ಎಸ್.ಪಿ.ಸುಮನ್ ವರ್ಗಾವಣೆ ನಂತರ ಗರಿಗೆದರಿದ ಅಕ್ರಮ ಚಟುವಟಿಕೆಗಳು
ಲೋಕದರ್ಶನ ವರದಿ
ಮುಂಡಗೋಡ:ಜಿಲ್ಲೆಯಾದ್ಯಂತ ಅಕ್ರಮ ಚಟುವಟಿಕೆ ಮಾಡುವವರ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ಜರುಗಿಸುವ ಮೂಲಕ ಸಿಂಹಸ್ವಪ್ನರಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ವರ್ಗಾವಣೆ ಆಗುತ್ತಿದ್ದಂತೆಯೆ ಇಸ್ಪೀಟು, ಮಟ್ಕಾ ಆಡಿಸುತ್ತಿದ್ದ ಬುಕ್ಕಿಗಳು ಪಟ್ಟಣದ ಹೊರ ವಲಯದಲ್ಲಿ ಓತಣಕೂಟ ನಡೆಸಿರುವುದು ಕಂಡು ಬಂದಿದೆ.
ಡಾ.ಸುಮನ್ ಪನ್ನೇಕರ ತಮ್ಮದೆ ಆದ ಒಂದು ವಿಶೇಷ ತಂಡ ರಚಿಸಿ ಮಟ್ಕಾ ಬುಕ್ಕಿ ಹಾಗೂ ಇಸ್ಪೀಟ್ನಂತಹ ಅಕ್ರಮ ಚಟುವಟಿಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಜಿಲ್ಲೆಯಾದ್ಯಂತ ಯಶಸ್ವಿಯಾಗಿದ್ದರು. ಅವರ ವರ್ಗಾವಣೆ ನಂತರ ಅಕ್ರಮ ಚಟುವಟಿಕೆಗಳು ಮತ್ತೆ ಗರಿಗೆದರಿವೆ.
ಕಳೆದ ಒಂದು ವರ್ಷದಿಂದ ಪಾನ್ ಶಾಪ್ಗಳಲ್ಲಿ ಮಟ್ಕಾ ಬರೆಯುವವರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಕೂಲಿ ಕೆಲಸ ಹುಡುಕಿಕೊಂಡು ಹೋಗಿದ್ದರು. ಎಸ್.ಪಿ. ಅವರ ವರ್ಗಾವಣೆ ಸುದ್ದಿ ಕೇಳಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಪಟ್ಟಣದ ಕೆಲವರು ಮತ್ತೆ ಮಟ್ಕಾ ಬರೆಯಲು ತಯಾರಾಗಿದ್ದು ತಮ್ಮ ಅಂಗಡಿಗಳನ್ನು ತೆರೆದುಕೊಂಡು ಇರುವುದು ಕಂಡು ಬಂದಿದೆ.
ಪಟ್ಟಣ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಕದ್ದುಮುಚ್ಚಿ ಮಟ್ಕಾ ಹಾಗೂ ಇಸ್ಪೀಟ್ ಆಟಗಳು ನಡೆಯುತ್ತಿದ್ದವು. ಆದರೆ ಸೋಮವಾರ ಪಟ್ಟಣದ ಕೆಲವು ಅಂಗಡಿ ಮತ್ತು ಮನೆಗಳಲ್ಲಿ ಓಸಿ ಬರೆಯುತ್ತಿರುವುದು ಕಂಡು ಬಂತು. ಪಟ್ಟಣದ ವ್ಯಾಪ್ತಿಯಲ್ಲಿ ನಾಲ್ಕೈದು ಮಟ್ಕಾ ಬುಕ್ಕಿಗಳಿದ್ದು ಪೋನ್ ಮೂಲಕ ಅಂಗಡಿಗಳಿಂದ ಮಟ್ಕಾ ಪಟ್ಟಿಗಳನ್ನು ತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ಕೆಲವು ಬುಕ್ಕಿಗಳು ಮಟ್ಕಾ ನಂಬರ್ ಅನ್ನು ತಮ್ಮ ಮೊಬೈಲ್ನಿಂದ ಮನೆಯಲ್ಲಿನ ಮತ್ತೊಂದು ಮೊಬೈಲ್ಗೆ ಕಳಿಸಿ ನಂತರ ತಮ್ಮ ಮೊಬೈಲ್ನಲ್ಲಿ ಬರೆದ ನಂಬರ್ ಅನ್ನು ಡಿಲಿಟ್ ಮಾಡುತ್ತಿದ್ದಾರೆ. ಈಗ ಪಟ್ಟಣದಲ್ಲಿ ಮತ್ತೆ ಇಸ್ಪೀಟ್ ಹಾಗೂ ಓಸಿ ಬುಕ್ಕಿಗಳು ತಲೆ ಎತ್ತುತ್ತಿದ್ದು ನೂತನ ಎಸ್.ಪಿ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವರೆ ಎಂದು ಕಾದು ನೋಡಬೇಕಾಗಿದೆ.