ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ ಉದ್ಘಾಟಣೆ
ಬೈಲಹೊಂಗಲ 17: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಉದ್ಘಾಟಣೆ ಸಂದರ್ಭದಲ್ಲಿ ಚನ್ನಮ್ಮಳ ನಾಡು ಕಿತ್ತೂರನ್ನು ಆಯ್ದುಕೊಂಡು ತಂತ್ರಜ್ಞಾನದ ಮೂಲಕ ಉದ್ಘಾಟಣೆ ಮಾಡಿ, ಚನ್ನಮ್ಮಾಜಿ, ಸಂಗೊಳ್ಳಿ ರಾಯಣ್ಣನವರ ದೇಶಾಭಿಮಾನ, ಸಾಹಸ, ತ್ಯಾಗ, ಬಲಿದಾನದ ಕುರಿತು ದೇಶಕ್ಕೆ ಸಂದೇಶ ನೀಡಿದ್ದು, ನಮ್ಮ ನಾಡಿನ ಹೆಮ್ಮೆಯಾಗಿದೆ ಎಂದು ಉಪವಿಭಾಗಾಧಿಕಾರಿ ಶಶಿಧರ ಬಗಲಿ ಹೇಳಿದರು.
ಅವರು ಪಟ್ಟಣದ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ 75 ನೇಯ ಸ್ವಾತಂತ್ರ್ಯ ದಿನದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೆ ಕಾರಣೀಕರ್ತರಾದ ಲಕ್ಷಾಂತರ ಯೋಧರನ್ನು ನಾವೇಲ್ಲರೂ ಇಂದು ಸ್ಮರಣೆ ಮಾಡೋಣ. ದೇಶ ಇಂದು ತಂತ್ರಜ್ಞಾನ, ವಿಜ್ಞಾನ, ಬಾಹ್ಯಾಕಾಶ, ಅಣುಶಕ್ತಿ, ಶಿಕ್ಷಣ, ಕೃಷಿ, ಕೈಗಾರಿಕೆ ಸೇರಿ ವಿವಿದ ರಂಗಗಳಲ್ಲಿ ಅದ್ವಿತೀಯ ಸಾಧನೆ ಮಾಡುತ್ತಾ ಪ್ರಗತಿಯತ್ತ ಸಾಗಿದೆ ಬಡತನ, ನಿರುದ್ಯೋಗ ನಿರ್ಮೂಲನೆಗೆ ಎಲ್ಲರೂ ಶ್ರಮಿಸಿ, ಬಲಿಷ್ಠ ಭಾರತ ಕಟ್ಟೋಣ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದ್ದು ಅವರ ಸ್ಮರಣೆ ಅಗತ್ಯವಾಗಿದೆ. ಸರಕಾರದ ಅನುದಾನ ಸದುಪಯೋಗಪಡಿಸಿಕೊಂಡು ಮತಕ್ಷೇತ್ರದ ಅಭಿವೃದ್ದಿಪಡಿಸಲಾಗುವದು ಎಂದರು.
ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಪ್ರಧಾನಿ ಮೋದಿ ಅವರು ದೇಶದ ಎಲ್ಲ ವರ್ಗದ ಜನಾಂಗಕ್ಕೆ ಅನೇಕ ಅಭಿವದ್ದಿ ಯೋಜನೆಗಳನ್ನು ನೀಡುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲವಾಗಬೇಕು. ಯುವಕರು ದೇಶಪ್ರೇಮ ಮೆರೆದು ದೇಶ ಸೇವೆಯಲ್ಲಿ ತೊಡಗಬೇಕೆಂದರು.
ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ, ಡಿಎಸ್ಪಿ ಶಿವಾನಂದ ಕಟಗಿ, ತಾಪಂ ಇಒ ಸುಭಾಷ ಸಂಪಗಾಂವಿ, ಪುರಸಭೆ ಮುಖ್ಯಾಧಿಕಾರಿ ಕೆ.ಆಯ್. ನಾಗನೂರ, ಪುರಸಭೆ ಸ್ಥಾಯಿ ಸಮೀತಿ ಅಧ್ಯಕ್ಷ ಅರ್ಜುನ ಕಲಕುಟಕರ, ಸಮಾಜ ಕಲ್ಯಾಣ ಅಧಿಕಾರಿ ಶಶಿಕಲಾ ಹೊಸಮಠ, ಬಿಇಒ ಡಾ. ಗುರುನಾಥ ಹೂಗಾರ, ಸಿಪಿಆಯ್ ಉಳವಪ್ಪ ಸಾತೇನಹಳ್ಳಿ, ಸ್ವಾತಂತ್ರ್ಯ ಹೋರಾಟಗಾರ ಮುರುಳಿಧರ ಮಾಳೊದೆ, ಪುರಸಭೆ ಸದಸ್ಯರು, ತಾಲೂಕಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ತಹಶೀಲ್ದಾರ ಬಸವರಾಜ ನಾಗರಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಸವರಾಜ ಭರಮನ್ನವರ ನಿರೂಪಿಸಿದರು.
ವಿವಿದ ಇಲಾಖೆಗಳ ಕರೊನಾ ವಾರಿಯರ್ಸರನ್ನು ಸತ್ಕರಿಸಲಾಯಿತು. ತ್ರೀವರ್ಣ ಧ್ವಜದ ಬಣ್ಣದ ಬಲೂನುಗಳನ್ನು ವಿವಿದ ಸ್ಥಳಗಳಲ್ಲಿ ಆಕಾಶಕ್ಕೆ ಹಾರಿ ಬಿಡಲಾಯಿತು. ಶಾಂತಿ ಸಂದೇಶ, ಆಜಾದಿ ಮಹೋತ್ಸವ ಅಂಗವಾಗಿ ಪಾರಿವಾಳ ಹಾರಿಬಿಡಲಾಯಿತು. ಪಟ್ಟಣದ ವಿವಿದ ಸ್ಥಳಗಳಲ್ಲಿ ತಳಿರು, ತೋರಣ, ವಿದ್ಯುತ್ತ ದೀಪಲಂಕಾರ, ಚಿತ್ತಕಲಾ ಶಿಕ್ಷಕರ ವಿಶೇಷ ರಂಗೋಲಿ ಚಿತ್ತಾರ ಕಂಗೊಳಿಸಿತು.