ಲೇಖನಗಳು

ಐಟಿಐ, ಐಟಿಸಿ ಅಭ್ಯರ್ಥಿಗಳಿಗೆ ಕೆಪಿಟಿಸಿಎಲ್‌ದಿಂದ ಘನ ಘೋರ ಅನ್ಯಾಯ

ಐಟಿಐ, ಐಟಿಸಿ ಅಭ್ಯರ್ಥಿಗಳಿಗೆ ಕೆಪಿಟಿಸಿಎಲ್‌ದಿಂದ ಘನ ಘೋರ ಅನ್ಯಾಯ

ಯಾವುದೇ ಕೆಲಸಕಾರ್ಯಗಳು ಸುಸೂತ್ರವಾಗಿ ನೆರವೇರಲು ಸೂಕ್ತವಾದ ಶಿಕ್ಷಣ ಹಾಗೂ ಕೌಶಲ್ಯಭರಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಶ್ಯಕತೆ ಯಾವಾಗಲೂ ಇದ್ದೇ ಇರುತ್ತದೆ. ಹಾಗಾಗಿಯೇ ಹುದ್ದೆ ಹಾಗೂ ವಿದ್ಯೆಯ ಮಧ್ಯೆ ಸಂಬಂಧವಿದ್ದು, ಹುದ್ದೆಗೆ ತಕ್ಕ ವಿದ್ಯೆಯನ್ನು ಆಯ್ಕೆ ಮಾಡುವುದು ಅನಾದಿಕಾಲದಿಂದಲೂ ನಡೆದು ಬಂದಿದೆ. ಇದು ಉದ್ಯೋಗದಾತನ ಬುದ್ದಿವಂತಿಕೆಯೂ ಹೌದು ಹಾಗೂ ಅರ್ಹ ಅಭ್ಯರ್ಥಿಗೆ ನೀಡುವ ನ್ಯಾಯವೂ ಹೌದು ಎನ್ನಬಹುದು.  ದೇಶಕ್ಕೆ ಸ್ವಾತಂತ್ರ್ಯ ಬಂದ ತರುವಾಯ ನಾಡಿನ ಅಭಿವೃದ್ದಿಗಾಗಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲವನ್ನು  ತೊಡಗಿಸಲು ಸರ್ಕಾರಗಳು ಸಾಂಪ್ರದಾಯಕ ಶಿಕ್ಷಣದೊಂದಿಗೆ ಹಲವಾರು ತಾಂತ್ರಿಕ ಹಾಗೂ ತಾಂತ್ರಿಕೇತರ ವೃತ್ತಿಪರ ಕೋರ್ಸುಗಳನ್ನು ಜಾರಿಗೆ ತಂದು ಉದ್ಯೋಗಗಳನ್ನು ನೀಡುತ್ತ ಬಂದಿವೆ. ಜತೆಗೆ ಪ್ರತಿಯೊಂದು ಉದ್ಯೋಗಕ್ಕೂ ಒಂದೊಂದು  ವಿದ್ಯೆಯನ್ನು ನಿಗದಿಪಡಿಸಿವೆ; ಕಾಲಕಾಲಕ್ಕೆ ಹುದ್ದೆಗಳ ವಿದ್ಯಾಮಟ್ಟವನ್ನು ಹೆಚ್ಚಿಸುತ್ತ ಬಂದಿವೆ. ಅದರಂತೆ ಈಗ  ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಈ ಹಿಂದಿನ ಎಸ್ಸೆಸ್ಸೆಲ್ಸಿ ವಿದ್ಯೆಯ ಬದಲಿಗೆ  ಪಿಯುಸಿ ವಿದ್ಯೆಯನ್ನು  ಪರಿಗಣಿಸಲಾಗಿದೆ. ಪ್ರಸ್ತುತ ದೇಶದ ತುಂಬೆಲ್ಲ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳಿಗೆ 'ಡಿ' ದರ್ಜೆ ಹುದ್ದೆಗಳನ್ನು ಕೊಡಲಾಗುತ್ತಿದೆ. ಆದಾಗ್ಯೂ ಕೆಪಿಟಿಸಿಎಲ್ ಇವರಿಗೆ ಜೂನಿಯರ್ ಪವರ್‌ಮ್ಯಾನ್(ಜೆಪಿಎಂ) ಹಾಗೂ ಜೂನಿಯರ್ ಸ್ಟೇಷನ್ ಅಟೆಂಡೆಂಟ್(ಜೆಎಸ್‌ಎ) ಎಂಬ ಸಿ ದರ್ಜೆ ಹುದ್ದೆಗಳನ್ನು ಕೊಡುತ್ತಿರುವುದು ವಿಪರ್ಯಾಸವಾಗಿದೆ.  

