ಮಲಘಾಟ ಪಶ್ಚಿಮ ಕಾಲುವೆಯಲ್ಲಿ ಅಕ್ರಮ ನೀರು ಕಳವು ಪತ್ತೆ
ಲೋಕದರ್ಶನ ವರದಿ
ವಿಜಯಪುರ 19: ಬಬಲೇಶ್ವರ ತಾಲ್ಲೂಕಿನ ಮುಳವಾಡ ಏತ ನೀರಾವರಿ ಯೋಜನೆಯಡಿ ಬರುವ ಮಲಘಾಟ ಪಶ್ಚಿಮ ಕಾಲುವೆಯಲ್ಲಿ ಸೈಫನ್ ಹೊಡೆದು ಅಕ್ರಮವಾಗಿ ನೀರು ಕಳವು ಮಾಡುತ್ತಿದ್ದ 30 ಪ್ರಕರಣಗಳನ್ನು ಕೆಬಿಜೆಎನ್ಎಲ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ.
118.60 ಕಿ.ಮೀ. ಉದ್ದದ ಕಾಲುವೆಯಲ್ಲಿ 100 ಕಿ.ಮೀ.ವರೆಗೆ ಮಾತ್ರ ನೀರು ಹರಿಯುತ್ತಿದ್ದು, ಕೊನೆಯ 18.60 ಕಿ.ಮೀ. ಭಾಗಕ್ಕೆ ನೀರು ತಲುಪದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರೀಶೀಲನೆ ನಡೆಸಿದಾಗ, ಯಕ್ಕುಂಡಿ, ಹೊಕ್ಕುಂಡಿ, ಅರ್ಜುಣಗಿ ಹಾಗೂ ಹೆಬ್ಬಾಳಟ್ಟಿ ವ್ಯಾಪ್ತಿಯಲ್ಲಿ ಸುಮಾರು 30 ಕಡೆ ಕಾಲುವೆಯ ಬುಡದಲ್ಲಿ ರಂಧ್ರ ಕೊರೆದು 4ರಿಂದ 6 ಇಂಚಿನ ಪೈಪ್ಗಳನ್ನು ಅಳವಡಿಸಿ ಅಕ್ರಮವಾಗಿ ನೀರು ಪಡೆಯುತ್ತಿರುವುದು ಪತ್ತೆಯಾಗಿದೆ.
ಇತ್ತೀಚೆಗೆ ಅರ್ಜುಣಗಿಯಲ್ಲಿ ರೈತರು ಧರಣಿ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಕೆಲವರು ಇದೇ ಕಾಲುವೆಯಲ್ಲಿ ಸೈಫನ್ ಮೂಲಕ ನೀರು ಕಳವು ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಫೆಬ್ರವರಿಯಲ್ಲಿ ಕಾಲುವೆಗಳ ನಿರ್ವಹಣೆ ವೇಳೆ ಇಂತಹ ರಂಧ್ರಗಳಿಗೆ ಕಾಂಕ್ರೀಟ್ ಹಾಕಿ ಮುಚ್ಚಲಾಗಿದ್ದರೂ, ನೀರು ಬಿಡುತ್ತಿದ್ದಂತೆ ಮತ್ತೆ ಅಕ್ರಮವಾಗಿ ನೀರು ಪಡೆಯುತ್ತಿರುವುದು ಪತ್ತೆಯಾಗಿದೆ.
ಅಕ್ರಮ ನೀರು ಕಳವು ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆಬಿಜೆಎನ್ಎಲ್ ಬಬಲೇಶ್ವರ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜೇಂದ್ರ ವಿ. ರೂಢಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.