ಬಳ್ಳಾರಿ

ಜೆಡಿಎಸ್ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆ

ಜೆಡಿಎಸ್ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆ

ಲೋಕದರ್ಶನ ವರದಿ 

ಬಳ್ಳಾರಿ 15: ಕುರೇಕುಪ್ಪ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆ ದಿನವಾಗಿದ್ದರಿಂದ ಪುರಸಭೆಯ 7ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದರು.  


1ನೇ ವಾರ್ಡ್‌ನಿಂದ ಸಂಡೂರು ವಿಧಾನಸಭಾ ಕ್ಷೇತ್ರದ ತಾಲೂಕು ಅಧ್ಯಕ್ಷ ಕುರೇಕುಪ್ಪ ಸೋಮಪ್ಪ ಮತ್ತು 17ನೇ ವಾರ್ಡ್‌ಗೆ ಶೀನಪ್ಪ ಅವರು ನಾಮಪತ್ರ ಸಲ್ಲಿಸಿದರು. ಅಲ್ಲದೆ, 2,3,4,5 ಮತ್ತು 6 ನೇ ವಾರ್ಡ್‌ ಸೇರಿದಂತೆ ಒಟ್ಟು 7 ವಾರ್ಡ್‌ ಗಳಿಗೆ ಜೆಡಿಎಸ್ ಅಭ್ಯರ್ಥಿಗಳು ಪಕ್ಷದ ಜಿಲ್ಲಾಧ್ಯಕ್ಷ ಮೀನಹಳ್ಳಿ ತಾಯಣ್ಣ, ರಾಜ್ಯ ಉಪಾಧ್ಯಕ್ಷ ಮುನ್ನಾಬಾಯಿ ಅವರ ಸಮಕ್ಷಮದಲ್ಲಿ ನಾಮಪತ್ರ ಸಲ್ಲಿಸಿದರು.  


ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಮೀನಹಳ್ಳಿ ತಾಯಣ್ಣ ಅವರು, ಕುರೇಕುಪ್ಪ ಪುರಸಭೆಗೆ 7 ವಾರ್ಡ್‌ ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಪೈಕಿ 6ಜನ ಅಭ್ಯರ್ಥಿಗಳ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ಕಳೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದ ನಾಲ್ಕು ಅಭ್ಯರ್ಥಿಗಳು ಜಯಗಳಿಸಿದ್ದರು. ಈ ಚುನಾವಣೆಯಲ್ಲಿ 6 ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದರು.  


ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ 42ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ಅಲ್ಲದೆ, ಅವರ ಜನಪರ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಯಾವುದೇ ಆಸೆ ಆಮಿಷಗಳಿಗೆ ಮತದಾರರು ಒಳಗಾಗದೇ ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು. ಕುರುಗೋಡು ಪುರಸಭೆಯಲ್ಲಿ 7 ಜನ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅಲ್ಲಿ ಎರಡರಿಂದ ಮೂರ ಜನ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಮುಖಂಡರಾದ ಲಾಲ್ ಸ್ವಾಮಿ, ಚಾಗನೂರು ನಾಗರಾಜ್, ಮಿಲ್ಲರ್ ಪೇಟೆ ವನ್ನೂರಸ್ವಾಮಿ (ವಂಡ್ರಿ), ಪಕ್ಷದ ಸಂಡೂರು ತಾಲೂಕು ಪ್ರಧಾನ ಕಾರ್ಯದರ್ಶಿ ಹುಸೇನ್ ಪೀರಾ ದೊಡ್ಡಮನಿ, ಮೀನಹಳ್ಳಿ ಬಸಪ್ಪ, ಯುವ ಜನತಾದಳ ಜಿಲ್ಲಾಧ್ಯಕ್ಷ  ಡಿ.ವಿಜಯಕುಮಾರ್, ಹಾಜಿಬಾಬಾ ಖಾನ್, ಶೇಕ್ಷಾವಲೀ, ಪುಷ್ಪಾ, ಜಯಲಕ್ಷ್ಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