ಏಕೆಂದರೆ ದೇಶದ ಎಲ್ಲ ರಾಜ್ಯಗಳಲ್ಲಿ ಈ ಹುದ್ದೆಗಳಿಗೆ ಐಟಿಐ ಅರ್ಹ ಕೋರ್ಸ್‌ಗಳ ವಿದ್ಯೆಯನ್ನು ಪರಿಗಣಿಸಲಾಗುತ್ತಿದೆ. ಅನೇಕ ರಾಜ್ಯಗಳಲ್ಲಿ ಅರ್ಹ ಐಟಿಐ ವಿದ್ಯೆಯಲ್ಲದೇ ಅನುಭವದ ಇಲೆಕ್ಟ್ರೀಕಲ್ ಲೈಸನ್ಸ್‌ ಪ್ರಮಾಣ ಪತ್ರ ಕೂಡ ಕೇಳಲಾಗುತ್ತಿದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆದರೆ ಕೆಪಿಟಿಸಿಎಲ್ ಮಾತ್ರ ಈ ಹುದ್ದೆಗಳಿಗೆ ಐಟಿಐ ಶಿಕ್ಷಣವನ್ನು ಆಯ್ಕೆ ಮಾಡದೇ ರಾಜ್ಯದ ತಾಂತ್ರಿಕ ಶಿಕ್ಷಣಕ್ಕೆ ಎಳ್ಳು ನೀರು ಬಿಡುತ್ತಿದೆ. ಈಚೆಗೆ ಕೆಪಿಟಿಸಿಎಲ್ 2975 ಜೆಪಿಎಂ, ಜೆಎಸ್‌ಎ ಹುದ್ದೆಗಳಿಗೆ ಅರ್ಜಿ ಕರೆದಿರುವದನ್ನು ಕಂಡು ಐಟಿಐ, ಐಟಿಸಿ ಅಭ್ಯರ್ಥಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಏಕೆಂದರೆ  ಈ ಹುದ್ದೆಗಳಿಗಾಗಿಯೇ ಇವರು ತರಬೇತಿ ಪಡೆದಿದ್ದರೂ ಇವರನ್ನು ಕಡೆಗಣಿಸಿ ನೇಮಕಾತಿಗಳು ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೇ ಇಂಥ ನಡೆಗಳಿಂದ ತಾಂತ್ರಿಕ ಶಿಕ್ಷಣದ ಬೆಳವಣಿಗೆಗಳ ಮೇಲೂ ಅಡ್ಡ ಪರಿಣಾಮಗಳು ಉಂಟಾಗುತ್ತಿವೆ.    

ಹೇಗೆಂದರೆ ದೇಶದಲ್ಲಿ ಅತಿ ಹೆಚ್ಚು 1500 ಐಟಿಐಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ 270 ಐಟಿಐಗಳನ್ನು ಸರ್ಕಾರವೇ ತೆರೆದಿದ್ದು, ಹಲವು ವೃತ್ತಿಪರ ಕೋರ್ಸ್‌ಗಳ ತರಬೇತಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ಅಲ್ಲದೇ 1235 ಖಾಸಗಿ ಐಟಿಐಗಳು ಬೇರೆ ಇವೆ. ಇದರಲ್ಲಿ 196 ಅನುದಾನಿತ ಐಟಿಐಗಳಿವೆ. ಇವೆಲ್ಲವೂ ನ್ಯಾಷನಲ್ ಕೌನ್ಸಿಲ್ ಫಾರ್ ವೋಕೇಶನಲ್ ಟ್ರೇನಿಂಗ್ (ಎನ್‌ಸಿವಿಟಿ) ಮಂಡಳಿಯಿಂದ ಮಾನ್ಯತೆ ಪಡೆದಿವೆ. ಇನ್ನು ಐಟಿಐ ಕಾಲೇಜುಗಳಲ್ಲಿ ಒಂದೊಂದು ಉದ್ಯೋಗಕ್ಕೂ ಒಂದೊಂದು ಕೋರ್ಸ್‌ಗಳಿವೆ. ಅದರಂತೆ ಕೆಪಿಟಿಸಿಎಲ್‌ನ ವಿದ್ಯುತ್ ಪ್ರಸರಣ ಹಾಗೂ ಎಸ್ಕಾಂಗಳ ವಿದ್ಯುತ್ ವಿತರಣ ಕೆಲಸ, ಕಾರ್ಯಗಳಿಗಾಗಿ ಇಲೇಕ್ಟ್ರೀಷಿಯನ್, ಲೈನ್‌ಮ್ಯಾನ್, ವೈರ್‌ಮ್ಯಾನ್ ಎಂಬ ಕೋರ್ಸ್‌ಗಳಿವೆ. ಇನ್ನು ಸಬ್‌ಸ್ಟೇಶನ್‌ಗಳು, ಆರ್‌.ಟಿ, ಟಿಸಿ ಹಾಗೂ ಎಂಟಿ ಯಾರ್ಡ್‌ಗಳ ಯಂತ್ರೋಪಕರಣಗಳ ನಿರ್ವಹಣೆ ಹಾಗೂ ದುರಸ್ತಿಗಾಗಿ ಈ ಕೋರ್ಸ್‌ಗಳ ಜತೆಗೆ ಇಎಂ, ಇನ್ಸೂ-್ಟ್ರಮೆಂಟೇಶನ್, ಫಿಟ್ಟರ್ ಕೋರ್ಸ್‌ಗಳು ಸೂಕ್ತವಾಗಿವೆ. ಆದರೂ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಇವುಗಳು ಕಣ್ಣಿಗೆ ಕಾಣಿಸುತ್ತಿಲ್ಲ.   ಆದರೆ ದೇಶದ ವಿವಿಧ ರಾಜ್ಯಗಳು ತಮ್ಮ  ವಿದ್ಯುತ್ ಸರಬರಾಜು ನಿಗಮಗಳಲ್ಲಿ ಐಟಿಐಗಳ ಈ 4-5 ಕೋರ್ಸ್‌ಗಳನ್ನು ಪರಿಗಣಿಸಿ ಐಟಿಐ ಅಭ್ಯರ್ಥಿಗಳಿಗೆ ಜೂನಿಯರ್ ಪವರ್‌ಮ್ಯಾನ್(ಜೆಪಿಎಂ), ಜೂನಿಯರ್ ಸ್ಟೇಷನ್ ಅಟೆಂಡೆಂಟ್(ಜೆಎಸ್‌ಎ)ಎಂಬ ಹುದ್ದೆಗಳನ್ನು ನೀಡುತ್ತಿವೆ.    

