ಲೇಖನಗಳು

ಜಪಾನಿ ಪ್ಲೇಟ್

ಜಪಾನಿ ಪ್ಲೇಟ್

ಮಹೇಶ್ ಆರ್‌.ನಾಯಕ್ ಅವರ ಸಣ್ಣ ಕಥಾ ಸಂಕಲನ ಜಪಾನಿ ಪ್ಲೇಟ್ (ಮೇಡ್ ಇನ್ ಇಂಡಿಯಾ ಕಥೆಗಳು)     

ದಕ್ಷಿಣ ಕನ್ನಡದ ಸಣ್ಣ ಕಥಾ ಬರಹಗಾರರಲ್ಲಿ ಪ್ರಮುಖವಾಗಿ  ಕೇಳಿ ಬರುವ ಹೆಸರು ಮಹೇಶ್  ಆರ್‌. ನಾಯಕ್ ಅವರದ್ದು .ಕರ್ನಾಟಕ ಸರಕಾರದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರೂ, ಮಾದ್ಯಮ ಮತ್ತು ಓದ್ಯೋಗಿಕ ಕ್ಷೇತ್ರದ ಸಲಹೆಗಾರು ಮಾತ್ರವಲ್ಲದೆ ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥರೂ ಆಗಿರುವ ನಾಯಕ್ ಅವರು ಪ್ರಮುಖವಾಗಿ ಕನ್ನಡದಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರೂ ಇಂಗ್ಲಿಷ್, ಕೊಂಕಣಿ, ತುಳು, ಹಿಂದಿ  ಭಾಷೆಗಳಲ್ಲಿ ಕೂಡ ಸಾಹಿತ್ಯ ರಚನೆ ಮಾಡಬಲ್ಲ  ಪಂಚ ಭಾಷಾ ಪ್ರವೀಣ. ಸುಮಾರು 18 ಕೃತಿಗಳನ್ನು ಬರೆದು  ತಮ್ಮದೇ ಆದ  ಕಲ್ಲಚ್ಚು ಪ್ರಕಾಶನದಲ್ಲಿ ಪ್ರಕಟಗೊಳಿಸಿದ್ದಾರೆ. ಹಾಗೆಯೇ ಇತರ ಲೇಖಕರ ಕೃತಿಗಳೂ ಸೇರಿ ಒಟ್ಟು 50 ಕೃತಿಗಳನ್ನು ತಮ್ಮ ಪ್ರಕಾಶನದ ಮೂಲಕ ಹೊರತಂದಿದ್ದಾರೆ. ಸುಮಾರು 40  ದೇಶಗಳ ಪರ್ಯಟನೆ ಮಾಡಿರುವ  ಇವರ "ಜಪಾನೀ ಪ್ಲೇಟ್" ವಿಭಿನ್ನ ಸ್ವರೂಪದ ಕಥಾಸಂಕಲನವಾಗಿದ್ದು ಈ ಕೃತಿಯ ಮುಖಪುಟವೇ ವಿಶೇಷ ಸಂದೇಶಗಳನ್ನು ಕೊಡುತ್ತವೆ. 1945ರ 2ನೇ  ವಿಶ್ವ ಯುದ್ಧದ ಸಂಧರ್ಭದಲ್ಲಿ ನಾಗಸಾಕಿ ಮೇಲೆ ಅಣುಬಾಂಬು ಬಿದ್ದ ಹಿನ್ನಲೆಯಲ್ಲಿ ಜಪಾನೀ ಬಾಲಕನೊಬ್ಬನದು ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಬಾಲಕನೊಬ್ಬ ತನ್ನ ತಮ್ಮನನ್ನು ಬೆನ್ನಮೇಲೆ ಭದ್ರವಾಗಿ ಕಟ್ಟಿಕೊಂಡು ಮುಂದಕ್ಕೆ ನೋಡುತ್ತಿರುವ ದೃಶ್ಯ ಮನಸ್ಸನ್ನು ಕಲಕುವಂತಿದೆ... ಏನೂ ತಿಳಿಯದ ಪುಟ್ಟ ಬಾಲಕ ಗಾಢ ನಿದ್ದೆಯಲ್ಲಿ!  

