ಕನ್ನಡ ಸಾಹಿತ್ಯ ಪರಿಷತ್ತು ವಿಶ್ವವ್ಯಾಪಿಯಾಗಿ ಬೆಳಗಬೇಕು: ಡಾ.ಮಹೇಶ್ ಜೋಶಿ
ಬಳ್ಳಾರಿ 03: ಕನ್ನಡಿಗರ ಸ್ವಾಭಿಮಾನದ ಸ್ವಾಯತ್ತ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಕೆಲ ವ್ಯಕ್ತಿಗಳಿಗೆ, ಗುಂಪುಗಳಿಗೆ, ಜಾತಿಗೆ ಮತ್ತು ಒಂದು ಪ್ರದೇಶಕ್ಕೆ ಸೀಮಿತವಾಗಬಾರದು. ಅದು ವಿಶ್ವವ್ಯಾಪಿಯಾಗಿ ಬೆಳಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ನಾಡೋಜ ಡಾ.ಮಹೇಶ ಜೋಶಿ ಅಭಿಪ್ರಾಯ ಪಟ್ಟರು.
ಪತ್ರಿಕಾ ಭವನದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಚುನಾವಣೆಗೆ ನಾನೊಬ್ಬ ಸೇವಾ ಆಕಾಂಕ್ಷಿ ಅಷ್ಟೇ. ದೂರದರ್ಶನ ವಾಹಿನಿಯ ಮಹಾ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಿದ್ದ ನನಗೆ ಅಧಿಕಾರದ ಲಾಲಸೆ ಇಲ್ಲ. ಪುನರ್ವಸತಿಗಾಗಿ ಈ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಜನರಿಂದ ದೂರಾಗಿದ್ದ ದೂರದರ್ಶನವನ್ನು ಹೇಗೆ ಸಮೀಪದರ್ಶನವಾಗಿಸಿರಿಸಿದ್ದೆನೋ ಅದೇ ಮಾದರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಬಳಿ ಕೊಂಡೊಯ್ಯುತ್ತೇನೆ. ಮೇ 9 ರಂದು ನಡೆಯಲಿರುವ ರಾಜ್ಯ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಮ್ಮ ವಿಶ್ವಾಸಭರಿತ ಮತ ನೀಡಬೇಕೆಂದು ಪರಿಷತ್ತಿನ ಮತದಾರರಲ್ಲಿ ವಿನಂತಿಸಿಕೊಂಡರು.
ನಿಮ್ಮೆಲ್ಲರ ಆಶೀರ್ವಾದದಿಂದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾದರೆ ವಿಕಲಚೇತನರಿಗೆ ಮತ್ತು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಸೈನಿಕರಿಗೆ ಉಚಿತ ಸದಸ್ಯತ್ವ ಒದಗಿಸುತ್ತೇನೆ. ಕನ್ನಡಕ್ಕಾಗಿ ಹಾತೊರೆಯುವವರಿಗೆ 250 ರೂ. ಶುಲ್ಕದಲ್ಲಿ ಸದಸ್ಯತ್ವ ನೀಡುತ್ತೇನೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ನಮ್ಮೆಲ್ಲರ ಅನ್ನದ ಭಾಷೆಯಾಗಬೇಕು. ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ಈ ನೆಲದಲ್ಲಿ ನಿರಂತರವಾಗಿ ಕನ್ನಡದ ಕಹಳೆ ಮೊಳಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗನದ್ದೇ ಪಾರುಪತ್ಯ ಇರಬೇಕು. ಆ ದಿಸೆಯಲ್ಲಿ ನನ್ನ ಸೇವೆ ಮುಂದುವರಿಯುತ್ತದೆ. ನನ್ನ ಅವಧಿಯಲ್ಲಿ ಮಹಿಳೆಯರ ಅಧ್ಯಕ್ಷತೆಯಲ್ಲಿಯೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುತ್ತೇನೆ. ಜಿಲ್ಲಾ ಕ್ಷೇತ್ರದಲ್ಲೂ ಕೂಡ ಮಹಿಳೆಯರು ಮುಂದೆ ಬರಬೇಕು. ಬಳ್ಳಾರಿ ನೆಲದಲ್ಲಿ ಅಖಿಲ ಭಾರತ ಮಟ್ಟದ ಸಮ್ಮೇಳನ ನಡೆಸುವ ಉದ್ದೇಶ ನನಗಿದೆ ಎಂದರು.
