ಶಿಗ್ಗಾವ್

ವಿಶ್ವಕ್ಕೆ ಭಾರತದ ಕೊಡುಗೆ ಯೋಗ: ಸುಂದರ್‌ರಾಜು

ವಿಶ್ವಕ್ಕೆ ಭಾರತದ ಕೊಡುಗೆ ಯೋಗ: ಸುಂದರ್‌ರಾಜು

ಶಿಗ್ಗಾವಿ 21: ಭಾರತದ ಪುರಾತನ ಸಂಸ್ಕೃತಿಯ ಒಂದು ಭಾಗ ಯೋಗ.ವಿಶ್ವಕ್ಕೆ ಭಾರತ ಕೊಟ್ಟ ಅಪೂರ್ವ ಕೊಡುಗೆಳಲ್ಲಿ ‘ಯೋಗ’ವೂ ಒಂದು ಎಂದು ಶಿಗ್ಗಾಂವಿಯ ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆಯ ಕಮಾಂಡೆಂಟ್ ಟಿ.ಸುಂದರ್‌ರಾಜು ತಿಳಿಸಿದರು. 

ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನ ಜಾನದಪದ ರಂಗಮಂದಿರದಲ್ಲಿ ಉತ್ಸವ ರಾಕ್ ಗಾರ್ಡನ್ ಸಮಿತಿ ಹಾಗೂ ಶಿಗ್ಗಾವಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ ನಮ್ಮ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಶಿಲ್ಪ ಕಲಾ ಕೃತಿಗಳು ರಾಕ್ ಗಾರ್ಡನ್‌ನಲ್ಲಿ ಅನಾವರಣಗೊಂಡಿವೆ. ಕಲೆ ಮತ್ತು ಪ್ರಕೃತಿಯ ಮಡಿಲಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆದಿರುವುದು ನಮ್ಮ ಸುಯೋಗ ಎಂದು ಅವರು ಬಣ್ಣಿಸಿದರು. 

ಈಶ್ವರೀ ವಿಶ್ವವಿದ್ಯಾಲಯದ ಸಂಚಾಲಕಿ  ಬ್ರಹ್ಮಕುಮಾರಿ ಭಾರತಿ ಅಕ್ಕ  ಮಾತನಾಡಿ ದೈಹಿಕ, ಮಾನಸಿಕ ಸಧೃಡತೆಯಿಂದ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ. ಎಲ್ಲರೂ ದಿನದಲ್ಲಿ ಅರ್ಧ ತಾಸು ಮೀಸಲಿಟ್ಟು ಯೋಗ ಮತ್ತು ಧ್ಯಾನ ಮಾಡಿದರೆ ಆರೋಗ್ಯಯುತ ಸಂತೃಪ್ತ ಜೀವನ ನಡೆಸಬಹುದು ಎಂದರು.  

ಕಾರ್ಯಕ್ರಮದ ಅಧ್ಯಕ್ಷ್ಯತೆವಹಿಸಿ ವೇದಾರಾಣಿ ದಾಸನೂರ ಮಾತನಾಡಿ ದೈಹಿಕ ಮತ್ತು ಮಾನಸಿಕ ಸಮ್ಮೀಲನವೇ ಯೋಗ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ,ಸಮಾಧಿ ಇವು ಯೋಗದ ಪರಿಕಲ್ಪನೆಗಳಾಗಿವೆ ಎಂದರು. 

 ಯೋಗ ಶಿಕ್ಷಕ ಮಂಜುನಾಥ ಯೋಗಾಸನಗಳನ್ನು ಹೇಳಿಕೊಟ್ಟರು. ಸಮಿತಿ ಕಾರ್ಯದರ್ಶಿ ಪ್ರಕಾಶ ದಾಸನೂರ, ಕೆಎಸ್‌ಆರ್‌ಪಿ ಇನ್ಸ್‌ಪೆಕ್ಟರ್ ಸಂತೋಷ ಬಸ್ತವಾದ ಹಾಗೂ ಶಿಗ್ಗಾವಿಯ ಸಬ್ ಇನ್ಸ್‌ಪೆಕ್ಟರ್ ಸಂಪತ್ ಉಪಸ್ಥಿತರಿದ್ದರು. ಬಸವರಾಜ ಮಡಿವಾಳರ ಸ್ವಾಗತಿಸಿದರು, ಆನಂದ್‌ಗೌಡ ಪಾಟೀಲ್ ವಂದಿಸಿದರು. 


ಸುದ್ದಿ ಓದಿ