ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ ಅನುಷ್ಠಾನ
ಮುಂಡಗೋಡ:ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುವ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ ಅಡಿಯಲ್ಲಿ ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪೋಷಕಾಂಶಗಳ ಕೊರತೆ ನೀಗಿಸಲು ಪ್ರಾರಂಭಿಸಿರುವ ಬೇಯಿಸಿದ ಮೊಟ್ಟೆ ನೀಡುವ ಯೋಜನೆ ಹಾಗೂ ಮೊಟ್ಟೆ ತಿನ್ನಲಾರದ ವಿದ್ಯಾರ್ಥಿಗಳಿಗೆ ಎರಡು ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿಯನ್ನು ನೀಡುವ ವಿಶೇಷ ಯೋಜನೆಯನ್ನು ತಾಲೂಕಿನಲ್ಲಿ ಯಶಸ್ವಿಯಾಗಿ ಪ್ರಾರಂಭಿಸಲಾಯಿತು.
ಈ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಈ ತಿಂಗಳ ಎರಡು ಮೊಟ್ಟೆಯನ್ನು ಬಿಸಿ ಊಟದೊಂದಿಗೆ ಬೇಯಿಸಿ ನೀಡಲಾಗುತ್ತದೆ. ಒಟ್ಟಾರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 46 ಮೊಟ್ಟೆಗಳನ್ನು ಒಂದರಿಂದ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೂ ನಿಗದಿತ ದಿನಗಳಲ್ಲಿ ವಿತರಿಸುವ ಯೋಜನೆ ಅನುಷ್ಠಾನಗೊಳಿಸಲಾಯಿತು. ಸರ್ಕಾರ ರೂಪಿಸಿದ ನಿಯಮಾವಳಿಗಳ ಅಡಿಯಲ್ಲಿ ಶಾಲಾ ಹಂತದಲ್ಲಿಯೆ ಎಸ್ಡಿಎಂಸಿ, ಪಾಲಕ-ಪೋಷಕ ಮತ್ತು ಶಿಕ್ಷಕರಿಂದ ರಚನೆಯಾದ ಖರೀದಿ ಸಮಿತಿ ಅಡಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಯಿತು. ನಿಯಮಾವಳಿಗಳ ಅಡಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ವಿತರಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ ಮತ್ತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಫೀಕ್ ಮೀರಾನಾಯ್ಕ ಎಲ್ಲ ಶಿಕ್ಷಕರಿಗೂ ಸಿಆರ್ಪಿ ಮತ್ತು ಗೂಗಲ್ ಸಭೆ ಮೂಲಕ ತಿಳಿಸಿದ್ದಾರೆ.