‘ಇನ್ಸ್ ಪೆಕ್ಟರ್ ವಿಕ್ರಂ’ ಈ ವಾರ ತೆರೆಗೆ
ಬೆಂಗಳೂರು, ಫೆ 03 : ಇದೇ ಮೊದಲಬಾರಿಗೆ ಪ್ರಜ್ವಲ್ ದೇವರಾಜ್ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ‘ಇನ್ಸ್ ಪೆಕ್ಟರ್ ವಿಕ್ರಂ’ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರರಂಗಕ್ಕೆ ಬಂದು ಹತ್ತು ವರ್ಷಗಳಾಗಿದ್ದು, ಸುಮಾರು 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ, ಆದರೂ ಒಂದು ಮಾಸ್ ಚಿತ್ರದಲ್ಲಿ ಅಭಿನಯಿಸಿಲ್ಲವೆಂಬ ಕೊರಗು ನನಗಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ತುಂಟಾಟ ಮಾಡುವವನಿಗೆ ಪೋಲೀಸ್ ಹುದ್ದೆ ಸಿಕ್ಕರೆ ಅದು ಯಾವ ರೀತಿ ಇರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ನೋಡಬಹುದು. ಆದರೂ ಆತ ತನ್ನ ಕೆಲಸವನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಾನೆ ಎಂದು ನಾಯಕ ಪ್ರಜ್ವಲ್ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸಂಗೀತ ನಿರ್ದೇಶನ ಮಾಡಿರುವ ಅನೂಪ್ ಸೀಳಿನ್ ಒಂದು ಹಾಡಿಗೆ ದನಿಯಾಗಿದ್ದಾರೆ. ನಟ ಕಾಶಿನಾಥ್ ಅವರ ಗರಡಿಯಲ್ಲಿ ಪಳಗಿರುವ ಶ್ರೀನರಸಿಂಹ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಬೆಂಗಳೂರು, ಗೋಕರ್ಣ ಮುಂತಾದ ಕಡೆಗಳಲ್ಲಿ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಈ ಹಿಂದೆ ಪುಷ್ಪಕ ವಿಮಾನ ಚಿತ್ರವನ್ನು ನಿರ್ಮಾಣ ಮಾಡಿದ್ದ ವಿಖ್ಯಾತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಗುರು ಕಶ್ಯಪ್ ಸಂಭಾಷಣೆ, ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಎ.ಸತೀಶ್ ಕಲೆ ಈ ಚಿತ್ರಕ್ಕಿದೆ. ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ವಿನೋದ್ ಸಾಹಸ ನಿರ್ದೇಶನ ಈ ಚಿತ್ರ ಕ್ಕಿದ. ಪ್ರಜ್ವಲ್ ದೇವರಾಜ್ ಜೊತೆ ನಾಯಕಿಯಾಗಿ ಭಾವನಾ ಮೆನನ್ ಕಾಣಿಸಿಕೊಂಡಿದ್ದಾರೆ.