ವಿಜಯನಗರ ಜಿಲ್ಲೆ ಅಭಿವೃದ್ಧಿ ಕಾರ್ಯಗಳಿಗಾಗಿ ರೂ.425 ಕೋಟಿ ಅನುದಾನ ಹಂಚಿಕೆ: ಸಚಿವ ಆನಂದಸಿಂಗ್
ಹೊಸಪೇಟೆ(ವಿಜಯನಗರ) 17: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ವಿಜಯನಗರ ಜಿಲ್ಲೆಗೆ ರೂ.425.35 ಕೋಟಿ ಅನುದಾನ ಹಂಚಿಕೆಯಾಗಿದ್ದು, ಒಟ್ಟು 1505 ಕಾಮಗಾರಿಗಳನ್ನು ಕೈಗೆತ್ತಿಕೊಂಡು 899 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ ರೂ.178.21 ಕೋಟ ಅನುದಾನ ವೆಚ್ಚ ಮಾಡಲಾಗಿದೆ ಎಂದು ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು.
ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ನಿಮಿತ್ತ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಬಾಕಿ ಉಳಿದ 606 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಸಚಿವ ಸಿಂಗ್ ಅವರು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ದೃಷ್ಟಿಯಿಂದ ಸಂವಿಧಾನ ತಿದ್ದುಪಡಿಕಾಯ್ದೆ 371(ಜೆ) ಜಾರಿಗೆ ತರಲಾಗಿದೆ. ಅದರಂತೆ 2013ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯನ್ನು ಕಲುಬುರಗಿಯಲ್ಲಿ ಸ್ಥಾಪಿಸಿಸಲಾಗಿದ್ದು, ಇದು ಈ ಭಾಗದ 40 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೂ ಸೇರಿದಂತೆ, ಎಲ್ಲಾ ಭಾಗಗಳ ಮೂಲಭೂತ ಸೌಕರ್ಯ, ಆರೋಗ್ಯ, ಸಾಮಾಜಿಕ ರಸ್ತೆ ಸಂಪರ್ಕ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಅನುದಾವನ್ನು ಮೀಸಲಿರಿಸಲಾಗಿದೆ. ಅದರಡಿ ವಿಜಯನಗರ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ರೂ.425.35 ಕೋಟಿ ಅನುದಾನವನ್ನು ಕೆಕೆಆರ್ಡಿಬಿ ನೀಡಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಗೆ ಒಳಪಡುವ 6 ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಶೇ.80 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಹಾಗೂ ಇತರೆ ಜಿಲ್ಲೆಗಳಲ್ಲಿ ಈ ಭಾಗದ ಜನರಿಗಾಗಿ ಶೇ. 8 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇದರ ಲಾಭವನ್ನು ಪಡೆಯಲು ಇಲ್ಲಿಯವರೆಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 1,41,877 ಅಭ್ಯರ್ಥಿಗಳಿಗೆ 371(ಜೆ) ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ. ಇದರಿಂದಾಗಿ ಶಿಕ್ಷಣದಲ್ಲಿ ಹಾಗೂ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಮೀಸಲಾತಿಯನ್ನು ಪಡೆದುಕೊಂಡಿದ್ದಾರೆ ಎಂದರು.
ಕೋವಿಡ್ ಸೊಂಕನ್ನು ಸಮರ್ಥವಾಗಿ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ ವಿವಿಧ ಇಲಾಖೆಗಳ ಮೂಲಕ ಹಲವಾರು ಯೋಜನೆಗಳನ್ನು ಜಿಲ್ಲಾದ್ಯಾಂತ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವ ಆನಂದಸಿಂಗ್ ಅವರು ತಿಳಿಸಿದರು.