ಚುನಾವಣಾ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸಿದ್ದೇನೆ. ಪರಿಷತ್ತಿನಲ್ಲಿ 3 ಲಕ್ಷ 10 ಸಾವಿರ ಸದಸ್ಯರಿದ್ದಾರೆ. ಎಲ್ಲರನ್ನೂ ಸಂಪರ್ಕಿಸುತ್ತೇನೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಓಲೈಸುತ್ತಿದ್ದೇನೆ. ನನ್ನದು ಮನುಜ ಮತ-ವಿಶ್ವ ಪಥ. ನಾನು ಯಾರ ಪರವೂ ಅಲ್ಲ, ವಿರೋಧಿಯೂ ಅಲ್ಲ. ಕನ್ನಡದ ಪರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಯಾರು ಬೇಕಾದರೂ ಸ್ಪರ್ಧಿಸಲಿ. ಎಲ್ಲರೂ ಸೇರಿ ಕನ್ನಡಮ್ಮನ ರಥವನ್ನು ಎಳೆಯೋಣ. ನನ್ನ ತಂಡದಲ್ಲಿ ಎಲ್ಲರೂ ಇದ್ದಾರೆ. ಎಲ್ಲರೂ ಸ್ವಯಂ ಪ್ರೇರಿತರಾಗಿ ಕನ್ನಡಕ್ಕಾಗಿ ದುಡಿಯುತ್ತಿದ್ದಾರೆ. ಈಗಾಗಲೇ 11 ಜಿಲ್ಲೆಗಳಲ್ಲಿ ಸಂಚರಿಸಿದ್ದೇನೆ. ಏಪ್ರಿಲ್ ವೇಳೆಗೆ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸುತ್ತೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಅಂಗವಲ್ಲ. ಇದು ಪ್ರತಿಯೊಬ್ಬ ಕನ್ನಡಿಗನ ಸ್ವತ್ತು. ಕನ್ನಡಿಗರೆಲ್ಲರ ಸಹಕಾರದಿಂದ ದೂರದರ್ಶನವನ್ನು ಸ್ವಾಯತ್ತ ಸಂಸ್ಥೆಯಾಗಿ ಬೆಳೆಸಿದಂತೆ ಕನ್ನಡ ಸಾಹಿತ್ಯ ಪರಿಷತ್ತನ್ನು ಕೂಡ ಅದೇರೀತಿ ಬೆಳೆಸುವ ಉದ್ದೇಶವಿದೆ. ಒಟ್ಟಿನಲ್ಲಿ ಪರಿಷತ್ತಿನಲ್ಲಿ ಆಮೂಲಾಗ್ರ ಬದಲಾವಣೆ ತರುವ ಯೋಚನೆ ಇದೆ. ಪರಿಷತ್ತು ಯಾರ ಅವಲಂಬನೆ ಇಲ್ಲದೇ ತನ್ನ ಕಾಲಮೇಲೆ ತಾನು ನಿಲ್ಲಬೇಕು. ಇದಕ್ಕಾಗಿ ತಜ್ಞರ ಸಮಿತಿ ರಚಿಸುತ್ತೇನೆ. ಕನ್ನಡಕ್ಕಾಗಿ ಕ್ಷಣ ಕ್ಷಣವೂ ದುಡಿಯುವ ಇರಾದೆ ಇದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ್, ಸಂತ ಶಿಶುನಾಳ ಷರೀಫರ ವಂಶಸ್ಥ ನಬಿಸಾಬ್ ಕುಷ್ಟಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾದ ಚಾ.ಮ.ಗಂಗಾಧರಯ್ಯ, ರಾಮ ಪ್ರಸಾದ್, ಮಾಜಿ ಸೈನಿಕ ವಿರೂಪಾಕ್ಷಯ್ಯ, ಆಪ್ತರಾದ ಚೆನ್ನಬಸಪ್ಪ ಕೋಟಗಿ ಇನ್ನಿತರರು ಇದ್ದರು.