ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ಘಾಟನೆ
ಲೋಕದರ್ಶನ ವರದಿ
ಮುಂಡರಗಿ 05: ಮಕ್ಕಳು ಆಟ, ಸಂಗೀತ, ನೃತ್ಯಕಲೆ, ಮಣ್ಣಿನ ಮಾದರಿ ತಯಾರಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದಾಗ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬ ಪ್ರತಿಭಾನ್ವಿತ ವಿದ್ಯಾರ್ಥಿಯು ಸಮಯದ ಪ್ರಜ್ಞೆಯೊಂದಿಗೆ ಉಪಯುಕ್ತ ಚಟುವಟಿಕೆಗಳು, ಭಾವನಾತ್ಮಕ ಮತ್ತು ದೈಹಿಕ ಬೆಳವಣಿಗೆಯಾಗಲು ಪ್ರಯತ್ನಿಸಬೇಕು ಎಂದು ಶಿಂಗಟಾಲೂರ ಗ್ರಾ.ಪಂ ಉಪಾಧ್ಯಕ್ಷ ಕಲವೀರ್ಪ ಭಜಂತ್ರಿ ತಿಳಿಸಿದರು.
ತಾಲೂಕಿನ ಶಿಂಗಟಾಲೂರ ಗ್ರಾಮದ ಸರಕಾರಿ ಪ್ರೌಢಶಾಲೆ ಜರುಗಿದ ಸನ್ 2022-23ನೇ ಸಾಲಿನ ಶಿಂಗಟಾಲೂರ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸೃಜನಶೀಲ ಚಟುವಟಿಕೆಗಳು ಮಾನಸಿಕ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಂತಹ ಉತ್ತಮವಾದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯೋಪಾಧ್ಯಾಯರಾದ ಡಿ.ಯು.ಲಮಾಣಿ ಮಾತನಾಡಿ, ನಮ್ಮ ಶಿಂಗಟಾಲೂರ ಕ್ಲಷ್ಟರ್ ಮಟ್ಟದಲ್ಲಿನ ಪ್ರತಿಭಾನ್ವಿತ ಮಕ್ಕಳನ್ನು ಆಯ್ಕೆ ಮಾಡುವಲ್ಲಿ ನಿರ್ಣಾಯಕರ ಪಾತ್ರ ಪ್ರಮುಖವಾದದ್ದು. ಹೀಗಾಗಿ ಪ್ರತಿ ಹಂತದಲ್ಲಿ ಈ ಗ್ರಾಮದ ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಮಿಂಚುವುದರ ಮೂಲಕ ಈ ಗ್ರಾಮದ ಹಾಗೂ ಈ ತಾಲೂಕಿನ ಕೀರ್ತಿ ಹೆಚ್ಚಿಸುವಂತಾಗಲಿ ಎಂದು ಶುಭ ಹಾರೈಸಿದರು.
ಶಿಂಗಟಾಲೂರ ಕ್ಲಷ್ಟರ್ ಸಂಪನ್ಮೂಲ ವ್ಯಕ್ತಿಗಳಾದ ನಂದೀಶಕುಮಾರ ಮಾತನಾಡಿ, ಪರಸ್ಪರ ಶಾಲೆಗಳ ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಪ್ರತಿಭಾ ಕಾರಂಜಿಗಳು ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಜನಪದ ನೃತ್ಯ, ಸಂಗೀತ, ಕರಕುಶಲ ಕಲೆಗಳಿಗೆ ಶಾಲೆಗಳಲ್ಲಿ ಮರುಜೀವ ಸಿಗುತ್ತಿರುವುದು ಸಂತಸದ ಕೆಲಸ. ನಮ್ಮ ಕ್ಲಷ್ಟರ್ ವ್ಯಾಪ್ತಿಯ ಮಕ್ಕಳ ಪ್ರತಿಭೆ ಪ್ರಕಾಶಮಾನವಾಗಿ ಬೆಳಗುವಲ್ಲಿ ನಿರ್ಣಾಯಕರ ಪಾತ್ರ ಪ್ರಮುಖವಾದದ್ದು ಎಂದು ತಿಳಿಸಿದರು.
ಸಮಾರಂಭವನ್ನು ಎ.ಪಿ.ಎಂ.ಸಿ. ಸದಸ್ಯ ಕೊಟ್ರೇಶ ಬಳ್ಳೊಳ್ಳಿ ಇವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಪ್ರೌಢಶಾಲೆ ಶಿಂಗಟಾಲೂರಿನ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಸವೇಶ್ವರಕುಮಾರ ಸದಾಶಿವಪ್ಪನವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಂಗಟಾಲೂರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಅಕ್ಕಮಹಾದೇವಿ ಕೋ. ಮಲ್ಲಾಪುರ. ಹನುಮಪ್ಪ ವಾಲೀಕಾರ, ಮಲ್ಲೇಶ ಮಲ್ಲೀಕೇರಿ, ಪ್ರಕಾಶ ಕೋರಿ, ಲೋಕೇಶ ಶೆಟ್ಟರ, ನಾಗಭೂಷಣ ಮೇಟಿ, ಯು.ಆರ್.ಸಿರಸಗಿ, ಪರಮೇಸಿ ಎಸ್. ಆರ್.ಎಚ್.ಗೊಲ್ಲರಟ್ಟಿ, ಮರಿಯಜ್ಜ ಹರಿಜನ, ರಜಿಯಾ ಮುಜಾವರ ಪಾಲ್ಗೊಂಡಿದ್ದರು.
ಧನೇಶ ಲಮಾಣಿ ಕಾರ್ಯಕ್ರಮ ನಿರೂಪಿಸಿದರು, ಮಹೇಶ ಮೇಟಿ ಸ್ವಾಗತಿಸಿದರು, ರವಿ ಎಸ್. ದೇವರಡ್ಡಿ ವಂದಿಸಿದರು.
ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಶಿವಕುಮಾರ ಎಸ್. ಶಿರೂರ ದ್ವೀತಿಯ ದರ್ಜೆ ಸಹಾಯಕರು ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.