ಮಹೇಶ್ ಆರ್‌.ನಾಯಕ್ ಅವರ ಕಥಾಸಂಕಲನವನ್ನು  ಓದುವಾಗ ಅರಿವಾದದ್ದು ಅವರ  ವಿಭಿನ್ನ ಬರಹ ಶೈಲಿ, ಸಣ್ಣ ಕಥೆಗಳನ್ನು ಬರೆಯುವ ಅವರ ವಿಶಿಷ್ಟ  ವೈಖರಿ. ಪ್ರತೀ ಕಥೆಯ ಅಂತ್ಯ ಓದುವಾಗ ವಿಪರೀತ ಚಿಂತನೆಗೆ  ಉಂಟುಮಾಡುತ್ತಾ  ಹಾಗಿರಬಹುದೇ, ಅಥವಾ ಹೀಗಿರಬಹುದೇ ಎಂದು ತನ್ನನ್ನುತಾನೇ  ಪ್ರಶ್ನೆ ಮಾಡಿಕೊಳ್ಳುವಂತಹ ಕಥೆಗಳು. ನಾನು ಓದಿದ್ದು, ಅರ್ಥೈಸಿಕೊಂಡದ್ದು ತಪ್ಪಿರಬಹುದು ಎಂದು  ಒಮ್ಮೆಓದಿದ ಕಥೆಯನ್ನು ಪುನಃ  ಓದಿ  ಇಲ್ಲ ಸರಿಯಾಗಿಯೇ ಓದಿದೆ ಎಂದು ತಲೆಕೊಡವಿಕೊಳ್ಳುವಂತೆ ಮಾಡುವ  ಬರಹಗಳು. ಈ ಮೂಲಕ ಓದುಗನ ಮಿದುಳಿಗೆ ವಿಪರೀತ ಕಸರತ್ತು ಎಂದರೆ ತಪ್ಪಾಗಲಾರದು. ಹಾಗಾಗಿ ಇದೊಂದು ರೋಚಕ ಕಥಾಸಂಕಲನವಾಗಿ  ಕಂಡುಬರುತ್ತದೆ. ಇವರ  ಕಥೆಯ ಪಾತ್ರಧಾರಿಗಳ ಬಗ್ಗೆ  ಯೋಚಿಸುವಾಗ ಹೆಚ್ಚಿನ ಕಥೆಗಳಲ್ಲಿ ಲೇಖಕರೇ ತಮ್ಮನ್ನು ತಾವೇ ಕಥಾನಾಯಕನಾಗಿ ಚಿತ್ರಿಸಿದ್ದು  ದೇಶ ಸುತ್ತಿದ ಇವರ ಅನುಭವಗಳು  ಪಾತ್ರದಾರಿಯ ಮೂಲಕ ಮೂಲಕ ವಿಶೇಷ ಬರವಣಿಗೆಯಾಗಿ ಹೊರಹೊಮ್ಮಿದೆ. ಜಪಾನಿ  ಪ್ಲೇಟ್‌- ಕಥೆಯಲ್ಲಿ ಗುಜರಿ ಸಾಹೇಬ್ ಮಾರುವ ಆಂಟಿಕ್ ಪೀಸ್ ಗೆ  ಮನಸೋತು  ಕಥಾನಾಯಕ ಅವನಲ್ಲಿದ್ದ ಜಪಾನೀ ಪ್ಲೇಟ್ ಒಂದನ್ನು ಖರೀದಿಸಿ ತಂದು ಅದರಲ್ಲಿ ಬರೆದಿರುವ ಅಕ್ಷರಗಳನ್ನು ಓದಲಾಗದೆ ಮಾಲ್ ಗೆ ಹೋಗಿ ಜಪಾನಿ ಹುಡುಗಿಯೊಬ್ಬಳ ಕೈಯಿಂದ ಓದಲು  ಹೇಳಿದಾಗ ಅದನ್ನು ಓದುತ್ತಿದ್ದಂತೆ ಆಕೆಯ ಮುಖ ಕಪ್ಪಾಗುವುದು, ಹಾಗೆಯೇ ಕಥಾನಾಯಕನ ಜಪಾನೀ ಸೊಸೆ ಟೊಮೊಕೊಮಿಯಾಳಿಂದ  ಕೂಡಾ  ಓದಿಸಿದಾಗ ಆಕೆ ಕೂಡ ಅದೇ ರೀತಿ ವರ್ತಿಸುವುದು,ನಂತರ ಕಥಾನಾಯಕ  ಮಗನ ಸೂಚನೆಯಂತೆ ಆಂಟಿಕ್  ಮಾರ್ಕೆಟ್ ಗೆ ಅದನ್ನು ಮಾರಲು ಬಂದಾಗ ಅಲ್ಲಿ ಇರುವ ವಿದೇಶಿಗನೊಬ್ಬ ಅದನ್ನು 25 ಲಕ್ಷಕ್ಕೆ ಖರೀದಿಸುವುದು,ಅದರಲ್ಲಿ ಬರೆದದ್ದು ಏನೆಂದು ಕೇಳಿದಾಗ ಆ ಅಂಗಡಿಯವ "ಬಾಯ್‌--ಲಿಟಲ್ ಬಾಯ್" ಎಂದು ಉತ್ತರಿಸಿದ್ದು, ಮುಂದೆ ಸೊಸೆ "ಬಾಂಬಿನ  ಬೂದಿ ತಾಗಿದ ತಟ್ಟೆ" ನಮ್ಮ ಮನೆಯಲ್ಲಿ ಬೇಡ ಎಂದು ಹೇಳುವುದು..ಹೀಗೆ ಕುತೂಹಲಕಾರಿಯಾದ ಈ ಕಥೆ ಎರಡನೇ ವಿಶ್ವಯುದ್ಧದ ಸಂಧರ್ಭದಲ್ಲಿ ಹಿರೋಷಿಮಾ ನಾಗಸಾಕಿ ಮೇಲೆ ಅಣುಬಾಂಬು ಬಿದ್ದ ಹಿನ್ನೆಲೆಯ ವಿಚಾರವಾಗಿ ಬರೆದ ಕಥೆಯಾಗಿದೆ.  

ಕಥಾಸಂಕಲನದಲ್ಲಿ ಬರುವ   ಹೆಚ್ಚಿನ ಎಲ್ಲ  ಕಥೆಗಳು ಲಾಕ್ ಡೌನ್ ಸಂದರ್ಭದ ಕಥೆಗಳಾಗಿದ್ದು, ಲಾಕ್ ಡೌನ್ ದಿನಗಳ ನೋವು ಸಂಕಷ್ಟಗಳು, ಅರೋಗ್ಯ ಸಮಸ್ಯೆಗಳು, ಜನಸಾಮಾನ್ಯರ ಅಸಹಾಯಕತೆಗಳು, ಲೇಖಕರ  ಹೃದಯವನ್ನು ಬಹಳಷ್ಟು ತಟ್ಟಿದೆ ಎಂದು ಅರ್ಥವಾಗುತ್ತದೆ. ಅಲ್ಲದೆ ಒಂದು ಸಣ್ಣ ವಿಚಾರವನ್ನು ಕೇಂದ್ರವಾಗಿಟ್ಟುಕೊಂಡು ಒಂದು ಕಥೆ ಹೇಗೆ ಸೃಷ್ಟಿಯಾಗುತ್ತದೆ  ಎನ್ನುವುದಕ್ಕೆ ಪೂರಕವಾಗಿ ಇವರ "ಹಸುರು ಕಾನನದೊಳಗಣ ಬಾಡೂಟ" ಕಥೆಯೇ ಸಾಕ್ಷಿಯಾಗಿದೆ. ರಮ್ಯಳನ್ನು ನೋಡಲು ಹುಡುಗನ ಕಡೆಯವರು ಬರುವವರಿದ್ದರು. ಲಾಕ್‌ಡೌನ್‌ನಿಂದಾಗಿ  ಅತಿಥಿಗಳನ್ನು ಬರಮಾಡಿಕೊಳ್ಳಲು  ಮನೆಯೊಳಗೆ ಬೇಕಾದ  ಸಾಮಾನು ಸಲಕರಣೆಗಳು  ಇಲ್ಲದೆ ಇರುವುದರಿಂದ ರಮ್ಯಾ ಸೊಮ್ಯಾಟೊದಲ್ಲಿ ಸ್ನಾಕ್ಸ್‌ ಆರ್ಡರ್ ಕೊಡುವುದು, ಅದೇ ಸಂಧರ್ಭದಲ್ಲಿ ಎದುರಿನ ಮನೆಯ ಶ್ರೀಕಾಂತ್ ರಾಯರ ಮನೆಯವರೂ ಸೊಮ್ಯಾಟೊದಲ್ಲೇ ನೋನ್ ವೆಜ್ ಆರ್ಡರ್ ಕೊಡುವುದು,ಪಾರ್ಸೆಲ್ ತಂದ ಡೆಲಿವರಿ ಬಾಯ್  ಆದಲು-ಬದಲು ಮಾಡಿ ಕೊಡುವುದು, ಹುಡುಗನ ಮನೆಯವರು ತಮಗೆ ನೋನ್‌-ವೆಜ್ ಸ್ನಾಕ್ಸ್‌ ಕೊಟ್ಟು ಅವಮಾನ ಮಾಡಿದರೆಂದು ಎದ್ದು ಹೋಗುವುದು,ಮುಂದೆ ಎದುರು ಮನೆಯ ಶ್ರೀಕಾಂತ್ ರಾಯರ ಮಗ ರಾಹುಲ್ ಜೊತೆಗೆ ರಮ್ಯಳ ಮದುವೆ ನಡೆಯುವುದು.ಲೇಖಕರು ಈ ಕಥೆಯ ಕೊನೆಯಲ್ಲಿ  ದೂರು ಮಾತ್ರ ಆನ್ಲೈನ್ ಫುಡ್  ಡೆಲಿವರಿಯವನಿಗೆ ಎಂದು  ಹೇಳಿದ್ದು  ನೋಡುವಾಗ ಬಹುಶಃ ರಮ್ಯಾಳಿಗೆ ರಾಹುಲನೊಂದಿಗೆ ಪ್ರೇಮವಿದ್ದು ಈ ಸಂಭಂದವನ್ನು ತಪ್ಪಿಸಲೆಂದೇ ಈ ರೀತಿ  ಆರ್ಡರ್ ಕೊಟ್ಟು  ಡೆಲಿವರಿ ಬಾಯ್ ಗೆ ದೂರು ಹಾಕಿದರು  ಎಂದು ಓದುಗ  ಅರ್ಥಮಾಡಿಕೊಳ್ಳಬೇಕಾಗುತ್ತದೆ.  

