22ರಂದು ಕನ್ನಡ ಭವನದಲ್ಲಿ ಕಲಬುರಗಿ ಚಿತ್ರಸಂತೆ
ಕಲಬುರ್ಗಿ 19: ಚಿತ್ರಕಲಾಕೃತಿಗಳು ಜನಸಾಮಾನ್ಯರಿಗೆ ತಲಪುವಂತೆ ಮಾಡಬೇಕೆನ್ನುವ ದೆಸೆಯಲ್ಲಿ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಾಗೂ ವಿಕಾಸ ಅಕಾಡೆಮಿ, ಚೈತನ್ಯಮಯಿ ಟ್ರಸ್ಟ್, ದಿ ಆರ್ಟ ಇಂಟಿಗ್ರೇಶನ್ ಸೊಸೈಟಿ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ಬಿಸಿಲು ಆರ್ಟ್ ಗ್ಯಾಲರಿ, ರೋಟರಿ ಕ್ಲಬ್ ಆಫ್ ಗುಲಬರ್ಗಾ ನಾರ್ಥ್, ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಕಲಬುರಗಿ ಇವುಗಳ ಸಹಕಾರದೊಂದಿಗೆ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾದ ಕಲಬುರಗಿ ನಗರದ ಕನ್ನಡ ಭವನದಲ್ಲಿ 22ಭಾನುವಾರದಂದು ಒಂದು ದಿನದ 13ನೇ ಕಲಬುರಗಿ ಚಿತ್ರಸಂತೆಯನ್ನು ಆಯೋಜಿಸಲಾಗಿದೆ. ಹಿರಿಯ ಚಿತ್ರಕಲಾವಿದರು, ಯುವ ಚಿತ್ರಕಲಾವಿದರು ಮತ್ತು ಕಲಾವಿದ್ಯಾರ್ಥಿಗಳು ಸುಮಾರು 1500ಕ್ಕೂ ಹೆಚ್ಚು ವಿವಿಧ ಮಾಧ್ಯಮದ ಚಿತ್ರಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ವಿವಿಧ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 125ಕ್ಕೂ ಹೆಚ್ಚು ಕಲಾವಿದರು ಕಲಾ ಮಳಿಗೆಯನ್ನು ಹಾಕಲಿದ್ದಾರೆ.
ಈ ಕಲಬುರಗಿ ಚಿತ್ರಸಂತೆಯಲ್ಲಿ ಪ್ರದರ್ಶನಗೊಳ್ಳಲಿರುವ ನಿಸರ್ಗಚಿತ್ರ, ಅಮೂರ್ತಚಿತ್ರ, ನೈಜಶೈಲಿಯ ಚಿತ್ರಗಳು, ಗ್ರಾಫಿಕ್ ಮಾಧ್ಯಮದ ಕಲಾಕೃತಿಗಳು, ಸಂಪ್ರದಾಯ ಶೈಲಿಯ ಚಿತ್ರಗಳು, ಕೋಲಾಜ್ ಮಾಧ್ಯಮದ ಚಿತ್ರಗಳು ಮತ್ತು ಶಿಲ್ಪಕಲಾಕೃತಿಗಳು ಹೀಗೆ ದೃಶ್ಯಕಲೆಯ ವಿವಿಧ ಪ್ರಕಾರದ ಕಲಾಕೃತಿಗಳನ್ನು ನಗರದ ವಾಣಿಜ್ಯೋದ್ಯಮಿಗಳು, ವೈದ್ಯರು, ಇಂಜೀನೀಯರಗಳು, ವಾಸ್ತುಶಿಲ್ಪಿಗಳು