ಲೇಖನಗಳು

ಭಾರತೀಯ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ ಆಜಾದರ ಕುರಿತು ಪರಿಚಯ

ಭಾರತೀಯ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ ಆಜಾದರ ಕುರಿತು ಪರಿಚಯ

ಭಾರತ ದೇಶವು ಸ್ವಾತಂತ್ರ್ಯ ಪಡೆದು 75 ವರ್ಷಗಳು ಕಳೆದು ಅಮೃತ ಮಹೋತ್ಸವನ್ನು ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ದೇಶಪ್ರೇಮಿಗಳ, ಹೋರಾಟಗಾರರ ನೆನಪಿಸಿ ಅವರಿಗೆ ನಮನಗಳನ್ನು ಸಲ್ಲಿಸುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯ ಪಡೆಯಲು ಮಾಡಿದ ತ್ಯಾಗ ಬಲಿದಾನಗಳಿಗೆ ನಾವು ಚಿರ ಋಣಿಯಾಗಿದ್ದೇವೆ.. ಭಾರತ ವೀರಪುತ್ರರು ಸದಾ ಅಮರರು.  

ಚಂದ್ರಶೇಖರ ಆಜಾದ್‌ರ ಮೂಲ ಹೆಸರು ಚಂದ್ರಶೇಖರ ಸೀತಾರಾಮ್ ತಿವಾರಿ. ಅವರು ಜುಲೈ 23, 1906ರಲ್ಲಿ ಭಾವ್ರಾದಲ್ಲಿ ಜನಿಸಿದರು. ತಂದೆ ಪಂಡಿತ್ ಸೀತಾರಾಮ್ ಮತ್ತು ತಾಯಿ ಜಾಗ್ರಣಿ.  

1857ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಆಯುಧಗಳನ್ನು ಬಳಸಿದ ಮೊದಲ ಭಾರತೀಯರೆನಿಸಿಕೊಂಡವರು ಆಜಾದ ಅವರು. ಓರ್ವ ಯೋಧ ಎಂದಿಗೂ ಶಸ್ತ್ರವನ್ನು ತ್ಯಜಿಸಲಾರನು ಎಂಬುದು ಅವರ ಅಭಿಪ್ರಾಯವಾಗಿತ್ತು.  

ಭಾವರಾ ಮತ್ತು ವಾರಾಣಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಅವರು ವಿದ್ಯಾರ್ಥಿದೆಸೆಯಲ್ಲಿಯೇ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು  ತೊಡಗಿಸಿಕೊಂಡರು.  

1919ರಲ್ಲಿ ಅಮೃತಸರದಲ್ಲಿ ನಡೆದ ಜಾಲಿಯನ್ವಾಲಾ ಬಾಗ್  ಹತ್ಯಾಕಾಂಡದ ಘಟನೆಯಿಂದ ಚಂದ್ರಶೇಖರ ಆಜಾದ್ ಅವರು ಮಾನಸಿಕವಾಗಿ ತೀವ್ರವಾಗಿ ಜರ್ಜರಿತರಾಗಿದ್ದರು.ಗಾಂಧೀಜಿಯವರ 1921ರ ಅಸಹಕಾರ ಚಳುವಳಿಯ ಪ್ರತಿಭಟನೆಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.  

ಈ ತರಹದ ನಾಗರಿಕ ಶಾಸನಭಂಗ ಮತ್ತು ಅವಿಧೇಯತೆಗಾಗಿ ಅವರು ಬಂಧಿತರಾಗಿದ್ದರು.ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಪ್ರಥಮವಾಗಿ ಶಿಕ್ಷೆಗೆ ಗುರಿಯಾದರು.  

ಮ್ಯಾಜಿಸ್ಟ್ರೇಟರು ಅವರ ಹೆಸರೇನೆಂದು ಕೇಳಿದಾಗ, ಅವರು "ಆಜಾದ್" ಎಂದರು. ಆಜಾದ್ ಅಂದರೆ ಸ್ವತಂತ್ರ ವ್ಯಕ್ತಿ. ಇದು ಉದ್ಧಟತನವೆಂದು  ಅವರಿಗೆ ಹದಿನೈದು ಛಡಿ ಏಟುಗಳ ಶಿಕ್ಷೆಯನ್ನು ನೀಡಿದರು.ಆಗ ಪ್ರತಿ ಏಟಿಗೂ ಯುವ ಚಂದ್ರಶೇಖರ "ಭಾರತ್ ಮಾತಾ ಕಿ ಜೈ" ಎಂದು ಘೋಷಣೆ ಕೂಗುತ್ತಿದ್ದರು. ಈ ಘಟನೆಯ ನಂತರ, ಚಂದ್ರಶೇಖರರಿಗೆ ಆಜಾದ್ ಎಂಬ ಹೆಸರು ಶಾಶ್ವತವಾಯಿತು.  

ಅಸಹಕಾರ ಚಳುವಳಿಯು ಸ್ಥಗಿತಗೊಂಡ ನಂತರ, ಆಜಾದರು ಇನ್ನೂ ಹೆಚ್ಚಿನ ಆಕ್ರಮಣಶಾಲಿ ಹಾಗೂ ಉಗ್ರ ಕ್ರಾಂತಿಕಾರಿ ಆದರ್ಶಗಳಿಂದ ಆಕರ್ಷಿತರಾದರು. ಯಾವುದೇ ಮಾರ್ಗದಿಂದಾದರೂ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯಕ್ಕೆ ತಮ್ಮನ್ನು ಮುಡಿಪಾಗಿಡಲು ನಿರ್ಧರಿಸಿದರು.  

ಈ ನಿಟ್ಟಿನಲ್ಲಿ ಮುಂದುವರೆಯುವ ಪ್ರಥಮ ಹೆಜ್ಜೆಯಾಗಿ ಅವರು "ಹಿಂದೂಸ್ತಾನ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ" ಎಂಬ ಸಂಘವನ್ನು ಆರಂಭಿಸಿದರು. ಅಲ್ಲದೇ ಭಗತ್ ಸಿಂಗ್, ಸುಖ್ದೇವ ಮುಂತಾದವರನ್ನು ಸೇರಿಸಿಕೊಂಡರು. ಈ ಸಂಘದ ಉದ್ದೇಶ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರಕಿಸಿಕೊಳ್ಳುವುದಾಗಿತ್ತು ಮತ್ತು ಸಮಾಜವಾದಿ ಮೂಲತತ್ವದ ಮೇಲೆ ಆಧಾರಿತವಾದ ನವೀನ ಭಾರತವನ್ನು ಕಟ್ಟುವ ಮಹಾ ಉದ್ದೇಶ ಹೊಂದಿತ್ತು.  

ಆಜಾದರು ಮತ್ತು ಅವರ ದೇಶಬಾಂಧವರು ಬ್ರಿಟಿಷರ ವಿರುದ್ಧ ಅನೇಕ ಹಿಂಸಾತ್ಮಕ ಪ್ರತಿಭಟನೆಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದರು.  

ಅಮಾನುಷ ಹಿಂಸೆಯಿಂದ ದಿಗಿಲುಗೊಂಡರೂ ಆಜಾದ್ರಿಗೆ ಹೋರಾಟದಲ್ಲಿ ಹಿಂಸಾತ್ಮಕ ನಡೆಗಳು ಅಸ್ವೀಕಾರಾರ್ಹವೆಂದು ಅನಿಸಿರಲಿಲ್ಲ. ಜಾಲಿಯನ್ವಾಲಾ ಬಾಗ್ ಹತ್ಯಾಕಾಂಡವು ಯುವ ಆಜಾದರು ಹಾಗೂ ಅವರ ಸಮಕಾಲೀನರನ್ನು ತೀವ್ರವಾಗಿ ಪ್ರಭಾವಿಸಿತ್ತು. ತಮ್ಮ ಹೆಸರು "ಆಜಾದ್" ಆಗಿರುವುದರಿಂದ ತಮ್ಮನ್ನು ಪೊಲೀಸರು ಎಂದಿಗೂ ಜೀವಂತವಾಗಿ ಹಿಡಿಯಲಾರರೆಂದು ಅವರು ಒಮ್ಮೆ ಘೋಷಿಸಿಕೊಂಡಿದ್ದರು.  

