ರಾಷ್ಟ್ರೀಯ

ಲೋಕಸಭೆಯ ಸ್ಥಾನಗಳ ಸಂಖ್ಯೆ ಬದಲಿಸದೆ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಿ: ಜೈರಾಮ್ ರಮೇಶ್

ಲೋಕಸಭೆಯ ಸ್ಥಾನಗಳ ಸಂಖ್ಯೆ ಬದಲಿಸದೆ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಿ: ಜೈರಾಮ್ ರಮೇಶ್
ನವದೆಹಲಿ, ನ. 21 : ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆ ಹಾಗೂ ರಾಜ್ಯವಾರು ಸ್ಥಾನ ಹಂಚಿಕೆಯನ್ನು ಹಾಗೆಯೇ ಉಳಿಸಿಕೊಂಡು ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶನಿವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರಾಜಕೀಯ ಪಕ್ಷಗಳೊಂದಿಗೆ ಸಮಗ್ರ ಚರ್ಚೆ ನಡೆಸದೆ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಸಂಬಂಧಿಸಿದ ಹೊಸ ಸಂವಿಧಾನ ತಿದ್ದುಪಡಿ ಮಸೂದೆಗೆ ಮೂರನೇ ಎರಡರಷ್ಟು ಬಹುಮತ ಪಡೆಯಲು ನರೇಂದ್ರ ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

ಏಪ್ರಿಲ್ 17ರಂದು ಲೋಕಸಭೆಯಲ್ಲಿ ಹಿಂದಿನ ಮಸೂದೆ ಸೋಲು ಕಂಡ ಬಳಿಕ, ಹೊಸ ಮಸೂದೆಯಲ್ಲಿ ಏನೆಲ್ಲ ಅಂಶಗಳು ಇರಲಿವೆ ಎಂಬುದನ್ನು ಸರ್ಕಾರ ಇನ್ನೂ ಬಹಿರಂಗಪಡಿಸಿಲ್ಲ ಎಂದು ರಮೇಶ್ ಹೇಳಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗೆ ನಾಲ್ಕು ಪತ್ರಗಳನ್ನು ಬರೆದಿದ್ದರೂ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿಲ್ಲ ಎಂದು ಆರೋಪಿಸಿದರು.

ಸಂಸತ್ತಿನ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ 100 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ರಮೇಶ್, ಸಂಸತ್ತಿನಲ್ಲಿ ರಾಜ್ಯಗಳ ಪ್ರಾತಿನಿಧ್ಯವನ್ನು ಬದಲಾಯಿಸಬಹುದಾದ ಕ್ಷೇತ್ರ ಮರುವಿಂಗಡಣೆಗೆ ಮುನ್ನ ವ್ಯಾಪಕ ಸಮಾಲೋಚನೆ ನಡೆಸಿ ರಾಜಕೀಯ ಒಮ್ಮತ ಸಾಧಿಸಬೇಕು ಎಂದು ಹೇಳಿದರು. ಆರ್ಥಿಕ ಮತ್ತು ಇತರ ರಾಷ್ಟ್ರೀಯ ಸವಾಲುಗಳತ್ತ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದರು.

ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಕ್ಷೇತ್ರ ಮರುವಿಂಗಡಣೆಯನ್ನು ಮುಂದೂಡಿದ್ದನ್ನು ರಮೇಶ್ ಉಲ್ಲೇಖಿಸಿದರು. 1976ರಲ್ಲಿ ಮೊದಲ ಬಾರಿಗೆ ಮರುವಿಂಗಡಣೆಯನ್ನು ಮುಂದೂಡಲಾಗಿತ್ತು. ಬಳಿಕ, 2026ರ ನಂತರ ನಡೆಯುವ ಮೊದಲ ಜನಗಣತಿಯ ಅಂಕಿಅಂಶಗಳು ಪ್ರಕಟವಾಗುವವರೆಗೆ ಆ ನಿರ್ಬಂಧವನ್ನು ವಿಸ್ತರಿಸಲಾಯಿತು.

ಲೋಕಸಭೆಯ ಈಗಿನ ಸ್ಥಾನ ಹಂಚಿಕೆಯಲ್ಲಿಯೇ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸಬಹುದು. ಕೇಂದ್ರ ಸರ್ಕಾರದ ‘ವಿಕಸಿತ ಭಾರತ’ ಗುರಿ ಸಾಧಿಸಿದ ಬಳಿಕ ಸ್ಥಾನ ಹಂಚಿಕೆಯನ್ನು ಮರುಪರಿಶೀಲಿಸಬಹುದು ಎಂದು ರಮೇಶ್ ಸಲಹೆ ನೀಡಿದರು. ಸದ್ಯದ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಜಾರಿಯು ಮುಂದಿನ ಜನಗಣತಿಯ ಬಳಿಕ ನಡೆಯುವ ಕ್ಷೇತ್ರ ಮರುವಿಂಗಡಣೆಗೆ ಜೋಡಣೆಯಾಗಿದೆ.

ಸುದ್ದಿ ಓದಿ