"ಹೀಗೊಂದು ಚರಮ ಗೀತೆ" ಕಥೆ ಕೊರೊನದಿಂದ ಸಾವನ್ನಪ್ಪಿದ ವಿರೂಪಾಕ್ಷ, ಸತ್ತ ನಂತರ ಅವನ ಅವಗುಣಗಳನ್ನೂ ಸದ್ಗುಣವನ್ನಾಗಿ ಪರಿವರ್ತಿಸಿ ಮಾತಾಡುವ ಜನರ ವಿವರಣೆ  ಕೊಡುವ ಕಥಾನಾಯಕ, ಇದೊಂದು ಹಾಸ್ಯಪ್ರಧಾನ ಮತ್ತು ಕೊರೋನಾಧಾರಿತ ಕಥೆಯಾದರೆ, ಇನ್ನೊಂದು ಹಾಸ್ಯ ಪ್ರಧಾನವಾದ ಕಥ "ಫೋನ್ ನಠ98451-420 ಮತ್ತು ಫಸ್ಟ್‌ ನೈಟ್"ನಲ್ಲಿ ಕಥಾನಾಯಕ ಇನ್ನೇನು ಮದುಮಗಳೊಂದಿಗೆ ಮಂಚ ಏರಬೇಕೆಂದುಕೊಂಡಿದ್ದವನಿಗೆ ಬರುವ ಫೋನ್ ಕಾಲ್  "ಸರ್ ನಾನು ಸುಯಿಸೈಡ್  ಮಾಡಿಕೊಳ್ತಾ ಇದ್ದೇನೆ. ಇದು ನನ್ನ ಲಾಸ್ಟ್‌  ಕಾಲ್, ನನ್ನ ಸಾವಿಗೆ ನೀವೇ  ಕಾರಣ" ಎಂದಾಗ ಹೆದರಿಹೋಗುವ ಕಥಾನಾಯಕ. ಮತ್ತೆ ತಿಳಿಯುವಾಗ ಟ್ರೂಕಾಲರ್ ಕಂಪನಿಯ  ಹುಡುಗ  ಪ್ರೀಮಿಯಂ ಸರ್ವಿಸ್ ಮಾಡಿಕೊಳ್ಳಿ ಎನ್ನುವುದಕ್ಕಾಗಿ ಕೊಟ್ಟ ಕಾಲ್‌. ಏನಿದ್ದರೂ ನಾವು ಫಸ್ಟ್‌ ನೈಟ್ ಗೇನೇ ಡೆಮೋ ಕೊಡುವುದು ಎಂದಾಗ ನಿರಾಳವಾಗುವ ನಾಯಕ, ನಾಯಕ್‌ರ ಹಾಸ್ಯ  ಶೈಲಿಯಿಂದಾಗಿ ಬಿದ್ದು ಬಿದ್ದು ನಗುವ ಓದುಗ... ಮುಂದಕ್ಕೂ ಇಂತಹ ಕಥೆಗಳಿವೆಯೇ ಎಂದು ಮುಂದಿನ ಪುಟಗಳತ್ತ  ತಿರುಚುವಂತೆ ಮಾಡುತ್ತದೆ. ಗಂಭೀರ ವಿಷಯಗಳನ್ನು  ಕೂಡ ಹಾಸ್ಯದ ಲೇಪ ಹಚ್ಚಿ ಬರೆಯುವ ಲೇಖಕರು ಓದುಗರನ್ನು ಮುದಗೊಳಿಸಬಲ್ಲರು ಎನ್ನುವುದು ಇವರ ಕಥೆಗಳಿಂದ ತಿಳಿದು  ಬರುತ್ತದೆ ಹಾಗೆಯೇ ಓದುಗರನ್ನು ನಕ್ಕು ನಗಿಸಬಲ್ಲ ಒಬ್ಬ ಹಾಸ್ಯ ಬರಹಗಾರರಾಗಿಯೂ ಅವರಿಲ್ಲಿ ಕಾಣಿಸಿಕೊಳ್ಳುತ್ತಾರೆ.   

