ರಾಮಲಿಂಗಯ್ಯ ಶ್ರೀಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ತಾಳಿಕೋಟಿ: ನಾಡಿನ ಖ್ಯಾತ ಜ್ಯೋತಿಷ್ಯರತ್ನ ಭಾವೈಕ್ಯತೆಯ ಪ್ರತೀಕವಾಗಿರುವ ಚಬನೂರ ಹಿರೇಮಠದ ಪರಮ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳಿಗೆ ಬೆಂಗಳೂರಿನ ಆತ್ಮಶ್ರೀ ಕನ್ನಡ ಪ್ರತಿಷ್ಠಾನ ಸಂಸ್ಥೆ ವತಿಯಿಂದ ಈ ವರ್ಷದ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಶನಿವಾರ ಬೆಂಗಳೂರಿನ ನಯನ ಸಭಾಂಗಣ ಕನ್ನಡ ಭವನದಲ್ಲಿ ಜರುಗಿದ ‘ಕನ್ನಡ ಹಬ್ಬ ಮತ್ತು ಸಂಗೀತ ಸೌರಭ’ ವಿಶೇಷ ಕಾರ್ಯಕ್ರಮ ಹಾಗೂ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವ ಸಮರೆ್ಣ ನೀಡಲಾಯಿತು.
ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಗಣನೀಯವಾದ ಸೇವೆಯನ್ನು ಸಲ್ಲಿಸುತ್ತಿರುವ ರಾಮಲಿಂಗಯ್ಯ ಶ್ರೀಗಳಿಗೆ 2018ರಲ್ಲಿ ಕರ್ನಾಟಕ ರಾಜ್ಯ ‘ಜ್ಯೋತಿಷ್ಯರತ್ನ ಪ್ರಶಸ್ತಿ’, 2019ರಲ್ಲಿ ‘ಭಾರತ ಸೇವಾರತ್ನ ಪ್ರಶಸ್ತಿ’, ‘ರಂಗ ನಕ್ಷತ್ರ ಪ್ರಶಸ್ತಿ’, ‘ರಾಷ್ಟ್ರೀಯ ರತ್ನ ಪ್ರಶಸ್ತಿ’, 2020ರಲ್ಲಿ ‘ಜ್ಯೋತಿಷ್ಯ ಶಾಸ್ತ್ರ ಸಾರ್ವಭೌಮ ಪ್ರಶಸ್ತಿ’ ಹೀಗೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ.
ಪ್ರಗತಿಪರ ಚಿಂತಕರು ಆಗಿರುವ ಶ್ರೀಗಳು ಈ ಭಾಗದಲ್ಲಿ ಸರ್ವಧರ್ಮೀಯರ ಮಧ್ಯೆ ಸಾಮರಸ್ಯವನ್ನು ತರಲು ಹಗಲಿರುಳು ಎನ್ನದೇ ಶ್ರಮಿಸುತ್ತಿದ್ದಾರೆ. ‘ಜಂಗಮ ಜೋಳಿಗೆ’ ಎಂಬ ವಿಶೇಷ ಅಭಿಯಾನದ ಮೂಲಕ ಸಾಮಾಜಿಕ ಕೆಡುಕುಗಳ ನಿರ್ಮೂಲನೆಗಾಗಿ ಪ್ರಯತ್ನಿಸುತ್ತಿದ್ದಾರೆ. ಇದೀಗ ಆತ್ಮಶ್ರೀ ಕನ್ನಡ ಪ್ರತಿಷ್ಠಾನವು ಅವರ ಈ ಎಲ್ಲ ಸಾಮಾಜಿಕ ಸೇವೆಗಳನ್ನು ಗುರುತಿಸಿ ಅವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.