ಬಿ.ಇಡಿ ಪರೀಕ್ಷಾ ಶುಲ್ಕ ಕಡಿತಗೊಳಸಲು ಒತ್ತಾಯ
ಬಳ್ಳಾರಿ 01: ಬಿ.ಇಡಿ. ಪರೀಕ್ಷಾ ಶುಲ್ಕ ಪಾವತಿಸುವಲ್ಲಿ ಆಗಿರುವ ತಾಂತ್ರಿಕ ದೋಷ ನಿವಾರಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಎಐಡಿವೈಒಯು ವತಿಯಿಂದ ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ ಕುಲಸಚಿವರಿಗೆ (ಮೌಲ್ಯಮಾಪನ) ಮನವಿ ಸಲ್ಲಿಸಲಾಯಿತು.
2020-21ನೇ ಶೈಕ್ಷಣಿಕ ಸಾಲಿನ ಬಿ.ಎಡ್.ಪರೀಕ್ಷಾ ಶುಲ್ಕ ಪಾವತಿಸಲು ವಿಶ್ವವಿದ್ಯಾಲಯ ಅಧಿಸೂಚನೆಯನ್ನು ಹೊರಡಿಸಿದ್ದು, ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಪರೀಕ್ಷಾ ಶುಲ್ಕವನ್ನು ಪಾವತಿಸಲು ಲಾಗ್ಇನ್ ಆದರೆ ಪೂರ್ಣ ಶುಲ್ಕ 1,450 ರೂ. ಪ್ರದರ್ಶಿಸಿರುತ್ತದೆ. ಈ ತಾಂತ್ರಿಕ ದೋಷ ಸರಿಪಡಿಸಬೇಕು. ಮತ್ತು ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿಯ ಕಾಲಂನಲ್ಲಿ ಆದ ದೋಷವನ್ನು ಕೂಡಲೇ ಪರಿಹರಿಸಿ. ವಿಶ್ವ ವಿದ್ಯಾಲಯದ ಅಧಿಸೂಚನೆಯ ನಿಯಮಾವಳಿಗಳಂತೆ ಮತ್ತು ಸರ್ಕಾರದ ಸವಲತ್ತಿನಂತೆ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಇದರಿಂದ ವಂಚಿತರಾಗಿರುತ್ತಾರೆ ಹಾಗೂ ಪ್ರಸಕ್ತ ಕೋವಿಡ್-19 ಸನ್ನಿವೇಶದಲ್ಲಿ ಮತ್ತು ವಿದ್ಯಾರ್ಥಿವೇತನ ಬಾರದಿರುವ ಪರಿಸ್ಥಿತಿಯಲ್ಲಿ ಪೂರ್ಣಪ್ರಮಾಣದ ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳಿಂದ ಭರಿಸಲು ವಿಶ್ವವಿದ್ಯಾಲಯವು ವಸೂಲಿಗೆ ಮುಂದಾಗಿರುವುದು ಖಂಡನೀಯ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಮತ್ತು ಸರ್ಕಾರದ ನಿರ್ದೇಶನದಂತೆ ತಕ್ಷಣಕ್ಕೆ ಕ್ರಮವಹಿಸಿ ಪರೀಕ್ಷಾ ಪಾವತಿ ದಿನಾಂಕವನ್ನು ವಿಸ್ತರಿಸಬೇಕು ಮತ್ತು ಶುಲ್ಕ ವಿನಾಯಿತಿಯನ್ನು ನೀಡಬೇಕು ಮತ್ತು ಈಗಾಗಲೇ ಪರೀಕ್ಷಾ ಶುಲ್ಕವನ್ನು ಭರಿಸಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕವನ್ನು ಹಿಂದಿರುಗಿಸಬೇಕೆಂದು ಎಂದು ಮನವಿಯಲ್ಲಿ ಆಗ್ರಹಿಸಿದೆ.
ನಿಯೋಗದಲ್ಲಿ ಎಐಡಿವೈಒಯು ಜನ ಸಂಘಟನೆಯ ಜಿಲ್ಲಾಉಪಾಧ್ಯಕ್ಷ ಯರ್ರಿಸ್ವಾಮಿ.ಹೆಚ್ ಮತ್ತು ಜಿಲ್ಲಾ ಕಾರ್ಯದರ್ಶಿಗಳಾದ ಜಗದೀಶ್ ನೇಮಕಲ್ ಮತ್ತು ಬಿ.ಎಡ್ ವಿದ್ಯಾರ್ಥಿಗಳಾದ ಬಿ ಈಶ್ವರ, ಗಾದಿಲಿಂಗಪ್ಪ.ಡಿ, ಜೀವನಜ್ಯೋತಿ, ಸುಮಿತ್ರ, ಸರಸ್ವತಿ, ವಸಂತ, ಪಂಪಾಪತಿ ಇದ್ದರು.