ವೀಣಾಶ್ರೀ ಮಹಿಳಾ ಕಲಾ ಸಂಘದ ಉದ್ಘಾಟನೆ
ಬಳ್ಳಾರಿ 07: ಪ್ರತಿಯೊಬ್ಬರಲ್ಲೂ ಯಾವುದಾದರೊಂದು ಕಲೆಯು ಅಡಗಿರುತ್ತದೆ, ಅದನ್ನು ಮನಗಂಡು ಪೋಷಕರು ಅವರಿಗೆ ಪ್ರೋತ್ಸಾಹ ನೀಡಿದಲ್ಲಿ ಮಾತ್ರ ಅವರು ಹೊರಗಿನ ಪ್ರಪಂಚಕ್ಕೆ ಪರಿಚಿತರಾಗುತ್ತಾರೆ ಎಂದು ಅಂತಾರಾಷ್ಟ್ರೀಯ ಜಾದು ಕಲಾವಿದ ಪ್ರಕಾಶ್ ಹೆಮ್ಮಾಡಿ ನುಡಿದರು. ಅವರು ನಗರದ ಡಾ. ರಾಜ್ಕುಮಾರ್ ರಸ್ತೆಯಲ್ಲಿರುವ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿನ ಹೊಂಗಿರಣದಲ್ಲಿ ವೀಣಾಶ್ರೀ ಮಹಿಳಾ ಕಲಾ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು, ಅದೇ ರೀತಿ ನಾನು ನನ್ನ ಮಗನಲ್ಲಿರುವ ಕಲೆಯನ್ನು ಮನಗಂಡು ಪ್ರೋತ್ಸಾಹಿ ನೀಡಿದ್ದಕ್ಕೆ ಇಂದು ಶ್ರೀವತ್ಸ ಹೆಮ್ಮಾಡಿ ಅವರು ಇಡೀ ಜಗತ್ತಿಗೆ ಪರಿಚಿತರಾಗಿದ್ದಾರೆ ಎಂದರು. ಅದೇರೀತಿ ಬಳ್ಳಾರಿ ಜಿಲ್ಲೆಯಲ್ಲಿ ಮಹಿಳಾ ಕಲಾವಿದರ ಕೊಡುಗೆ ಇಡೀ ನಾಡಿಗೆ ಮಾದರಿಯಾದದ್ದು, ಅದರಲ್ಲೂ ಹೆಸರಾಂತ ಕಲಾವಿದರಾದ ಸುಭದ್ರಮ್ಮ ಮನ್ಸೂರು, ಮಂಜಮ್ಮ ಜೋಗತಿ, ಆದೋನಿ ವೀಣಾ, ಕೂಡ್ಲಿಗಿ ಪದ್ಮ ಸೇರಿದಂತೆ ಅನೇಕರು ಇಡೀ ರಾಜ್ಯಕ್ಕೆ ಚಿರಪರಿಚಿತರು.
ಅವರಂತೆ ಈ ಮಹಿಳಾ ಸಂಘವು ಕೂಡಾ ಅವರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ತೋರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ತಾಯಮ್ಮ ದೇವಿ ಪುಣ್ಯಾಶ್ರಮದ ಪೀಠಾಧ್ಯಕ್ಷರಾದ ಶಿವಕುಮಾರ ತಾತನವರು ಆಶೀರ್ವಚನ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನಿಷ್ಠಿರುದ್ರ್ಪನವರು ಮಾತನಾಡುತ್ತಾ, ಶ್ರೀಮಂತ ಜೀವನದಲ್ಲಿ ಏನೂ ಬೇಕಾದರೂ ಆಗಬಹುದು, ಆದರೆ ಆತನು ಎಂದಿಗೂ ಕಲಾವಿದನಾಗಲು ಸಾಧ್ಯವಾಗಲ್ಲ. ಏಕೆಂದರೆ ಅವರ ಮನಸ್ಸಿನಲ್ಲಿ ಕಲೆಯ ಆಸಕ್ತಿಯೇ ಇರುವುದಿಲ್ಲ ಎಂದರು. ಸಾಮಾನ್ಯ ಬಡಕುಟುಂಬದಿಂದ ಬಂದವರೇ ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಾರೆ, ಇದಕ್ಕೆ ಉದಾಹರಣೆಯೆಂದರೆ ಕರ್ನಾಟಕರತ್ನ ಡಾ. ರಾಜ್ಕುಮಾರ್, ಹಿರಿಯ ರಂಗಕಲಾವಿದ ಎಲಿವಾಳ ಸಿದ್ದಯ್ಯಸ್ವಾಮಿ, ಗದುಗಿನ ಪುಣ್ಯಶ್ರಮದ ಪುಟ್ಟರಾಜ ಗವಾಯಿಗಳು ಇವರೆಲ್ಲರೂ ಕಲೆಗಾಗಿ ತಮ್ಮನ್ನು ತಾವು ಅರ್ಿಸಿಕೊಂಡು, ಇಂದಿಗೂ ಇತರರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ರಂಗಕಲಾವಿದ ಕೆ.ಜಗದೀಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಗಂಗಣ್ಣ, ಸಂಘದ ಅಧ್ಯಕ್ಷರಾದ ಶ್ರೀಮತಿ ಉಷಾ, ಕಾರ್ಯದರ್ಶಿ ಡಿ.ಅಂಬಮ್ಮ ಉಪಸ್ಥಿತಿದ್ದರು. ನಂತರ ಕುಡುದರಹಾಳು ಗ್ರಾಮ ಶಿವಾಂಜಲಿ ಮತ್ತು ತಂಡದವರಿಂದ ಗತ್ತಿನ ಅತ್ತೆ ಗಮ್ಮತ್ತಿನ ಸೊಸೆ ಎಂಬ ಕೌಟುಂಬಿಕ ಹಾಸ್ಯ ನಾಟಕ ಪ್ರದರ್ಶಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಡಿಯಲ್ಲಿ ಸಿರುಗುಪ್ಪದ ಡಿ.ಮಹೇಶ್ಕುಮಾರ್ ಮತ್ತು ತಂಡದವರಿಂದ ಧರೆಗೆ ದೊಡ್ಡವಳೆ ಸಾಮಾಜಿಕ ನಾಟಕ ಪ್ರಸ್ತುತಿಪಡಿಸಿದರು.
ನಾಟಕಕ್ಕೆ ಕೊಟ್ರೇಶ್ ಲಕ್ಕಿಮರ ಮರಿಯಮ್ಮನಹಳ್ಳಿ ಮತ್ತು ದೊಡ್ಡಬಸಪ್ಪ ಕಂಪ್ಲಿ ಅವರು ಪ್ರಸಾದ ನೀಡಿದರು. ಬಸವೇಶ್ವರ ಪ್ರೌಢಶಾಲೆ ಸಂಗನಕಲ್ಲು ವಿದ್ಯಾರ್ಥಿಗಳಿಂದ ದೇಶಭಕ್ತಿ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು. ವೀರೇಶ್ ದಳವಾಯಿ, ಎಸ್.ಎಂ.ಹುಲುಗಪ್ಪ, ಸುಂಕಪ್ಪ, ದುರುಗಪ್ಪ, ದಳವಾಯಿ ಅಂಬಣ್ಣ, ರಮೇಶ್ ದೇವರಮನೆ, ದಾಸರ ಶೇಕ್ಷಾವಲಿ, ದೊಡ್ಡ ಹುಸೇನಪ್ಪ, ಹರಿಕೃಷ್ಣ, ಅನುಮಯ್ಯ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವೃತ್ತಿ ಜೀವನದಲ್ಲಿ ಸಾಧನೆಗೈದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ದ್ವಿತೀಯ ದರ್ಜೆ ಸಹಾಯಕಿ ಡಿ.ರಾಣಿ, ಕನ್ನಡ ವಿಶ್ವವಿದ್ಯಾಲಯದ ಆಂಗ್ಲ ಉಪನ್ಯಾಸಕಿ ಎಂ.ಜ್ಯೋತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿವೃತ್ತ ದ್ವಿತೀಯ ದರ್ಜೆ ಸಹಾಯಕ ಮಲಕಪ್ಪ, ಪರಿಸರ ಸ್ನೇಹಿ ಪದ್ಮಾವತಿ ಬಿ. ಸುಭಾಷ್ ಆಚಾರ್ಯ ಅವರಿಗೆ ಸನ್ಮಾನಿಸಲಾಯಿತು.