ಮುಂದಗೋಡ

ಸ್ಲಂ ಬೋಡ್ರ್‌ ಮನೆ ಫಲಾನುಭವಿಗಳ ಆಯ್ಕೆಯ ತನಿಖೆ

ಸ್ಲಂ ಬೋಡ್ರ್‌ ಮನೆ ಫಲಾನುಭವಿಗಳ ಆಯ್ಕೆಯ ತನಿಖೆ

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿಕೆ: ಪ್ರಗತಿ ಪರಿಶೀಲನಾ ಸಭೆ 

ಮುಂಡಗೋಡ 31: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಸ್ಲಂ ಬೋಡ್ರ್‌ ಮನೆಗಳ ಫಲಾನುಭವಿಗಳ ಆಯ್ಕೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. 

ಶನಿವಾರ ಪಟ್ಟಣ ಪಂಚಾಯತ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. 

ಪಟ್ಟಣದ ಕೊಳಚೆ ಪ್ರದೇಶದ ಬಡ ಜನರಿಗೆ ಮನೆಗಳನ್ನು ಮಂಜೂರಿ ಮಾಡಲು ಸೂಚಿಸಲಾಗಿತ್ತು. ಆದರೆ ಸ್ಲಂ ಬೋಡ್ರ್‌ನವರು ಫಲಾನುಭವಿಗಳ ಆಯ್ಕೆ ಸಮರ್ಪಕವಾಗಿ ಮಾಡಿಲ್ಲ. ಒಂದೇ ಕುಟುಂಬಕ್ಕೆ ಎರಡ್ಮೂರು ಮನೆಗಳನ್ನು ನೀಡಿದ್ದಾರೆ. ಅಲ್ಲದೆ, ಸರಕಾರಿ ನೌಕರರಿಗೂ ಕೂಡ ಮನೆ ಮಂಜೂರಿ ಮಾಡಿದ್ದಾರೆ ಎಂದು ಆರೋಪಿಸಿದರು. ಪ.ಪಂನ ಕೆಲ ಸದಸ್ಯರು ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಹಿನ್ನಲೆಯಲ್ಲಿ ತನಿಖೆ ನಡೆಸಲಾಗುವುದು ಒಂದಾನು ವೇಳೆ ಅಧಿಕಾರಿಗಳು ತಪ್ಪೆಸಗಿರುವುದು ಕಂಡು ಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. 

ಪಟ್ಟಣ ವ್ಯಾಪ್ತಿಯಲ್ಲಿ 24*7 ಕುಡಿಯುವ ನೀರು ಯೋಜನೆ ಕಾಮಗಾರಿ ಅಸಮರ್ಪಕವಾಗಿದೆ. ಈ ಬಗ್ಗೆ ಸರಿಯಾಗಿ ಕೆಲಸ ಮಾಡಿ ಮುಗಿಸುವವರೆಗೂ ಗುತ್ತಿಗೆದಾರರಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಬಾರದು ಹಾಗೂ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ಕಾಮಗಾರಿ ಗುಣಮಟ್ಟವನ್ನು ಪರಿಶೀಲನೆ ನಡೆಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.  

ಪಟ್ಟಣ ಪಂಚಾಯತಕ್ಕೆ ನಿವೇಶನಕ್ಕಾಗಿ ಹತ್ತು ಎಕರೆ ಜಾಗವನ್ನು ನೀಡಲಾಗಿದ್ದು ನಿವೇಶನ ಹಾಗೂ ಮನೆ ರಹಿತ ಬಡವರಿಗೆ ಜಿ+3 ಮಾದರಿಯಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು. ಇದೂವರೆಗೂ 1136 ಜನ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಪಟ್ಟಣ ಪಂಚಾಯತ ಸದಸ್ಯರು ತಮ್ಮ ವಾರ್ಡನಲ್ಲಿ ಅರ್ಜಿ ಹಾಕಿದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಶ್ರೀಮಂತರು ಹಾಗೂ ಈಗಾಗಲೆ ಮನೆ ಇರುವಂತಹ ಜನರನ್ನು ಆಯ್ಕೆ ಮಾಡಬಾರದು ಎಂದರು. ಹಾಗೂ ಜಿ+3 ಮಾದರಿ ವಸತಿ ಯೋಜನೆಯಡಿ ಮನೆ ಪಡೆಯುವ ಫಲಾನುಭವಿಗಳು ಆರಂಭದಲ್ಲಿ ವಂತಿಗೆ ಹಣ ತುಂಬಬೇಕು. ಈ ಬಗ್ಗೆ ಫಲಾನುಭವಿಗಳೊಂದಿಗೆ ಚರ್ಚಿಸಿ, ಹದಿನೈದು ದಿನದೊಳಗಾಗಿ ಸದಸ್ಯರು ಅಂತಿಮ ಯಾದಿ ತಯಾರಿಸುವಂತೆ ಸಚಿವ ಶಿವರಾಮ ಹೆಬ್ಬಾರ ಸದಸ್ಯರಿಗೆ ಸೂಚಿಸಿದರು. ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನವಿರುವ 400 ಕ್ಕೂ ಹೆಚ್ಚು ಬಡ ಜನರಿಗೆ ಮನೆಗಳನ್ನು ವಿತರಣೆ ಮಾಡಲಾಗಿತ್ತು. ಇದೀಗ ಮತ್ತೆ 1 ಸಾವಿರÀಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ಬಡ ಜನರಿಗೆ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.

ಯಲ್ಲಾಪುರ ಹಾಗೂ ಮುಂಡಗೋಡ ಎರಡು ತಾಲೂಕುಗಳ ಸಿಟಿ ಸರ್ವೆ ಕಾರ್ಯವು ಶೀಘ್ರದಲ್ಲಿ ನಡೆಯಲಿದೆ ಎಂದರು. ಪಟ್ಟಣ ವ್ಯಾಪ್ತಿಯಲ್ಲಿ ಪಾರ‍್ಮಂ ನಂ.3 ಹಾಗೂ ಹಳ್ಳಿಗಳಲ್ಲಿ ಇ ಸ್ವತ್ತು ಸಮಸ್ಯೆ ಹೆಚ್ಚಾಗಿದ್ದು, ಇದನ್ನು ಬಗೆಹರಿಸಲು ಈಗಾಗಲೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು ಇಂದು ಸಚಿವ ಈಶ್ವರಪ್ಪನವರು ಕಾರವಾರಕ್ಕೆ ಬರುತ್ತಿದ್ದು ಅವರೊಂದಿಗೆ ಮತ್ತೆ ಚರ್ಚಿಸಲಾಗುವುದು ಎಂದು ಹೇಳಿದರು.

ಈ ವೇಳೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ, ಪಟ್ಟಣ ಪಂಚಾಯತ ಅಧ್ಯಕ್ಷೆ ರೇಣುಕಾ ಹಾವೇರಿ, ಉಪಾಧ್ಯಕ್ಷ ಮಂಜುನಾಥ ಹರಮಲಕರ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಲಮಾಣಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