ಮತ್ತು ಹೊಟೆಲ್ ಉದ್ಯಮಿಗಳಲ್ಲದೇ ಜನಸಾಮಾನ್ಯರು ಕೂಡಾ ಅತ್ಯಂತ ಕಡಿಮೆ ಬೆಲೆಗಳಲ್ಲಿ ತಮಗೆ ಇಷ್ಟವಾದ ಚಿತ್ರಕಲಾಕೃತಿಗಳನ್ನು ಖರೀದಿಸಿ ತಮ್ಮ ಮನೆಯ ಗೋಡೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಈ ಕಲಬುರಗಿ ಚಿತ್ರಸಂತೆಯಲ್ಲಿ ನೂರು ರೂಪಾಯಿಗಳಿಂದ ಹಿಡಿದು ಒಂದು ಲಕ್ಷ ರೂಪಾಯಿಗಳವರೆಗಿನ ಬೆಲೆಯ ಕಲಾಕೃತಿಗಳು ಇರುತ್ತವೆ. ಜೊತೆಗೆ ಚಿತ್ರಸಂತೆ ನಡೆಯುವ ಸ್ಥಳದಲ್ಲಿ ಭಾವಚಿತ್ರ ರಚಿಸುವ ಚಿತ್ರಕಲಾವಿದರು ಇರುವುದರಿಂದ ನಿಮ್ಮದೇ ಭಾವಚಿತ್ರವನ್ನು ರಚಿಸಿಕೊಂಡು ಸಂತೋಷ ಪಡಬಹುದು. ಒಟ್ಟಾರೆ ಸಾವಿರಾರು ಕಲಾವಿದರು ಕಲಾಸಕ್ತರು ಮತ್ತು ಕಲಾಪೋಷಕರನ್ನು ಒಂದೆಡೆ ಸೇರಿಸುವ ಈ ಚಿತ್ರಸಂತೆ ಒಂದು ದಿನದ ಮಟ್ಟಿಗೆ ನಗರದ ಕನ್ನಡ ಭವನದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿ ಸಾರ್ವಜನಿಕರಲ್ಲಿ ಕಲಾಭಿಮಾನ ಬೆಳಸಲಿದೆ.
ಸಾಮಾನ್ಯವಾಗಿ ದೊಡ್ಡ ದೊಡ್ಡ ಮೆಟ್ರೊ ನಗರಗಳಲ್ಲಿ ನಡೆಯುವ ಕಲಾಮೇಳಗಳು, ಪ್ರತಿಷ್ಠಿತ ಕಲಾಗ್ಯಾಲರಿಗಳಲ್ಲಿ ನಡೆಯುವ ಪ್ರದರ್ಶನಗಳು ತುಂಬಾ ಕಮರ್ಷಿಯಲ್ ಆಗಿರುತ್ತವೆ. ಅಲ್ಲಿ ಜನಸಾಮಾನ್ಯರು ಚಿತ್ರಕಲಾಕೃತಿಗಳನ್ನು ಖರೀದಿಸಲು ಮತ್ತು ಕಲಾಕೃತಿಗಳನ್ನು ವೀಕ್ಷಿಸಲು ಸಾಧ್ಯವಾಗುವದಿಲ್ಲ ಆದರೆ ಕಲಬುರಗಿಯಲ್ಲಿ ನಡೆಯುತ್ತಿರುವ ಈ ಚಿತ್ರಸಂತೆಗೆ ಅದ್ಯಾವುದರ ಸೋಂಕಿರಲ್ಲ. ಕೇವಲ ಶ್ರೀಮಂತರು ಮತ್ತು ವಾಣಿಜ್ಯ ಕಲಾಗ್ಯಾಲರಿಗಳವರು ಮಾತ್ರ ಉತ್ತಮವಾದ ಚಿತ್ರಕಲಾಕೃತಿಗಳನ್ನು ಖರೀದಿಸಬಹುದು ಎಂಬ ಅಪವಾದವನ್ನು ಸುಳ್ಳು ಮಾಡಿ ಶ್ರೀಸಾಮಾನ್ಯನಿಗೂ ಕೈಗೆಟುಕುವ ದರಗಳಲ್ಲಿ ದೊರೆಯಲ್ಲಿ ಎಂಬುದೇ ಈ ಕಲಬುರಗಿ ಚಿತ್ರಸಂತೆಯ ಮುಖ್ಯ ಉದ್ದೇಶವಾಗಿದೆ.