ವಿಜಯನಗರ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯೋಜನೆಯೊಂದಿಗೆ ಈಗಾಗಲೇ 09 ಡಿ.ಸಿ.ಹೆಚ್.ಸಿ, 04 ಖಾಸಗಿ ಡಿ.ಸಿ.ಹೆಚ್. ಒಟ್ಟು 13 ಆಸ್ಪತ್ರೆಗಳು ಇದ್ದು ಇಲ್ಲಿ 111 ಸಾಮಾನ್ಯ ಬೆಡ್ಗಳು, 318 ಆಕ್ಸಿನೇಟೆಡ್ ಬೆಡ್ಗಳು, 14 ಐ.ಸಿ.ಯು ಬೆಡ್ಗಳು ಹಾಗೂ 44 ಐ.ಸಿ.ಯು ವೆಂಟಿಲೇಟರ್ ಬೆಡ್ಗಳು ಹೀಗೆ ಒಟ್ಟು 492 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕೋವಿಡ್ 2ನೇ ಅಲೆಯನ್ನು ನಿಯಂತ್ರಿಸಲು ವಿಜಯನಗರ ಜಿಲ್ಲೆಯ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ತೋರಣಗಲ್ಲಿನಲ್ಲಿ ಜೆ.ಎಸ್.ಡಬ್ಲ್ಯೂ ಸ್ಟೀಲ್ ವರ್ಕ್ಸ್ರವರ ಸಹಕಾರದೊಂದಿಗೆ 1 ಸಾವಿರ ಹಾಸಿಗೆಗಳ ಆಕ್ಸಿಜನ್ ಸೌಲಭ್ಯ ಹೊಂದಿರುವ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಎನ್ಎಂಡಿಸಿಯ ಸಿಎಸ್ಆರ್ ಅನುದಾನದ ಅಡಿ ರೂ.8.03 ಕೋಟಿ ವೆಚ್ಚದಲ್ಲಿ 50 ವೆಂಟಿಲೇಟರ್ಗಳನ್ನು ಖರೀದಿಸಲಾಗಿದ್ದು, ಜಿಲ್ಲೆಯಲ್ಲಿ ಆಧ್ಯತೆಯ ಮೇರೆಗೆ ಅಳವಡಿಸಲಾಗುವುದು ಎಂದರು.
*8,64,450 ಡೋಸ್ ಕೋವಿಡ್ ಲಸಿಕೆ ನೀಡಿಕೆ: ವಿಜಯನಗರ ಜಿಲ್ಲೆಯಲ್ಲಿ 13,03,083 ಜನರಿಗೆ ಕೋವಿಡ್ ಲಸಿಕೆ ಹಾಕುವ ಗುರಿಯಿದ್ದು, ಇದರಲ್ಲಿ 6,56,768 ಮೊದಲನೆಯ ಡೋಸ್ ಹಾಗೂ 2,07,682 ಎರಡನೆಯ ಡೋಸ್ ಹೀಗೆ ಒಟ್ಟು 8,64,450 ಡೋಸ್ ಕೋವಿಡ್ ಲಸಿಕೆಯನ್ನು ಈಗಾಗಲೇ ನೀಡಲಾಗಿದೆ ಎಂದು ಸಚಿವ ಆನಂದಸಿಂಗ್ ಅವರು ವಿವರಿಸಿದರು.