ಇನ್ನು ಪ್ರತಿವರ್ಷ ಸುಮಾರು 40 ಸಾವಿರದಷ್ಟು ಐಟಿಐ ಇಲೇಕ್ಟ್ರೀಷಿಯನ್, ಇಲೇಕ್ಟ್ರಾನಿಕ್ ಮೆಕ್ಯಾನಿಕ್(ಇಎಂ), ಫಿಟ್ಟರ್ ಅಭ್ಯರ್ಥಿಗಳು, ರಾಜ್ಯದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ತೇರ್ಗಡೆಯಾಗಿ ಹೊರಬರುತ್ತಾರೆ. ಇಷ್ಟಾದರೂ ವಿದ್ಯುತ್ ನಿಗಮಗಳು ಇಂಥ ತಾಂತ್ರಿಕ ಸಂಪನ್ಮೂಲ ಅಭ್ಯರ್ಥಿಗಳ ಉಪಯುಕ್ತತೆಯನ್ನು ಪಡೆಯದಿದ್ದರೆ ಹೇಗೆ? ಇನ್ನು ವಿದ್ಯುತ್ ನಿಗಮಗಳೇ  ತರಬೇತಿ ನೀಡುವುದಾದರೆ ಐಟಿಐ ಸಂಸ್ಥೆಗಳು ಯಾಕೆ ಬೇಕು? ಎಂಬ ಪ್ರಶ್ನೆ ಮೂಡದಿರದು.  ಒಂದುವೇಳೆ ರಾಜ್ಯದಲ್ಲಿ ಐಟಿಐ ಅಭ್ಯರ್ಥಿಗಳ ಕೊರತೆ ಇದ್ದರೆ ಈ ನಿಗಮಗಳು ಯಾರನ್ನಾದರೂ ನೇಮಕ ಮಾಡಲಿ. ಆದರೆ ಕೊರತೆ ಎಂಬ ಮಾತೇ ಇಲ್ಲ. ಇದೇ ನಿಗಮಗಳು ಈ ಹಿಂದೆ 2007ರಿಂದ 2015ರವರೆಗೆ ಅಸಿಷ್ಟಂಟ್ ಲೈನ್‌ಮನ್, ಅಸಿಷ್ಟಂಟ್ ಸ್ಟೇಶನ್ ಅಟೆಂಡೆಂಟ್ ಎಂಬ ಹುದ್ದೆಗಳಿಗೆ ಐಟಿಐ, ಐಟಿಸಿ ಅಭ್ಯರ್ಥಿಗಳನ್ನು ನಿಯಮಿತವಾಗಿ ನೇಮಕ ಮಾಡಿಕೊಂಡಿವೆ.  ಆದರೆ ನಂತರದಲ್ಲಿ ಆರ್ಥಿಕ ಹೊರೆ ಕಾರಣಕ್ಕೆ ಇವರನ್ನು ಕೈಬಿಡಲಾಗಿದೆಯೆಂದು ಹೇಳಲಾಗುತ್ತಿದೆ. ಇದು ಸರಿಯಲ್ಲ. ಹೇಗೆಂದರೆ ಜೆಪಿಎಂ ಹಾಗೂ ಜೆಎಸ್‌ಎ ಹುದ್ದೆಗಳನ್ನೇ ಅರ್ಹ ಐಟಿಐ ಅಭ್ಯರ್ಥಿಗಳಿಗೆ ನೀಡಿದ್ದರೆ ಈ ನಿಗಮಗಳಿಗೆ ಆರ್ಥಿಕ ಹೊರೆ ಎಂಬ ಪ್ರಶ್ನೆಯೇ ಬರುತ್ತಿರಲಿಲ್ಲ. ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳಿಗೆ 3ವರ್ಷದ ತರಬೇತಿ ನೀಡುವುದು ತಪ್ಪುತ್ತಿತ್ತು. ಇನ್ನು ಇಂದಿನ ನವೀನ ತಂತ್ರಜ್ಞಾನದಿಂದಾಗಿ  ಒಂದುವೇಳೆ ಐಟಿಐದವರಿಗೂ ತರಬೇತಿ ಅವಶ್ಯಕವಿದ್ದರೆ  ಇವರಿಗೂ 1-2ವರ್ಷ ತರಬೇತಿ ಕೊಡಬಹುದಿತ್ತು.  ಮುಖ್ಯವಾಗಿ ಅಭ್ಯರ್ಥಿಗಳ ವಿದ್ಯೆಗೆ ತಕ್ಕಂತೆ ಹುದ್ದೆ ನೀಡುವುದು ಸರ್ಕಾರದ ಕರ್ತವ್ಯ  ಹಾಗೂ ಜವಾಬ್ದಾರಿಯಾಗಿದೆ. ಆದರೆ ಜೆಪಿಎಂ, ಜೆಎಸ್‌ಎ ಹುದ್ದೆಗಳ ನೇಮಕಾತಿಯಲ್ಲಿ  ಸರ್ಕಾರದ ನಿರ್ಲಕ್ಷ ಎದ್ದು ಕಾಣುತ್ತಿದೆ.  ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳೇನು ಈ ಹುದ್ದೆಗಳಿಗಾಗಿ ಬೇಡಿಕೆಯನ್ನು ಇಟ್ಟಿರಲಿಲ್ಲ. ಇನ್ನು ಅವರು ಇವುಗಳನ್ನು ಕನಸಿನಲ್ಲಿನೂ ಕಂಡಿರಲಿಲ್ಲವೇನೋ? ಆದರೆ ಈ ಹುದ್ದೆಗಳ ಕನಸು ಕಂಡಂಥ ಐಟಿಐ ಅಭ್ಯರ್ಥಿಗಳಿಗೆ ಸರ್ಕಾರ ಘನಘೋರ ಅನ್ಯಾಯವೆಸಗಿದೆ. ಈ ಅನ್ಯಾಯದ ಕುರಿತು ಐಟಿಐ ಅಭ್ಯರ್ಥಿಗಳು ಹಾಗೂ ಸಂಘಟನೆಗಳು ಕೆಪಿಟಿಸಿಎಲ್ ಎಂಡಿಗಳಿಗೆ, ಇಂಧನ ಹಾಗೂ ಕೌಶಲ್ಯಾಭಿವೃದ್ದಿ ಸಚಿವರುಗಳಿಗೆ  ಕಳೆದ ಒಂದು ದಶಕದಿಂದ ಹತ್ತಾರು ಬಾರಿ ಮನವಿ ಮಾಡಿದ್ದರೂ ಮನವಿಗಳು ವ್ಯರ್ಥವಾಗುತ್ತಿವೆ. ಕೆಪಿಟಿಸಿಎಲ್ ಕೊಡುವಂಥ ಉತ್ತರಗಳು ಕಿವಿಯಲ್ಲಿ ಹೂ ಇಡುವುದಾಗಿದೆ.  ಇವರ ಉತ್ತರಗಳ ವೈಖರಿ ಹೇಗಿವೆಯೆಂದರೆ "ಐಟಿಐ ಅಭ್ಯರ್ಥಿಗಳಿಗೆ ವಿದ್ಯುತ್ ನಿಗಮಗಳಲ್ಲಿ ಅಸಿಷ್ಟಂಟ್ ಪವರ್‌ಮ್ಯಾನ್(ಲೈನ್‌ಮ್ಯಾನ್), ಅಸಿಷ್ಟಂಟ್ ಸ್ಟೇಶನ್ ಅಟೆಂಡೆಂಟ್ ಎಂಬ ಹುದ್ದೆ ಕೊಡಲಾಗುತ್ತಿದೆ. ಪ್ರಸ್ತುತ ಈ ಹುದ್ದೆಗಳು ಖಾಲಿ ಇರುವದಿಲ್ಲ. ಖಾಲಿಯಾದಾಗ ಇವುಗಳನ್ನು ಭರ್ತಿ ಮಾಡಲಾಗುವುದು. ಈಗ ಜೆಪಿಎಂ, ಜೆಎಸ್‌ಎ ಹುದ್ದೆಗಳ ಅವಶ್ಯಕತೆ ಇರುವುದರಿಂದ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ" ಎಂಬ ಸಿದ್ದ ಉತ್ತರ ರವಾನಿಸುತ್ತಾರೆ. ಇನ್ನು ಆಶ್ಚರ್ಯಕರ ಸಂಗತಿ ಏನೆಂದರೆ ಕಳೆದ 10 ವರ್ಷದಲ್ಲಿ ಐಟಿಐದವರಿಗೆ ಹುದ್ದೆಗಳೇ ಖಾಲಿಯಾಗಿಲ್ಲವಂತೆ! ಈ ಬಗ್ಗೆ ಇತ್ತೀಚೆಗೆ ಕೆಪಿಟಿಸಿಎಲ್ ಲಿಖಿತವಾಗಿ ಉತ್ತರವನ್ನೇ  ನೀಡಿದೆ.  

