ಇಂಡಿ

ಇಂಡಿ ತಾಲೂಕು ಸಮಗ್ರ ನೀರಾವರಿಗೆ ಜೆಡಿಎಸ್ ಹೋರಾಟ ರಾಜಕೀಯ ಪ್ರೇರಿತ

ಇಂಡಿ ತಾಲೂಕು ಸಮಗ್ರ ನೀರಾವರಿಗೆ ಜೆಡಿಎಸ್ ಹೋರಾಟ ರಾಜಕೀಯ ಪ್ರೇರಿತ

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಆರೋಪ 

ಇಂಡಿ 06: ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಇಂಡಿ ತಾಲೂಕು ಸಮಗ್ರ ನೀರಾವರಿಗೆ ಹೋರಾಟ ನಡೆಸುತ್ತಿರುವುದು ರಾಜಕೀಯ ಪ್ರೇರಿತವಾಗಿದೆ. ವಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಈ ಹೋರಾಟ ನಡೆಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಆರೋಪಿಸಿದರು. 

ಅವರು ಬುಧವಾರ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ಈಗ ಹೋರಾಟ ಮಾಡುತ್ತಿರುವವರು. ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸಮ್ಮಿಶ್ರ ಸರಕಾರ ಇದ್ದಾಗಲೇ ಈ ಯೋಜನೆಗಳನ್ನು ಮಾಡಿಸಬೇಕಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಇದ್ದರು. ಆಗ ರೈತರಿಗೆ ನೀರಿನ ಅವಶ್ಯಕತೆ ಇರಲಿಲ್ಲವೇ ಎಂದು ಪ್ರಶಿಸಿದರು. 

ಬಿಜೆಪಿ ಪಕ್ಷದ ಮೇಲೆ ಗೂಬೆ ಕೂಡಿಸುವ ಹುನ್ನಾರ ಇದಾಗಿದೆ. ಈಗಾಗಲೆ ರೇವಣಸಿದೆ್ಧೇಶ್ವರ ಏತ ನೀರಾವರಿ ಯೋಜನೆಗೆ ನಕ್ಷೆ ಸಿದ್ಧವಾಗಿದೆ. ಸರಕಾರದ ಮುಂದೆ ಏತ ನೀರಾವರಿ ಯೋಜನೆಯ ಕಡತವಿದೆ. ರೇವಣಸಿದೆ್ದೇಶ್ವರ ಏತ ನೀರಾವರಿ ಯೋಜನೆ ಕಾರ್ಯರೂಪಕ್ಕೆ ತರಲು ನಾನು ಸಹ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು. 

ಇಂಡಿ ತಾಲೂಕು ನೀರಾವರಿ ಬಬಲೇಶ್ವರ ಶಾಸಕ ಎಂ.ಬಿ ಪಾಟೀಲರು ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ನಾನು ನೀರಾವರಿ ಮಾಡಿದ್ದೇನೆ ಎಂದು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದರು. 

ನೀರಾವರಿಯಲ್ಲಿ ನಿಮ್ಮ ಪಾತ್ರಕ್ಕಿಂತ ಬಿಜೆಪಿ ಪಕ್ಷದ ಪಾತ್ರ ಪ್ರಮುಖ ಎಂಬುದು ಮರೆಯಬೇಡಿ. 2008-2013 ರ ಅವಧಿಯಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಅಂದಿನ ಮುಖ್ಯಮಂತ್ರಿ ಯಡಿಯೂರ​‍್ಪನವರು, ನೀರಾವರಿ ಸಚಿವ ಈಶ್ವರ​‍್ಪನವರ ಸಹಕಾರದಿಂದ ನೀರಾವರಿಯಾಗಿದೆ. ಗುತ್ತಿ ಬಸವಣ್ಣ ಏತ ನೀರಾವರಿಗೆ ಬಿಜೆಪಿ ಸರಕಾರವೇ 1000 ಕೋಟಿ ಅನುದಾನ ನೀಡಿದೆ ಎಂದರು. 

ನೀವು ಸರಕಾರಕ್ಕೆ ಪತ್ರ ಕೊಟ್ಟಿರಬಹುದು ಇಂತಹ ನೂರಾರು  ಪತ್ರಗಳು ನಾನು ಕೊಟ್ಟಿರುವೆ ಎಲ್ಲಿಯೂ ಕೂಡಾ ನಾವು ಹೇಳಿಕೊಂಡಿಲ್ಲ. ಗೋವಿಂದ ಕಾರಜೋಳ ಅವರು ರಾಜ್ಯದ ನೀರಾವರಿ ಮಂತ್ರಿಯಾಗಿದ್ದಾರೆ. ನಮ್ಮ ಜಿಲ್ಲೆಗೆ ಮಾತ್ರ ಸೀಮಿತ ಅಲ್ಲ. ಹೀಗಾಗಿ ಅವರು ಬರುವವರೆಗೆ ಹೋರಾಟ ಕೈ ಬಿಡಲ್ಲ ಎಂಬುದು ಸರಿಯಲ್ಲ ಎಂದರು. 

