ಪತ್ರಕರ್ತರ ಕುಟುಂಬಕ್ಕೆ ಅಕ್ರಮ ಅಕ್ಕಿ ದಂಧೆಯ ವರದಿ ಮಾಡದಂತೆ ಜೀವ ಬೆದಿರಿಕೆ ಹಾಕಿದ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕರವೇ ಆಗ್ರಹ
ಲೋಕದರ್ಶನ ವರದಿ
ವಿಜಯಪುರ 03: ಪತ್ರಕರ್ತ ಪರಶುರಾಮ ಶಿವಶರಣ ಅವರು ಮನೆಯಲ್ಲಿ ಇಲ್ಲದ ವೇಳೆ ಅವರ ಮನೆಯ ಮುಂದೆ ಬಂದು ಸರ್ಕಾರಿ ಯೋಜನೆ ಅನ್ನ ಭಾಗ್ಯ ಅಕ್ರಮ ಅಕ್ಕಿ ದಂದೆಯ ಕುರಿತು ವರದಿ ಮಾಡದಂತೆ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ, ಪತ್ರಕರ್ತ ಪರಶುರಾಮ ಶಿವಶರಣ ಅವರು ಮನೆ ಇಲ್ಲದ ವೇಳೆ ಮನೆಗೆ ತೆರಳಿ ಅವರ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಪ್ರಕರಣದ ಕುರಿತು ವಿಶೇಷ ತನಿಖಾ ತಂಡ ರಚಿಸಿ ಅಕ್ರಮ ದಂಧೆಕೋರರ ಜಾಲ ಹಾಗೂ ಅವರ ಹಿಂದೆ ಇರುವ ಎಲ್ಲ ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ನಡೆಸಿ ಘಟನೆ ನಡೆಸಲು ಕುಮ್ಮಕ್ಕು ನೀಡಿದವ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಕರವೇ ನಗರ ಘಟಕದ ಅಧ್ಯಕ್ಷ ಫಯಾಜ ಕಲಾದಗಿ ಮಾತನಾಡಿ, ಜಿಲ್ಲೆಯಲ್ಲಿ ಬಡವರ ಪಾಲಿನ ಅನ್ನಭಾಗ್ಯ ಅಕ್ರಮ ಅಕ್ಕಿ ಕಳ್ಳ ಸಾಗಾಣೆ ದಂಧೆ ನಡೆಯುತ್ತಿರುವುದು ಗೊತ್ತಿದ್ದರೂ ತಡೆಗಟ್ಟುವಲ್ಲಿ ವಿಫಲವಾದ ಆಹಾರ ಇಲಾಖೆಯ ಅಧಿಕಾರಿಯನ್ನು ತಕ್ಷಣಕ್ಕೆ ಅಮಾನತ್ತು ಮಾಡಬೇಕು. ಸದರಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅಕ್ರಮ ದಂಧೆಕೋರರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಜೊತೆಗೆ ಪರಶುರಾಮ ಶಿವಶರಣ ಹಾಗೂ ಅವರ ಕುಟಂಬಕ್ಕೆ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಅಧ್ಯಕ್ಷರಾದ ಮಹಾದೇವ ರಾವಜಿ, ದಯಾನಂದ ಸಾವಳಗಿ, ರವಿ ಮುರಗೋಡ, ಚಂದು ಜಾಧವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.