ಸೌಂದತ್ತಿ

ಸಾಂಕ್ರಾಮಿಕ ರೋಗಗಳು ಬರದಂತೆ ಜಾಗೃತಿ ಮೂಡಿಸುವದು ಅವಶ್ಯ: ವೈದ್ಯ

ಸಾಂಕ್ರಾಮಿಕ ರೋಗಗಳು ಬರದಂತೆ ಜಾಗೃತಿ ಮೂಡಿಸುವದು ಅವಶ್ಯ: ವೈದ್ಯ

ಸವದತ್ತಿ 30: ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆಗಿಂತ ಅವುಗಳು ಬರದಂತೆ ಎಚ್ಚರ ವಹಿಸುವದು, ಜನರಲ್ಲಿ ಜಾಗೃತಿ ಮೂಡಿಸುವದು ಅವಶ್ಯ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು. 

ಇಲ್ಲಿನ ತಾಲೂಕಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ತಾಪಂ, ಪಿಆರ್‌ಇಗಳಿಂದ ಜರುಗಿದ ಕುಡಿಯುವ ನೀರಿನ ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಕಲುಷಿತ ನೀರು, ಸೋಂಕಿತ ಆಹಾರ ಪದಾರ್ಥಗಳ ಸೇವನೆಯಿಂದ ಕಾಲರಾ, ಢೆಂಘೀ, ಝಾಂಡಿಸ್‌ನಂತಹ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತವೆ. ಜನರ ಸೇವೆಗೆಂದೇ ಇರುವ ನಾವುಗಳು ಜನತೆಯ ಆರೋಗ್ಯದ ಕುರಿತು ಕಾಳಜಿ ಹೊಂದಿರಬೇಕು. ಜನತೆಗೆ ಆರೋಗ್ಯ ಸಮಸ್ಯೆ ಉಂಟಾದರೇ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದರು.  

 ಇಓ ಯಶವಂತಕುಮಾರ ಮಾತನಾಡಿ, ಸಾಮಾನ್ಯವಾಗಿ ಕುಡಿಯುವ ನೀರಿನಿಂದ ಸಾಂಕ್ರಾಮಿಕ ಕಾಯಿಲೆಗಳ ಹರಡುತ್ತವೆ. ಇಂತಹ ದುರ್ಘಟನೆಗಳ ತಡೆಗೆ ಗ್ರಾಮ ಮಟ್ಟದಲ್ಲಿ ಆರೋಗ್ಯ, ಪಂಚಾಯಿತಿ ಸೇರಿ ಸಮನ್ವಯ ಸಾಧಿಸಿ ಕ್ರಮ ಜರುಗಿಸಬೇಕು. ಸಾರ್ವಜನಿಕರಿಗೆ ನಿತ್ಯವೂ ಶುದ್ಧ ಹಾಗೂ ಸ್ಚಚ್ಛ ನೀರು ಪೂರೈಸಲೆಂದೇ ಆರ್‌ಓ ಪ್ಲಾಂಟ್, ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಜಾರಿಗೆ ತಂದಿದೆ. ಕಾರಣ ಜವಾಬ್ದಾರಿಯುತ ಹುದ್ದೆಯಲ್ಲಿರುವ ನಾವುಗಳು ನಿತ್ಯವೂ ಜನರಿಗೆ ಶುದ್ಧ ನೀರು ಪೂರೈಸುವಂತಾಗಬೇಕು. ಆರ್‌ಓ ಪ್ಲಾಂಟ್ ನೀರನ್ನೇ ಜನರು ಸೇವಿಸುವಂತೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದರು. 

ಕಾರ್ಯಾಗಾರದಲ್ಲಿ ಪಿಡಿಓಗಳಿಗೆ ನೀರಿನ ಶುದ್ಧತೆ ಅಳೆಯುವ ಕಿಟ್ ವಿತರಿಸಲಾಯಿತು. ಶಾಸಕ ವಿಶ್ವಾಸ್ ವೈದ್ಯ ಜಾಗೃತಿ ಕರಪತ್ರ ಅನಾವರಣಗೊಳಿಸಿದರು. ಆರೋಗ್ಯ ಇಲಾಖೆಯ ಸೇವೆ ಗಮನಿಸಿ ಸಿಎಮ್‌ಒ ಎಚ್‌.ಎಮ್‌. ಮಲ್ಲನಗೌಡರ ಹಾಗೂ ಟಿಎಚ್‌ಓ ಶ್ರೀಪಾದ ಸಬನ್ನಿಸ್ ಅವರಿಗೆ ಸನ್ಮಾನಿಸಲಾಯಿತು. 

ಪಿಆರ್‌ಇ ಎಇಇ ಬಸನಗೌಡ ಅಯ್ಯನಗೌಡರ, ಎಚ್‌.ಎಮ್‌. ಮಲ್ಲನಗೌಡರ, ಆರ್‌.ಎಸ್‌. ರಕ್ಕಸಗಿ, ಮಹೇಶ ತೆಲಗಾರ, ರೇಣುಕಾ ನಾಡಗೌಡರ, ವನಿತಾ ಕನ್ಯಾಳ ಹಾಗೂ ಇತರ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