ಇನ್ನು ಕಳೆದ ಅಕ್ಟೋಬರ್‌ನಲ್ಲಿ ಕೆಪಿಟಿಸಿಎಲ್ ಈ ಜೆಪಿಎಂ, ಜೆಎಸ್‌ಎ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳಿಂದ ಅರ್ಜಿ ಕರೆದಿರುವದರಿಂದ ಐಟಿಐ ಅಭ್ಯರ್ಥಿಗಳು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಈ ಲೈನ್‌ಮೆನ್ ಹುದ್ದೆಗಳು ಐಟಿಐದವರಿಗೆ ಸೂಕ್ತವೆಂದು ಎಂಥ ಸಾಮಾನ್ಯನಿಗೂ ತಿಳಿಯುತ್ತದೆ. ಆದರೆ ಇದು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಮಾತ್ರ ತಿಳಿಯುತ್ತಿಲ್ಲ! ಕಳೆದ 10 ವರ್ಷಗಳಲ್ಲಿ ಕೆಪಿಟಿಸಿಎಲ್ ಐಟಿಐ ಅಭ್ಯರ್ಥಿಗಳನ್ನು ಕಡೆಗಣಿಸಿದ್ದು ಒಂದು ಕಡೆಯಾದರೆ ಸದ್ದಿಲ್ಲದೇ ಐಟಿಐ ಅಭ್ಯರ್ಥಿಗಳ  ಅಸಿಷ್ಟಂಟ್ ಪವರ್‌ಮ್ಯಾನ್ ಹುದ್ದೆಗಳ ಪ್ರಮಾಣವನ್ನು ಸಾಕಷ್ಟು ಕಡಿತಗೊಳಿಸಿದೆ. ಹೇಗೆಂದರೆ 2006 ರಲ್ಲಿ ನೇರ ನೇಮಕಾತಿ ಮೂಲಕ ಮಂಜೂರಾದ ಅಸಿಷ್ಟಂಟ್ ಲೈನ್‌ಮನ್ ಹುದ್ದೆಗಳಲ್ಲಿ  ಶೇ. 80 ರಷ್ಟು ಹುದ್ದೆಗಳನ್ನು ಐಟಿಐ ಇಲೇಕ್ಟ್ರೀಷಿಯನ್, ಇಎಂ ಅಭ್ಯರ್ಥಿಗಳಿಗೆ ನೀಡುವ ನಿಯಮ ರೂಪಿಸಲಾಗಿತ್ತು. ಮುಂದೆ ಬರುಬರುತ್ತ ಈ ಹುದ್ದೆಗಳ  ಪ್ರಮಾಣವನ್ನು ಕಡಿಮೆ ಮಾಡುತ್ತ ಬರಲಾಗಿದೆ. ಕ್ರಮವಾಗಿ 2013 ರಲ್ಲಿ ಶೇ.40ಕ್ಕೆ ಇಳಿಸಿದರೆ ಮುಂದೆ 2022ರಲ್ಲಿ ಶೇ.20ಕ್ಕೆ ತಂದು ನಿಲ್ಲಿಸಿದ್ದಾರೆ. ಮತ್ತು ಎಎಲ್‌ಎಂ ಹುದ್ದೆಗಳ ಕೋಟಾದಡಿಯಲ್ಲಿ ಜೆಎಲ್‌ಎಂ ಅಭ್ಯರ್ಥಿಗಳಿಗೆ ಬಡ್ತಿಯಾಗಿ ನೀಡಲು 2006ರಲ್ಲಿ ಶೇ.20ರಷ್ಟು ಹುದ್ದೆಗಳು ಇದ್ದುದ್ದನ್ನು 2022 ರ ಹೊತ್ತಿಗೆ ಶೇ.50ಕ್ಕೆ ಹೆಚ್ಚಿಸಲಾಗಿದೆ.      