ಈ ಹಿಂದಿನ ಚಿತ್ರಸಂತೆಗಳಲ್ಲಿ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರೇರಣೆ ಹಾಗೂ ಪ್ರೋತ್ಸಾಹ ಪಡೆದು, 13ನೇ ಕಲಬುರಗಿ ಚಿತ್ರಸಂತೆಯನ್ನು ಇನ್ನೂ ಉತ್ತಮ ರೀತಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮಕ್ಕಳಲ್ಲಿ ದೃಶ್ಯಕಲಾ ಪ್ರಜ್ಞೆಯನ್ನು ಬೆಳೆಸಲು ಚಿಕ್ಕಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ಕುಂಭ ಕಲೆಯ ಕಾರ್ಯಾಗಾರವನ್ನು ಏರಿ್ಡಸಲಾಗಿದೆ. ಸುಮಾರು 500ಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸುವ ನೀರೀಕ್ಷೆ ಇದೆ.
ಈ ಕಲಬುರಗಿ ಚಿತ್ರಸಂತೆಯನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ. ಅವರು ಉದ್ಘಾಟಿಸಲಿದ್ದು, ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರ ವರ್ಷಾ ರಾಜೀವ ಜಾನೆ ಅವರು ಉದ್ಘಾಟಿಸಲಿದ್ದಾರೆ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಅವರು ಗೌರವ ಉಪಸ್ಥಿತಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಬಸವರಾಜ ಎಲ್ ಜಾನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಜಗದೀಶ್ವರಿ ಅ ನಾಶಿ, ರೋಟರಿ ಕ್ಲಬ್ ಆಫ್ ಗುಲಬರ್ಗಾ ನಾರ್ಥನ ಅಧ್ಯಕ್ಷ ಆನಂದ ದಂಡೋತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಮತ್ತು ವಾಣಿಜ್ಯೋದ್ಯಮಿ ರಾಧೆಶ್ಯಾಮ ಠಾಕೂರ ಅವರು ಭಾಗವಹಿಸಲಿದ್ದಾರೆ. ಚೈತನ್ಯಮಯಿ ಟ್ರಸ್ಟ್‌ನ ನಿರ್ದೇಶಕ ಮತ್ತು ಹಿರಿಯ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರ ಮತ್ತು ಪ್ರಾತ್ಯಕ್ಷತೆಗಳು:
ಪುಷ್ಪಹಸ್ತ ನೃತ್ಯ ಕಲಾ ಕೇಂದ್ರದ ಕಲಾವಿದರಿಂದ ಭರತನಾಟ್ಯ ಪ್ರದರ್ಶನ, ಸಂಗಯ್ಯ ಹಳ್ಳದಮಠ ಮತ್ತು ತಂಡದವರಿಂದ ರಂಗಗೀತೆ, ತತ್ವಪದಗಳು ಮತ್ತು ಪರಿಸರ ಗೀತೆಗಳ ಪ್ರಸ್ತುತಿ ಹಾಗೂ ಅಂತರಂಗ ಸಾಂಸ್ಕೃತಿಕ ಕಲಾ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶಿಲ್ಪಕಲಾವಿದ ದಾನಯ್ಯ ಚೌಕಿಮಠ ಅವರಿಂದ ಕುಂಭಕಲೆ ಪ್ರಾತ್ಯಕ್ಷತೆ ಮತ್ತು ಕಾರ್ಯಾಗಾರ, ಶಿಲ್ಪಕಲಾವಿದ ಗೋಪಾಲ ಕೆ.ಪಿ. ಅವರಿಂದ ಭಾವಶಿಲ್ಪ ಪ್ರಾತ್ಯಕ್ಷತೆ, ಚಿತ್ರಕಲಾವಿದ ಗೀರೀಶ ಬಿ ಕುಲಕರ್ಣಿ ಅವರು ಸೃಜನಶೀಲ ವರ್ಣಚಿತ್ರ ಪ್ರಾತ್ಯಕ್ಷತೆ ನಡೆಸಿಕೊಡಲಿದ್ದಾರೆ.