ಆಮ್ಲಜನಕ ಸಂಗ್ರಹಣಾ ಘಟಕದಿಂದ ಕೋವಿಡ್ 2ನೇ ಅಲೆಯಲ್ಲಿ ಉಂಟಾದ ಉಸಿರಾಟದ ತೊಂದರೆಯ ಪ್ರಕರಣಗಳನ್ನು ನಿಭಾಯಿಸಲು ಹೊಸಪೇಟೆಯ ಎಂ.ಸಿ.ಹೆಚ್ ಆಸ್ಪತ್ರೆಯಲ್ಲಿ 2 ಸಾವಿರ ಲೀಟರ್ ಆಕ್ಸಿಜನ್ ಪ್ಲಾಟ್ಗಳನ್ನು ಸ್ಥಾಪಿಸಲಾಗಿದೆ. ಆಮ್ಲಜನಕ ಉತ್ಪಾದನಾ ಘಟಕದಿಂದ ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಲು ಹೊಸಪೇಟೆಯಲ್ಲಿ 800, ಹರಪನಹಳ್ಳಿಯಲ್ಲಿ 330, ಹಡಗಲಿಯಲ್ಲಿ 500, ಹಗರಿಬೊಮ್ಮನಹಳ್ಳಿಯಲ್ಲಿ 500 ಎಲ್.ಪಿ.ಎಮ್. ಉತ್ಪಾದನಾ ಸಾಮರ್ಥ್ಯ ಸೇರಿದಂತೆ ಒಟ್ಟು 2130 ಎಲ್ಪಿಎಂ ಉತ್ಪಾದನಾ ಸಾಮರ್ಥ್ಯದ ಘಟPಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಕೂಡ್ಲಿಗಿಯಲ್ಲಿ 500 ಎಲ್ಪಿಎಮ್ ಉತ್ಪಾದನಾ ಸಾಮರ್ಥ್ಯದ ಘಟಕವನ್ನು ಹೆಚ್ಎಎನ್ಎಸ್, ಎನ್ಜಿಒ ಸಹಯೋಗದಲ್ಲಿ ಸ್ಥಾಪಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಹೊಸಪೇಟೆಯಲ್ಲಿರುವ 100 ಹಾಸಿಗೆಗಳ ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಅನುಮೋದನೆ ದೊರೆತಿದೆ ಹಾಗೂ 60 ಬೆಡ್ಗಳ ಎಮ್.ಸಿ.ಹೆಚ್ ಆಸ್ಪತ್ರೆಯ ಕಾಮಗಾರಿಯು ಅಂತಿಮ ಹಂತದ ಪ್ರಗತಿಯಲ್ಲಿದೆ ಎಂದು ಸಚಿವರು ಅವರು ವಿವರಿಸಿದರು.
ಕೋವಿಡ್ 19 ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲೆಯಾದ್ಯಂತ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರದಿಂದ ಕೋವಿಡ್ 3ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲೆಯಾದ್ಯಂತ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಗಳನ್ನು ಆರಂಭಿಸಿ ತೀವ್ರ ಅಪೌಷ್ಟಿಕತೆಯುಳ್ಳ 386 ಮಕ್ಕಳನ್ನು ಆರೈಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
*ಆರೋಗ್ಯ ನಂದನ ಅಡಿ 53,882 ಮಕ್ಕಳ ಆರೋಗ್ಯ ತಪಾಸಣೆ: ಕೋವಿಡ್ 3ನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಕ್ಕಳ ಆರೈಕೆಯ ಮಹತ್ವಾಕಾಂಕ್ಷಿ ಆರೋಗ್ಯ ನಂದನ ಮಕ್ಕಳ ತಪಾಸಣಾ ಮತ್ತು ಚಿಕಿತ್ಸಾ ಅಭಿಯಾನದಡಿಯಲ್ಲಿ 0 ದಿಂದ 18 ವರ್ಷದವರೆಗಿನ 4,58,352 ಮಕ್ಕಳಲ್ಲಿ ಈಗಾಗಲೆ 53,882 ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಸಚಿವ ಸಿಂಗ್ ಅವರು ವಿವರಿಸಿದರು.
ಹಾಲಿ ಇರುವ 70 ಅಂಬ್ಯುಲೇನ್ಸ್ ದೊಂದಿಗೆ ಹೊಸದಾಗಿ 05 ಅಂಬ್ಯುಲೇನ್ಸ್ಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಅನುದಾನದ ಅಡಿಯಲ್ಲಿ ಖರೀದಿಸಲಾಗಿದೆ. 3ನೇ ಹಂತದಲ್ಲಿ ಮಕ್ಕಳ ಆರೋಗ್ಯದ ಮೇಲೆ ಕೋವಿಡ್ ಪರಿಣಾಮ ಬೀರುವ ಸಾದ್ಯತೆ ಹಿನ್ನಲೆಯಲ್ಲಿ ಎಲ್ಲ ತಾಲ್ಲೂಕ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕರಿಗೆ ಮತ್ತು ಟೆಕ್ನಿಷಿಯನ್ ಅವರಿಗೆ ತುರ್ತು ನಿಗಾ ಘಟಕ ಮತ್ತು ಮಕ್ಕಳ ಆರೈಕೆ ವಿಭಾಗದಲ್ಲಿ ನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗಿದೆ ಎಂದರು.
