ಮಾರ್ಚ್ 19 ರಂದು “ಕಸ್ತೂರಿ ಮಹಲ್” ಲಿರಿಕಲ್ ಹಾಡು
ಬೆಂಗಳೂರು, ಮಾರ್ಚ್ 15 : ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ ಕಸ್ತೂರಿ ಮಹಲ್ ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಮುಕ್ತಾಯವಾಗಿದ್ದು, ಸದ್ಯದಲ್ಲೇ ಪ್ರಥಮಪ್ರತಿ ಸಿದ್ಧವಾಗಲಿದೆ. ಮೇ ಅಂತ್ಯ ಹಾಗೂ ಜೂನ್ ಮೊದಲ ವಾರದಲ್ಲಿ “ಕಸ್ತೂರಿ ಮಹಲ್” ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ಇದೇ 19ರಂದು A2 ಮ್ಯೂಸಿಕ್ ಮೂಲಕ ಈ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಡಾ. ವಿ.ನಾಗೇಂದ್ರ ಪ್ರಸಾದ್ ಬರೆದಿರುವ "ನಾನ್ಯಾರು ನನಗೆ ಯಾರು" ಹಾಡನ್ನು ಅನುರಾಧಾ ಭಟ್ ಹಾಡಿದ್ದಾರೆ.ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, ಮೆಚ್ಚುಗೆ ಸೂಚಿಸಿದ್ದ ಈ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ಕಾಶಿಮ ರಫಿ, ನೀನಾಸಂ ಅಶ್ವಥ್ , ಅಕ್ಷರ್ ಮುಂತಾದವರಿದ್ದಾರೆ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ದಿನೇಶ್ ಬಾಬು ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.ಶ್ರೀಭವಾನಿ ಆರ್ಟ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ ನಿರ್ಮಿಸಿರುವ ಈ ಚಿತ್ರಕ್ಕೆ ನವೀನ್ ಆರ್ ಸಿ ಹಾಗೂ ಅಕ್ಷಯ್ ಸಿ.ಎಸ್ ಅವರ ಸಹ ನಿರ್ಮಾಣ, ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ ಹರೀಶ್ ಕೃಷ್ಣ ಅವರ ಸಂಕಲನ ವಿದೆ.