ತಾಳಿಕೋಟಿ ಅಭಿವೃದ್ಧಿಗೆ ಕೈ ಜೋಡಿಸಿ: ಶಾಸಕ ನಡಹಳ್ಳಿ
ಲೋಕದರ್ಶನ ವರದಿ
ತಾಳಿಕೋಟಿ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಟ್ಟಣವಾಗಿದ್ದು 25 ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿತ್ತು. ನಾನು ಶಾಸಕನಾದ ಮೇಲೆ ಸುಮಾರು 40 ಕೋಟಿ ಅನುದಾನವನ್ನು ತಂದು ವಿಶೇಷ ಕಾಳಜಿ ವಹಿಸಿ ಎಲ್ಲರೂ ಅಭಿಮಾನ ಪಡುವಂತೆ ಕೆಲಸ ಮಾಡಿದ್ದೇನೆ. ಅಭಿವೃದ್ಧಿಯ ಪರ್ವ ಆರಂಭವಾಗಿದೆ ಅದು ಎಂದೂ ನಿಲ್ಲಬಾರದು. ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದು ಶಾಸಕ ಹಾಗೂ ಅಧ್ಯಕ್ಷ ಆಹಾರ ನಿಗಮ ಎ.ಎಸ್. ಪಾಟೀಲ (ನಡಹಳ್ಳ) ಹೇಳಿದರು.
ಪಟ್ಟಣದ 3ನೇ ವಾರ್ಡನ ವ್ಯಾಪ್ತಿಗೆ ಬರುವ ಎಸ್.ಕೆ. ನಗರ, ಸಜ್ಜನ ನಗರ ಉದ್ಯಾನವನ ರೂ. 2.30 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ನಂತರ ವಾರ್ಡ ವತಿಯಿಂದ ಹಮ್ಮಿಕೊಂಡ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಜನಪ್ರತಿನಿಧಿಯಾದವರಿಗೆ ಇಚ್ಛಾಶಕ್ತಿ ಹಾಗೂ ದೂರದೃಷ್ಟಿಯಿದ್ದರೆ ಮಾತ್ರ ಕೆಲಸ ಮಾಡಲು ಸಾಧ್ಯ. ಸರಕಾರದ ಹಲವಾರು ಯೋಜನೆಗಳಿರುತ್ತವೆ. ಅದನ್ನು ತಂದು ಕೆಲಸ ಮಾಡುವ ಅಗತ್ಯ ಇದೆ. ಕೆಬಿಜೆಎನ್ಎಲ್ ಇಲಾಖೆಯಿಂದ ಸುಮಾರು ರೂ. 5 ಕೋಟಿ ಅನುದಾನ ತಂದು ತಾಳಿಕೋಟಿ, ಮುದ್ದೇಬಿಹಾಳ ಹಾಗೂ ನಾಲತವಾಡ ಪಟ್ಟಣಗಳ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೆಂಗಳೂರು ನಗರಗಳಲ್ಲಿರುವಂಥಹ ಹೈಟೆಕ್ ಗಾರ್ಡನ್ಗಳಂತಾಗಬೇಕೆಂಬುದು ನನ್ನ ಆಸೆಯಾಗಿದೆ. ಇಡೀ ಪಟ್ಟಣ ಸ್ವಚ್ಛ, ಸುಂದರ ಹಾಗೂ ಹಸಿರಿನಿಂದ ಕಂಗೊಳಿಸುವಂತಾಗಬೇಕೆಂಬುದು ನಾನು ಬಯಸುತ್ತೇನೆ. ಇದಕ್ಕಾಗಿಯೇ ನಾನು ಸುಮಾರು ರೂ. 40 ಕೋಟಿ ಅನುದಾನ ಈ ಪಟ್ಟಣಕ್ಕೆ ಕೊಟ್ಟಿದ್ದೇನೆ ಎಂದರು.
ಸಾಹಿತಿ ಅಶೋಕ ಹಂಚಲಿ ಮಾತನಾಡಿ ಶಾಸಕ ನಡಹಳ್ಳಿ ಅವರು ಅಭಿವೃದ್ಧಿಪರ ಚಿಂತಕರು. ಇಡೀ ಪಟ್ಟಣವನ್ನು ಅಭಿವೃದ್ಧಿಗೊಳಿಸಲು ಆಸಕ್ತಿವಹಿಸಿ ಕೆಲಸ ಮಾಡುತ್ತಿದ್ದಾರೆ. ಇಂಥಹ ಕ್ರಿಯಾಶೀಲರನ್ನು ನಾವು ಕಳೆದುಕೊಳ್ಳಬಾರದು. ನಮ್ಮೆಲ್ಲರ ಸಹಕಾರ ಅವರಿಗೆ ಮುಂದೆಯೂ ಇರಬೇಕಾಗಿದೆ ಎಂದರು.
ಈ ಸಮಯದಲ್ಲಿ ಮುಖಂಡರಾದ ರಾಜಶೇಖರ ಹಿರೇಮಠ, ಕಾಶಿನಾಥ ಮುರಾಳ, ಎಂ.ಎಸ್. ಸರಶೆಟ್ಟಿ, ವಾಸುದೇವ ಹೆಬಸೂರ, ಅಣ್ಣಪ್ಪ ಜಗತಾಪ, ಡಾಽಽ ಆನಂದ ಭಟ್, ಡಾಽಽ ನಜೀರ ಕೊಳ್ಯಾಳ, ಶಿವಶಂಕರ ಹಿರೇಮಠ, ಜಯಸಿಂಗ್ ಮೂಲಿಮನಿ, ಆರ್.ಎಲ್. ಕೊಪ್ಪದ, ಗುಂಡು ಧನಪಾಲ, ಶ್ರೀಕಾಂತ ಪತ್ತಾರ, ಜಿಲ್ಲಾ ಬಿಜೆಪಿ ಮಹಿಳಾ ಘಟಕ ಅಧ್ಯಕ್ಷೆ ಶಿಲ್ಪಾ ಕುದರಗೊಂಡ, ಚೌಧರಿ ಸರ್, ಬಾಬು ಕಾರಜೋಳ, ಗಂಗು ಕೊಕಟನೂರ, ಉಪವಲಯ ಅರಣ್ಯಾಧಿಕಾರಿ ಮೃತ್ಯುಂಜಯ, ಮತ್ತಿತರರು ಇದ್ದರು.