ಕೆಜಿಎಫ್ 2 ಸ್ಯಾಟ್ ಲೈಟ್ ಹಕ್ಕು ಜೀ ವಾಹಿನಿ ಪಾಲು
ಬೆಂಗಳೂರು, ಆಗಸ್ಟ್ 20 ಕೆಜಿಎಫ್ 2 ಸ್ಯಾಟ್ ಲೈಟ್ ಹಕ್ಕು ಜೀ ಕನ್ನಡ ವಾಹಿನಿಗೆ ದಾಖಲೆ ಬೆಲೆಗೆ ಮಾರಾಟವಾಗಿದೆ.
ವರಮಹಾಲಕ್ಷ್ಮಿ ಹಬ್ಬದ ದಿನ ಜೀ ಕನ್ನಡ ವಾಹಿನಿ ಹಾಗೂ ಹೊಂಬಾಳೆ ಫಿಲಂಸ್ ಈ ಕುರಿತು ಪ್ರಕಟಣೆ ನೀಡಿದ್ದು, ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯೊಂದಿಗೆ ಜೀ ವಾಹಿನಿ ಒಪ್ಪಂದಕ್ಕೆ ಸಹಿ ಹಾಕಿದೆ.
ಭಾರಿ ಮೊತ್ತಕ್ಕೆ ಕೆಜಿಎಫ್ 2 ಸ್ಯಾಟ್ ಲೈಟ್ ಹಕ್ಕು ಖರೀದಿಯಾಗಿದೆ ಎನ್ನಲಾಗಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಒಪ್ಪಂದ ಪತ್ರವನ್ನು ಜೀ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಅವರಿಗೆ ಹಸ್ತಾಂತರಿಸಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸ್ಯಾಟ್ ಲೈಟ್ ಹಕ್ಕೂ ಕೂಡಾ ಜೀ ಟಿವಿ ಪಾಲಾಗಿದೆ.
ಜನಮನವನ್ನು ಸೂರೆಗೊಂಡಿರುವ ಕೆಜಿಎಫ್ 2 ಜೀ ವಾಹಿನಿ ಪಾಲಾಗಿರುವ ಬಗ್ಗೆ ಚಿತ್ರದ ನಾಯಕ ನಟ ಯಶ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. “ಕೆಜಿಎಫ್ 2 ಚಿತ್ರಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.