ಶಿಗ್ಗಾವ್

ನೂತನ ಜವಳಿ ಪಾರ್ಕ್‌ ಉದ್ಘಾಟನೆ

ನೂತನ ಜವಳಿ ಪಾರ್ಕ್‌ ಉದ್ಘಾಟನೆ

ಲೋಕದರ್ಶನ ವರದಿ 

ಶಿಗ್ಗಾವಿ 17: ರಾಜ್ಯದ ಸಮಗ್ರ ಅಭಿವೃದ್ಧಿ ಹೊಣೆ ನನ್ನ ಮೇಲಿದೆ. ಹಾಗಾಗಿ ರಾಜ್ಯದಲ್ಲಿ ಉದ್ಯೋಗ ಕ್ರಾಂತಿ ಮಾಡಲಾಗುತ್ತಿದೆ. ಜಾತಿ, ಮತ, ಪಂಥ ಬೇಧವಿಲ್ಲದೆ ಸಾರ್ವಜನಿಕರಿಗೆ ಅನುಕೂಲವಾಗುವ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ತಾಲೂಕಿನ ಖುರ್ಸಾಪುರ ಗ್ರಾಮದಲ್ಲಿ ಶನಿವಾರ ನೂತನ ಜವಳಿ ಪಾರ್ಕ್‌ ಹಾಗೂ ಮೆ.ಟೆಕ್ಸ್‌ ಪೋರ್ಟ್‌ ಇಂಡಸ್ಟ್ರೀಸ್ ಕಂಪನಿಯ ಆಂಕರ್ ಸಿದ್ಧ ಉಡುಪು ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ನಿಮ್ಮ ಆಶೀರ್ವಾದ ಜನರ ಸಹಕಾರವಿಲ್ಲದೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಗ್ರಾಮಸ್ಥರಿಗೆ ನನ್ನ ಕೋಟಿ ಕೋಟಿ ನಮಸ್ಕಾರ. ಅವರ ಹಲವಾರು ಬೇಡಿಕಗಳಿದ್ದು, ಅವುಗಳನ್ನು ಈಡೇರಿಸಲಾಗುವುದು. ಶಿಗ್ಗಾಂವ ಕ್ಷೇತ್ರದ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ. ಹಾಗಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ರೂ.28 ರಿಂದ 29 ಕೋಟಿ ಮೊತ್ತದ ಡಿಪೋ, ರೂ.2.5 ಕೋಟಿ ಮೊತ್ತದ ಆಸ್ಪತ್ರೆ, ಆಯುರ್ವೇದಿಕ್ ಕಾಲೇಜ್, ಡಿಟಿಜಿಸಿ, ಕೋಲ್ಡ್‌ಸ್ಟೋರೇಜ್, ಶಾಲಾ-ಕಾಲೇಜುಗಳ ಆರಂಭ, ಮೂರು ಸಾವಿರ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಇದೆಲ್ಲ ನಿಮ್ಮ ಆಶೀರ್ವಾದದಿಂದ ಆಗಿದೆ. ನಿಮ್ಮ ಸೇವೆ ಮಾಡುವೆ. ನಾನು ಬೆಂಗಳೂರಿನಲ್ಲಿದ್ದರೂ ಸದಾಕಾಲ ಶಿಗ್ಗಾಂವ ಕ್ಷೇತ್ರದ ಜನತೆ ಬಗ್ಗೆ ಚಿಂತನೆ ಮಾಡುತ್ತೇನೆ. 15 ವರ್ಷಗಳ ಹಿಂದೆ ಆರಂಭಿಸಲಾದ ಅಭಿವೃದ್ಧಿ ಇಂದು ಉತ್ತುಂಗಕ್ಕೆ ಬರುತ್ತಿದೆ. ಸುಮಾರು 70 ರಿಂದ 80ಕೋಟಿ ಮೊತ್ತದ ರಸ್ತೆ ನಿರ್ಮಾಣ ಮಾಡಲಾಗಿದೆ. 3-4 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರ ಬೆಳೆವಿಮೆ ಬಂದಿಲ್ಲ. ಅದನ್ನು ಮರು ಸಮೀಕ್ಷೆ ಮಾಡಿ ನೀಡಲು ಆದೇಶಿಸಲಾಗಿದೆ ಎಂದರು. 

  ಹಾವೇರಿಯಲ್ಲಿ ಇಂಡಸ್ಟ್ರೀ ಟೌನ್‌ಸಿಪ್ ಮಾಡಲಾಗುತ್ತಿದೆ. ಒಂದು ಸಾವಿರ ಎಕರೆ ಗುರುತಿಸಲಾಗಿದೆ. ಧಾರವಾಡ, ದಾವಣಗೆರೆ, ಹಾಗೂ ಚಿತ್ರದುರ್ಗದಲ್ಲಿಯೂ ಸಹ ಕೈಗಾರಿಕಾ ಟೌನ್‌ಶಿಪ್ ಮಾಡಲಾಗುತ್ತಿದೆ ಎಂದರು. ಬರುವ ದಿನಗಳಲ್ಲಿ ಹಾವೇರಿಯಲ್ಲಿ ಮೆಗಾ ಡೈರಿಗೆ ಸ್ಥಾಪನೆ ಅಡಿಗಲ್ಲು, ಬ್ಯಾಡಗಿ ಹಾಗೂ ಹಾನಗಲ್ ಭಾಗದಲ್ಲಿ ನೀರಾವರಿ ಯೋಜನೆಗಳ ಉದ್ಘಾಟನೆ, ರಾಣೇಬೆನ್ನೂರಿನಲ್ಲಿ ಜವಳಿ ಪಾರ್ಕ್‌ ಅಭಿವೃದ್ಧಿ ಪಡಿಸಲಾಗುವುದು ಎಂದರು. 


ಸುದ್ದಿ ಓದಿ