ಲಾಕ್ ಡೌನ್  ವಿಚಾರಗಳಿಂದಲೇ ಹೆಣೆದ ಮತ್ತೊಂದು ಕಥೆ “ಅಂಬಾನಿ ಅದಾನಿ ಮತ್ತು ಆಮೆಯುಂಗುರ”. ಮನೆಯಲ್ಲೇ ಕೂತು ಕೂತು ಸಾಕಾಗಿ ನಾಯಕ ತಿರುಗಾಡಲೆಂದು ಬಂದದ್ದು ಊರ ತುದಿಯ ಆಮೆಗುಡ್ಡದ ಮೇಲಿರುವ ಗಣಪತಿ ದೇವಸ್ಥಾನಕ್ಕೆ, ಹಿಂತಿರುಗುವಾಗ  ಮಳೆಗೆ ರಕ್ಷಿಸಿ ಕೊಳ್ಳಲೆಂದು ಅಲ್ಲೇ ಇದ್ದ ಪಾಳು  ಬಿದ್ದ ಗುಡಿಸಲು  ಸೇರಿದ ಕಥಾನಾಯಕ, ಅದರೊಳಗೆ ಇದ್ದ 60ರ ಬಿಳಿಗಡ್ಡಧಾರಿಯೊಬ್ಬ ತನ್ನಲ್ಲಿದ್ದ  ಅಮೆಯುಂಗುರ ಅವನ ಬೆರಳಿಗೆ ಹಾಕಿ "ಅಂಬಾನಿ ಅದಾನಿ" ಆಗುತ್ತೀರಾ ಎಂದಾಗ ಈತ ಅವನಿಗೆ 100ರೂಪಾಯಿ ಕೊಟ್ಟು ಹಿಂತಿರುಗುತ್ತಾನೆ. ಲಾಕ್‌ಡೌನ್ ಮುಗಿದರೂ ನಾಯಕ ಕೆಲಸ ಮಾಡುವ ಕಂಪನಿ ಪರ್ಮನೆಂಟಾಗಿ ಮುಚ್ಚಿಕೊಳ್ಳುವುದು, ನಂತರ ಅದೇ ಮುಳಿಯ ಮಾಡಿನಲ್ಲಿ ದಂಪತಿಗಳು ಕೆಫೆ  ಪ್ರಾರಂಭಿಸುವುದು,ಮುಂದೆ ಇದು ದೊಡ್ಡ ಹೊಟೇಲಾಗುವುದು, ಹೆಂಡತಿ ಗರ್ಭಿಣಿಯಾದಾಗ ಕೆಲಸದಾಕೆಯನ್ನು ಇಟ್ಟು ಹೊಟೇಲು ಮುಂದುವರೆಸುವುದು, ಮುಂದೆ ಆಕೆ ತಿರುಗಾಡಲು ಜೋಗಕ್ಕೆ ಕೆರೆದುಕೊಂಡು ಹೋಗುವುದು,ಆಗ ನೀರಿನಲ್ಲಿ ಆಡುವ ನೆಪದಿಂದ ಅಮೆಯುಂಗುರವನ್ನು ಈತನ ಕೈಬೆರಳಿಂದ ಜಾರಿಸಿ ತನ್ನ ಬಳಿ ಇಟ್ಟುಕೊಳ್ಳುವುದು. ನಂತರ ಈತನ ವ್ಯಾಪಾರ ಇಳಿತವಾಗಿ ದೀವಾಳಿಯಾಗುವುದು. ಒಂದು ದಿನ ಸೋತು ಬೇಸತ್ತ ನಾಯಕ ನಡೆದುಕೊಂಡು ತನ್ನ ಹಳೆಯ  ಫ್ಯಾಕ್ಟರಿಯತ್ತ ನಡೆದಾಗ ಸೆಕ್ಯೂರಿಟಿ ಕೆಲಸಕ್ಕೆ ನಡೆಯುತಿದ್ದ ಇಂಟರ್ಮ್ಯೂ ನೋಡಿ ತಾನೂ ಕ್ಯೂನಲ್ಲಿ ನಿಲ್ಲುವುದು, ಆಗ ಸೂಟುಬೂಟು ಹಾಕಿದ ವ್ಯಕ್ತಿ ಒಳಗೆ ಪ್ರವೇಶಿಸವುದು ಆತನ ಕೈಯಲ್ಲಿ ಈತನ ಅಮೆಯುಂಗುರಅದನ್ನು ನೋಡಿ ಕಥಾನಾಯಕ "ಇದು ನನ್ನದೇ" ಎಂದು ಮನದಲ್ಲೇ ಉಸುರುವುದು, ಜೊತೆಗೆ ಅಂದು ಈತನ ಜೊತೆ ಕೆಲಸ ಮಾಡುತಿದ್ದ ಕೆಲಸದಾಕೆ  ಇಂದು ಫ್ಯಾಕ್ಟರಿ ತೆಗೆದುಕೊಂಡವನ ಹೆಂಡತಿ .ಅಮೆಯುಂಗುರ ಧರಿಸಿದವ ಆಕೆಯ ಪತಿ ಎಂದು ಲೇಖಕರು ಹೇಳಿಕೊಂಡಿಲ್ಲ. ಆದರೆ ಓದುಗರು ಅರ್ಥೈಸಿ ಕೊಳ್ಳಬೇಕಾಗುತ್ತದೆ. ಅಮೆಯುಂಗರ ಧರಿಸಿದ ಮೇಲೆ ಅವರಿಗೆ ಒದಗಿದ ಸಿರಿವಂತಿಕೆ, ಇದೊಂದು ನಂಬಿಕೆಯ ಮೇಲೆ ಬರೆದ ಕಥೆಯಾಗಿದ್ದರೂ ಲಾಕ್‌ಡೌನ್‌ನಿಂದ ಜನರು ಯಾವೆಲ್ಲ ಪರಿಸ್ಥಿತಿಗೆ ಮುಟ್ಟಿದರು ಎಂಬುದನ್ನು ತಿಳಿಸುತ್ತದೆ.ಹಾಗೆಯೇ ಲೇಖಕರ ಲೀಲಾಜಾಲ ಬರವಣಿಗೆ ಕಥೆಗಳ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ.   

