ಜೈ ಹಿಂದ್ ಎನ್ನುವುದು ಪ್ರತಿಯೊಬ್ಬ ಭಾರತೀಯನ ಪಾಲಿಗೆ ಸಂಗೀತವಿದ್ದಂತೆ; ರವಿ ಮುನಿಸ್ವಾಮಿ 3500 ಕಿಲೋ ಮೀಟರ್ ಸೈಕಲ್ ಸವಾರಿ ಮಾಡಿ ಸ್ವದೇಶಿ ಚಿಂತನೆ ಬಿತ್ತಿದ ನಿವೃತ್ತ ಸೇವಾಧಿಕಾರಿಗಳು
ವಿಜಯಪುರ 06: ಜೈ ಹಿಂದ್ ಎನ್ನುವುದು ಕೇವಲ ಒಂದು ಘೋಷವಾಖ್ಯವಲ್ಲ. ಬದಲಿಗೆ ಭಾರತೀಯರ ಪಾಲಿಗೆ ಅದೊಂದು ಸಂಗೀತ. ಈ ಸಂಗೀತವು ಒಂದು ಬಾರಿ ಎದೆ ಹೊಕ್ಕರೆ ಬದುಕಿನುದ್ದಕ್ಕೂ ಎಂದಿಗೂ ಮರೆಯಾಗುವುದಿಲ್ಲ ಎಂದು ಮಾಜಿ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಅವರು ಹೇಳಿದರು. ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸ್ವದೇಶಿ ಬಳಸಿ ದೇಶ ಉಳಿಸಿ ಆಂದೋಲನಕ್ಕಾಗಿ 3500 ಕಿಲೋಮೀಟರ್ ಸೈಕಲ್ ಸವಾರಿ ಮಾಡಿಕೊಂಡು ಬಂದ ತಂಡಕ್ಕೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು; 1947ರಲ್ಲಿ ಸಾವಿರಾರು ಜನ ಹೋರಾಟ ಮಾಡುವ ಮೂಲಕ ದೇಶವನ್ನು ಉಳಿಸಿದ್ದೇವೆ. ಬ್ರಿಟೀಷರ ಕಪಿಮುಷ್ಠಿಯಿಂದ ದೇಶವನ್ನು ಬಿಡುಗಡೆಗೊಳಿಸಿದ್ದೇವೆ.
ಆದರೆ ಇಂದು ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ಅಂದು ಉಳಿಸಿದ ದೇಶವನ್ನು ಇಂದು ಬೆಳೆಸಬೇಕಾದ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅನ್ಯ ದೇಶದ ವಸ್ತುಗಳನ್ನು ಬಳಕೆ ಮಾಡುವುದರಿಂದ ನಮ್ಮ ದೇಶದ ಸಂಪತ್ತನ್ನು ಬೇರೆ ದೇಶಕ್ಕೆ ನಾವೇ ಕಳಿಸುತ್ತೇವೆ. ಆದರೆ ಅದರ ಸದ್ಭಳಕೆಯಾಗುವ ಬದಲು ನಮ್ಮ ದೇಶವನ್ನು ದುರ್ಬಲಗೊಳಿಸುವುದಕ್ಕೆಂದು ನಮ್ಮ ಸಂಪತ್ತನ್ನೆ ಬಳಕೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ದೇಶ ಅಭಿವೃದ್ಧಿಯ ಉನ್ನತ ಶಿಖರಕ್ಕೇರಬೇಕಾದಲ್ಲಿ ಹಾಗೂ ವಿಶ್ವದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕಾದಲ್ಲಿ ಸ್ವದೇಶಿ ವಸ್ತುಗಳ ಬಳಕೆ ಅನಿವಾರ್ಯ ಹಾಗೂ ಅವಶ್ಯಕವಾಗಿದೆ. ಅಂದು ಜೈ ಹಿಂದ್ ಎಂದು ಹೇಳಿದ ಮಾತು ಬರೀ ಘೋಷಣೆಯಲ್ಲ ಬದಲಿಗೆ ನಮ್ಮತನವನ್ನು ಸೂಚಿಸುವ ಮಹಾ ಮಂತ್ರವಾಗಿದೆ. ಅದನ್ನು ಪಠಿಸುತ್ತ ನಾವೆಲ್ಲರೂ ಒಟ್ಟಿಗೆ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಿವೃತ್ತ ಕಮಾಂಡರ್ ನೀಲಕಂಠ ಅವರು; ಒಂದು ಕಾಲದಲ್ಲಿ ಭಾರತೀಯ ಸೇನೆಯು ಯುದ್ಧ ಸಾಮಗ್ರಿಗಳಿಗಾಗಿ, ಶಸ್ತ್ರಾಸ್ತ್ರಗಳಿಗಾಗಿ ವಿದೇಶವನ್ನು ಅವಲಂಭಿಸಬೇಕಾಗುತ್ತಿತ್ತು. ಆದರೆ ಇಂದು ಆ ಸ್ಥಿತಿ ಇಲ್ಲ. ಪ್ರಧಾನ ಮಂತ್ರಿಗಳು ಘೋಷಣೆ ಮಾಡಿದ ಆತ್ಮನಿರ್ಭರ ಭಾರತದಿಂದಾಗಿ ಇಂದು ಸೇನೆಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಅದೆಷ್ಟರ ಮಟ್ಟಿಗೆ ಎಂದರೆ ಇಂದು ನೌಕಾಪಡೆ ಸೇರಿದಂತೆ ಎಲ್ಲ ಪಡೆಗಳಲ್ಲಿಯೂ ಸ್ವದೇಶಿ ಉಪಕರಣಗಳು ರಾರಾಜಿಸುತ್ತಿವೆ. ನಮ್ಮಲ್ಲಿನ ಸ್ವ ಸಾಮರ್ಥ್ಯವನ್ನು ಕಂಡಂತ ಶತ್ರು ರಾಷ್ಟ್ರಗಳು ಇಂದು ನಿದ್ದೆಯಲ್ಲಿಯೂ ನಡುಕಪಟ್ಟುಕೊಳ್ಳುತ್ತಿವೆ. ಇದಕ್ಕೆಲ್ಲ ಕಾರಣ ಸ್ವದೇಶಿ ಚಿಂತನೆ. ಎಲ್ಲಿಯವರೆಗೂ ನಮ್ಮಲ್ಲಿ ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುತ್ತೇವೆಯೋ ಅಲ್ಲಿಯವರೆಗೂ ಯಾವ ರಾಷ್ಟ್ರಗಳು ಸಹ ನಮ್ಮನ್ನು ಎದುರಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಭಾರತೀಯ ಕಿಸಾನ ಸಂಘದ ರಾಜ್ಯಾಧ್ಯಕ್ಷ ಭೀಮಸೇನ ಕೋಕರೆ; ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಸ್ವದೇಶಿ ಚಿಂತನೆ ಬೆಳೆಯುತ್ತಿದೆ. ಅದೇ ರೀತಿ ಕೃಷಿಯಲ್ಲಿಯೂ ಸಹ ಅದು ಮುಂದುವರೆಯುತ್ತಿದೆ. ಸಾವಯವ ಕೃಷಿ ಪದ್ಧತಿಯಿಂದಾಗಿ ಬದಲಾವಣೆಯ ಗಾಳಿ ಬೀಸುತ್ತಿದೆ. ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆಂದು ಆರೋಗ್ಯವಂತ ಆಹಾರ ಬೆಳೆಯುವುದು ಅವಶ್ಯವಾಗಿದ್ದು ಅದನ್ನು ಸಾವಯವ ಪದ್ಧತಿಯಿಂದ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಿಕಟಪೂರ್ವ ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಮುಖಂಡ ಚಂದ್ರಶೇಖರ ಕವಟಗಿ, ಮಾಜಿ ಸೇನಾಧಿಕಾರಿ ಕರ್ನಲ್ ಕಂದಸ್ವಾಮಿ, ಸುಬೇದಾರ ರಮೇಶ ಜಗತಾಪ ಸ್ವದೇಶಿ ಚಿಂತನೆಗಳ ಅರಿವು ಮೂಡಿಸಿದರು. ನಿವೃತ್ತ ಡೆಪ್ಯೂಟಿ ಕಮಿಷನರ್ ರಮೇಶ ಡಿ, ವೇದಮೂರ್ತಿ, ಐ ಟಿ ಮ್ಯಾನೇಜರ್ ಶಾಂತಾ, ಎಸ್.ಪಿ ಬಿರಾದಾರ, ಗುರುನಾಥ ಬಗಲಿ, ಮಲ್ಲನಗೌಡ ಪಾಟೀಲ ಉಪಸ್ಥಿತರಿದ್ದರು. ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು. ಪ್ರಾಂಶುಪಾಲ ಮಂಜುನಾಥ ಜುನಗೊಂಡ ವಂದಿಸಿದರು.