ಇನ್ನು ಈ ಎಸ್ಸೆಸ್ಸೆಲ್ಸಿ ವಿದ್ಯೆಯು ಜೂನಿಯರ್ ಲೈನ್‌ಮನ್ ಹುದ್ದೆಗೆ ಅರ್ಹವಲ್ಲದಿದ್ದರೂ ಇವರಿಗೆ ಹುದ್ದೆಗಳನ್ನು ನೀಡಲಾಗಿದೆ. ಇವರು ಏನಿದ್ದರೂ ಗ್ಯಾಂಗ್‌ಮನ್ ಹುದ್ದೆಗಳಿಗೆ ಅರ್ಹರಾಗುವರು. ಈ ಹಿಂದೆ ಇವರನ್ನು ವಿದ್ಯುತ್ ಮಾರ್ಗಗಳವುದ್ದಕ್ಕೂ ಜಂಗಲ್ ಕಟ್ಟಿಂಗ್ ಮಾಡುವುದು, ಕಂಬಗಳಿಗಾಗಿ ಗುಂಡಿ ತೋಡುವುದು, ಕಂಬಗಳನ್ನು ನಿಲ್ಲಿಸುವುದು, ತಂತಿ ಎಳೆಯುವುದು ಇತ್ಯಾದಿ  ಶ್ರಮದಾಯಕ ದೈಹಿಕ ಕೆಲಸ, ಕಾರ್ಯಗಳನ್ನು ಮಾಡಲು ಹಂಗಾಮಿಯಾಗಿ ನೇಮಕ ಮಾಡಲಾಗುತ್ತಿತ್ತು. ಆದರೆ ಕಳೆದ 2ದಶಕಗಳಲ್ಲಿ ಡ್ರಿಲ್ಲಿಂಗ್ ಮಶಿನ್, ಜೆಸಿಬಿ ಯಂತ್ರಗಳು ಬಂದಿರುವದರಿಂದ ಗ್ಯಾಂಗಮನ್ ಹುದ್ದೆಗಳಿಗೆ ಕೆಲಸಗಳೇ ಇಲ್ಲದಂತಾಗಿವೆ.  

