ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗನ ಸಾರ್ವಭೌಮ ಸಂಸ್ಥೆ: ಸಹದೇವಪ್ಪ
ಲೋಕದರ್ಶನ ವರದಿ
ಮುಂಡಗೋಡ: ಕನ್ನಡ ಸಾಹಿತ್ಯ ಪರಿಷತ್ನ ಆಶ್ರಯದಲ್ಲಿ ಉತ್ತಮ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಸಹದೇವಪ್ಪ ನಡಿಗೇರ ಹೇಳಿದರು.
ತಾಲೂಕಿನ ಇಂದೂರ ಗ್ರಾಮದ ಗುರುಗೋವಿಂದ-ಶರೀಫರ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಗುರುವಾರ ಸಂಜೆ ಜರುಗಿದ ಕಸಾಪ 108ನೇ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಸಾಪ ಕನ್ನಡಿಗನ ಸಾರ್ವಭೌಮ ಸಂಸ್ಥೆ ಅದನ್ನು ಉಳಿಸಿ ಬೆಳೆಸಬೇಕು. ತಾಲೂಕಿನ ಕವಿಗಳು ಮತ್ತು ಅಜೀವ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಭಾಗಿಯಾಗಬೇಕು ಎಂದರು. ನಿಕಟಪೂರ್ವ ಅಧ್ಯಕ್ಷ ಡಾ.ಪಿ.ಪಿ.ಛಬ್ಬಿ ಮಾತನಾಡಿ ಎಲೆ ಮರೆಯ ಕಾಯಿಯಂತೆ ಇರುವ ತಾಲೂಕಿನ ಸಾಹಿತಿಗಳನ್ನು ಗುರುತಿಸಿ ಅವರ ಪುಸ್ತಕಗಳನ್ನು ಮುದ್ರಿಸಲು ಸಹಾಯ ಮಾಡಿ ಅವರನ್ನು ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬರಲ್ಲೂ ಸಾಹಿತ್ಯದ ಬಗ್ಗೆ ಅಭಿರುಚಿ ಇರಬೇಕು ಎಂದರು. ಸಾಹಿತಿ ಚಿದಾನಂದ ಪಾಟೀಲ ಕನ್ನಡ ಸಾಹಿತ್ಯ ಪರಿಷತ್ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿದರು. ವಿ.ಎಸ್.ಕೊಣಸಾಲಿ ಮಾತನಾಡಿದರು.
ಈ ವೇಳೆ ಎಸ್.ಕೆ.ಬೋರ್ಕರ, ಎಸ್.ಬಿ.ಹೂಗಾರ, ರಾಮಚಂದ್ರ ಕಲಾಲ, ಸುಭಾಸ ವಡ್ಡರ, ಆರ್.ಜೆ.ಬೆಳ್ಳೆನವರ, ಶಾರದಾ ರಾಠೋಡ ಹಾಗೂ ಅಜೀವ ಸದಸ್ಯರು ಉಪಸ್ಥಿತರಿದ್ದರು. ಶಶಾಂಕ ಪ್ರಾರ್ಥಿಸಿದರು. ವಿನಾಯಕ ಶೇಟ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಎಸ್.ಡಿ.ಮುಡೆಣ್ಣವರ ಕಾರ್ಯಕ್ರಮ ನಿರೂಪಿಸಿದರು.