ಮಾನವ ಹಕ್ಕುಗಳ ಜಾಗೃತಿ ಸಮಾವೇಶ: ಸಾಧಕರಿಗೆ ಪ್ರಶಸ್ತಿ ಪ್ರದಾನಹಕ್ಕುಗಳ ಅರಿವು ಮೂಡಿದಾಗಲೇ ಶೋಷಣೆಗೆ ಕಡಿವಾಣ
ಮುದ್ದೇಬಿಹಾಳ 15: ಮಾನವ ಹಕ್ಕುಗಳು ಕೇವಲ ಕಾನೂನು ಪುಸ್ತಕಗಳಲ್ಲಿರುವ ಪದಗಳಲ್ಲ. ಜಾತಿ, ಧರ್ಮ, ಲಿಂಗ, ಆರ್ಥಿಕ ಸ್ಥಿತಿ ಸೇರಿದಂತೆ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ಮನುಷ್ಯನಿಗೂ ಗೌರವದಿಂದ ಬದುಕುವ ಹಕ್ಕಿದೆ. ಈ ಹಕ್ಕುಗಳ ಉಲ್ಲಂಘನೆಯಾದಾಗ ಮೌನವಾಗಿರುವುದಕ್ಕಿಂತ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಧ್ವನಿ ಎತ್ತುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ನ್ಯಾಯಾಧೀಶ ಜಿ.ಕೆ.ಗೋಖಲೆ ಕರೆ ನೀಡಿದರು. ಪಟ್ಟಣದ ಪಂಜುರ್ಲಿ ಖಾಸಗಿ ಹೋಟಲ್ ನ ಫಂಕ್ಷನ್ ಹಾಲ್ ನಲ್ಲಿ ಯೂತ್ ಫಾರ್ ಹ್ಯೂಮನ್ ರೈಟ್ಸ್ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾನವ ಹಕ್ಕುಗಳ ಜಾಗೃತಿ ಸಮಾವೇಶ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಕ್ಕುಗಳನ್ನು ಕೇಳುವ ಧೈರ್ಯಕ್ಕೂ ಮೊದಲು, ಅವುಗಳ ಬಗ್ಗೆ ಅರಿವು ಇರಬೇಕು. ತನ್ನ ಹಕ್ಕುಗಳ ಅರಿವು ಹೊಂದಿದ ವ್ಯಕ್ತಿ ಮಾತ್ರ ಅನ್ಯಾಯದ ವಿರುದ್ಧ ಕಾನೂನುಬದ್ಧವಾಗಿ ಹೋರಾಡಲು ಸಾಧ್ಯ. ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆ, ತಾರತಮ್ಯ ಹಾಗೂ ದೌರ್ಜನ್ಯಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ಗ್ರಾಮೀಣ ಭಾಗದ ಜನರಿಗೂ ತಮ್ಮ ಕಾನೂನುಬದ್ಧ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರತಿಭಂಧಕ ಮೇಲುಸ್ತುವಾರಿ ಸಮಿತಿಯ ಸದಸ್ಯ ಅಭಿಷೇಕ ಚಕ್ರವರ್ತಿ ಮಾತನಾಡಿ, ಅಧಿಕಾರವಿದೆ ಎಂಬ ಕಾರಣಕ್ಕೆ ಸಾಮಾನ್ಯ ನಾಗರಿಕನ ಹಕ್ಕುಗಳನ್ನು ತುಳಿಯಲು ಸಾಧ್ಯವಿಲ್ಲ.
ಹಣವಿದೆ ಎಂಬ ಕಾರಣಕ್ಕೆ ಬಡವನ ಧ್ವನಿಯನ್ನು ಅಡಗಿಸೋಕೆ ಸಾಧ್ಯವಿಲ್ಲ. ಹಕ್ಕುಗಳ ಬಗ್ಗೆ ಮಾತನಾಡುವಾಗ ಕರ್ತವ್ಯಗಳನ್ನೂ ಮರೆಯಬಾರದು. ನಮ್ಮ ಹಕ್ಕು ಇನ್ನೊಬ್ಬರ ಹಕ್ಕಿಗೆ ಧಕ್ಕೆ ತರಬಾರದು. ಪರಸ್ಪರ ಗೌರವ, ಸಮಾನತೆ ಮತ್ತು ಸಹಬಾಳ್ವೆಯ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಯೂಫಾಹ್ಯೂರೈ ನ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ರಾಜು ಮಾತನಾಡಿ, ಸ್ವಾತಂತ್ರ್ಯಕ್ಕೂ ಮೊದಲು ನಾವು ವಿದೇಶಿಯರ ವಿರುದ್ಧ ಹೋರಾಟ ಮಾಡಿದ್ದೆವು. ದೇಶ ಸ್ವತಂತ್ರವಾದ ನಂತರ ನಮ್ಮ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಗೌರವವನ್ನು ಕಾಪಾಡಿಕೊಂಡು ಬದುಕಬಹುದು ಎಂಬ ಆಶಯವಿತ್ತು.