ಇನ್ನು ಕೆಪಿಟಿಸಿಎಲ್ ಗೆ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳಿಗೆ 3ವರ್ಷದ ತರಬೇತಿ ನೀಡಿ ಜೂನಿಯರ್ ಪವರ್ ಮ್ಯಾನ್, ಜೂನಿಯರ್ ಸ್ಟೇಶನ್ ಅಟೆಂಡೆಂಟ್ ಹುದ್ದೆಗಳಿಗೆ ನೇಮಕ ಮಾಡುವುದು ಸಾಧ್ಯವಾಗಿದ್ದರೆ, ಅದೇ ರೀತಿ ಇವರನ್ನು  ತರಬೇತಿ ಅವಧಿ ಹೆಚ್ಚಿಸಿ ಜೆಇ, ಎಇ ಹುದ್ದೆಗಳಿಗೂ ನೇಮಕ ಮಾಡಬಹುದಲ್ಲ. ವಿದ್ಯುತ್ ನಿಗಮಗಳಿಗೆ ಆಗುವ ಆರ್ಥಿಕ ಹೊರೆಯನ್ನು ಸರಿದೂಗಿಸಬಹುದಲ್ಲವೆ?  ಬರಿ ಐಟಿಐ ಅಭ್ಯರ್ಥಿಗಳಿಗೇಕೆ ಈ ಶಿಕ್ಷೆ? ಇವರೇನು ತಪ್ಪು ಮಾಡಿದ್ದಾರೆ ? ಬಡ ರೈತರು, ಕೂಲಿ ಕಾರ್ಮಿಕರ ಮಕ್ಕಳಾಗಿ ಇವರು ಐಟಿಐ ಓದಿದ್ದೇ ತಪ್ಪಾಯಿತೇ? ಮೂಲವಾಗಿ ಎಇ, ಜೆಇ ಹುದ್ದೆಗಳಂತೆ ಜೆಪಿಎಂ, ಜೆಎಸ್‌ಎ ಹುದ್ದೆಗಳು ಕೂಡ ತಾಂತ್ರಿಕ ಹುದ್ದೆಗಳಾಗಿವೆ. ಐಟಿಐ ಅಭ್ಯರ್ಥಿಗಳು ಇವುಗಳಿಗಾಗಿಯೇ 2ವರ್ಷದ ಅರ್ಹ ಕೋರ್ಸ್‌ಗಳ ತರಬೇತಿ ಪಡೆದಿರುತ್ತಾರೆ. ಇನ್ನು ಈ ಜ್ಯೂನಿಯರ್ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಹ ಐಟಿಐ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ಈ ಹುದ್ದೆಗಳ ವೇತನ ಶ್ರೇಣಿಯನ್ನೇ ನೀಡಿದ್ದರೆ ಅಭ್ಯರ್ಥಿಗಳು ಯಾರೂ ತಕರಾರು ತೆಗೆಯುತ್ತಿರಲಿಲ್ಲ. ಜತೆಗೆ ಇಲಾಖೆಯ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಇರುತ್ತಿರಲಿಲ್ಲ. ಜತೆಗೆ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿದಂತಾಗುತ್ತಿತ್ತು.  ಇದೇ ಮಾದರಿಯನ್ನು ದೇಶದ ಎಲ್ಲ ರಾಜ್ಯಗಳು ಅನುಸರಿಸುತ್ತಿವೆ.        