ಈಗಾಗಲೇ ಹೋರ್ತಿ ರೇವಣಸಿದ್ದೇಶ್ವರ ಎತ ನೀರಾವರಿ ಯೋಜನೆ ಪ್ರಸ್ತಾವನೆ ಸರಕಾರದ ಮುಂದೆ ಇದೆ. ಕೋಲಾರದಂದ ವಿಜಯಪುರ ನಗರದ  ಮಹಿಳಾ ವಿಶ್ವ ವಿದ್ಯಾಲಯದವರೆಗೆ 48.8 ಕಿ.ಮೀ ಉದ್ದದ ಯೋಜನೆಯಾಗಿದ್ದು ಇದರಿಂದ 45 ಕೆರೆಗಳು ತುಂಬುತ್ತವೆ. 2018-19 ರಲ್ಲಿ ಸುಮಾರು 2690 ಕೋಟಿ ಯೋಜನಾ ಗಾತ್ರವಾಗಿದ್ದು, ಪ್ರಥಮ ಹಂತದ 3.24 ಟಿಎಂಸಿ ನೀರು ಬಳಕೆ ಮಾಡಿ 28 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಮಾಡುವುದು ಮತ್ತು 2ನೇ ಹಂತದ 2.51 ಟಿ.ಎಂ.ಸಿ. ನೀರು ಬಳಕೆ ಮಾಡಿಕೊಂಡು 21370 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒಳಪಡುತ್ತಿದೆ.  ಒಟ್ಟು 49370 ಹೆಕ್ಟರ್ ಭೂ ಪ್ರದೇಶಕ್ಕೆ ನೀರಾವರಿ ಒಳಪಡುತ್ತದೆ ಎಂದು ವಿವರಿಸಿದರು. 

ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ರೈತರೂ ಸಹ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಆಡಳಿತ ಪಕ್ಷದ ಸಚಿವರು ಬಂದು ರೈತರ ಸಮಸ್ಯೆ ಆಲಿಸಬೇಕಲ್ಲವೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಬಿಜೆಪಿ ಹಿರಿಯ ಮುಖಂಡ ಸಿದ್ದಲಿಂಗ ಹಂಜಗಿ ಜೆಡಿಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಗೆ ಬೆಂಬಲಿಸಿದ ರೈತರೆಲ್ಲರೂ ಜೆಡಿಎಸ್ ಕಾರ್ಯಕರ್ತರೇ ಎಂದು ಉತ್ತರಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಬಿಜೆಪಿ ಜಿಲ್ಲಾ ಮುಖಂಡ ಅನೀಲ ಜಮಾದಾರ ರೈತರು ತಮಗೆ ನೀರು ಬೇಕೆಂದು ಹೋರಾಟಕ್ಕೆ ಬೆಂಬಲಿಸಿದ್ದಾರೆ ಎಂದು ಸಮಜಾಯಿಸಿದರು. 

ಪತ್ರಿಕಾ ಗೋಷ್ಠಿಯಲ್ಲಿ ಭಾಜಪ ಜಿಲ್ಲಾ ಮುಖಂಡ ಅನೀಲ ಜಮಾದಾರ. ಅನೀಲಗೌಡ ಬಿರಾದಾರ, ಸಿದ್ದಲಿಂಗ ಹಂಜಗಿ, ದೇವೇಂದ್ರ ಕುಂಬಾರ, ಭೀಮಸಿಂಗ್ ರಾಠೋಡ, ಸೋಮು ನಿಂಬರಗಿಮಠ, ಶ್ರೀಶೈಲಗೌಡ ಬಿರಾದಾರ, ಗಜಾಕೋಶ ಪುಟಾಣಿ, ಬಾಳು ಮುಳಜಿ,  ಶಾಂತು ಕಂಬಾರ, ಅಣ್ಣು ಮದರಿ, ವಿಜಯಕುಮಾರ ಮೂರಮನ್, ವಿಜಯಕುಮಾರ ರಾಠೋಡ, ಮಲ್ಲು ಹಾವಿನಾಳಮಠ, ಮಲ್ಲು ವಾಲೀಕಾರ, ಗೋವಿಂದ ರಾಠೋಡ, ದತ್ತಾ ಬಂಡೇನವರ್, ಸಿದ್ದು ಹೊನಕೊರೆ, ಮಲ್ಲು ಕಾಡೆ, ದಯಾನಂದ ಹುಬ್ಬಳ್ಳಿ, ಶಾಂತು ಬಿರಾದಾರ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