇ? ಪ್ರಶ್ನೆಗಳು ಮುಖ್ಯವಲ್ಲ. ಸಾಕಷ್ಟು ಅಧ್ಯಯನ,ಸಂಶೋಧನೆ ನಡೆಸಿ ಕತೆ, ಚಿತ್ರಕತೆ ಬರೆದು ನಿರ್ದೇಶಿಸಿದ ಗಿರಿರಾಜ್ ಸೃಜನಶೀಲ ಸ್ವಾತಂತ್ರ್ಯವನ್ನು ಬಳಸಿಕೊಂಡಿದ್ದರೆ ತಪ್ಪಲ್ಲ.ಇದು ಇತಿಹಾಸದ ತಖ್ತೆಯೂ ಅಲ್ಲ. ಕನ್ನಡದ ಪ್ರೀತಿಯಿಂದ, ಕನ್ನಡಿಗರಲ್ಲಿ ಅಭಿಮಾನ ಮೂಡಿಸಲು ‘ಕನ್ನಡಿಗ’ ಮಾಡಿದ್ದಾರೆ.ಅವರ ಪ್ರಯತ್ನವನ್ನು ಮೆಚ್ಚಿ,ಬೆನ್ನು ತಟ್ಟುವುದು ನಮ್ಮ ಕೆಲಸ