ಭಾರತ ವಿಶ್ವದಲ್ಲೇ ಬಲಿಷ್ಠ ಗಣತಂತ್ರ ರಾಷ್ಟ್ರ: ನಡಹಳ್ಳಿ
ತಾಳಿಕೋಟಿ: ವಿಶ್ವದ ಬಲಿಷ್ಠ ಗಣತಂತ್ರ ವ್ಯವಸ್ಥೆ ಹೊಂದಿರುವ ಭಾರತ ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ. ಸಮಾನತೆ ಸಾಧಿಸಲು ಸಂವಿಧಾನಾತ್ಮಕ ಮಾರ್ಗವೊಂದೇ ನಮಗಿರುವ ಸಾಧನ ಎಂದು ಶಾಸಕ ಹಾಗೂ ಅಧ್ಯಕ್ಷ ಕರ್ನಾಟಕ ಆಹಾರ ನಿಗಮ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು. ಗುರುವಾರ ಪಟ್ಟಣದ ಸರಕಾರಿ ಶಾಲೆ ಆವರಣದಲ್ಲಿ ತಾಲೂಕಾ ಆಡಳಿತದ ವತಿಯಿಂದ ಹಮ್ಮಿಕೊಂಡ 74ನೇಯ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಭಾರತಕ್ಕೆ ಪ್ರಜಾಪ್ರಭುತ್ವ ಆಡಳಿತಕ್ಕಾಗಿ ರಚಿಸಿದ ಸಂವಿಧಾನವನ್ನು 1950 ಜನವರಿ 26 ರಂದು ದೇಶ ಅಂಗೀಕರಿಸಿತು. ಈ ಐತಿಹಾಸಿಕ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುವುದು ನಮ್ಮೆಲ್ಲರ ಸುಯೋಗ ಎಂದ ಅವರು ಡಾಽಽ ಬಿ.ಆರ್. ಅಂಬೇಡ್ಕರ್ ಅವರ ಮಾನವೀಯ ಅಂತಃಕರಣದಿಂದ ರೂಪಿತವಾದ ಭಾರತದ ಸಂವಿಧಾನ ವಿಶ್ವದ ಅತಿದೊಡ್ಡ ಸಂವಿಧಾನ ಆಗಿರುವುದರ ಜೊತೆಗೆ ವಿಶ್ವದ ಮಾದರಿ ಸಂವಿಧಾನವು ಕೂಡ ಆಗಿದೆ. ನಮ್ಮ ಸಂವಿಧಾನ ಎಲ್ಲ ಜಾತಿ-ಧರ್ಮದವರಿಗೂ ಸಮಾನ ಅವಕಾಶ ನೀಡಿದೆ. ಇಲ್ಲಿ ಎಲ್ಲರಿಗೂ ಅವರ ಹಕ್ಕುಗಳನ್ನು ನೀಡುವುದರ ಜೊತೆಗೆ ಕರ್ತವ್ಯವನ್ನೂ ತಿಳಿಸಲಾಗಿದೆ. ಇವುಗಳನ್ನು ಈಡೇರಿಸಿದಾಗಲೇ ನಾವು ಸಂವಿಧಾನದ ಆಶಯಗಳನ್ನು ಪೂರೈಸಿದಂತಾಗುತ್ತದೆ ಎಂದರು.
ಧ್ವಜಾರೋಹಣ ನೆರವೇರಿಸಿ ತಹಶೀಲ್ದಾರ ಎಸ್.ಎಚ್. ಅರಕೇರಿ ಮಾತನಾಡಿ ಪ್ರತಿಯೊಬ್ಬ ಭಾರತೀಯನಿಗೆ ಇದು ಹೆಮ್ಮೆಯ ದಿನ, ಈ ದಿನದಂದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಪಣ ತೊಡೋಣ ಎಂದರು. ತಾಪಂ ಇಒ ಬಿ.ಆರ್. ಬಿರಾದಾರ, ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಉಪಾಧ್ಯಕ್ಷ ಎಂ.ಎಲ್. ಚೌದ್ರಿ, ಮುಖ್ಯಾಧಿಕಾರಿ ಸುದೇಶ ನಾಯಕ, ಪುರಸಭೆ ಸದಸ್ಯರು, ರಾಜಕೀಯ ನಾಯಕರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಇಲಾಖಾ ಅಧಿಕಾರಿಗಳು ಇದ್ದರು.