ಮುಂಡರಗಿ

13ನೇ ವರ್ಷದ ಕಾರ್ತಿಕೋತ್ಸವದಲ್ಲಿ ಜನಪದ ಸಿರಿ ಕಾರ್ಯಕ್ರಮ

13ನೇ ವರ್ಷದ ಕಾರ್ತಿಕೋತ್ಸವದಲ್ಲಿ ಜನಪದ ಸಿರಿ ಕಾರ್ಯಕ್ರಮ

ಲೋಕದರ್ಶನ ವರದಿ 

ಮುಂಡರಗಿ 12:  ಪ್ರತಿಯೊಂದು ಕಾರ್ಯಗಳನ್ನು ಭಕ್ತಿ ಮಾರ್ಗದಲ್ಲಿ ಮಾಡಿದರೆ ಮಾತ್ರ ಭಕ್ತರಿಗೆ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂದು ಕಂಡುಬರುತ್ತದೆ. ಹೀಗಾಗಿ ನಂಬಿದರೆ ದೇವರು ಕಾಣುತ್ತದೆ. ನಂಬದೇ ಇದ್ದರೆ ದೇವರು ಕೂಡಾ ಕಲ್ಲಾಗಿ ಕಾಣುತ್ತದೆ ಎಂದು ಹರ್ಲಾಪೂರ ಶ್ರೀಗುರು ಅಭಿನವ ಡಾ.ಕೊಟ್ಟೂರೇಶ್ವರ ಶ್ರೀಗಳು ಹೇಳಿದರು. 

  ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ಶನಿವಾರ ರಾತ್ರಿ ಕೊಟ್ಟೂರೇಶ್ವರ ದೇವಸ್ಥಾನದ 13ನೇ ವರ್ಷದ ಕಾರ್ತಿಕೋತ್ಸವದಲ್ಲಿ ಜನಪದ ಸಿರಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. 

  ಸ್ವಾಮಿಜಿಗಳಾದವರು ನಿರಂತರ ನಿಸ್ವಾರ್ಥ, ತ್ಯಾಗ, ಸೇವೆಯ ಪ್ರತಿಕವಾಗಿರಬೇಕು. ತಪಸ್ಸು ಎಂದರೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳಲ್ಲ. ಹಣತೆಯ ದೀಪ ಉರಿಯಲು ಎಣ್ಣೆಯಿಂದ ಮಾತ್ರ ಸಾಧ್ಯವಿಲ್ಲ, ಬತ್ತಿ, ಬೆಳಕಿನ ಅವಶ್ಯಕತೆ ಇದ್ದೇ ಇರುತ್ತದೆ. ಸಮಾಜದಲ್ಲಿ ಎಲ್ಲಾ ಜನಾಂಗದರು ಒಟ್ಟಾಗಿ ದೀಪವನ್ನು ಬೆಳಗಿಸುವದರಿಂದ ಜಾತಿಗಿಂತ ನೀತಿಯು ಹೆಚ್ಚು ಅಡಕವಾಗಿರಬೇಕು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮನರಂಜನೆ ಜನಪದ ಕಲೆಗಳ ಮೂಲಕ ಜನರ ಮನಸನ್ನು ಅರಳಿಸಿ ಒಂದಾಗಿ ಕೆಲಸ ಮಾಡಬೇಕು. ಅಂದಾಗ ಆಚರಣೆ ಹಾಗೂ ದೀಪೋತ್ಸವಕ್ಕೆ ಅರ್ಥ ಬರುತ್ತದೆ. ಜಾನಪದ ಸೊಗಡು ಹಳ್ಳಿಗಳಲ್ಲಿ ಹಾಸುಹೊಕ್ಕಾಗಿರುತ್ತದೆ ಇದು ಉಳಿದು ಬೆಳೆಯಬೇಕು ಎಂದರು. 

  ಪತ್ರಕರ್ತ ಸಿ.ಕೆ.ಗಣಪ್ಪನವರ ಮಾತನಾಡಿ, ನಶಿಸಿಹೋಗುತ್ತಿರುವ ಜಾನಪದ ಕಲೆಗಳನ್ನು ಮಠಮಂದಿರಗಳಿಗೆ ಸ್ವಾಮಿಗಳು ಉತ್ತೇಜನ ನೀಡುವ ಮೂಲಕ ಕಲಾವಿದರನ್ನು ಉಳಿಸಿದಂತಾಗುತ್ತದೆ. ನಮ್ಮಲ್ಲಿರುವ ಪ್ರತಿಭೆಗಳ ಅನಾವರಣಗೊಳ್ಳಲು ಅನುಕರಣೆಗೆ ಮಾರು ಹೋಗದೇ ಸ್ವಂತ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸಬೇಕು. ಆಯಾ ಆಸಕ್ತಿಗೆ ಅನುಗುಣವಾಗಿ ಮಕ್ಕಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವಂತಾಗಬೇಕು ಎಂದರು. 