ಇನ್ನು ಅಸಿಷ್ಟಂಟ್ ಪವರ್‌ಮ್ಯಾನ್, ಅಸಿಷ್ಟಂಟ್ ಸ್ಟೇಶನ್ ಅಟೆಂಡೆಂಟ್ ಹುದ್ದೆಗಳನ್ನು ದೇಶದ ಬಹುತೇಕ ರಾಜ್ಯಗಳು  3 ವರ್ಷದ ಐಟಿಐ ಅಪ್ರೇಂಟಿಸ್ ಪಾಸಾದ ಅರ್ಹ ಕೋರ್ಸ್‌ಗಳ ಅಭ್ಯರ್ಥಿಗಳಿಗೆ  ನೀಡುತ್ತಿವೆ. ಆದರೆ ಕೆಪಿಟಿಸಿಎಲ್ ಮಾತ್ರ ಅಪ್ರೇಂಟಿಸ್ ಅಭ್ಯರ್ಥಿಗಳಿಗೆ  ಉದ್ಯೋಗ ನೀಡುವಂಥ ನಿಯಮಗಳನ್ನೇ ಇದುವರೆಗೂ ರೂಪಿಸಿರುವದಿಲ್ಲ. ಹಾಗಾಗಿ ರಾಜ್ಯದಲ್ಲಿ ಇವರಿಗೆ ಹುದ್ದೆಗಳೇ ಇರುವದಿಲ್ಲ. ಒಟ್ಟಾರೆ ಇವರಿಗೆ ಯಾವ ಹುದ್ದೆ ನೀಡದೇ ಅನ್ಯಾಯ ಮಾಡಲಾಗಿದೆ! ಆದರೆ  ಪಂಜಾಬ ರಾಜ್ಯದಲ್ಲಿ ಐಟಿಐ ಅಪ್ರೇಂಟಿಸ್ ಅಭ್ಯರ್ಥಿಗಳಿಗೆ ಎಎಲ್‌ಎಂ, ಎಎಸ್‌ಎ ಹುದ್ದೆಗಳನ್ನು ನೀಡಲಾಗುತ್ತಿದೆ. ಈ ಹುದ್ದೆಗಳ ವೇತನ ಶ್ರೇಣಿ, ಜೆಪಿಎಂ ವೇತನ ಶ್ರೇಣಿಗಿಂತ ಜಾಸ್ತಿ ಇರುವದರಿಂದ ಬಹುತೇಕ ರಾಜ್ಯಗಳಲ್ಲಿ ಬಡ್ತಿಯಾಗಿ ಈ ಹುದ್ದೆಗಳನ್ನು ನೀಡಲಾಗುತ್ತದೆ. ಇನ್ನು ಇವರು ಬಡ್ತಿಯ ಮೂಲಕ ನಿವೃತ್ತಿ ಅಂಚಿನಲ್ಲಿ ಅಸಿಷ್ಟಂಟ್ ಇಂಜನೀಯರ್ ಹುದ್ದೆವರೆಗೂ  ಬಂದರೆ ಜೆಪಿಎಂಗಳು ಅಂತಿಮವಾಗಿ ಮೀಟರ್ ರೀಡರ್ ಹುದ್ದೆವರೆಗೂ ಬರುತ್ತಾರೆ ಎನ್ನಲಾಗುತ್ತಿದೆ.   

