ನಿಯಮಬಾಹಿರ ವೇತನ ಬಿಡುಗಡೆ : ಚೇತನ ಶಿವಶಿಂಪಿ ಲೋಕಾಯುಕ್ತರಿಗೆ ದೂರು
ಮುದ್ದೇಬಿಹಾಳ 25: ತಾಲೂಕಿನ ಢವಳಗಿ ಗ್ರಾಮದ ಬಸವ ಬಾಲ ಭಾರತಿ ಪ್ರಾಥಮಿಕ ಶಾಲೆಯ ಬೋಧಕ ಸಿಬ್ಬಂದಿಗಳ 11 ತಿಂಗಳುಗಳ ವೇತನವನ್ನು ಕಾನೂನು ಬಾಹಿರವಾಗಿ ಒಂದೇ ಬಾರಿಗೆ ಬಟವಡೆ ಮಾಡಿದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಿ.ಧರಿಕಾರ ಸೇರಿದಂತೆ ವೇತನ ಬಟವಡೆಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸರ್ಕಾರಿ ನೌಕರರ ಮೇಲೆ ಅಧಿಕಾರ ದುರ್ಬಳಕೆ ಆರೋಪ ಹೊರಿಸಿ ನ್ಯಾಯವಾದಿ ಹಾಗೂ ಪತ್ರಕರ್ತ ಚೇತನ ಶಿವಶಿಂಪಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಕೆಲವು ವರ್ಷಗಳ ಕಾಲ ಶಾಲೆ ಮುಚ್ಚಲ್ಪಟ್ಟಿದ್ದು ಕಾನೂನು ಬಾಹಿರವಾಗಿ ಅನುಮೋದನೆ ಗೊಂಡಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಹಲವಾರು ದೂರುಗಳನ್ನು ನೀಡಿದ್ದು ಕೂಲಂಕುಷವಾಗಿ ಪರೀಶೀಲನೆ ನಡೆಸದೇ ವೇತನ ಬಟೆವಡೆ ಮಾಡಿದ್ದು ಕಾನೂನು ಬಾಹಿರವಾಗಿದೆ. ಅಲ್ಲದೇ ಶಾಲೆಯವರು ಮಾಹಿತಿ ಹಕ್ಕು ಅಧಿನಿಯಮದ ಅಡಿ ಕೋರಲಾದ ಮಾಹಿತಿಗಳಿಗೆ ಸರಿಯಾದ ಮಾಹಿತಿ ನೀಡದಕಾರಣ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಅವರಿಗೆ 25 ಸಾವಿರ ದಂಡ ವಿಧಿಸಿ ಮಾಹಿತಿ ಆಯುಕ್ತರು ಆದೇಶಿಸಿದ್ದರು. ಇದರ ಬಳಿಕವೂ ಹಲವಾರು ಮಾಹಿತಿಗಳಿಗೆ ಯಾವುದೇ ಮಾಹಿತಿ ನೀಡದ ಕಾರಣ ಗಾಂಜಿ ಅವರು ವೇತನ ತಡೆಹಿಡಿಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಆ ಪತ್ರದನ್ವಯ ಗಾಂಜಿ ಅವರ ನಂತರದ ಬಿಇಓ ಎಚ್.ಜಿ.ಮಿರ್ಜಿ ಅವರು ಕೋರಲಾದ ಎಲ್ಲ ದಾಖಲೆಗಳನ್ನು ಕೂಡಲೇ ಸಲ್ಲಿಸುವಂತೆ ಮತ್ತು ಸಲ್ಲಿಸದಿದ್ದಲ್ಲಿ ಶಾಲೆಯ ಎಲ್ಲ ಬೋಧಕ ಸಿಬ್ಬಂದಿಗಳ ವೇತನವನ್ನು ತಡೆಹಿಡಿಯುವದಾಗಿ ಎರಡು ಬಾರಿ ಸ್ಪಷ್ಟ ಎಚ್ಚರಿಕೆ ನೀಡಿದ್ದರೂ ಮಾಹಿತಿ ನೀಡದಕಾರಣ ವಿಚಾರಣೆಗೆತ್ರಿ ಸದಸ್ಯರತಂಡ ರಚಿಸಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ವೇತನವನ್ನು ತಡೆಹಿಡಿದಿದ್ದರು.