  ಕಾರ್ಯಕ್ರಮವನ್ನು ಉದ್ಘಾಟಿಸಿದ ವೇ.ಮೂ ಶಂಕ್ರಯ್ಯ ಹಿರೇಮಠ ಮಾತನಾಡಿ, ಅದೃಷ್ಟ ಎಂಬುದು ಬೆವರಿನ ಫಲ ವಿನ: ಹಾಗೆ ಬರುವದಲ್ಲ. ದುಡಿಯುವ ರೈತ ಮಾತ್ರ ನಿಜವಾದ ರೈತ, ನಿಜ ದುಡಿಮೆ ಶ್ರಮವಿಲ್ಲದ ಸಂಪತ್ತು ಇದ್ದಂತೆ. ಅನ್ನ ಬೆಂದಾಗ ಊಟ, ನೊಂದಾಗಲೇ ಜೀವನ, ಹೀಗಾಗಿ ಕರ್ತವ್ಯ ವಿಮುಖರಾಗದೇ ಎಲ್ಲರೂ ನಡೆಯುವಂತಾಗಬೇಕು ಎಂದರು. 

  ಈ ವೇಳೆ ಕೊಟ್ರಯ್ಯ ಗವಾಯಿಗಳು ಶಾಂತಗಿರಿಮಠ, ಸಂಗೀತ ಸಾಧಕ ಬಸವರಾಜ ಅಡವಳ್ಳಿ, ಅಕ್ಷರಸಿರಿ ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಶಿಕ್ಷಕಿ ಸಾವಿತ್ರಿ ಲಕ್ಕುಂಡಿ, ಜಾನಪದ ಕಲಾವಿದ ರಾಚಯ್ಯಸ್ವಾಮಿ ಹಿರೇಮಠ, ರಾಜ್ಯ ಪ್ರಶಸ್ತಿ ವಿಜೇತ ಶಿವು ಭಜಂತ್ರಿ, ಕೊಟ್ರೇಶ ನಾಗಾವಿಮಠ, ಸಿ.ಕೆ.ಗಣಪ್ಪನವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

  ಕೊತಬಾಳ ಅರುಣೋದಯ ಕಲಾತಂಡ ಹಳ್ಳಿಗುಡಿ, ಬಸವಣ್ಣೆಪ್ಪ ಲಕ್ಕುಂಡಿ ಕಲಾತಂಡದಿಂದ ಜನಪದ ವಿವಿಧ ಕಲಾ ಪ್ರದರ್ಶನಗೊಂಡಿತು. 

  ಕಾರ್ಯಕ್ರಮದಲ್ಲಿ ಹಳ್ಳಿಕೇರಿ ಗ್ರಾಪಂ ಸದಸ್ಯ ಫಕ್ಕೀರ​‍್ಪ ಗೋಡಿ, ಉಮೇಶ ಹಂಚಿನಾಳ, ಈಶಪ್ಪ ನಾಲ್ಕುರವಿ, ದೂಳಪ್ಪ ಕಲ್ಲಳ್ಳಿ, ನಿಂಗಜ್ಜ ನಾಲ್ಕುರವಿ, ಕೊಟ್ರೇಶ ಲಕ್ಕುಂಡಿ, ಬಾಳನಗೌಡ ಚನ್ನಳ್ಳಿ, ವಿಜಯಲಕ್ಷ್ಮಿ ಲಮಾಣಿ, ಮಂಜುನಾಥ ಗಡ್ಡದ, ಗೀರೀಶ ಕರಮುಡಿ ಸೇರಿದಂತೆ ಕೊಟ್ಟೂರೇಶ್ವರ ಭಜನಾ ಸಂಘದವರು ಸಂಘಟಿಕರು ಪಾಲ್ಗೊಂಡಿದ್ದರು. 

  ಶಿವಾನಂದ ಲಕ್ಕುಂಡಿ ಸ್ವಾಗತಿಸಿದರು. ಸೋಮಣ್ಣ ಜೋಗಿನ ಪ್ರಾಸ್ತಾವಿಕ ಮಾತನಾಡಿದರು. 

ಸತೀಶ ಚಿಗರಿ ನಿರೂಪಿಸಿದರು. 


ಸುದ್ದಿ ಓದಿ