ಪುನಃ ಓದುಗರನ್ನು ನಗಿಸಲು ಮುಂದಾದ ಕಥೆ "ಕರ್ಣ ಕಠೋರಮ್ - ಬ್ಯಾಂಕ್ ಎಂಪ್ಲ್ಯಾಯ್ ಆಗಿರುವ ಕಥಾನಾಯಕ ಜೈಪುರಕ್ಕೆ ಟ್ರಾನ್ಸ್ಫರ್ ಆಗಿ ಅಲ್ಲಿ ಬಾಡಿಗೆಗೆ ಫ್ಲಾಟ್ ಖರೀದಿಸುತ್ತಾನೆ. ಮಧ್ಯರಾತ್ರಿಯ ಹೊತ್ತಿಗೆ ದಿನಾಲೂ ಮನೆಯೊಳಗಿಂದ ಬರುವ ಶಬ್ದಕ್ಕೆ ಹೆದರಿ ಹೋಗುವ ಕಥಾನಾಯಕ, ತನ್ನ ಜೂನಿಯರ್ ಲೋಕಲ್ ಸ್ಟಾಫ್ ಬಳಿ ಆ ಏರಿಯಾದ ಬಗ್ಗೆ ಕೇಳಿದಾಗ 34 ವರುಷಗಳ ಹಿಂದೆ ಪಾರ್ಸಿಗಳ ಸ್ಮಶಾನ ಅಲ್ಲಿ ಇತ್ತು. ಅಲ್ಲಿ ಪಾರ್ಸಿಗಳ ಹೆಣ   ಬಿಸಾಡುತಿದ್ದರು, ಹದ್ದುಗಳು ಬಂದು ತಿನ್ನುತಿದ್ದವು ಎಂಬ ಮಾತಿಗೆ ಬೆಚ್ಚಿ ಆತ ಮನೆ ಬದಲಾಯಿಸುವ ನಿರ್ಧಾರಕ್ಕೆ ಬರುವುದು, ಮಂತ್ರವಾದಿ ಸಲಹೆ ಕೊಡುವುದು, ಈ ಎಲ್ಲ ಅವಾಂತರಕ್ಕೆ  ಕಾರಣವಾದ ಬಲಿತ ಇಲಿಯೊಂದು ಫೋಟೋ ಫ್ರೇಮ್ ಹಿಂದೆ ಕುಳಿತು ಸದ್ಧು ಮಾಡುತ್ತಿದ್ದು ಕೊನೆಗೂ ಅದು ಶವವಾಗುವುದು,ಕಥೆಯ ಕೊನೆಯ ಸಾಲು ತೂಕಡಿಸಿ ತೂಕಡಿಸಿ ಬಿದ್ದರೂ ನನ್ನ ತಮ್ಮ ಮಂಕುತಿಮ್ಮ... ಕಥೆಗೆ ಪೂರಕವಾಗಿ ನಗು ತರಿಸುವಂತದ್ದು.  

ಗರ್ಭಿಣಿಯರ ವೇಷ ಧರಿಸಿ ಆಸ್ಪತ್ರೆಯ ಒಳಹೊಕ್ಕು ಮಕ್ಕಳನ್ನು ಕದಿಯುತ್ತಾ, ಹಾಗೂ ಇಂತಹವರನ್ನು ದಂಡಿಸುವ ಪೊಲೀಸ್ ಇನ್ಸ್ಪೆಕ್ಟರ್‌ಗೆ ಕೂಡಾ ಚಳ್ಳೆ ಹಣ್ಣು ತಿನ್ನಿಸುವ ತಮಿಳುನಾಡಿನ ಒಂದು ಗಂಡಸರ-ಹೆಂಗಸರ ಗುಂಪಿನ ಕಥೆ   -ಬ್ರಹನ್ನಳೆಯರು. ಫೇಸ್ ಬುಕ್ ಮೂಲಕ ಪರಿಚಯವಾಗಿ ನಂತರ ಸಂಬಂಧದಲ್ಲಿ ಪರ್ಯಾವಸಾನಗೊಳ್ಳುವ  ಇನ್ನೊಂದು ನಕ್ಕು ನಗಿಸುವ ಕಥೆ- "ದೇವರ ನಾಡಿನೊಳಗೊಂದು.. ಕಟ್ಟು’. ವಯಸ್ಸಾದವೃತ್ತಿಯಲ್ಲಿ ನಿವೃತ್ತರಾದ ವ್ಯಕ್ತಿಯೊಬ್ಬ  ಮೊಬೈಲ್ ನೋಡುತ್ತಾ ನೋಡುತ್ತಾ ಫೇಸ್‌ಬುಕ್ ಮೂಲಕ ಪರಿಚಯವಾದ ಹೆಂಗಸನ್ನು ಹುಡುಕುತ್ತ ಕೇರಳಕ್ಕೆ ಹೋಗಿ ಆಕೆಯನ್ನು ಮದುವೆಯಾಗಿ ಅಲ್ಲಿಯೇ ಇರುವುದು, ಕಥಾನಾಯಕ ತಂದೆಯನ್ನು  ಹುಡುಕುತ್ತಾ  ಹೋಗಿ  "ಮನೆಗೆ ವಾಪಸ್ಸುಬನ್ನಿ" ಎಂದು ಕರೆದರೆ ಆತ ‘ಇಲ್ಲ ಇಲ್ಲಿಯ ಅಳಿಯಕಟ್ಟು  ಸಂಪ್ರದಾಯದ  ಪ್ರಕಾರ ಹೆಂಡತಿ ಮನೆಯಲ್ಲೇ ಇರುತ್ತೇನೆ, ನೀವು ಹೋಗಿ ಎಂದಾಗ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ಸು ಬಂದರೆ, ಮಗ ರಾಜು  ಫೇಸ್‌ಬುಕ್‌ನಲ್ಲಿ  ಪರಿಚಯವಾದ ಹುಡುಗಿ ಜೊತೆ ಮದುವೆಯಾಗಿ  ಆಕೆಯನ್ನು  ಮನೆಗೆ ಕರೆದುಕೊಂಡು ಬಂದಿರುವುದು, "ನಿನಗೆ ಹೊಸ ಅತ್ತೆ ಮತ್ತು ಹೊಸ ಸೊಸೆ" ಎಂದು ಮನಸ್ಸಲ್ಲೇ ಹೆಂಡತಿಗೆ ಹೇಳುವ ಕಥಾನಾಯಕ, ಜೊತೆಗೆ  ಮಗಳು ರಾಗಿಣಿ ಫೇಸ್ಬುಕ್  ನೋಡುತ್ತಲೇ ಇರುವುದು. ಆಗ ಕಥಾನಾಯಕ "ಇನ್ನು ಇವಳಿಗೆ ಎಲ್ಲಿಯ ಕಟ್ಟು ಕಾದಿದೆಯೋ" ಎಂದು ಸ್ವಗತದಲ್ಲೇ ಹೇಳಿಕೊಯುವುದು, ಹೀಗೆ ಫೇಸ್ಬುಕ್ ಸಂಭಂದಗಳ ಕಥೆ-ವ್ಯಥೆ ಹಾಸ್ಯಾತ್ಮಕವಾಗಿ ಬರೆದಿದ್ದರೂ ಫೇಸ್‌ಬುಕ್ ಮೂಲಕ ತಪ್ಪು ಹೆಜ್ಜೆ ಇಡುವವರ ಬಗ್ಗೆ ಜಾಗರೂಕತೆಯ ಸಂದೇಶ ನೀಡುವ ಕಥೆ ಕೂಡ ಇದಾಗಿದೆ.   

