ಸಿಂಧಗಿ

ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ : ಶಶಿಕಲಾ ಜೊಲ್ಲೆ

ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ : ಶಶಿಕಲಾ ಜೊಲ್ಲೆ

ಸಿಂಧಗಿ: ಅ.23:  ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾರಾಪುರ, ಬ್ಯಾಡಗಿಹಾಳ, ತಾವರಖೆಡ ಗ್ರಾಮಗಳ ಜನರ ದಶಕಗಳ ಬೇಡಿಕೆಯಾಗಿದ್ದ ಪುನರ್ವಸತಿ ಮತ್ತು ಹಕ್ಕು ಪತ್ರ ನೀಡಿ ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ಮುಜರಾಯಿ, ವಕ್ಫ್.ಮತ್ತು ಹಜ್ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು.

ಅವರಿಂದು ಪಕ್ಷದ ಅಭ್ಯರ್ಥಿ ರಮೇಶ ಬೂಸನೂರು ಪರವಾಗಿ ಮತಯಾಚನೆ ಮಾಡಿದರು, ಭೀಮಾ ಏತನೀರಾವರಿಯಿಂದ ತಾರಾಪುರ, ಬ್ಯಾಡಗಿಹಾಳ ಹಾಗೂ ತಾವರಖೇಡ ಗ್ರಾಮಗಳು ಮುಳುಗಡೆಯಾಗಿ ಪುನರ್ವಸತಿಗಾಗಿ ಕಳೆದ ಹತ್ತು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದರು. ನಾನು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಬಂದ ನಂತರ ಮೂರು ಗ್ರಾಮಗಳಿಗೆ ಭೇಟಿ ನೀಡಿದಾಗ ಜನರು ತಮ್ಮ ದಶಕಗಳ  ಸಮಸ್ಯೆ ಹೇಳಿಕೊಂಡಿದ್ದರು ಎಂದು ವಿವರಿಸಿದರು. 

ಆ ಸಮಯದಲ್ಲಿ ಎಲ್ಲರಿಗೂ ಪುನರ್ವಸತಿ ಕಲ್ಪಿಸಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಒಂದು ವರ್ಷದಲ್ಲಿ 358 ಕುಟುಂಬಗಳನ್ನು ಸ್ಥಳಾಂತರಿಸಿ ಹಕ್ಕುಪತ್ರ ವಿತರಣೆ ಮಾಡಿ, ನುಡಿದಂತೆ ನಡೆದಿದ್ದೇನೆ.  ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಎಲ್ಲರಿಗೂ ವಸತಿ ಹಾಗೂ ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಮಾಡಿಕೊಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ಸುದ್ದಿ ಓದಿ