ಬಳ್ಳಾರಿ

ಅನ್ಯಭಾಷೆಯಿಂದ ನಾಟಕಗಳನ್ನು ಅನುವಾದ ಮಾಡುವುದು ಸುಲಭದ ಕೆಲಸವಲ್ಲ: ಪ್ರೊ. ಗಾಯಕ್ವಾಡ್

ಅನ್ಯಭಾಷೆಯಿಂದ ನಾಟಕಗಳನ್ನು ಅನುವಾದ ಮಾಡುವುದು ಸುಲಭದ ಕೆಲಸವಲ್ಲ: ಪ್ರೊ. ಗಾಯಕ್ವಾಡ್

ಬಳ್ಳಾರಿ 25: ಅನ್ಯ ಭಾಷೆಯಿಂದ ನಾಟಕಗಳನ್ನು ಅನುವಾದ ಮಾಡುವುದು ಸುಲಭದ ಕೆಲಸವಲ್ಲ. ಅನುವಾದಕರು ಭಾಷೆಯಲ್ಲಿರುವ ಭಾವನೆಗಳನ್ನು ಇನ್ನೊಂದು ಭಾಷೆಗೆ ಬಹಳ ಎಚ್ಚರಿಕೆಯಿಂದ ತರುತ್ತಾರೆ. ಇದರಿಂದ ಒಂದು ಪ್ರದೇಶದ, ದೇಶದ ಸಂಸ್ಕೃತಿ, ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪ್ರೊ.ವಿಠ್ಠಲರಾವ್ ಗಾಯಕ್ವಾಡ್ ಅವರು ಅಭಿಪ್ರಾಯಪಟ್ಟರು.  

ಅವರು ಬಳ್ಳಾರಿಯಲ್ಲಿನ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಕನ್ನಡ ಭವನದಲ್ಲಿ ಗಾಯತ್ರಿ ಪ್ರಕಾಶನವು ಹಮ್ಮಿಕೊಂಡಿದ್ದ “ಕೆರೆಯ ಕಾವಲುಗಾರ ಮತ್ತು ಇತರ ನಾಟಕಗಳು” ಎಂಬ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.  ಅನುವಾದಕರು ಬೇರೆ ಬೇರೆ ಭಾಷೆಗಳಿಂದ ಕೃತಿಗಳನ್ನು ತಮ್ಮ ಭಾಷೆಗಳಿಗೆ ಅನುವಾದ ಮಾಡುವುದರಿಂದ ಲೇಖಕರು, ಸಾಹಿತಿಗಳು ಪರಿಚಯವಾಗುತ್ತಾರೆ. ಈ ನಿಟ್ಟಿನಲ್ಲಿ ಅನುವಾದಕರಾದ ಮಂಜುನಾಥ ರೆಡ್ಡಿ ಕೆ.ಪಿ ಅವರು ಉತ್ತಮವಾದ ಅನುವಾದವನ್ನು ಮಾಡಿದ್ದಾರೆ ಎಂದು ತಿಳಿಸಿದರು.  

ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಿಷ್ಠಿರುದ್ರ​‍್ಪ ಅವರು ಮಾತನಾಡಿ, ಬಳ್ಳಾರಿಯು ಕೇವಲ ಬಿಸಿಲು, ಗಣಿಗೆ ಪ್ರಸಿದ್ಧಿಯಾಗಿಲ್ಲ. ಕನ್ನಡ ಸಾಹಿತ್ಯ ರಚನೆ ಮತ್ತು ನಾಟಕ ರಚನೆ,  ಕಲಾವಿದರಿಗೂ ಪ್ರಸಿದ್ಧಿಯನ್ನು ಪಡೆದಿದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ.ಯು.ಶ್ರೀನಿವಾಮೂರ್ತಿ ಅವರು ಕೃತಿಯನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಸತ್ಯನಾರಾಯಣರೆಡ್ಡಿ, ಪ್ರಕಾಶಕ ಡಾ.ಕೆ.ಬಸಪ್ಪ, ಅನುವಾದಕ ಮಂಜುನಾಥರೆಡ್ಡಿ ಕೆ.ಪಿ ಅವರು ಉಪಸ್ಥಿತರಿದ್ದರು ಮಾತನಾಡಿದರು.  

ಅಧ್ಯಕ್ಷತೆಯನ್ನು ವಹಿಸಿದ್ದ ಸರ್ಕಾರಿ(ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟರೆಡ್ಡಿ ಅವರು ಮಾತನಾಡಿದರು.  

 ಈ ಸಂದರ್ಭದಲ್ಲಿ ಪ್ರೊ.ವಿಠ್ಠಲರಾವ್ ಗಾಯಕ್ವಾಡ್, ವೆಂಕಟರೆಡ್ಡಿ, ಶ್ರೀನಿವಾಸಮೂರ್ತಿ ಯು ಇವರನ್ನು ಸನ್ಮಾನಿಸಲಾಯಿತು.  

ಆರಂಭದಲ್ಲಿ ಕೆ.ಸುಂಕಪ್ಪ ಪ್ರಾರ್ಥಿಸಿದರು. ವೆಂಕಟೇಶ್ ಸ್ವಾಗತಿಸಿದರು. ನಾಗಿರೆಡ್ಡಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. 


ಸುದ್ದಿ ಓದಿ