ಉದ್ಯೋಗದಲ್ಲಿ ಬಹಳಷ್ಟುಲಾಸ್ ಆಗಿ ಜೀವನದಲ್ಲಿ ಸೋತ ರವಿಯ ಕಥೆ-ಏಳೇಳು ಜನ್ಮಕೂ. ಲಾಕ್ ಡೌನ್, ಅಪ್ಪನ ಡಯಾಲಿಸಿಸ್, ಮಕ್ಕಳ ಸ್ಕೂಲ್ ಪೀಸ್, ಮಂದ ಬುದ್ದಿಯ ತಮ್ಮ, ಹೆಂಡತಿಯ ನಾನಾ ತರಹದ ಡಿಮಾಂಡ್‌. ಹೀಗೆ ಸೋತ ರವಿ ಮನೆಮಂದಿಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ತನ್ನ ಹುಟ್ಟುಹಬ್ಬದ ದಿನ ಐಸ್ಕ್ರೀಮ್ ತಂದು  ಅದರಲ್ಲಿ ವಿಷ ಬೆರೆಸಿ ಎಲ್ಲರಿಗೂ ಕೊಟ್ಟು  ಇನ್ನೇನು ಕಪ್ ಹಿಡಿದು ತಿನ್ನಬೇಕೆನ್ನುವಷ್ಟರಲ್ಲಿ  ಹೊರಗಿಂದ ಓಡಿಬಂದ ಬೆಕ್ಕಿನ ರಭಸಕ್ಕೆ ಹೆದರಿ ಏಳುವಾಗ ಸೋಫಾದ ಕಾಲುಮುರಿದು ಬಿದ್ದು ಎಲ್ಲರ ಕೈಯಲ್ಲಿದ್ದ ಐಸ್ಕ್ರೀಂ ಕೆಳಗೆ ಬೀಳುವುದು,ಅವನ್ನು ಬೆಕ್ಕು ಹಾಗು ಅದರ ಮರಿಗಳು ತಿಂದು ಸಾಯುವುದು. ಕಥೆ ಕಾಲ್ಪನಿಕವಾದರೂ ಅಸಹಾಯಕತೆ ಮನುಷ್ಯನನ್ನು ಹೇಗೆ ಸಾವಿನ ಬಗ್ಗೆ ಯೋಚಿಸುವಂತೆ ಮಾಡುತ್ತದೆ ಎಂಬುದನ್ನು ಲೇಖಕರು ಮಾರ್ಮಿಕವಾಗಿ ತಿಳಿಸಿದ್ದಾರೆ.  

ಕಥೆಯ ಕೊನೆಯ ಸಾಲು ಮತ್ತೆ ಕರ್ಮಣ್ಯೇವಾಧಿಕಾರಸ್ತೆ ಮಾಫಲೇಶು ಕದಾಚನ.... ಕಥಾಸಾರಕ್ಕೆ ತಕ್ಕಂತೆ ಲೇಖಕರು ಹೆಚ್ಚಿನ ಕಥೆಗಳಲ್ಲಿ ಬಳಸಿದ ಶ್ಲೋಕಗಳು,ಹಾಡಿನ ಸಾಲುಗಳು ಅವರೊಳಗೆ ಅಡಗಿದ್ದ ಸಮಾಜಪರ ಚಿಂತನೆ, ಸಮಾಜದ ನಾಲ್ಕು ಸ್ತರಗಳ ಬಗ್ಗೆ ಅವರಿಗಿರುವ ಜ್ಞಾನ, ಅನುಭವ ಆ ಮೂಲಕ ಅವರ ಶ್ರೇಷ್ಠ ಬರವಣಿಗೆಯ ಮಟ್ಟ ತಿಳಿದುಬರುತ್ತದೆ.  

ಲವ್ ಯು ಜಿಂದಗಿ -ಕಥೆಯಲ್ಲಿ, ಕೊರೊನ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬೆಡ್ ಇರದೇ ಪಡುವ ಪರದಾಟ, ಆಕ್ಸಿಜನ್ ಕೊರತೆಯಾಗಿ ಉಸಿರಾಟದ ಸಮಸ್ಯೆ, ಇಂದೋ ನಾಳೆಯೋ ಎಂದು ಸಾವಿನತ್ತ ಸೆಳೆಯುತ್ತಿರುವ  ಜೀವಗಳು, ಸಾವಿಗೆ ಹೆದರಿ ಕಣ್ಣೀರಿಡುವ ಮುದಿ ಜೀವಗಳು, ಕೊರೋನ ನೆನಪು ಮರೆತಷ್ಟೂ ಮತ್ತೆ ಧುತ್ತೆಂದು ಎದುರಾಗುವಂತವು. ತಾನು ಸಾಯುತ್ತೇನೆ ಎಂದು ತಿಳಿದು ತನ್ನ ಬದುಕಿನ ರಹಸ್ಯವನ್ನು, ಗುಪ್ತ ವಿಚಾರಗಳನ್ನು  ಕೊನೆಯ ಗಳಿಗೆಯಲ್ಲಿ ಹೇಳಿಬಿಡುತ್ತೇನೆ ಎಂದುಕೊಂಡು, ಹೇಳುವ ಶಕ್ತಿಯಿರದೆ ಡೈರಿಯಲ್ಲಿ ಬರೆಯಲೆಂದು ಹೋರಾಟ ಜೆನಿಟಳ ಚಿತ್ರಣ ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ, ಏನೇನೊ ಆಶಾವಾದಗಳನ್ನಿಟ್ಟುಕೊಂಡು , ಸಾಯುತ್ತೇವೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸದ ಸಾವಿರಾರು ಜೀವಗಳು, ಕೊರೊನ ಮಹಾಮಾರಿಗೆ ತುತ್ತಾಗಿ, ತನ್ನವರನ್ನು, ಭಂದು-ಭಾಂದವರನ್ನು ಬಿಟ್ಟುಹೋದ ಅಸಹಾಯಕ ಚಿತ್ರಣವನ್ನು ಕಣ್ಣೆದುರಿಗೆ  ತರಿಸಿ  ಭಾವುಕರನ್ನಾಗಿಸುತ್ತದೆ.  

