ಚೈತನ್ಯ ಧಾಮ ನೂತನ ಕಟ್ಟಡ ಲೋಕಾರ್ಪಣೆ
ಬಾಳೆಹೊನ್ನೂರು 25: ರಂಭಾಪುರಿ ಪೀಠದಿಂದ ನಿರ್ಮಿಸಿದ ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಶಿವಾಚಾರ್ಯ ಚೈತನ್ಯ ಧಾಮ ನೂತನ ಕಟ್ಟಡ ಉದ್ಘಾಟನೆಯನ್ನು ರಂಭಾಪುರಿ ಮತ್ತು ಕೇದಾರ ಜಗದ್ಗುರುಗಳು ನೆರವೇರಿಸಿ ಲೋಕಾರ್ಪಣೆ ಮಾಡಿ ಆಶೀರ್ವಚನವನ್ನಿತ್ತರು.
ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರವನ್ನು ರಂಭಾಪುರಿ ವೀರ ರುದ್ರಮುನಿ ಜಗದ್ಗುರುಗಳವರು ಸಂಸ್ಥಾಪಿಸಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಬೆಳವಣಿಗೆಗೆ ಶ್ರಮಿಸಿದ್ದರು. ಹಳೆಯದಾದ ಕಟ್ಟಡವನ್ನು ತೆಗೆದು ಸುಮಾರು ಎರಡು ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಎರಡು ಅಂತಸ್ತಿನ ಕಟ್ಟಡವನ್ನು ಪ್ರಸ್ತುತ ರಂಭಾಪುರಿ ಜಗದ್ಗುರುಗಳು ನಿರ್ಮಿಸಿ ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಾರಣರಾಗಿದ್ದನ್ನು ಕಾಣುತ್ತೇವೆ. ಫಿಟ್ಟರ್, ವೆಲ್ಡರ್ ಮತ್ತು ಇಲೆಕ್ಟ್ರಿಶಿಯನ್ ಮೂರು ಭಾಗಗಳಿದ್ದು ಮುಂದಿನ ದಿನಗಳಲ್ಲಿ ಬೇರೆ ಬೇರೆ ವೃತ್ತಿ ಕೋರ್ಸಗಳನ್ನು ತೆರೆಯುವ ಉದ್ದೇಶವಿದೆ ಎಂದರು. ಅದೇ ರೀತಿ ಬರುವ ಮಠಾಧೀಶರಿಗೆ ತಂಗಲು ವಿಶೇಷ ಗಮನ ಹರಿಸಿ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಶಿವಾಚಾರ್ಯ ಚೈತನ್ಯ ಧಾಮ ನೂತನ ಕಟ್ಡಡವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು ಹೆಮ್ಮಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಕೇದಾರ ಭೀಮಾಶಂಕರ ಜಗದ್ಗುರುಗಳು ಪಾಲ್ಗೊಂಡು ಸಂದೇಶ ಅನುಗ್ರಹಿಸಿದರು. ಚಿಕ್ಕಮಗಳೂರು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ, ಕಟ್ಟಡ ಗುತ್ತಿಗೆದಾರ ವೀರೇಶ ಪಾಟೀಲ, ಪ್ರಿನ್ಸಿಪಾಲ ಹೆಚ್. ಆರ್. ಆನಂದ ಹಾಗೂ ಶಿಕ್ಷಕ ವೃಂದ ಹಾಗೂ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.