ವಿಶ್ವದಾದ್ಯಂತ ಹರಡಿದ ಕೋವಿಡ್ ಸಾಂಕ್ರಾಮಿಕ ರೋಗ 2020 ರ ಮಾರ್ಚ್ನಿಂದ ಬಳ್ಳಾರಿ ಜಿಲ್ಲೆಗೂ ಕೂಡ ಅವರಿಸಿ ಅಂದಿನಿಂದ ಇಲ್ಲಿಯವರೆಗೂ ನಿರಂತರವಾಗಿ ಕಾಡಿದ 1 ಮತ್ತು 2 ನೇ ಅಲೆ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಠಿ ಮಾಡಿ ಹಲವು ಸಂಕಷ್ಟಗಳನ್ನುಂಟು ಮಾಡಿದ್ದಲ್ಲದೇ ಕೆಲವು ಜನರು ಪ್ರಾಣವನ್ನು ಕಳೆದುಕೊಳ್ಳುವಂತೆ ಮಾಡಿತು. ಇಂತಹ ಆತಂಕಕಾರಿ ಸನ್ನಿವೇಶದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ವೈದ್ಯಾಧಿಕಾರಿಗಳು, ಸಂಘಸಂಸ್ಥೆಗಳು, ಸ್ವಯಂ ಸೇವಕರು, ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ಉದ್ದಿಮೆದಾರರು ಜಿಲ್ಲೆಯ ಜನರಲ್ಲಿ ಆತ್ಮಸ್ಥೈರ್ಯ ತುಂಬುವುದರೊಂದಿಗೆ ಕೋವಿಡ್ ಅನ್ನು ಸಮರ್ಥವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕೈ ಜೋಡಿಸಿದಕ್ಕೆ ಸಚಿವರು ಕೃತಜ್ಞತೆಗಳನ್ನು ಸಲ್ಲಿಸಿದರು.
ಕರೋನಾದಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವಾನವನ್ನು ತಿಳಿಸಬಯಸುತ್ತದೆ. ಮುಂಬರುವ ದಿನಗಳಲ್ಲಿ ಕೋವಿಡ್ ಮೂರನೇ ಅಲೆಯು ಹರಡುವ ಮುನ್ನಚ್ಚರಿಕೆಯನ್ನು ತಜ್ಞರು ನೀಡಿರುವುದರಿಂದ ಹಿಂದಿನಂತೆಯೇ ಜಿಲ್ಲಾಡಳಿತಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ. 3 ನೇ ಅಲೆಯು ಸೃಷ್ಠಿ ಮಾಡಬಹುದಾದ ಸನ್ನಿವೇಶವನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ವಿಜಯನಗರ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯೊಲು ಕಂಕಣಬದ್ಧರಾಗಿರೋಣ ಎಂದು ತಿಳಿಸಿದ ಸಚಿವರು ಮುಂಬರುವ ದಿನಗಳಲ್ಲಿ ಅಭಿವೃದ್ದಿ ಸಾಧಿಸುವ ದೃಢ ವಿಶ್ವಾಸವನ್ನು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಆನಂದಸಿಂಗ್ ಅವರು ಕೋವಿಡ್ ಲಸಿಕೆ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸಿದ್ಧಪಡಿಸಿದ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದರು. ಗ್ರಾಪಂಗಳಿಗೆ ಆರೋಗ್ಯ ಕಿಟ್ಗಳನ್ನು ಸಹ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಅಶೋಕ ಜೀರೆ, ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಆಯುಕ್ತರಾದ ಅನಿರುದ್ಧ ಶ್ರವಣ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಸಹಾಯಕ ಆಯುಕ್ತ ಸಿದ್ಧರಾಮೇಶ್ವರ, ಜಿಪಂ ಉಪಕಾರ್ಯದರ್ಶಿ ತಿಮ್ಮಪ್ಪ, ತಹಸೀಲ್ದಾರ್ ವಿಶ್ವನಾಥ ಮತ್ತಿತರರು ಇದ್ದರು.