ಲಾಕ್‌ಡೌನ್ ಮನೆಮಂದಿಯನ್ನು ಒಟ್ಟಾಗಿಸಿತು-ಭಾಂದವ್ಯ ಗಟ್ಟಿಗೊಳಿಸಿತು ಎನ್ನುವ ಮಾತುಗಳು ಕೇಳಿಬರುತ್ತಿದ್ದುದು ಕೂಡ ಸತ್ಯ. ಇಂತಹ ಒಂದು ಕಥೆ- ಪ್ರೇಮ ಪ (ಪಾ )ತ್ರಗಳು.  ಕಥಾನಾಯಕ-ನಾಯಕಿ, ಮಕ್ಕಳು ಹೀಗೆ ಎಲ್ಲರೂ  ಒಟ್ಟಾಗಿ ಮನೆಯನ್ನು ಕನ್ನಡಿಯಂತೆ ಫಳ ಫಳಗೊಳಿಸಿದರು. ಸ್ವಚ್ಛತೆ ಮಾಡುವಾಗ ಹೆಂಡತಿಗೆ ಸಿಕ್ಕ ಗಂಡನ ಪ್ರೇಮಪತ್ರಗಳು, ಅದು ಪ್ರೇಮಪತ್ರ ಸ್ಪರ್ಧೆಗಾಗಿ  ಬರೆದವುಗಳು ಎಂದು ತಿಳಿಯುವುದು, ಯಾವಳನ್ನು ಕೇಂದ್ರೀಕರಿಸಿ ಬರೆದಿದ್ದನೋ ಆಕೆ ಕೊರೊನದಿಂದ ಸತ್ತಳೆಂದು ತಿಳಿದಾಗ ಆಕೆಗೆ ತನ್ನ ಕಾಲೇಜು ಬದುಕಿನಲ್ಲಿ ಪ್ರೀತಿಸಿದವನ ಪ್ರೇಮಪತ್ರಗಳ ನೆನಪಾಗುವುದು. ಅಲ್ಲದೆ ಆತ ಕೂಡಾ ಕೊರೊನದಲ್ಲಿ ಸತ್ತ ವಿಷಯ ಕೂಡ ತಿಳಿಯುವುದು, ಕೊರೊನ ತಮ್ಮ ಆತ್ಮೀಯರನ್ನು ಹೇಗೆ ಸದ್ದಿಲ್ಲದೇ ಹೊತ್ತುಕೊಂಡು ಹೋಯಿತು ಎಂದು ತಿಳಿಸುತ್ತ,  ಹದಿಹರೆಯದಲ್ಲಿ ನಡೆದ ಪ್ರೇಮ ಪ್ರಣಯಗಳ  ನೆನಪುಗಳನ್ನು ಮತ್ತೆ ಮಾಡಿಸುವಂತಹ ಕಥೆಯಾಗಿದೆ.     

ಕೊರೊನದಿಂದ ತತ್ತರಿಸಿ ಅಮಾಯಕ ಬಡಜೀವಗಳು ಹೊಟ್ಟೆ ಪಾಡಿಗಾಗಿ ಕದಿಯಲು, ಕೊಲೆ ಸುಲಿಗೆ ಮಾಡಲಾರಂಭಿಸಿದರು ಎಂಬ ವಿಚಾರಗಳು ನಮಗೆ ತಿಳಿದುಬಂದಿದೆ. ಹೊಟ್ಟೆಯ ಹಸಿವನ್ನು ತೀರಿಸಿಕೊಳ್ಳಲಿಕ್ಕಾಗಿ  ದೇವರ ಎದುರಿಗಿಟ್ಟ  ನೈವೇದ್ಯವನ್ನು ಕದ್ದು ತಿನ್ನಲೆಂದು ದೇವರ ಗರ್ಭಗುಡಿಯ ಹಿಂದೆ ನಿಂತುಕೊಂಡು ಅರ್ಚಕ ಮರೆಯಾಗುವುದನ್ನೇ ಕಾದು ಕುಳಿತುಕೊಳ್ಳುವ, ಊರಿನವರ ಕಣ್ಣಿಗೆ ಕಳ್ಳನಾಗಿ ಕಂಡ ಯುವಕ  ವಾಮನನ ಕಥೆ -ಅನ್ನಮಯ.      

ಹೆಣ್ಣಿನ ಸೌಂದರ್ಯಕ್ಕೆ ಸೋತು ಹೋಗದವ ಕಡಿಮೆ. ಮನಸ್ಸನ್ನು ಎಷ್ಟು ಕಡಿವಾಣದಲ್ಲಿಟ್ಟರೂ ಆಕೆಯ ಪ್ರೇಮಪಾಶಕ್ಕೆ ಸಿಲುಕಿಯೇ ಬಿಡುತ್ತಾನೆ  ಗಂಡಾದವ.ಅಂತೆಯೇ ಆಕೆಯ ಕಣ್ಣೋಣಕ್ಕೆ ಸಿಲುಕಿ, ಆಕೆಯೊಂದಿಗೆ ಮೋಜಿಗೆಂದು ತೆರಳಿ, ವಿಷಕನ್ಯೆಯಾದ ಆಕೆಯಿಂದ ತೊಂದರೆ ಅನುಭವಿಸಿ, ತನ್ನ ಕೆಲಸವನ್ನೇ ಕಳೆದುಕೊಳ್ಳುವ ಕಥಾನಾಯಕನ ಕಥೆ ಕ್ಯಾಸಿನೊ ಚೆಲುವೆಯ ಸುತ್ತ.   