ಮಿರ್ಜಿಯವರ ನಂತರ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜೆ.ನಾಯಕ ಕೆಲ ತಿಂಗುಗಳ ವೇತನವನ್ನು ತಡೆಹಿಡಿದು ನಂತರದ ಅವಧಿಯಲ್ಲಿ ಒಂದೇ ಬಾರಿಗೆ ತಡೆಹಿಡಿಯಲಾದ 8 ತಿಂಗಳ ವೇತನವನ್ನೂ ಬಟವಡೆ ಮಾಡಿ ಕಾನೂನು ಉಲ್ಲಂಘಿಸಿದ್ದರು. ಬಳಿಕ ನಾನು ಇವರ ಅಧಿಕಾರ ದುರ್ಬಳಕೆ ಬಗ್ಗೆ ಲೋಕಾಯುಕ್ತರಲ್ಲಿ ದೂರಲಾಗಿ (ಪ್ರಕರಣ ದಾಖಲಾಗಿ ವಿಚಾರಣೆ ಪ್ರಗತಿಯಲ್ಲಿದೆ. ಇನ್ನೂ ಯಾವುದೇ ಆದೇಶ ಬಂದಿಲ್ಲ.) ಪುನಃ ಶಾಲೆಯ ಬೋಧಕ ಸಿಬ್ಬಂದಿಗಳ ವೆತನವನ್ನು ತಡೆಹಿಡಿದಿದ್ದರು.
ಈ ಎಲ್ಲ ಮಾಹಿತಿ ಸ್ಪಷ್ಟವಾಗಿ ಗೊತ್ತಿರುವ ಇಲ್ಲಿನ ಕ್ಷೇತ್ರ ಸಮನ್ವಯಾಧಿಕಾರಿ ಮತ್ತು ಸಧ್ಯ ಪ್ರಭಾರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಿ.ಧರಿಕಾರ ಯಾವುದೇ ಮೇಲಾಧಿಕಾರಿಗಳ, ನ್ಯಾಯಾಲಯದ ಅಥವಾ ಲೋಕಾಯುಕ್ತರ ಆದೇಶ ಇಲ್ಲದೇ ಶಾಲೆಯ ಬೋಧಕ ಸಿಬ್ಬಂದಿಗಳ ವೇತನವನ್ನು ಬಿಡುಗಡೆಗೊಳಿಸಿದ್ದು ಪ್ರಭಾರಿ ಅಧಿಕಾರಿ ತಮ್ಮ ಅಧಿಕಾರವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಅಲ್ಲದೇ ಇವರೊಂದಿಗೆ ವೇತನ ಬಟವಡೆಗೆ ಸಂಬಂಧಿಸಿದ ಇಲಾಖಾ ನೌಕರರೂ ಕೂಡ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದು ಕಾರಣ ಈ ಎಲ್ಲರ ಮೇಲೆ ಸೂಕ್ತ ಕ್ರಮಕ್ಕಾಗಿ ಲೋಕಾಯುಕ್ತರ ಮೊರೆ ಹೋಗಿರುವದಾಗಿ ತಿಳಿಸಿದ್ದಾರೆ.
ಕಾನೂನು ಬಾಹಿರವಾಗಿ ವೇತನ ಬಟವಡೆಗೆ ಸಂಬಂಧಿಸಿದ ಪ್ರಬಾರಿಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇಲಾಖೆಯ ಸರ್ಕಾರಿ ನೌಕರರ ವಿರುದ್ಧ ಸೇವಾ ನಿಯಮಗಳ ಅಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ, ಜಿಲ್ಲಾ ಪಂಚಾಯತನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದು ಸುಮಾರು ದಿನಗಳು ಕಳೆದರೂ ಯಾವುದೇಕ್ರಮಕ್ಕೆ ಮುಂದಾಗಿಲ್ಲ.ಯಾವುದೇ ಹಿಂಬರಹವೂ ನೀಡಿಲ್ಲ. ಇವರು ಕೂಡ ತಮ್ಮ ಅಧಿಕಾರದಲ್ಲಿ ನಿಷ್ಕಾಳಜಿ ವಹಿಸಿದ್ದು ಮುಂದಿನ ದಿನಗಳಲ್ಲಿ ಇವರ ಮೇಲೆಯೂ ಲೋಕಾಯುಕ್ತಕ್ಕೆ ದೂರುವ ಬಗ್ಗೆ ಚಿಂತಿಸುತ್ತಿರುವದಾಗಿ ದೂರುದಾರ ಮತ್ತು ನ್ಯಾಯವಾದಿ ಚೇತನ ಶಿವಶಿಂಪಿ ತಿಳಿಸಿದ್ದಾರೆ.