ಅಲಹಾಬಾದ್ ನಗರದ ಜನರು ಹೇಳುವಂತೆ ಓರ್ವ ಹಿಂದಿ ಪತ್ರಕರ್ತ ಆಜಾದರ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದ.ಅನೇಕ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಅವರು ಒಳಗೊಂಡಿದ್ದರು. 1931ರ ಫೆಬ್ರವರಿ 27ರಂದು, ಚಂದ್ರಶೇಖರ ಆಜಾದ್ ಅಲಹಾಬಾದ್ನ ಉದ್ಯಾನದಲ್ಲಿ   

ಅವರನ್ನು ಪೊಲೀಸರು ಗುರುತು ಹಿಡಿದರು, ಇಡೀ ಉದ್ಯಾನವನ್ನು ಸುತ್ತುವರಿದ ಪೊಲೀಸರು ಆಜಾದ್ರಿಗೆ ತಮಗೆ ಶರಣಾಗಲು ಆದೇಶಿಸಿದರು. ಆಜಾದರು ಏಕಾಕಿಯಾಗಿ ಹೋರಾಡಿದರು. ಅವರ ತೊಡೆಗೆ ಗುಂಡೇಟು ಬಿದ್ದಿತ್ತು.ತಮ್ಮಲ್ಲಿದ್ದ ಬಹುತೇಕ ಮದ್ದುಗುಂಡುಗಳೆಲ್ಲಾ ಖಾಲಿಯಾದ ನಂತರ, ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲವೆಂದು ಮನಗಂಡ ಅವರು ತಮ್ಮಲ್ಲಿ ಉಳಿದಿದ್ದ ಕೊನೆಯ ಗುಂಡಿನಿಂದ ತಲೆಗೆ ಹೊಡೆದುಕೊಂಡರು.  

ಅವರು ತಮ್ಮ 24 ವರ್ಷಗಳ ಅಲ್ಪಾವಧಿಯ ಜೀವಿತದಲ್ಲಿ, ಚಂದ್ರಶೇಖರ ಆಜಾದ್ರವರು ಗಮನಾರ್ಹ ಅವಧಿಯವರೆಗೆ ಝಾನ್ಸಿಯನ್ನು ತಮ್ಮ ಸಂಘಟನೆಯ ಕೇಂದ್ರಸ್ಥಳವನ್ನಾಗಿ ಮಾಡಿಕೊಂಡಿದ್ದರು.ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಲು ಆಯ್ಕೆ ಮಾಡಿಕೊಂಡಿದ್ದರು.ಅವರು ಅದ್ಭುತ ಗುರಿಕಾರರಾಗಿದ್ದರು. ಹಾಗೂ ತಮ್ಮ ತಂಡದ ಇತರೆ ಸದಸ್ಯರಿಗೆ ಈ ಸ್ಥಳದಲ್ಲಿಯೇ ಅವರು ತರಬೇತಿ ನೀಡುತ್ತಿದ್ದರು. ಅರಣ್ಯದ ಸಮೀಪ ಸಾತಾರ್ ಎಂದು ಕರೆಯಲ್ಪಡುತ್ತಿದ್ದ ಸಣ್ಣ ನದಿಯ ತೀರದಲ್ಲಿರುವ ಹನುಮಾನ್ ದೇವಸ್ಥಾನದ ಬಳಿ, ಆಜಾದರು ಒಂದು ಸಣ್ಣ ಗುಡಿಸಲನ್ನು ಕಟ್ಟಿಕೊಂಡಿದ್ದರು. ಅವರು ಅಲ್ಲಿ ಪಂಡಿತ್ ಹರಿಶಂಕರ್ ಬ್ರಹ್ಮಚಾರಿ ಎಂಬ ಹೆಸರಿನಿಂದ ಮಾರುವೇಷದಲ್ಲಿ ವಾಸಿಸಲು ಆರಂಭಿಸಿದ್ದರು.  

ಅವರು ಝಾನ್ಸಿಯನ್ನು ತೊರೆದು ಹೋದ ಕೆಲ ಸಮಯದಲ್ಲೇ ಅವರ ತಂಡದ ಮಾಜಿ ಸದಸ್ಯನ ನಂಬಿಕೆದ್ರೋಹಕ್ಕೆ ಅವರು ಬಲಿಯಾಗಬೇಕಾಯಿತು.ಫೆಬ್ರವರಿ 27, 1931 ರಂದು ದೇಹತ್ಯಾಗ ಮಾಡಿ ಅಮರರಾದರು.. ಅವರಿಗೆ ನುಡಿ ನಮನಗಳು.  

ಭಾರತ ಮಾತೆಗೆ ಜಯವಾಗಲಿ.. 

- ಈಶ್ವರ ಜಿ.ಸಂಪಗಾವಿ.  

ಕಕ್ಕೇರಿ.  

ತಾ.ಖಾನಾಪುರ.  ಜಿ.ಬೆಳಗಾವಿ 


-= 0 0 0 =-


ಸುದ್ದಿ ಓದಿ