ಅತೀ ಶ್ರೀಮಂತರ ಮದುವೆಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಬರೆದ ಕಥೆ ಕೊಡು ತಾಯಿ ವರ(ವ)ನ, ವಿದ್ಯಾವಂತನಾದರೂ ನಿರುದ್ಯೋಗಿಯಾಗಿ ಕದಿಯುವ ಕೆಲಸ ಮಾಡುತ್ತಿರುವ ವಿದ್ಯಾವಂತ ವ್ಯಕ್ತಿ ತನ್ನ ಅಂತರಾತ್ಮಕ್ಕೆ ವಿರೋಧವಾಗಿ ಕೆಲಸ ಮಾಡುತ್ತಿದ್ದರೂ ಆತನಲ್ಲಿ ಅಡಗಿರುವ ಮಾನವೀಯತೆಯನ್ನು ಸಾರುವ ಕಥೆ-ಮಂಚದಾಟ.  

ಸಾಹಿತಿ ಯೋರ್ವನನ್ನು ಗೌರವಿಸುವ ಮೊದಲು ಒಂದಷ್ಟು ತಮಾಷೆ ಮಾಡೋಣವೆಂದೆನಿಸಿ ಆತನಿಗೆ   ಏಪ್ರಿಲ್‌ಪೂಲ್ ಮಾಡಲೆಂದು ನಿರ್ಧರಿಸಿ, ಆತನ ಮೇಲೆ ಕೊಲೆಯ ಆಪಾದನೆ ಹೊರಿಸಿ, ಹೆದರಿಸಿ ಮತ್ತೆ ಕ್ಷಮೆಯಾಚಿಸಿ ಆತನನ್ನು ಗೌರವಿಸುವ ಪೊಲೀಸ್ ಡಿಪಾರ್ಟ್‌ ಮೆಂಟ್‌ನ ಕಥೆ- ಕೊ(ಳೆ )ಲೆ   

ಡೇಟ್ ಆಫ್ ಡೆತ್ ಲಭ್ಯ, ಅರ್ಥಾತ್ ಯಾರ ಸಾವು ಯಾವಾಗ ಎಂಬ ಮಾಹಿತಿಯನ್ನು ನೀಡಬಲ್ಲೆ ಎಂದು ಜನರನ್ನು ನಂಬಿಸಿ, ನಾಟಕವಾಡಿ, ಅವರಿಂದ ಹಣ ಲೂಟಿಮಾಡಿ ಒಟ್ಟು ಮಾಡಿದ್ದ ಮಾವಮ್ಮ, ಕೊನೆಗೆ ತಾನು ಅಕಸ್ಮಾತ್ತಾಗಿ ಸತ್ತಾಗ ಅವಳು ಒಟ್ಟುಮಾಡಿಟ್ಟ ಲಕ್ಷಗಟ್ಟಲೆ ಹಣ, ಅದನ್ನು ತೆಗೆದುಕೊಂಡು ಹೋಗಲೆಂದು ಬಂದ ಅವಳ ಗಂಡ,ಆದರೆ ಆ ಹಳೆಯ ನೋಟುಗಳು ಚಲಾವಣೆಯಲ್ಲಿರದೆ ವ್ಯರ್ಥವಾಗುವುದು, "ಯಾರು ಯಾರ ಸಾವು ನೋಡಿದರೇನೂ...ಈ ನೋಟುಗಳ ಸಾವು  ನೋಡಲಾಗಲಿಲ್ಲವಲ್ಲ  ಮಾವಮ್ಮನಿಗೆ" ಎನ್ನುವ ಲೇಖಕರ ಮಾತು, ಬದುಕಿನಲ್ಲಿ ವಿಪರೀತ ಲಾಲಸೆಗಳನ್ನು ತುಂಬಿಕೊಂಡು, ಅದಕ್ಕಾಗಿ ನಾನಾ ರೀತಿಯ ರೀತಿಯ ನಾಟಕವಾಡುವ ಮನುಷ್ಯ, ಸತ್ತ ನಂತರ ಮಾತ್ರ ಎಲ್ಲ ಬಿಟ್ಟು  ಹೋಗಬೇಕಾಗುತ್ತದೆ ಎನ್ನುವ ಸತ್ಯ ಅರುಹುವ ಕಥೆ "ಮಾಮಾರ ಎಲ್ಲೊ... ಕೋಗಿಲೆ ಅಲ್ಲೇ".  

ಹೀಗೆ ಮಹೇಶ್ ಆರ್‌. ನಾಯಕರ ಈ ಕಥಾ ಸಂಕಲನದಲ್ಲಿರುವ  ಎಲ್ಲ ಕಥೆಗಳಲ್ಲಿಯೂ  ಒಂದಲ್ಲ ಒಂದು ಸಂದೇಶ ತುಂಬಿಕೊಂಡಿದೆ. ಅದು ಹಾಸ್ಯಾತ್ಮಕವಾಗಿದ್ದರೂ ವಿಶೇಷ ಸೂಚನೆಯೊಂದು ಇಲ್ಲಿ ಕಂಡುಬರುತ್ತದೆ. ಜಪಾನಿ ಪ್ಲೇಟ್ ಎನ್ನುವ ವಿಶೇಷ ಕಥಾಸಂಕಲನವನ್ನು ಓದುಗರಿಗೆ ಕೊಟ್ಟ ನಾಯಕ್ ಅವರು ಅಭಿನಂದನಾರ್ಹರು... ಇನ್ನು ಮುಂದೆಯೂ ಅವರಿಂದ ಓದುಗರನ್ನು ಚಿಂತನೆಗೆ ಎಡೆ  ಮಾಡುವಂತಹ, ಮನಸ್ಸಿಗೆ ಮುದ ಕೊಡುವಂತಹ, ತುಟಿಯಲ್ಲಿ ನಗು ಬರಿಸುವಂತಹ, ಮೆದುಳಿಗೆ ಕೆಲಸ ಕೊಡುವಂತಹ ಶ್ರೇಷ್ಠ  ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತೇನೆ. ಹಾಗೆಯೇ ಈ ಅತ್ಯುತ್ತಮ ಕೃತಿಗೂ ಸಿಗಬೇಕಾದ ಮಾನ್ಯತೆ ಸಿಗಲೆಂದು ಆಶಿಸುತ್ತೇನೆ.   

- ಶಾರದಾ  ಎ. ಅಂಚನ್ ಕೊಡವೂರು 

- * * * -  


ಸುದ್ದಿ ಓದಿ