ಕೇವಲ ಸಮ್ಮೇಳನಗಳಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ: ಸಂಗಪ್ಪ
ಮುಂಡಗೋಡ 11: ಕನ್ನಡ ಸುಂದರವಾದ ಭಾಷೆ ಅದನ್ನು ಪ್ರೀತಿಸಿ ಗೌರವಿಸಬೇಕು ಎಂದು ಇಲ್ಲಿನ ಸಂಗಮೇಶ್ವರ ಕೋ-ಆಪ್ ಸೊಸೈಟಿ ಅಧ್ಯಕ್ಷ ಸಂಗಪ್ಪ ಕೋಳುರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಪಟ್ಟಣದ ಕೆ.ಎಚ್.ಬಿ. ಕಾಲನಿಯ ಸಂಗಮೇಶ್ವರ ಸಭಾಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಕನ್ನಡ ಕಾರ್ತಿಕ-2023 ಅನುದಿನ ಅನುಸ್ಪಂದನದಡಿ ಶಿವರಾಮ ಕಾರಂತರ ಚಿಂತನೆಗಳ ಒಳನೋಟ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕೇವಲ ಸಮ್ಮೇಳನಗಳಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಮನೆಯಲ್ಲಿ ಕನ್ನಡ ಭಾಷೆ ಮಾತನಾಡಿದರೆ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದರು.
ಅರಣ್ಯ ಇಲಾಖೆ ಸಿಬ್ಬಂದಿ ಸಂತೋಷಕುಮಾರ ಪಾಟೀಲ ಶಿವರಾಮ ಕಾರಂತರ ಕುರಿತು ಉಪನ್ಯಾಸ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ವಸಂತ ಕೊಣಸಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಗರತ್ನ ದೈವಜ್ಞ ಮತ್ತು ಸಂಜಯ ಕವಟಕೊಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್.ಕೆ.ಬೋರಕರ ಮತ್ತು ಸುಭಾಸ ವಡ್ಡರ ಇವರನ್ನು ಸನ್ಮಾನಿಸಲಾಯಿತು.
ಗೌರವ ಕಾರ್ಯದರ್ಶಿ ವಿನಾಯಕ ಶೇಟ್ ಪ್ರಾಸ್ತಾವಿಕ ಮಾತನಾಡಿದರು. ಎಸ್.ಬಿ.ಹೂಗಾರ, ಆರ್.ಜೆ.ಬೆಳ್ಳೆನವರ, ಶಿವಾನಂದ ವಾಲಿಶೆಟ್ಟರ, ನಾಗಯ್ಯ ಹಿರೇಮಠ, ಆರ್.ಎಸ್.ಕಲಾಲ, ಪ್ರಶಾಂತ ಸಾವಳಗಿ, ಎಸ್.ವಿ.ಹೊಸಮನಿ, ಕಸಾಪ ಸದಸ್ಯರು ಹಾಗೂ ಮುಂತಾದವರು ಉಪಸ್ಥಿತರಿದ್ದರು. ಮಲ್ಲಮ್ಮ ನೀರಲಗಿ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಎಸ್.ಡಿ.ಮುಡೆಣ್ಣವರ ನಿರೂಪಿಸಿದರು.