ಕ್ಷಯರೋಗ ಮುಕ್ತ ಜಿಲ್ಲೆಗೆ ಕೈ ಜೋಡಿಸಿ: ಜಿಪಂ ಸಿಇಒ ನಂದಿನಿ
ಬಳ್ಳಾರಿ 24: ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಬಳ್ಳಾರಿಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿ ನಿರ್ಮಾಣ ಮಾಡಬಹುದಾಗಿದೆ. ಈ ಕಾರ್ಯಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಜಿಪಂ ಸಿಇಒ ನಂದಿನಿ ಕೆ.ಆರ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಸಮಯದಲ್ಲಿ ಕ್ಷಯರೋಗವು ಜಾಸ್ತಿಯಾಗಿದೆ ಜನರಲ್ಲಿ ಈ ರೋಗದ ಬಗ್ಗೆ ಅರಿವು ಇಲ್ಲದ ಕಾರಣ ಸಮುದಾಯದ ಮಟ್ಟದಲ್ಲಿ ಕ್ಷಯರೋಗ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಒಂದು ಕ್ರಿಯಾ ಯೋಜನೆ ರೂಪಿಸಲಾಗಿದೆ. ಕ್ರಿಯಾ ಯೋಜನೆಯಂತೆ ಕಾರ್ಯನಿರ್ವಹಿಸಿದರೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಕ್ಷಯಮುಕ್ತ ಜಿಲ್ಲೆಯಾಗಲು ಸಾಧ್ಯ ಎಂದರು.
ಜಿಲ್ಲೆಯಲ್ಲಿ ಕಳೆದ 12 ವರ್ಷದಿಂದ ಕ್ಷಯರೋಗ ನಿರ್ಮೂಲನೆ ಮಾಡಲು ಪಟ್ಟ ಶ್ರಮ ಕೋವಿಡ್ನಿಂದ ಹಾಳಾಗಿದ್ದು;ಮತ್ತೆ ಮೊದಲಿನಿಂದ ಶ್ರಮವಹಿಸಬೇಕಿದೆ ಎಂದು ಹೇಳಿದ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು 20 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಕ್ಷಯರೋಗವು ಹೆಚ್ಚಾಗಿ ಕಂಡು ಬರುತ್ತದೆ. ಆರೋಗ್ಯದ ಬಗ್ಗೆ ಅವರಲ್ಲಿರುವ ತಾತ್ಸಾರ ಭಾವನೆಯನ್ನು ತೆಗೆದುಹಾಕಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಇಂದ್ರಾಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಕ್ಷಯರೋಗ ಹೆಚ್ಚಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬಳ್ಳಾರಿ ಮೂರನೇ ಸ್ಥಾನ ಪಡೆದಿದೆ. ಇದನ್ನು ತಡೆಯಲು ಸಮುದಾಯ ಮಟ್ಟದಲ್ಲಿ ಜಾಗೃತಿ ಮತ್ತು ಸಹಭಾಗಿತ್ವ ಅಗತ್ಯವಾಗಿದೆ ಎಂದರು.
210 ಪ್ರಕರಣಗಳನ್ನು ಪತ್ತೆ ಗುರಿ: ಈ ವರ್ಷ ಒಂದು ಲಕ್ಷ ಜನಸಂಖ್ಯೆಗೆ 210 ಕ್ಷಯರೋಗ ಪ್ರಕರಣಗಳನ್ನು ಪತ್ತೆ ಹಚ್ಚುವ ಗುರಿಯನ್ನು ಹೊಂದಲಾಗಿದೆ. ಕಳೆದ ವರ್ಷ ಕೋರಾನಾದ ಮದ್ಯೆಯೂ ಒಂದು ಲಕ್ಷಕ್ಕೆ 115 ಕ್ಷಯರೋಗ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. 2019ರಲ್ಲಿ ಒಂದು ಲಕ್ಷಕ್ಕೆ 165 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಈ ವರ್ಷ ಈ ಸಂಖ್ಯೆಯ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಲ್ಲಿ ಪ್ರತಿವರ್ಷ ಶೇ.20ರಷ್ಟು ಕ್ಷಯರೋಗವನ್ನು ಕಡಿಮೆ ಮಾಡಬಹುದು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ರೋಗ ಜಾಸ್ತಿ; ಅರಿವು ಕಡಿಮೆ; ಗ್ರಾಮೀಣ ಪ್ರದೇಶದಲ್ಲಿ ರೋಗ ಜಾಸ್ತಿ; ಅರಿವು ಕಡಿಮೆಯಾಗಿದೆ. ಸಾರ್ವಜನಿಕರಲ್ಲಿ ಅರಿವು ಮತ್ತು ಸ್ಕ್ರೀನಿಂಗ್ ಮಾಡುವ ಮೂಲಕ ಅವರಿಗ ಕ್ಷಯರೋಗದ ಪರಿಣಾಮ ಮತ್ತು ಅದರ ಲಕ್ಷಣಗಳ ಕುರಿತು ತಿಳಿಸುವ ಕಾರ್ಯ ನಡೆಯುತ್ತದೆ. ರೋಗವನ್ನು ನಿರ್ಲಕ್ಷಿಸದೇ ಲಕ್ಷಣಗಳು ಕಂಡು ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯಿರಿ. ಕೋವಿಡ್ ಜೊತೆಗೆ ಕ್ಷಯರೋಗದ ಬಗ್ಗೆಯೂ ಜನರನ್ನು ಎಚ್ಚರಿಸುವ ಕೆಲಸ ಆಗಲಿ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಗುರುನಾಥ್ ಚೌಹಾಣ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಎಸ್.ಅನಿಲ್ಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ರಾಜಶೇಖರ್ ರೆಡ್ಡಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ ಆರ್. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಮರಿಯಂ ಬೀ, ತಾಲೂಕು ಆರೋಗ್ಯ ಅಧಿಕಾರಿ ಡಾ. ಮೋಹನ್ ಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಮತ್ತು ಇತರರು ಇದ್ದರು.