ಜಾತಿರಹಿತವಾದ ವೃತ್ತಿ ಯಾವುದಾದರೂ ಇದ್ದರೆ ಶ್ಯಾಮಿಯಾನ್ ವೃತ್ತಿ : ವಾಮದೇವ ಮಹಾಂತ ಶಿವಾಚಾರ್ಯರು
ಲೋಕದರ್ಶನ ವರದಿ
ಕಂಪ್ಲಿ 05 : ತಮ್ಮ ಅಲಂಕಾರ ಬದಲು ಮತ್ತೊಬ್ಬರ ಅಲಂಕಾರ ಹೆಚ್ಚಿಸುವ ಕಾಯಕ ವೃತ್ತಿ ಶ್ಯಾಮಿಯಾನ್‌ದವರದ್ದಾಗಿದೆ ಎಂದು ಎಮ್ಮಿಗನೂರು ಹಂಪಿ ಸಾವಿರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ಪಟ್ಟಣದ ವೀರಶೈವ ಭವನದ ಗಂಡುಗಲಿ ಕುಮಾರರಾಮನ ವೈಭವ ವೇದಿಕೆಯಲ್ಲಿ ಬಳ್ಳಾರಿ ಜಿಲ್ಲಾ ಕಂಪ್ಲಿ ತಾಲೂಕು ಶ್ಯಾಮಿಯಾನ್ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಹಮ್ಮಿಕೊಂಡಿರುವ ಎರಡನೇ ದಿನದ ಕಂಪ್ಲಿ ತಾಲೂಕು ಮಟ್ಟದ 3ನೇ ಅಧಿವೇಶನ ಸಮಾರಂಭ ಉದ್ಘಾಟಿಸಿ, ದಿವ್ಯಸಾನಿಧ್ಯದೊಂದಿಗೆ ಆಶೀರ್ವದಿಸಿ ಮಾತನಾಡಿ, ಜಗದ ಕಟ್ಟೆಯಲ್ಲಿ ಜ್ಞಾನದ ಮಂಟಪ, ಚಪ್ಪರವನ್ನು ನಿರ್ಮಿಸಿ, ನೆರಳನ್ನು ಕೊಟ್ಟು ಮದುವೆ ಮಾಡಿದರೂ ಎಂಬಂತೆ ನಿಮ್ಮ ವೃತ್ತಿಯ ಯುಗ ಯುಗಗಳಲ್ಲಿ ಈಗ ಅದರ ಆಧುನಿಕತೆ, ಅದರ ನೆರವು, ಅದರ ವೈಭವ ಹೆಚ್ಚಾಗಿದೆ.
ಜಾತಿ ಬೇಧ, ಲಿಂಗಬೇಧ, ವರ್ಣಬೇಧವಿಲ್ಲ.
ಪಕ್ಷಬೇಧವಿಲ್ಲದೇ, ಒಂದು ಸಂಘಟನೆಯಾಗಿ ಈ ದೇಶದಲ್ಲಿ ಬೆಳೆದು ಬಂದಿರುವುದು ಶ್ಯಾಮಿಯಾನ್ ಸಂಘವಾಗಿದೆ. ಜಾತಿರಹಿತವಾದ ವೃತ್ತಿ ಯಾವುದಾದರೂ ಇದ್ದರೆ ಅದು ಸೈನಿಕ, ರೈತ, ಇನ್ನೊಬ್ಬ ಶ್ಯಾಮಿಯಾನ್ ಎಂಬುದನ್ನು ಎದೆತಟ್ಟಿ ಹೇಳಬಹುದಾಗಿದೆ. ಕಾಯಕ ವೃತ್ತಿ ಬಿಡದೇ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಒಳ್ಳೆಯ ಹುದ್ದೆಗಳನ್ನು ಕಲ್ಪಿಸಿ, ಭವಿಷ್ಯ ರೂಪಿಸಬೇಕು ಎಂದರು.
ನಂತರ ಕಂಪ್ಲಿ ತಾಲೂಕು ಶ್ಯಾಮಿಯಾನ್ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿರೇಶ ಸಣಾಪುರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿಯೊಬ್ಬರ ಸಹಕಾರದಿಂದಾಗಿ ಎರಡು ದಿನ ಕಂಪ್ಲಿ ತಾಲೂಕು ಮಟ್ಟದ 3ನೇ ಅಧಿವೇಶನ ಕಾರ್ಯಕ್ರಮ ಯಶಸ್ವಿಯಾಗಿದೆ. ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿದರೆ, ಸಂಘದ ಅಭಿವೃದ್ಧಿ ಜೊತೆಗೆ ಸಮಾಜವೂ ಬದಲಾವಣೆಯಾಗಲು ಸಾಧ್ಯ ಎಂದರು.
ಮುಸ್ಲಿಂ ಧರ್ಮಗುರು ಡಾ.ಸೈಯದ್ ಷಾ ನೂರ್ ಅಹ್ಮದ್ ಖಾದ್ರಿ, ಫಾದರ್ ಪಾಲ್ ಪಂಪಾಪತಿ ದಿವ್ಯಸಾನಿಧ್ಯವಹಿಸಿ ಮಾತನಾಡಿದರು. ನಂತರ ಸ್ವಾಮಿಗಳಿಗೆ, ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ತದನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಶ್ಯಾಮಿಯಾನ್ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಮೆಹಬೂಬ್ ಮುಲ್ಲಾರ, ಸಹ ಕಾರ್ಯದರ್ಶಿ ಹೆಚ್.ನಾಗರಾಜ(ರವಿಕಿರಣ ಡೆಕೋರೇಷನ್ ಕಂಪ್ಲಿ), ಅಪೆಕ್ಸ್ ಬ್ಯಾಂಕ್ ಸದಸ್ಯ ಪಿ,ಮೂಕಯ್ಯಸ್ವಾಮಿ, ಅಕ್ಕಿಗಿರಿಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಮುಖಂಡರಾದ ಸಿ.ಡಿ.ಮಹಾದೇವ, ಪಿ.ಬ್ರಹ್ಮಯ್ಯ, ಟಿ.ಸುರೇಶಗೌಡ, ಡಿ.ಮೌನೇಶ್ ಸೇರಿದಂತೆ ಇತರರು ಇದ್ದರು.