ಬಳ್ಳಾರಿ

ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾರ್ಯಾರಂಭ

ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾರ್ಯಾರಂಭ

ಬಳ್ಳಾರಿ 06: ದಕ್ಷಿಣ ಭಾರತದ ಅತಿದೊಡ್ಡ ಪ್ರಾದೇಶಿಕ ಗ್ರಾಮೀಣ ಬ್ಯಾಂಕಾದ ಕರ್ನಾಟಕ ಗ್ರಾಮೀಣ ಬ್ಯಾಂಕ್ ದಿ. 05ರಂದು ತನ್ನ 19ನೇ ಪ್ರಾದೇಶಿಕ ಕಛೇರಿಯನ್ನು  ನೂತನ ವಿಜಯನಗರ ಜಿಲ್ಲೆಯಲ್ಲಿ ವಿದ್ಯುಕ್ತವಾಗಿ ಕಾರ್ಯಾರಂಭ ಮಾಡಿತು.   

ಹೊಸಪೇಟೆಯ ಹೃದಯ ಭಾಗದ ಚಿತ್ತವಾಡ್ಗಿ ಬೈಪಾಸ ರಸ್ತೆಯ ಬೃಂದಾವನಂ ಅಪಾರ್ಟಮೆಂಟನ ಮೊದಲಮಹಡಿಯ ಅತ್ಯಂತ ಸುಸಜ್ಜಿತ ಕಛೇರಿ ಉದ್ಘಾಟನೆಯನ್ನು ಬ್ಯಾಂಕಿನ ಅಧ್ಯಕ್ಷ ಶ್ರೀನಾಥ ಹೆಚ್ ಜೋಷಿಯವರು ನೆರವೇರಿಸಿದರು. ಹೊಸಪೇಟೆಯ ಅಸಿಸ್ಟೆಂಟ್ ಕಮೀಷನರ್ ಮತ್ತು ತಾಲ್ಲೂಕು ದಂಡಾಧಿಕಾರಿ ಸಿದ್ದರಾಮೇಶ್ವರ ಇವರು ದೀಪ ಪ್ರಜ್ವಲಿಸಿ ಪ್ರಾದೇಶಿಕ ಕಛೇರಿಯ ಕಾರ್ಯಕಲಾಪಗಳಿಗೆ ಚಾಲನೆ ನೀಡಿದರು.   

ಉದ್ಘಾಟನೆ ಮಾಡಿದ ಬ್ಯಾಂಕಿನ ಅಧ್ಯಕ್ಷರು, ಬ್ಯಾಂಕಿನ ಈ ಪ್ರಾದೇಶಿಕ ಕಛೇರಿ ಮೂಲಕ ನೂತನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕು ಸೇರಿದಂತೆ ಎಲ್ಲ ಆರು ತಾಲ್ಲೂಕಿನ ಗ್ರಾಮೀಣ ಬ್ಯಾಂಕ ಗ್ರಾಹಕರು ಮತ್ತು ಸಾಲಗಾರರಿಗೆ ತ್ವರಿತ ಗತಿಯಲ್ಲಿ ಸೇವೆ ಸೌಲಭ್ಯ ಒದಗಿಸುವ ಅವಕಾಶವನ್ನು ಬ್ಯಾಂಕು ನಿರ್ಮಿಸಿಕೊಂಡಿದೆ ಎಂದರು. ಹಡಗಲಿ ಮತ್ತು ಹರಪನಹಳ್ಳಿಗಳ ಗ್ರಾಹಕರಿಗೆ ದೂರದ ಬಳ್ಳಾರಿಗೆ ಪ್ರಯಾಣ ಬೆಳೆಸುವ ಕಷ್ಟವನ್ನು ನಿವಾರಿಸಲು ಈ ನೂತನ ಜಿಲ್ಲಾ ಕಛೇರಿ ತೆಗೆಯಲಾಗಿದೆ, ಗ್ರಾಹಕರು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದು ಬ್ಯಾಂಕಿನ ಅಧ್ಯಕ್ಷರು ಕರೆನೀಡಿದರು. ತನ್ಮೂಲಕ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಸಂಪದ್ಬರಿತ ಆರ್ಥಿಕ ಸನ್ನಿವೇಶ ಮತ್ತೇ ಮರುಕಳಿಸಲಿ ಎಂದು ಹಾರೈಸಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಸಿಸ್ಟೆಂಟ್ ಕಮೀಷನರ್ ಸಿದ್ದರಾಮೇಶ್ವರ, ಇವರು ಗ್ರಾಮೀಣ ಬ್ಯಾಂಕುಗಳು ಗ್ರಾಮೀಣ ಪ್ರದೇಶವನ್ನು ಕೇಂದ್ರೀಕರಿಸಿ ಸೇವೆ ಸಲ್ಲಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಬ್ಯಾಂಕ್ ಈ ವರೆಗೆ ಜಿಲ್ಲೆಗೆ ಸಂಬಂಧಪಟ್ಟ್ವ ವ್ಯಾಪ್ತಿಯಲ್ಲಿ ಕೈಗೊಂಡ ಬ್ಯಾಂಕಿಂಗ ಚಟುವಟಿಕಗಳ ಸಂಪೂರ್ಣ ಮಾಹಿತಿ ಪಡೆದರು. ತಮ್ಮ ಕಛೇರಿಯಿಂದ ಸಹಕಾರ ನೀಡುವ ಭರವಸೆ ನೀಡಿದರು. 

ಈ ಸಮಾರಂಭದಲ್ಲಿ ಬ್ಯಾಂಕಿನ ಪ್ರದಾನ ಪ್ರಬಂಧಕ ಎ ಎನ್ ಪ್ರಸಾದ ಇವರು ಭಾಗವಹಿಸಿದ್ದರು.  ಹೊಸಪೇಟೆಯ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕ ಕೆ ವೆಂಕಟೇಶ ಮೂರ್ತಿ ಹಾಗೂ ಹುಡಾ ಅಧ್ಯಕ್ಷ ಅಶೋಕ ಜೀರೆ ಇವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಮತ್ತು ತಮ್ಮ ಇಲಾಖೆಯ ಸಹಕಾರವನ್ನು ವಿಸ್ತರಿಸುವ ಭರವಸೆ ನೀಡಿದರು. 

ನೂತನ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕ ಸಿದ್ದೇಶ್ವರ ಮತ್ತು  ಸಿಬ್ಬಂದಿ ವರ್ಗ, ಸ್ಥಳಿಯ ಶಾಖೆಗಳ ವ್ಯವಸ್ಥಾಪಕರುಗಳು ಕಟ್ಟಡ ಉದ್ಘಾಟನೆ ಸಂಧರ್ಭದಲ್ಲಿ ಹಾಜರಿದ್ದರು. 


ಸುದ್ದಿ ಓದಿ