ಇನ್ನು ಕೆಪಿಟಿಸಿಎಲ್ ಹಾಗೂ ವಿವಿಧ ಎಸ್ಕಾಂಗಳು ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು  ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಜೆಎಲ್‌ಎಂಗಳ ಅರೆಬರೆ ಜ್ಞಾನದಿಂದಾಗಿ ಕರ್ತವ್ಯ ನಿರ್ವಹಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಅವರ ಜೀವ ಹಾನಿಯಾಗಿವೆ!  ಈ ಅಪಾಯಕಾರಿ ಹುದ್ದೆಗಳಿಗೆ ಅಮಾಯಕ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳನ್ನು ನೇಮಕ ಮಾಡುವ ಅವಶ್ಯಕತೆ ಏನಿತ್ತು?  2015 ರಿಂದ ಇದುವರೆಗೂ ಅಂದಾಜು 18 ಸಾವಿರ ಜೆಪಿಎಂ, ಜೆಎಸ್‌ಎ ಹುದ್ದೆಗಳಿಗೆ ಬರೀ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ಐಟಿಐ ಅಭ್ಯರ್ಥಿಗಳನ್ನು ನಿರುದ್ಯೋಗಿಯಾಗಿ ಕೂಡ್ರಿಸಿದೆ. ಇದು ನ್ಯಾಯಸಮ್ಮತವೇ? ಇದರಲ್ಲಿ ಕನಿಷ್ಠ ಅರ್ಧದಷ್ಟು ಹುದ್ದೆಗಳನ್ನಾದರೂ ನಿಯಮಾನುಸಾರ  ಐಟಿಐ, ಐಟಿಸಿಯವರಿಗೆ ನೀಡಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಇನ್ನು ಈ ನಿಗಮಗಳಲ್ಲಿ ಸಬ್‌ಸ್ಟೇಶನ್‌ಗಳ ನಿರ್ವಹಣೆಗಾಗಿ ಹೊರಗುತ್ತಿಗೆಯಾಗಿ ಟೆಂಡರ್ ಕರೆಯುತ್ತಿದ್ದು ಅಲ್ಲಿಯ ಸ್ಟೇಶನ್ ಅಟೆಂಡೆಂಟ್(ಹೆಲ್ಪರ್) ಕೆಲಸಕ್ಕೂ ಸಹ ಐಟಿಐದವರು ಬೇಕೆಂಬ ಶರತ್ತಿದೆ. ಆದರೆ ಅದೇ ಖಾಯಂ ಕೆಲಸಕ್ಕೆ ಎಸ್ಸೆಸ್ಸೆಲ್ಸಿಯವರು ಬೇಕೆನ್ನುವುದು ಯಾವ ಸೀಮೆಯ ನ್ಯಾಯ? ಇದನ್ನು ನೋಡಿದರೆ ಇದರ ಹಿಂದೆ ಕೆಲವು ಪ್ರಭಾವಿಗಳ  ಕೈವಾಡವಿದೆಯೆಂದು, ತಮಗೆ ಬೇಕಿರುವ ಅಭ್ಯರ್ಥಿಗಳನ್ನು ನೇಮಕಗೊಳಿಸಲು ಇದನ್ನು ಜಾರಿಗೆ ತಂದಿದ್ದಾರೆಂದು ಹೇಳಲಾಗುತ್ತಿದೆ. ಹೇಗೆಂದರೆ ಐಟಿಐ ಶಿಕ್ಷಣವನ್ನು ಶ್ರೀಮಂತರ ಮಕ್ಕಳು ಪಡೆಯುವದಿಲ್ಲ. ಆದರೆ ಎಸ್ಸೆಸ್ಸೆಲ್ಸಿ ಶಿಕ್ಷಣವನ್ನು ಎಲ್ಲರೂ ಪಡೆದಿರುತ್ತಾರೆ. ಹಾಗಾಗಿ ಇದನ್ನು ಸೂಕ್ತ ವಿದ್ಯಾರ್ಹತೆಯೆಂದು ನಿಗದಿ ಗೊಳಿಸಲಾಗಿದೆ. ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಿಂದ ವಿನಾಯತಿ ನೀಡಲಾಗಿದೆ. ಹಾಗಾಗಿ ಉನ್ನತ ಶಿಕ್ಷಣ ಹೊಂದಿದ್ದರೂ ಉನ್ನತ ಹುದ್ದೆ ಪಡೆಯಲು ವಿಫಲರಾದ ಅಭ್ಯರ್ಥಿಗಳನ್ನು ಇಲ್ಲಿ ಸಲೀಸಾಗಿ ನೇಮಕ ಮಾಡಿಸಲಾಗುತ್ತಿದೆ. ಅಲ್ಲದೇ ಮುಂದೆ ಪ್ರಭಾರಿಯಾಗಿ ಬೇರೆ, ಬೇರೆ ಹುದ್ದೆಗಳನ್ನು ಅವರಿಗೆ ನೀಡುವುದು ನಡೆಯುತ್ತಿದೆಯೆಂದು ಹೇಳಲಾಗುತ್ತಿದೆ. ಇನ್ನು ಇದರ ಹಿಂದೆ ಬೇರೆ, ಬೇರೆ ಕಾರಣಗಳು ಇರಬಹುದು.   

ಹಾಗಾಗಿ ಇನ್ನು ಮುಂದಾದರೂ ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ವಿದ್ಯುತ್ ನಿಗಮಗಳ ಈ ನಿಯಮಬಾಹಿರ ಅಧಿಸೂಚನೆಯನ್ನು ಹಿಂಪಡೆದು ಮಾರಿ​‍್ಡಸುವ ಅಗತ್ಯವಿದೆ. ಅದರಲ್ಲಿ ಜೆಪಿಎಂ, ಜೆಎಸ್‌ಎ ಹುದ್ದೆಗಳನ್ನು 2ವರ್ಷದ ಐಟಿಐ ಹಾಗೂ ವಿದ್ಯುತ್ ನಿಗಮಗಳ ಐಟಿಸಿ ಅಭ್ಯರ್ಥಿಗಳಿಗೆ ನೀಡುವುದು. ಮತ್ತು  ಎಪಿಎಂ, ಎಎಸ್‌ಎ ಹುದ್ದೆಗಳನ್ನು 3 ವರ್ಷದ ಅಪ್ರೇಂಟಿಸ್ ಅರ್ಹ ಐಟಿಐ ಹಾಗೂ ನಿಗಮಗಳ ಐಟಿಸಿ ಅಭ್ಯರ್ಥಿಗಳಿಗೆ ನಿಗದಿಪಡಿಸುವುದು. ಈ ರೀತಿಯ ಹೊಸ ನೇಮಕಾತಿ ನಿಯಮಗಳನ್ನು ರೂಪಿಸಿ ಹುದ್ದೆಗಳನ್ನು ಮರು ಹಂಚಿಕೆ ಮಾಡಿದರೆ, ಎಲ್ಲರಿಗೂ ನ್ಯಾಯ ದೊರೆಕಿದಂತಾಗುತ್ತದೆ.(ಮುಗಿಯಿತು) 

-ಲೇಖಕರು : ಎಸ್‌.ಎಂ. ನೆರಬೆಂಚಿ ಖಾಸಗಿ ಐಟಿಐಗಳ ರಾಜ್ಯ ಸಂಘಟನೆ ಮುಖಂಡರು  

     

 ಸ್ಥಳ: ಮುದ್ದೇಬಿಹಾಳ                                                   

 ವಿಳಾಸ: ಎಸ್‌.ಎಂ.ನೆರಬೆಂಚಿ 


ಸುದ್ದಿ ಓದಿ