ರಾಷ್ಟ್ರೀಯ

ಶ್ರೀನಗರ ಎನ್ ಕೌಂಟರ್: ಸಮಗ್ರ ತನಿಖೆಗೆ ಆಗ್ರಹಿಸಿ ಸಂತ್ರಸ್ತ ಕುಟುಂಬದ ಪ್ರತಿಭಟನೆ

ಶ್ರೀನಗರ ಎನ್ ಕೌಂಟರ್: ಸಮಗ್ರ ತನಿಖೆಗೆ ಆಗ್ರಹಿಸಿ ಸಂತ್ರಸ್ತ ಕುಟುಂಬದ ಪ್ರತಿಭಟನೆ

ಶ್ರೀನಗರ, ಜ.4 : ಉಗ್ರರೆಂದು ಭಾವಿಸಿ ಭದ್ರತಾ ಪಡೆಯಿಂದ ಹತ್ಯೆಗೊಳಗಾದ ಮೂವರು ಯುವಕರ ಕುಟುಂಬ ಸದಸ್ಯರು ಸೋಮವಾರ ಶ್ರೀನಗರದಲ್ಲಿ ಪ್ರತಿಭಟನೆ ನಡೆಸಿ, ಶ್ರೀನಗರ ಎನ್ ಕೌಂಟರ್ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.ಈ ಮಧ್ಯೆ, ಹತ್ಯೆಗೀಡಾದದವರು ನಿರಪರಾಧಿಗಳು, ಅವರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲಾಗಿದೆ ಎಂದು ಸಂತ್ರಸ್ತರ ಕುಟುಂಬಗಳು ಹೇಳಿಕೆ ನೀಡಿದ ಬಳಿಕ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಈ ಘಟನೆಯ ಬಗ್ಗೆ  ನಿಷ್ಪಕ್ಷಪಾತ ತನಿಖೆ  ನಡೆಸುವಂತೆ ಒತ್ತಾಯಿಸಿವೆ.ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷ ಮೆಹಬೂಬಾ ಮುಫ್ತಿ, ಸೋಮವಾರ ಯುವಕರ ತಾಯಂದಿರು ತಮ್ಮ ಪುತ್ರರ ಶವಗಳನ್ನು ಹುಡುಕಲು ಬೀದಿಗಿಳಿಯುವಂತೆ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

ತೀವ್ರ ಚಳಿಯ ವಾತಾವರಣ ಮತ್ತು ಭಾರೀ ಹಿಮಪಾತದ ನಡುವೆಯೂ ಈ ಮೂವರ ಕುಟುಂಬ ಸದಸ್ಯರು ಸೋಮವಾರ ಶ್ರೀನಗರದ ಪ್ರೆಸ್ ಎನ್‌ ಕ್ಲೇವ್‌ನಲ್ಲಿ ಜಮಾಯಿಸಿ  ‘ಈ ಮುಗ್ಧ ಹತ್ಯೆಯ ಬಗ್ಗೆ ಸಮಗ್ರ ತನಿಖೆ ನಡಸಬೇಕು’, ‘ಮುಗ್ಧರ ಹತ್ಯೆಯನ್ನು ನಿಲ್ಲಿಸಿ’ ಎಂದು ಬರೆದಿರುವ ಫಲಕಗಳನ್ನು ಹಿಡಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.ಮೃತದೇಹಗಳನ್ನು ಕುಟುಂಬಗಳಿಗೆ ಹಿಂದಿರುಗಿಸಲು ಅವರು ಈಗಾಗಲೇ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಪತ್ರ ಬರೆದಿದ್ದಾರೆ ಮತ್ತು ಹತ್ಯೆಗಳ ಬಗ್ಗೆ ಸಮಗ್ರ ತನಿಖೆ ಆರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆದಾಗ್ಯೂ, ಪೋಷಕರ ಆರೋಪಗಳನ್ನು ತಳ್ಳಿಹಾಕಿರುವ ಪೊಲೀಸ್ ವಕ್ತಾರರು, ಭಯೋತ್ಪಾದಕ ಪಟ್ಟಿಯಲ್ಲಿ ಈ ಮೂವರ ಹೆಸರು ಇಲ್ಲದಿದ್ದರೂ, ಅವರಲ್ಲಿ ಇಬ್ಬರು ಉಗ್ರರ ಸಹಾಯಕರಾಗಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.ಶ್ರೀನಗರ ಎನ್ ಕೌಂಟರ್ ಬಗ್ಗೆ ನಿಷ್ಪಕ್ಷಪಾತ ಮತ್ತು ಸಮಯಕ್ಕೆ ಅನುಗುಣವಾಗಿ ತನಿಖೆ ನಡೆಸುವ ಬೇಡಿಕೆಯನ್ನು ಬೆಂಬಲಿಸಿ ರಾಜಧಾನಿಯಲ್ಲಿ ಶುಕ್ರವಾರ ಸ್ವಯಂಪ್ರೇರಿತ ಮುಷ್ಕರ ನಡೆಸಲಾಯಿತು.ಡಿಸೆಂಬರ್ 30 ರಂದು ಶ್ರೀನಗರ ಹೊರವಲಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಮುಖಾಮುಖಿಯಲ್ಲಿ  ಐಜಾಜ್ ಅಹ್ಮದ್ ಗನಿ, ಪುಲ್ವಾಮಾದ ಅಥರ್ ಮುಷ್ತಾಕ್ ಮತ್ತು ಶೋಪಿಯಾನ್‌ ನ ಜುಬೇರ್ ಅಹ್ಮದ್ ಲೋನ್ ಎಂಬವರು ಹತ್ಯೆಯಾಗಿದ್ದಾರೆ ಭದ್ರತಾ ಪಡೆ ಹೇಳಿತ್ತು. 


ಸುದ್ದಿ ಓದಿ